ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂತ್ರಪಿಂಡ ಸಮಸ್ಯೆ: ಡಯಾಲಿಸಿಸ್ ರೋಗಿಗಳಿಗೆ ಥ್ರೋಬಾಲ್ ಥೆರಪಿ

ಬೆಂಗಳೂರಿನ ವೈದ್ಯರು ಮತ್ತು ಭಾರತ ಥ್ರೋಬಾಲ್ ಫೆಡರೇಷನ್‌ ಪೈಲಟ್ ಯೋಜನೆ
Published : 11 ಮಾರ್ಚ್ 2021, 19:30 IST
ಫಾಲೋ ಮಾಡಿ
Comments

ಬೆಂಗಳೂರು: ಮೂತ್ರಪಿಂಡದ ಸಮಸ್ಯೆಗೆ ಡಯಾಲಿಸಿಸ್ ಪಡೆಯುವ ರೋಗಿಗಳನ್ನು ಮನೋದೈಹಿಕವಾಗಿ ಸಬಲಗೊಳಿಸಲು ಥ್ರೋಬಾಲ್ ಕ್ರೀಡೆಯ ಆಯ್ದ ವ್ಯಾಯಾಮಗಳನ್ನು ಚಿಕಿತ್ಸಾ ಕ್ರಮದೊಂದಿಗೆ ಜೋಡಿಸಲಾಗುತ್ತಿದೆ.

ಭಾರತ ಥ್ರೋಬಾಲ್ ಫೆಡರೇಷನ್ (ಐಟಿಎಫ್‌) ಮತ್ತು ಬೆಂಗಳೂರಿನ ವೈದ್ಯರು ಈ ವಿನೂತನ ಯೋಜನೆಗೆ ಕೈಜೋಡಿಸಿದ್ದಾರೆ. ಗುರುವಾರ ವಿಶ್ವ ಕಿಡ್ನಿ ದಿನದ ಅಂಗವಾಗಿಟ್ರಸ್ಟ್‌ ವೆಲ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಯೋಜನೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಡಯಾಲಿಸಿಸ್‌ ಪಡೆಯುವ ಕೆಲವರಿಗೆ ಥ್ರೋಬಾಲ್ ಬಳಸುವ ಮತ್ತು ಈ ಕ್ರೀಡೆಯ ಕೆಲವು ವ್ಯಾಯಾಮಗಳನ್ನು ಮಾಡುವ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಕೋಚ್‌ಗಳಾದ ಸಂತೋಷ್ ಮತ್ತು ಶರಣ್ ಅವರು ಈ ಪ್ರಾತ್ಯಕ್ಷಿಕೆಯನ್ನು ನೀಡಿದರು.

‘ಡಯಾಲಿಸಿಸ್‌ ಪಡೆಯುವವರು ಮಾನಸಿಕವಾಗಿ ಬಹಳಷ್ಟು ಕುಗ್ಗಿರುತ್ತಾರೆ. ಅದೇ ರೀತಿ ದೈಹಿಕವಾಗಿ ಬಳಲುತ್ತಾರೆ. ಆದ್ದರಿಂದ ಈ ರೋಗಿಗಳಿಗೆ ರೋಗಿಗಳಿಗೆ ಫಿಸಿಯೋಥೆರಪಿ ಮಾಡಿಸಿಕೊಳ್ಳಲು ಸಲಹೆ ನೀಡುತ್ತಿದ್ದೆವು. ಕ್ರೀಡೆ ಆಧಾರಿತ ವ್ಯಾಯಾಮಗಳನ್ನು ಸಲಹೆ ಮಾಡುತ್ತಿರುವುದು ಇದೇ ಮೊದಲು. ಥ್ರೋಬಾಲ್ ಫೆಡರೇಷನ್ ಮತ್ತು ಒಂದು ಐಟಿ ಸ್ಟಾರ್ಟ್‌ಅಪ್ ತಂಡದೊಂದಿಗೆ ಈ ಅಧ್ಯಯನ ನಡೆಸಿದ್ದೇವೆ. ವ್ಯಾಯಾಮ, ನಡಿಗೆಗಳನ್ನು ಮಾಡುವಾಗ ಕೆಲದಿನಗಳಲ್ಲಿ ಯಾಂತ್ರಿಕತೆಯ ಅನುಭವವಾಗುತ್ತದೆ. ಆದರೆ ಕ್ರೀಡಾ ಆಧಾರಿತವಾದ ವ್ಯಾಯಾಮಗಳಲ್ಲಿ ಏಕತಾನತೆ ಕಾಡುವುದಿಲ್ಲ. ಈ ರೀತಿಯ ವ್ಯಾಯಾಮಗಳು ಹೆಚ್ಚು ಉತ್ತಮ ಪರಿಣಾಮ ಬೀರುತ್ತದೆ. ದೈಹಿಕ ಹಾಗೂ ಮಾನಸಿಕವಾಗಿಯೂ ಉಲ್ಲಾಸ ನೀಡುತ್ತದೆ’ ಎಂದು ನೆಫ್ರಾಲಜಿಸ್ಟ್ ಡಾ. ಅರವಿಂದ್ ಕಂಚಿ ತಿಳಿಸಿದರು.

ಸುಮಾರು ಹತ್ತು ಡಯಾಲಿಸಿಸ್ ಚಿಕಿತ್ಸಾ ಕೇಂದ್ರಗಳಲ್ಲಿ ಆಯ್ದ ರೋಗಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಈ ಪ್ರಯೋಗ ಶುರು ಮಾಡಲಾಗಿದೆ.

‘ಒಂದು ವೃತ್ತಿಪರ ಹೊರಾಂಗಣ ಕ್ರೀಡೆಯನ್ನು ಚಿಕಿತ್ಸೆಯಾಗಿ ಬಳಕೆ ಮಾಡುತ್ತಿರುವುದು ಇದೇ ಮೊದಲು. ಥ್ರೋಬಾಲ್ ನಲ್ಲಿ ಬಳಸುವ ಚಂಡು ಹೆಚ್ಚು ಬಿರುಸು ಅಥವಾ ಗಟ್ಟಿಯಾಗಿ ಇರುವುದಿಲ್ಲ. ಅದರಲ್ಲಿ ಗ್ರಿಪ್ಸ್‌ ಇರುತ್ತದೆ. ಅದು ಕೈನಲ್ಲಿ ಆಕ್ಯುಪ್ರೆಷರ್ ಅನುಭವವನ್ನೂ ಕೊಡುತ್ತದೆ. ಚೆಂಡು ದುಬಾರಿಯಲ್ಲ. ಮೆನೆಯೊಳಗೆ ಅಥವಾ ಹೊರಗೆ ಆಡಲು ಸುಲಭವಾಗಿಯೂ ಇದೆ. ಇದರಿಂದ ಕೈಗಳಲ್ಲಿ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ’ ಎಂದು ಭಾರತ ಥ್ರೋಬಾಲ್ ಫೆಡರೇಷನ್ ಪದಾಧಿಕಾರಿ, ಕೋಚ್ ಆಗಿರುವ ಸಂಪೂರ್ಣಾ ಹೆಗಡೆ ‘ಪ್ರಜಾವಾಣಿ‘ಗೆ ವಿವರಿಸಿದರು.

‘ಥ್ರೋಬಾಲ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಹುಟ್ಟಿದ್ದು. ಆದರೆ ಈ ಆಟಕ್ಕೆ ವೃತ್ತಿಪರತೆಯನ್ನು ತಂದುಕೊಟ್ಟ ಹೆಗ್ಗಳಿಕೆ ಭಾರತ. ಡಾ. ಟಿ. ರಾಮಣ್ಣ ಅವರು ಇದರ ರೂವಾರಿ. ಪುರುಷ, ಮಹಿಳೆಯರು, ಮಕ್ಕಳು ಮತ್ತು ಅಂಗವಿಕಲರು ಕೂಡ ಈ ಆಟವನ್ನು ಆಡಬಹುದು. ಗಾಲಿಕುರ್ಚಿ ಥ್ರೋಬಾಲ್ ಟೂರ್ನಿಯನ್ನೂ ಕೂಡ ನಾವು ಆಯೋಜಿಸಿದ್ದೇವೆ‘ ಎಂದು ಸಂಪೂರ್ಣಾ ಹೆಗಡೆ ಹೇಳಿದರು.

‘ಈ ಥೆರಪಿಯ ಪ್ರಯೋಗ ಈಗ ಪೈಲೆಟ್ ಹಂತದಲ್ಲಿದೆ. ಈ ಕುರಿತು ಇನ್ನೂ ಬಹಳಷ್ಟು ಅಧ್ಯಯನ ನಡೆಯಬೇಕಿದೆ. ವೈಜ್ಞಾನಿಕ ಪತ್ರಿಕೆಗಳಲ್ಲಿಯೂ ಪ್ರಕಟವಾಗಬೇಕಿದೆ’ ಎಂದು ಸಂಪೂರ್ಣಾ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT