ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಮಾಸ್ಟರ್ಸ್‌ ಸೂಪರ್ 750: ಸಾತ್ವಿಕ್‌–ಚಿರಾಗ್‌ ಫೈನಲ್‌ಗೆ

ಚೀನಾ ಮಾಸ್ಟರ್ಸ್‌ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‌
Published 26 ನವೆಂಬರ್ 2023, 0:30 IST
Last Updated 26 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಶೆನ್‌ಜೆನ್‌ (ಚೀನಾ): ಏಷ್ಯನ್ ಕ್ರೀಡಾಕೂಟದ ಸ್ವರ್ಣ ಪದಕ ವಿಜೇತ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಚೀನಾ ಮಾಸ್ಟರ್ಸ್‌ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿದ್ದು, ಶನಿವಾರ ಪ್ರಶಸ್ತಿ ಸುತ್ತು ತಲುಪಿದರು.

ಅಗ್ರ ಶ್ರೇಯಾಂಕದ ಭಾರತದ ಜೋಡಿಯು ಸೆಮಿಫೈನಲ್‌ನಲ್ಲಿ 21-15, 22-20ರಿಂದ ಚೀನಾದ ಹೀ ಜಿ ಟಿಂಗ್ ಮತ್ತು ರೆನ್ ಕ್ಸಿಯಾಂಗ್ ಜೋಡಿಯನ್ನು ಹಿಮ್ಮೆಟ್ಟಿಸಿ ಫೈನಲ್‌ ಪ್ರವೇಶಿಸಿತು.

ಭಾರತದ ಜೋಡಿ ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ (ಚೀನಾ) ಅವರನ್ನು ಎದುರಿಸಲಿದೆ. ಆತಿಥೇಯ ಆಟಗಾರರ ವ್ಯವಹಾರವಾಗಿದ್ದ ಇನ್ನೊಂದು ಸೆಮಿಫೈನಲ್‌ನಲ್ಲಿ ಲಿಯಾಂಗ್‌–ವಾಂಗ್ ಜೋಡಿ 21–17, 14–21, 21–15 ರಿಂದ ಚೆನ್ ಬೊ ಯಾಂಗ್– ಲಿಯು ಯಿ ಜೋಡಿಯನ್ನು ಸೋಲಿಸಿತು.

ವಿಶ್ವದ 50ನೇ ಕ್ರಮಾಂಕದ ಟಿಂಗ್– ರೆನ್‌ ಜೋಡಿ ಕಳೆದ ವಾರ ಜಪಾನ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. ಇಲ್ಲಿ ಸಾತ್ವಿಕ್‌ ಮತ್ತು ಚಿರಾಗ್‌ಗೆ ಉತ್ತಮ ಪೈಪೋಟಿ ನೀಡಿದರು. 50 ನಿಮಿಷ ನಡೆದ ಮಾರಾಥಾನ್‌ ಹೋರಾಟ ಹಲವು ರೋಚಕ ರ‍್ಯಾಲಿಗಳಿಗೆ ಸಾಕ್ಷಿಯಾಯಿತು. ಎದುರಾಳಿಯ ರಕ್ಷಣೆಯನ್ನು ಭೇದಿಸಿದ ಭಾರತದ ಆಟಗಾರರು ಮೇಲುಗೈ ಸಾಧಿಸಿದರು.

ಭಾರತದ ಜೋಡಿ ಮೊದಲ ಗೇಮ್‌ನ ಆರಂಭದಲ್ಲೇ 6–2 ರಲ್ಲಿ ಮುನ್ನಡೆ ಸಾಧಿಸಿತು. ಒಂದು ಹಂತದಲ್ಲಿ 10–12 ಹಿನ್ನಡೆ ಕಂಡಾಗ ಪುಟಿದೆದ್ದ ಸಾತ್ವಿಕ್‌ ಮತ್ತು ಚಿರಾಗ್‌, ನಿಖರ ಸರ್ವ್‌ ಮತ್ತು ಆಕರ್ಷಕ ಸ್ಮ್ಯಾಶ್ ಮೂಲಕ ಸತತ ಐದು ಪಾಯಿಂಟ್‌ಗಳನ್ನು ಸಂಪಾದಿಸಿದರು. ಸಾಂಘಿಕ ಆಟದಿಂದ ಮೊದಲ ಗೇಮ್‌ನಲ್ಲಿ ಮುನ್ನಡೆ ಸಾಧಿಸಿದ ಭಾರತದ ಆಟಗಾರರಿಗೆ ಎರಡನೇ ಗೇಮ್‌ನಲ್ಲಿ ಪ್ರತಿರೋಧ ಎದುರಾಯಿತು. ಸಮಬಲದೊಂದಿಗೆ ಸಾಗಿದ ನಿರ್ಣಾಯಕ ಗೇಮ್‌ನಲ್ಲಿ ಕೊನೆಗೆ ಆತಿಥೇಯರು ಸೋಲೊಪ್ಪಿಕೊಂಡರು.

ಚಿರಾಗ್‌ ಮತ್ತು ಸಾತ್ವಿಕ್‌ ಜೋಡಿಯು ಪ್ರಸಕ್ತ ವರ್ಷದಲ್ಲಿ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಸೇರಿದಂತೆ ಬ್ಯಾಡ್ಮಿಂಟನ್ ಏಷ್ಯನ್‌ ಚಾಂಪಿಯನ್‌ಷಿಪ್‌, ಇಂಡೊನೇಷ್ಯಾ ಸೂಪರ್‌ 1000, ಕೊರಿಯಾ ಸೂಪರ್‌ 500, ಸ್ವಿಸ್‌ ಸೂಪರ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT