ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿಪಟುಗಳಿಗೆ ಟ್ರಯಲ್ಸ್‌ನಲ್ಲಿ ಭಾಗಿಯಾಗುವ ಬಯಕೆ

Published 9 ಜೂನ್ 2023, 4:28 IST
Last Updated 9 ಜೂನ್ 2023, 4:28 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರದ ಆಶ್ವಾಸನೆ ಮೇರೆಗೆ ಬುಧವಾರ ಪ್ರತಿಭಟನೆ ಹಿಂಪಡೆದುಕೊಂಡ ಪ್ರಮುಖ ಕುಸ್ತಿ ಪಟುಗಳು, ಏಷ್ಯನ್‌ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವ ಅಪೇಕ್ಷೆ ಹೊಂದಿದ್ದಾರೆ. ಈ ಟ್ರಯಲ್ಸ್‌ ಈ ತಿಂಗಳ ಕೊನೆಯಲ್ಲಿ ನಿಗದಿಯಾಗಿದೆ.

ಒಲಿಂಪಿಕ್‌ ಕೌನ್ಸಿಲ್‌ ಆಫ್‌ ಏಷ್ಯಾ (ಒಸಿಎ) ನೀಡಿರುವ ಜುಲೈ 15ರ ಗಡುವಿಗಿಂತ ಮೊದಲೇ ತಂಡಗಳನ್ನು ಅಂತಿಮಗೊಳಿಸುವ ಗುರಿಯನ್ನು ಬಹುತೇಕ ರಾಷ್ಟ್ರಗಳ ಕುಸ್ತಿ ಫೆಡರೇಷನ್‌ಗಳು ಹೊಂದಿವೆ ಎಂದು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಗುರುವಾರ ಇಲ್ಲಿ ತಿಳಿಸಿದ್ದಾರೆ.

ಏಷ್ಯನ್‌ ಕ್ರೀಡಾಕೂಟ ಚೀನಾದ ಹಾಂಗ್‌ಝೌನಲ್ಲಿ ಸೆಪ್ಟೆಂಬರ್‌ 23 ರಿಂದ ಅಕ್ಟೋಬರ್‌ 8ರವರೆಗೆ ನಡೆಯಲಿದೆ.

ಕುಸ್ತಿ ಸಂಸ್ಥೆಯ ವ್ಯವಹಾರಗಳನ್ನು ನೋಡಿಕೊಳ್ಳಲು ಭಾರತ ಒಲಿಂಪಿಕ್‌ ಸಂಸ್ಥೆ ಏಪ್ರಿಲ್ 27ರಂದು ಮೂವರು ಸದಸ್ಯರ ಅಡ್‌ಹಾಕ್‌ ಸಮಿತಿಯನ್ನು ನೇಮಕ ಮಾಡಿತ್ತು. ಮೇ 4ರಂದು ಇಬ್ಬರು ಅಧಿಕಾರ ವಹಿಸಿದ್ದರು. ಈಗ ಭೂಪೇಂದರ್‌ ಸಿಂಗ್‌ ಬಾಜ್ವಾ ಮತ್ತು ಸುಮಾ ಶಿರೂರ ಅವರಿರುವ ಸಮಿತಿಯು ಜೂನ್‌ ಕೊನೆಯ ವಾರದಲ್ಲಿ ಆಯ್ಕೆ ಟ್ರಯಲ್ಸ್‌ ನಡೆಸುವ ಸಾಧ್ಯತೆಯಿದೆ.

‌ಆದರೆ ಟ್ರಯಲ್ಸ್‌ಗೆ ಸಜ್ಜಾಗಲು ತಮಗೆ ಇನ್ನೂ ಸ್ವಲ್ಪ ಸಮಯ ನೀಡುವಂತೆ ಕುಸ್ತಿಪಟುಗಳು ಬಯಸಿದ್ದಾರೆ. ‘ನಮಗೆ ಟ್ರಯಲ್ಸ್‌ನಲ್ಲಿ ಭಾಗವಹಿಸುವ ಮನಸ್ಸಿದೆ. ಆದರೆ ಸಿದ್ಧರಾಗಲು ನಮಗೆ ಕಡೇಪಕ್ಷ ಒಂದೂವರೆ ತಿಂಗಳ ತರಬೇತಿ ಅಗತ್ಯವಿದೆ’ ಎಂದು ಅಂತರರಾಷ್ಟ್ರೀಯ ಕುಸ್ತಿಪಟು ಸತ್ಯವ್ರತ ಕಾದಿಯಾನ್‌ (ಸಾಕ್ಷಿ ಮಲಿಕ್‌ ಅವರ ಪತಿ) ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ವಿಶ್ವ ಚಾಂಪಿಯನ್‌ಷಿಪ್‌ನ ನಂತರ ಕುಸ್ತಿಪಟುಗಳು ಟೂರ್ನಿಗಳಲ್ಲಿ ಭಾಗವಹಿಸಿಲ್ಲ. ಕೆಲವರು 2022ರ ಆಗಸ್ಟ್‌ನ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕೊನೆಯ ಬಾರಿ ಪಾಲ್ಗೊಂಡಿದ್ದರು.

ಏಳು ಮಂದಿ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊಂದಿರುವ ಬ್ರಿಜ್‌ಭೂಷಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ ವಿನೇಶಾ ಫೋಗಟ್‌, ಬಜರಂಗ್‌ ಪುನಿಯಾ ಮತ್ತಿತರರು ನವದೆಹಲಿಯ ಜಂತರ್‌ ಮಂಥರ್‌ನಲ್ಲಿ ಹೋರಾಟದಲ್ಲಿ ಭಾಗಿಯಾದ್ದರು. ಹೀಗಾಗಿ ಏಪ್ರಿಲ್‌ನಲ್ಲಿ ನಡೆದ ಅಂತರರಾಷ್ಟ್ರೀಯ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿರಲಿಲ್ಲ. ಬಜರಂಗ್‌ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡರೆ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ವಿನೇಶಾ ಪದಕ ಜಯಿಸಿದ್ದರು.

ಸಚಿವ ಅನುರಾಗ್‌ ಠಾಕೂರ್‌ ಜೊತೆ ಬುಧವಾರ ಕುಸ್ತಿಪಟುಗಳ ಮಾತುಕತೆ ನಡೆದಿತ್ತು. ಈ ವೇಳೆ, ಸಿಂಗ್‌ ವಿರುದ್ಧ 15 ದಿನಗಳಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಸಚಿವರ ಭರವಸೆಯ ಮೇರೆಗೆ ಕುಸ್ತಿಪಟುಗಳು ಜೂನ್‌ 15ರವರೆಗೆ ತಮ್ಮ ಹೋರಾಟಕ್ಕೆ ವಿರಾಮ ನೀಡಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT