ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಕಪ್ ಹಾಕಿ ಟೂರ್ನಿ | ಪಾಕ್ ವಿಶ್ವಕಪ್ ಕನಸು ಭಗ್ನ; ಸೂಪರ್ 4ರ ಹಂತಕ್ಕೆ ಭಾರತ

Last Updated 26 ಮೇ 2022, 15:52 IST
ಅಕ್ಷರ ಗಾತ್ರ

ಜಕಾರ್ತ: ಗೋಲು ಮಳೆ ಸುರಿಸಿದ ಭಾರತ ತಂಡ ಏಷ್ಯಾ ಕಪ್ ಹಾಕಿ ಟೂರ್ನಿಯ ಸೂಪರ್–4ರ ಹಂತಕ್ಕೆ ಲಗ್ಗೆ ಇರಿಸಿತು. ಇ ಜಿ.ಬಿ.ಕೆ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ ಅಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ತಂಡ ಆತಿಥೇಯ ಇಂಡೊನೇಷ್ಯಾವನ್ನು 16–0ಯಿಂದ ಮಣಿಸಿತು.

ಮೊದಲ ಎರಡು ಪಂದ್ಯಗಳಲ್ಲಿ ನೀರಸ ಆಟವಾಡಿದ್ದ ಭಾರತಸೂಪರ್–4ರ ಘಟ್ಟ ಪ್ರವೇಶಿಸಬೇಕಾದರೆ ಗುಂಪು ಹಂತದ ಕೊನೆಯ ಪಂದ್ಯದಲ್ಲಿ 15 ಗೋಲುಗಳ ಅಂತರದಲ್ಲಿ ಗೆಲ್ಲಬೇಕಾದ ಒತ್ತಡವಿತ್ತು. ಆರಂಭದಿಂದಲೇ ಗೋಲುಗಳನ್ನು ಗಳಿಸುತ್ತ ಸಾಗಿದ ತಂಡ ಎದುರಾಳಿಗಳಿಗೆ ಒಂದು ಗೋಲು ಕೂಡ ಬಿಟ್ಟುಕೊಡದೆ ಜಯಭೇರಿ ಮೊಳಗಿಸಿತು. ಕೊನೆಯ ಕ್ವಾರ್ಟರ್‌ನಲ್ಲಿ 6 ಗೋಲುಗಳು ಭಾರತದ ಆಟಗಾರರ ಸ್ಟಿನ್‌ನಿಂದ ಬಂದವು.

‘ಎ’ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ತಲಾ ನಾಲ್ಕು ಪಾಯಿಂಟ್ ಗಳಿಸಿವೆ. ಆದರೆ ಉತ್ತಮ ಗೋಲು ಸರಾಸರಿ ಆಧಾರದ ಮೇಲೆ ಭಾರತ ನಾಕೌಟ್ ಹಂತಕ್ಕೆ ಲಗ್ಗೆ ಇರಿಸಿತು. ಕೊನೆಯ ಪಂದ್ಯದಲ್ಲಿ ಜಪಾನ್‌ಗೆ 2–3ರಲ್ಲಿ ಮಣಿದ ಪಾಕಿಸ್ತಾನದ ವಿಶ್ವಕಪ್ ಪ್ರವೇಶದ ಕನಸು ಭಗ್ನಗೊಂಡಿತು.

ಹಾಲಿ ಚಾಂಪಿಯನ್ ಭಾರತಕ್ಕಾಗಿ ದಿಪ್ಸನ್ ಟರ್ಕಿ 5, ಸುವೇದ್ ಬಿಳಿಮಗ್ಗ 3, ಎಸ್‌.ವಿ.ಸುನಿಲ್, ಪವನ್ ರಾಜ್‌ಭರ್ ಮತ್ತು ಕಾರ್ತಿ ಸೆಲ್ವಂ ತಲಾ ಎರಡು, ಉತ್ತಮ್ ಸಿಂಗ್ ಮತ್ತು ನೀಲಂ ಸಂಜೀವ್ ಕ್ಸೆಸ್ ಒಂದೊಂದು ಗೋಲು ಗಳಿಸಿದರು. 10 ಮತ್ತು 11ನೇ ನಿಮಿಷಗಳಲ್ಲಿ ರಾಜ್‌ಭರ್ ಗಳಿಸಿದ ಗೋಲುಗಳೊಂದಿಗೆ ಭಾರತ ಮುನ್ನಡೆ ಸಾಧಿಸಲು ಆರಂಭಿಸಿತ್ತು.

ಸೂಪರ್ 4ಕ್ಕೆ ಮಲೇಷ್ಯಾ, ಕೊರಿಯಾ
ಕೊರಿಯಾ ಮತ್ತು ಟೂರ್ನಿಯಲ್ಲಿ ಈ ವರೆಗೆ ಅಜೇಯವಾಗಿರುವ ಮಲೇಷ್ಯಾ ತಂಡಗಳು ಭರ್ಜರಿ ಜಯದೊಂದಿಗೆ ಸೂಪರ್ 4ರ ಘಟ್ಟ ಪ್ರವೇಶಿಸಿದವು. ಗುರುವಾರ ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಮಲೇಷ್ಯಾ 8–1ರಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಅಗ್ರಸ್ಥಾನಕ್ಕೇರಿತು. ಕೊರಿಯಾ 5–1ರಲ್ಲಿ ಒಮಾನ್ ವಿರುದ್ಧ ಜಯ ಗಳಿಸಿ ಎರಡನೇ ಸ್ಥಾನ ಗಳಿಸಿತು. ಈ ಮೂಲಕ ವಿಶ್ವಕಪ್‌ಗೆ ಅರ್ಹತೆ ಗಳಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.

ಒಟ್ಟು 7 ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಸೃಷ್ಟಿಸಿಕೊಂಡ ಮಲೇಷ್ಯಾ ಆ ಪೈಕಿ ಮೂರನ್ನು ಗೋಲಾಗಿ ಪರಿವರ್ತಿಸಿತು. ರಜೀ ರಹೀಂ ಅವರು ಮೊದಲ ಕ್ವಾರ್ಟರ್‌ನಲ್ಲೇ ತಂಡಕ್ಕೆ 2–0 ಮುನ್ನಡೆ ಗಳಿಸಿಕೊಟ್ಟಿದ್ದರು. 4 ಮತ್ತು 14ನೇ ನಿಮಿಷಗಳಲ್ಲಿ ಅವರು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿದರು.

21ನೇ ನಿಮಿಷದಲ್ಲಿ ಅಶ್ರಫುಲ್ ಇಸ್ಲಾಂ ಗಳಿಸಿದ ಗೋಲಿನೊಂದಿಗೆ ಬಾಂಗ್ಲಾದೇಶ ತಿರುಗೇಟು ನೀಡಿತು. ಆದರೆ ಮಲೇಷ್ಯಾ ಓಟಕ್ಕೆ ಕಡಿವಾಣ ಹಾಕಲು ತಂಡಕ್ಕೆ ಸಾಧ್ಯವಾಗಲಿಲ್ಲ. 24ನೇ ನಿಮಿಷದಲ್ಲಿ ಫೈಜಲ್ ಸಾರೀ ಮತ್ತು 30ನೇ ನಿಮಿಷದಲ್ಲಿ ರಹೀಮ್ ಚೆಂಡನ್ನು ಗುರಿ ಮುಟ್ಟಿಸಿದರು.

ದ್ವಿತೀಯಾರ್ಧದಲ್ಲೂ ತಂಡದ ಗೋಲು ಗಳಿಕೆ ಮುಂದುವರಿಯಿತು. ಫೈಜಲ್ (31, 46ನೇ ನಿಮಿಷ), ನಜ್ಮಿ ಜಸ್ಲಾನ್‌ (41ನೇ ನಿ) ಮತ್ತು ಅಶ್ರಾನ್ ಅನ್ಜಾನಿ (60ನೇ ನಿ) ತಂಡದ ಮುನ್ನಡೆಯನ್ನು ಹಿಗ್ಗಿಸಿದರು.

ಕೊರಿಯಾದ ಮೊದಲ ಗೋಲು ಜೊಂಗ್ಯುನ್ ಜಾಂಗ್ ಅವರಿಂದ 11ನೇ ನಿಮಿಷದಲ್ಲಿ ಬಂದಿತು. ಹ್ಯಾನ್ಜಿನ್ ಕಿಮ್ 19ನೇ ನಿಮಿಷದಲ್ಲಿ ಗೋಲು ಗಳಿಸಿದರು. ಒಮಾನ್‌ನ ಅಲಿಯಾಸ್ ಅಲ್ ನೌಫಲಿ 22ನೇ ನಿಮಿಷದಲ್ಲಿ ಗಳಿಸಿದ ಗೋಲಿನೊಂದಿಗೆ ಹಿನ್ನಡೆಯನ್ನು 1–2ಕ್ಕೆ ಕುಗ್ಗಿಸಿದರು. ತಯೆಲಿ ಹ್ವಾಂಗ್ (33ನೇ ನಿ), ಜಿಹುನ್ ಯಾಂಗ್ (33ನೇ ನಿ) ಮತ್ತು ಜುನ್‌ವೂ ಜಿಯಾಂಗ್ (45ನೇ ನಿ) ಗೋಲುಗಳು ಕೊರಿಯಾಗೆ ಸುಲಭ ಗೆಲುವು ತಂದುಕೊಟ್ಟವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT