ಶುಕ್ರವಾರ, ಸೆಪ್ಟೆಂಬರ್ 24, 2021
21 °C
ರಿಲೆಯಲ್ಲಿ ಅಮೆರಿಕ ತಂಡದ ಜಯಭೇರಿ: ಕೆಲೆಬ್ ಡ್ರೆಸೆಲ್ ಚಿನ್ನದ ಮುನ್ನುಡಿ

Tokyo Olympics: ಲೆಡಕಿಸೋಲಿನ ಕಹಿಯುಣಿಸಿದ ಟಿಟ್ಮಸ್

ಎಪಿ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಆಸ್ಟ್ರೇಲಿಯಾದ ಆರಿಯಾರ್ನ್ ಟಿಟ್ಮಸ್  ಸೋಮವಾರ ಈಜುಕೊಳದಲ್ಲಿ ಸಂಚಲನ ಮೂಡಿಸಿದರು. ಅಮೆರಿಕದ ಪ್ರಾಬಲ್ಯಕ್ಕೆ ತಿರುಗೇಟು ನೀಡಿದರು.

ಮಹಿಳೆಯರ 400 ಮೀಟರ್ಸ್ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ಟಿಟ್ಮಸ್, ರಿಯೊ ಒಲಿಂಪಿಕ್ಸ್ ಚಾಂಪಿಯನ್  ಅಮೆರಿಕದ ಕೆಟಿ ಲೆಡಕಿ ಅವರಿಗೆ ಮೊದಲ ಬಾರಿ ಸೋಲಿನ ರುಚಿ ತೋರಿಸಿದರು. 

ಎಂಟು ಲ್ಯಾಪ್‌ಗಳ ಈಜಿನಲ್ಲಿ ಅಮೋಘ ಸಾಮರ್ಥ್ಯ ಮೆರೆದ ಟಿಟ್ಮಸ್ (ಇವರಿಗೆ ಟರ್ಮಿನೇಟರ್ ಎಂಬ ನಿಕ್‌ನೇಮ್ ಇದೆ)  ಮೂರು ನಿಮಿಷ, 56.69 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಒಲಿಂಪಿಕ್ ಇತಿಹಾಸದಲ್ಲಿ ಎರಡನೇ ಅತಿವೇಗದ ಸಾಧನೆಯಾಗಿದೆ.

ವಿಶ್ವದಾಖಲೆ ಈಜುಗಾರ್ತಿ ಲೆಡೆಕಿ ಮೂರು ನಿಮಿಷ, 57.36 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಪಡೆದರು.

‘ಹೌದು ಇದು ವಾಸ್ತವ. ದೊಡ್ಡ ಸಾಧನೆಗಾಗಿ ಯೋಜನೆ ರೂಪಿಸಿ ಗೆದ್ದಾಗ ಆಗುವ ಸಂತಸಕ್ಕೆ ಪಾರವೇ ಇಲ್ಲ. ಲೆಡೆಕಿಯನ್ನು ಹಿಂದಿಕ್ಕಲು ಅಪಾರವಾದ ಪ್ರಯತ್ನ ಮತ್ತು ಪರಿಶ್ರಮ ಬೇಕು. ಕೊನೆಯ 200 ಮೀಟರ್ಸ್ ಅಂತರದಲ್ಲಿ ಕಠಿಣ ಪೈಪೋಟಿಯಿತ್ತು. ಅಕೆ ನಿಜಕ್ಕೂ ಅದ್ಭುತ ಈಜುಗಾರ್ತಿ. ಆಕೆಯನ್ನು ಸೋಲಿಸುವ ಗುರಿಯಲ್ಲಿ ನಾನು ಕಲಿತದ್ದು  ಆಪಾರ, ಆಕೆಗೆ ಕೃತಜ್ಞತೆ ತಿಳಿಸಿದೆ. ನಾನಂತೂ ಈಗ ಚಂದ್ರನ ಮೇಲೆ ಇದ್ದೇನೆ‘ ಎಂದು ಟಿಟ್ಮಸ್ ಸಂಭ್ರಮಿಸಿದರು.

ತಮ್ಮ ಒಲಿಂಪಿಕ್ ಸ್ಪರ್ಧೆಯಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿ ಸೋಲಿನ ಕಹಿ ಅನುಭವಿಸಿದ ಲೆಡೆಕಿ, ‘ನಾನು ಸಂಪೂರ್ಣ ಸಾಮರ್ಥ್ಯದಿಂದ ಹೋರಾಡಿದೆ. ಅವರು ಬಹಳ ಚೆಂದದ, ಯೋಜನಾಬದ್ಧವಾದ ರೇಸ್‌ ಮಾಡಿದರು. ಸ್ಪರ್ಧೆಯ ಕೊನೆಯ ಹಂತದಲ್ಲಿ ಪ್ರಾಬಲ್ಯ ಮೆರೆದರು‘ ಎಂದರು.

2012ರಲ್ಲಿ ಲೆಡೆಕಿ 800 ಮೀಟರ್ ಫ್ರೀಸ್ಟೈಲ್‌ನಲ್ಲಿ ಚಿನ್ನ ಗೆದ್ದ ನಂತರ ಲೆಡೆಕಿ ಗೆಲುವಿನ ಹಾದಿಯಲ್ಲಿಯೇ ನಡೆದಿದ್ದರು. ಐದು ವರ್ಷಗಳ ಹಿಂದೆ ರಿಯೊದಲ್ಲಿ 200ಮೀ, 400 ಮೀ ಮತ್ತು 800 ಮೀ ಫ್ರೀಸ್ಟೈಲ್‌ ಈಜಿನಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದರು.

ಈ ವಿಭಾಗದಲ್ಲಿ ಚೀನಾದ ಲೀ ಬಿಂಗ್ಜೀ (4ನಿ, 1.08ಸೆ) ಕಂಚಿನ ಪದಕ ಪಡೆದರು. 

ಕೆಲೆಬ್ ಡ್ರೆಸೆಲ್ ಮುನ್ನುಡಿ

ಈಜುಕೊಳದ ದಿಗ್ಗಜ ಮೈಕೆಲ್ ಪೆಲ್ಪ್ಸ್‌ ಅವರ ‘ವಾರಸುದಾರ‘ ಎಂದೇ ಬಿಂಬಿತವಾಗಿರುವ ಅಮೆರಿಕದ ಕೆಲೆಬ್ ಡ್ರೆಸೆಲ್ ಚಿನ್ನದ ಪದಕ ಜಯಿಸುವುದರೊಂದಿಗೆ ಅಭಿಯಾನ ಆರಂಭಿಸಿದರು. ಅವರು ಪುರುಷರ 4X100 ಮೀ ಫ್ರೀಸ್ಟೈಲ್ ರಿಲೆಯಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 

ಬ್ಲೇಕ್ ಪೀರೊನಿ, ಬೋವ್ ಬೆಕರ್ ಮತ್ತು ಜ್ಯಾಕ್ ಆ್ಯಪಲ್ ಅವರಿದ್ದ ರಿಲೆ ತಂಡವು ಮೂರು ನಿಮಿಷ, 8.97ಸೆಕೆಂಡುಗಳಲ್ಲಿ ಗುರಿ ತಲುಪಿತು. ಇಟಲಿ  (3ನಿ,10.11ಸೆ) ಮತ್ತು ಆಸ್ಟ್ರೇಲಿಯಾ (3ನಿ,10.22ಸೆ) ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದವು.

ಈ ಬಾರಿ ಒಟ್ಟು ಆರು ಪದಕಗಳನ್ನು ಗೆಲ್ಲುವತ್ತ ಡ್ರೆಸೆಲ್ ಚಿತ್ತ ನೆಟ್ಟಿದ್ದಾರೆ.

ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಪೀಟಿ ‘ರಾಜ’

ಟೋಕಿಯೊ: ಬ್ರಿಟನ್‌ನ ಆ್ಯಡಂ ಪೀಟಿ ಪುರುಷರ 100 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್‌ ಚಿನ್ನದ ಪದಕ ಜಯಿಸಿದರು.

ವಿಶ್ವದಾಖಲೆ ವೀರ ಆ್ಯಡಂ ಇಲ್ಲಿ 57.37 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ನೆದರ್ಲೆಂಡ್‌ನ ಆರ್ನೊ ಕಮಿಂಗಾ (58ಸೆ) ಮತ್ತು ಇಟಲಿಯ (58.33ಸೆ) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದರು.

ಅಮೆರಿಕದ ಮೈಕೆಲ್ ಆ್ಯಂಡ್ರ್ಯೂ (58.84ಸೆ) ನಾಲ್ಕನೇ ಸ್ಥಾನ ಪಡೆದರು.

ಕೆನಡಾಕ್ಕೆ ಮೊದಲ ಪದಕ: ಕೆನಡಾ ದೇಶಕ್ಕೆ ಮೊದಲ ಪದಕದ ಕಾಣಿಕೆಯನ್ನು ಮ್ಯಾಗಿ ಮೆಕ್‌ನೀಲ್ ಕೊಟ್ಟರು. ಮಹಿಳೆಯರ 100 ಮೀಟರ್ಸ್ ಬಟರ್‌ಫ್ಲೈನಲ್ಲಿ ಅವರು 55.59ಸೆಕೆಂಡುಗಳಲ್ಲಿ ಗುರಿಮುಟ್ಟಿ ಪ್ರಥಮರಾದರು. 

ಚೀನಾದ ಝಾಂಗ್ ಯೂಫಿ (55.64ಸೆ) ಮತ್ತು ಆಸ್ಟ್ರೇಲಿಯಾದ ಎಮಾ ಮೆಕಾನ್ (55.72) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗಳಿಸಿದರು. ಅಮೆರಿಕದ ‘ಬಾಲಕಿ’ ಟೋರಿ ಹಸ್ಕಿ ಕೂದಲೆಳೆಯ ಅಂತರದಲ್ಲಿ ಪದಕ ತಪ್ಪಿಸಿಕೊಂಡು ನಾಲ್ಕನೇ ಸ್ಥಾನದಲ್ಲಿ ಉಳಿದರು.

ಹಾಲಿ ಚಾಂಪಿಯನ್ ಸ್ವೀಡನ್‌ನ ಸಾರಾ ಸ್ಟಾರ್ಮ್ ಏಳನೇ ಸ್ಥಾನ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು