ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕಣದಲ್ಲಿ ಕುಸ್ತಿ, ಬದುಕಿನಲ್ಲಿ ದೋಸ್ತಿ...

Last Updated 27 ನವೆಂಬರ್ 2020, 8:32 IST
ಅಕ್ಷರ ಗಾತ್ರ
ADVERTISEMENT
""

ಒಂದೇ ಕ್ಷೇತ್ರದಲ್ಲಿದ್ದುಕೊಂಡು ವಿವಿಧ ಕ್ರೀಡಾ ಚಟುವಟಿಕೆಗಳು, ಕಾರ್ಯಕ್ರಮಗಳು, ಜಾಹೀರಾತುಗಳಲ್ಲಿ ಒಟ್ಟಾಗಿ ನಟಿಸುವ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ಒಂದಾಗಿ ಬದುಕು ರೂಪಿಸಿಕೊಂಡ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಅದರಲ್ಲೂ ಕುಸ್ತಿ ಕ್ರೀಡೆಯ ಸಾಧಕರ ಸಂಖ್ಯೆ ಹೆಚ್ಚಿದೆ. ಈ ಸಾಲಿಗೆ ಈಗ ಭಾರತದ ಭರವಸೆಯ ‘ಪೈಲ್ವಾನ’ರಾದ ಭಜರಂಗ ಪೂನಿಯಾ ಮತ್ತು ಸಂಗೀತಾ ಪೋಗಟ್‌ ಸೇರ್ಪಡೆಯಾಗಿದ್ದಾರೆ.

ಹರಿಯಾಣದ ಭಜರಂಗ ಪೂನಿಯಾ 2013, 2018 ಮತ್ತು 2019ರ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2018ರ ಏಷ್ಯನ್‌ ಕ್ರೀಡಾಕೂಟದ 65 ಕೆ.ಜಿ. ವಿಭಾಗದ ಫ್ರೀಸ್ಟೈಲ್‌ನಲ್ಲಿ ಚಿನ್ನ ಮತ್ತು 2014ರ ಇಂಚೆನ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಎರಡು ಪದಕ‌ ಗೆದ್ದುಕೊಂಡಿದ್ದಾರೆ. ಹರಿಯಾಣದವರೇ ಆದ ಸಂಗೀತಾ ಪೋಗಟ್‌ ಮಹಿಳೆಯರ 59 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದರು. ಪ್ರೊ. ಕುಸ್ತಿ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಸುಲ್ತಾನ್‌ ತಂಡದಲ್ಲಿ ಆಡಿದ್ದರು.

ಇವರಂತೆ ಕುಸ್ತಿ ಕ್ರೀಡೆಯನ್ನು ಸಾಧನೆಯ ಕ್ಷೇತ್ರವಾಗಿಸಿಕೊಂಡು ಬದುಕಿನಲ್ಲಿ ‘ದೋಸ್ತಿ’ ಆದವರಲ್ಲಿ 2010ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದ ಗೀತಾ ಪೋಗಟ್‌ ಹಾಗೂ ಪವನ್ ಕುಮಾರ್ ಜೋಡಿಯೂ ಒಂದು. ಕುಸ್ತಿ ಪಟುಗಳಾದ ವಿನೇಶ ಪೋಗಟ್‌–ಸೋಮವೀರ ರಾಟಿ, ಸಾಕ್ಷಿ ಮಲೀಕ್‌–ಸತ್ಯವರ್ತ್‌ ಕದೀನ್‌, ಸರಿತಾ ಮೋರ್‌–ರಾಹುಲ್‌ ಮನ್ ಕೂಡ ಬದುಕಿನಲ್ಲಿ ಒಂದಾಗಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಸಾಕ್ಷಿ ಮಲಿಕ್ 2014ರ ಗ್ಲಾಸ್ಗೊ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಜಯಿಸಿದ್ದ ಸತ್ಯವರ್ತ್‌ ಕದೀನ್‌ ಅವರನ್ನು ವರಿಸಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದ ಬಬಿತಾ ಪೋಗಟ್‌–ವಿವೇಕ್‌ ಸುಹಾಗ್ ಅವರನ್ನು ವಿವಾಹವಾಗಿದ್ದಾರೆ. ಭಾರತದ ಫ್ರೀಸ್ಟೈಲ್‌ ಕುಸ್ತಿಪಟು ಸರಿತಾ ಮೋರ್ 2017ರ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ 58 ಕೆ.ಜಿ. ತೂಕದ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇವರು ಕುಸ್ತಿಪಟು ರಾಹುಲ್‌ ಮನ್‌ ಅವರನ್ನು ಮದುವೆಯಾಗಿದ್ದಾರೆ.

ಹೀಗೆ ಒಂದೇ ಕ್ರೀಡೆಯಲ್ಲಿ ಸಾಧನೆ ಮಾಡಿ ಬದುಕಿನಲ್ಲಿಯೂ ಒಂದಾದವರಲ್ಲಿ ಬ್ಯಾಡ್ಮಿಂಟನ್‌ ತಾರಾ ಜೋಡಿ ಪುಲ್ಲೇಲ ಗೋಪಿಚಂದ್‌–ಪಿ.ವಿ.ವಿ. ಲಕ್ಷ್ಮಿ, ಸೈನಾ ನೆಹ್ವಾಲ್‌–ಪರುಪಳ್ಳಿ ಕಶ್ಯಪ್‌, ಅಥ್ಲೆಟಿಕ್‌ ಕ್ರೀಡೆಯ ಸಾಧಕರಾದ ಅಂಜು ಬಾಬಿ ಜಾರ್ಜ್‌–ರಾಬರ್ಟ್‌ ಬಾಬಿ ಜಾರ್ಜ್‌ ಮತ್ತು ಶೂಟಿಂಗ್‌ನಲ್ಲಿ ಸಾಧನೆ ಮಾಡಿರುವ ಹೀನಾ ಸಿಧು–ರೋನಕ್‌ ಪಂಡಿತ್‌ ಪ್ರಮುಖರು.

ಸೈನಾ ನೆಹ್ವಾಲ್‌–ಪರುಪಳ್ಳಿ ಕಶ್ಯಪ್‌

ಕ್ರೀಡಾಪಟುಗಳ ಜೋಡಿ: ಭಾರತದ ಅನೇಕ ಕ್ರೀಡಾಪಟುಗಳು ಕ್ರೀಡಾಕ್ಷೇತ್ರದ ಸಾಧಕರನ್ನೇ ವಿವಾಹವಾಗಿದ್ದಾರೆ.

ಆಸ್ಟ್ರೇಲಿಯಾ ಓಪನ್‌, ವಿಂಬಲ್ಡನ್‌ ಹಾಗೂ ಅಮೆರಿಕ ಓಪನ್‌ ಗ್ರ್ಯಾನ್‌ ಸ್ಲಾಮ್‌ ಟೂರ್ನಿಗಳ ಡಬಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿರುವ ಹೈದರಾಬಾದ್‌ನ ಸಾನಿಯಾ ಮಿರ್ಜಾ–ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಶೊಯೊಬ್‌ ಮಲಿಕ್‌ ಅವರನ್ನು, 2012ರ ಲಂಡನ್‌ ಒಲಿಂಪಿಕ್ಸ್‌ನ ಹಾಕಿಯಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಗುರ್ವಿಂದರ್‌ ಸಿಂಗ್‌ ಚಾಂಡಿ ಅವರು 2006ರ ದೋಹಾ ಮತ್ತು 2010ರ ಗುವಾಂಗ್‌ ಜೌ ಏಷ್ಯನ್‌ ಕ್ರೀಡಾಕೂಟಗಳ ಅಥ್ಲೆಟಿಕ್ಸ್‌ನಲ್ಲಿ ಪದಕ ಜಯಿಸಿದ್ದ ಮಂಜೀತ್‌ ಕೌರ್ ಅವರನ್ನು ವಿವಾಹವಾಗಿದ್ದಾರೆ.

2010ರ ನವದೆಹಲಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದ ರಾಜ್ಪಾಲ್‌ ಸಿಂಗ್‌–2006ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ಪಂಜಾಬ್‌ನ ಅವನೀತ್‌ ಕೌರ್‌ ಜೊತೆ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್‌ ಎನ್ನುವ ಹೆಗ್ಗಳಿಕೆ ಹೊಂದಿರುವ ಅಂಜುಬಾಬಿ ಜಾರ್ಜ್‌, ಟ್ರಿಪಲ್‌ ಜಂಪ್‌ನಲ್ಲಿ ಸಾಧನೆ ಮಾಡಿರುವ ರಾಬರ್ಟ್‌ ಜಾರ್ಜ್‌ ಅವರನ್ನು ಮದುವೆಯಾಗಿದ್ದರು.

ಬ್ಯಾಡ್ಮಿಂಟನ್‌ ಕ್ರೀಡೆಯಲ್ಲಿ ರಾಷ್ಟ್ರೀಯ ಚಾಂಪಿಯನ್‌ ಆಗಿದ್ದ ಪಿ.ವಿ.ವಿ. ಲಕ್ಷ್ಮಿ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ರಾಷ್ಟ್ರೀಯ ತಂಡದ ಕೋಚ್‌ ಪುಲ್ಲೇಲ ಗೋಪಿಚಂದ್‌ ಜೊತೆ ಸಪ್ತಪದಿ ತುಳಿದಿದ್ದಾರೆ. ಭಾರತ ವಾಲಿಬಾಲ್‌ ತಂಡದ ಮಾಜಿ ನಾಯಕಿ ನಿರ್ಮಲಾ ಕೌರ್‌ ಅವರು ಫ್ಲೈಯಿಂಗ್‌ ಸಿಖ್‌ ಖ್ಯಾತಿಯ ಅಥ್ಲೀಟ್‌ ಮಿಲ್ಖಾ ಸಿಂಗ್‌ ಅವರನ್ನು ವಿವಾಹವಾಗಿದ್ದಾರೆ. ಮಿಲ್ಖಾ ಸಿಂಗ್‌ ಏಷ್ಯನ್‌ ಕ್ರೀಡಾಕೂಟದ 200, 400ಮೀಟರ್‌ ಓಟ ಮತ್ತು 4X400ಮೀ. ರಿಲೆಯಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದರು. 1972ರ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡವನ್ನು ಪ್ರತಿನಿಧಿಸಿದ್ದ ವೇಸ್‌ ಪೇಸ್‌ ಹಾಗೂ ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿ ಜೆನ್ನಿಫರ್‌ ಪೇಸ್‌ ಕೂಡ ಕ್ರೀಡಾ ದಂಪತಿ.

ಇವರಷ್ಟೇ ಅಲ್ಲದೆ ಕ್ರಿಕೆಟಿಗ ದಿನೇಶ ಕಾರ್ತಿಕ್ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್‌ ಜೊತೆ, ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್‌ ಇಶಾಂತ್‌ ಶರ್ಮಾ ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿ ಪ್ರತಿಮಾ ಸಿಂಗ್‌ ಜೊತೆ, ಶೂಟಿಂಗ್‌ ಕ್ರೀಡೆಯ ಸಾಧಕರಾದ ರೋನಕ್‌ ಪಂಡಿತ್‌–ಹೀನಾ ಸಿಧು ಜೊತೆ ಮತ್ತು ಹಾಕಿ ಕ್ರೀಡೆಯ ಸಾಧಕರಾದ ಸರ್ದಾರ್‌ ಸಿಂಗ್‌, ಅಶ್ಫಲ್‌ ಕೌರ್‌ ಜೊತೆ ಬದುಕಿನಲ್ಲಿಯೂ ಒಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT