ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಟ್ರ್ಯಾಕ್‌ಗೆ ವಿದಾಯ ಹೇಳಿದ ಚಿನ್ನದ ಹೊಳಪಿನ ವೆರೋನಿಕಾ

Last Updated 27 ಜೂನ್ 2021, 10:38 IST
ಅಕ್ಷರ ಗಾತ್ರ

ಓಟದ ಟ್ರ್ಯಾಕ್‌ನ ಉದ್ದಕ್ಕೂ ಚಿನ್ನದ ಸಾಧನೆ ಮಾಡಿದ ಜಮೈಕಾದ ಸ್ಪ್ರಿಂಟರ್ ವೆರೋನಿಕಾ ಕ್ಯಾಂಬೆಲ್ ಬ್ರೌನ್ ಅವರ ಪದಕಗಳ ಪಟ್ಟಿಯ ಮೇಲೆ ಕಣ್ಣಾಡಿಸಿದರೆ ಕ್ರೀಡಾಲೋಕಕ್ಕೇ ರೋಮಾಂಚನ. 27 ಚಿನ್ನ, 18 ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಕೊರಳಿಗೇರಿಸಿಕೊಂಡಿರುವ ಐದು ಅಡಿ ಐದು ಇಂಚು ಎತ್ತರದ ಈ ಅಥ್ಲೀಟ್‌ ಎರಡು ದಶಕಗಳ ಕ್ರೀಡಾ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ದಿಗ್ಗಜ ಓಟಗಾರ್ತಿ ಮರ್ಲಿನ್ ಒಟ್ಟಿ ಅವರೊಂದಿಗೆ ತನ್ಯಾ ಲಾರೆನ್ಸ್‌, ಬಿವರ್ಲಿ ಮೆಕ್‌ಡೊನಾಲ್ಡ್‌, ಮೆರ್ಲಿನ್ ಫ್ರೇಜರ್‌ ಮುಂತಾದವರು ಮಿಂಚುತ್ತಿದ್ದ ಜಮೈಕಾದಲ್ಲಿ ಉದಯಿಸಿದ ವೆರೋನಿಕಾ ಇತ್ತೀಚಿನ ವರ್ಷಗಳಲ್ಲಿ ಶೆಲ್ಲಿ ಆ್ಯನ್ ಫ್ರೇಜರ್ ಪ್ರೈಸ್, ಅಲೈನ್ ಥಾಮ್ಸನ್, ವಿಲಿಯಮ್ಸ್‌ ಮುಂತಾದ ಮಿಂಚಿನ ವೇಗದ ಓಟಗಾರ್ತಿಯರ ಜೊತೆಯಲ್ಲೇ ಬೆಳೆದವರು, ಸತತವಾಗಿ ಸಾಮರ್ಥ್ಯ ಮೆರೆದವರು. ಕಾಂಟಿನೆಂಟಲ್ ಕಪ್‌ನಿಂದ ಹಿಡಿದು ಒಲಿಂಪಿಕ್ಸ್‌ವರೆಗೆ ಎಲ್ಲ ಕ್ರೀಡಾಕೂಟಗಳಲ್ಲೂ ಜಗತ್ತಿನ ಶ್ರೇಷ್ಠ ಅಥ್ಲೀಟ್‌ಗಳಿಗೆ ಸವಾಲೆಸೆದ ಅಪರೂಪದ ಓಟಗಾರ್ತಿ. ಒಲಿಂಪಿಕ್ಸ್‌ನಲ್ಲಿ ಸತತ ಐದು ಬಾರಿ ಪದಕಗಳನ್ನು ಗೆದ್ದ ಏಕೈಕ ಅಥ್ಲೀಟ್ ಎಂಬ ದಾಖಲೆ 39 ವರ್ಷ ವಯಸ್ಸಿನ ಈ ಓಟಗಾರ್ತಿಯ ದೈಹಿಕ ಕ್ಷಮತೆ ಮತ್ತು ಛಲಕ್ಕೆ ಹಿಡಿದ ಕನ್ನಡಿ.

ಸ್ಪ್ರಿಂಟರ್‌ಗಳ ಕಾರ್ಖಾನೆ ಎಂದೇ ಹೇಳಲಾಗುವ ಜಮೈಕಾದಲ್ಲಿ 1982ರಲ್ಲಿ ವೆರೋನಿಕಾ ಅವರ ಜನನ. 100 ಮತ್ತು 200 ಮೀಟರ್ಸ್ ಓಟದಲ್ಲಿ ಜೂನಿಯರ್ ಹಂತದಲ್ಲೇ ಪದಕಗಳನ್ನು ಗಳಿಸತೊಡಗಿದ್ದ ಅವರು 18ನೇ ವಯಸ್ಸಿನಲ್ಲಿ ಒಲಿಂಪಿಕ್ಸ್ ಪದಕ ಗೆದ್ದರು. ಅವರು ಒಲಿಂಪಿಕ್ಸ್‌ನಲ್ಲಿ ಗೆದ್ದ ಒಟ್ಟು ಪದಕಗಳ ಸಂಖ್ಯೆ ಎಂಟು. ಜರ್ಮನಿಯ ಬಾರ್ಬೆಲ್ ವೊಕೆಲ್ ಅವರ ನಂತರ ಸತತ ಎರಡು ಒಲಿಂಪಿಕ್ಸ್‌ಗಳಲ್ಲಿ 200 ಮೀಟರ್ಸ್ ವಿಭಾಗದ ಪದಕ ಗೆದ್ದ ಏಕೈಕ ಮಹಿಳೆ ಅವರು. ಯೂತ್‌, ಜೂನಿಯರ್ ಮತ್ತು ಸೀನಿಯರ್ ವಿಭಾಗದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಒಟ್ಟಾರೆ ಒಂಬತ್ತನೇ ಅಥ್ಲೀಟ್ ಎಂಬ ಶ್ರೇಯಸ್ಸು ಕೂಡ ಅವರಿಗಿದೆ.

100 ಮೀಟರ್ಸ್‌ನಲ್ಲಿ 10.76 ಸೆಕೆಂಡು ಹಾಗೂ 200 ಮೀಟರ್ಸ್‌ನಲ್ಲಿ 21.74 ಸೆಕೆಂಡುಗಳು ಅವರ ವೈಯಕ್ತಿಕ ಶ್ರೇಷ್ಠ ಸಾಧನೆ. 2000ನೇ ಇಸವಿಯಲ್ಲಿ ಸಿಡ್ನಿಯಲ್ಲಿ ನಡೆದ ಒಲಿಂಪಿಕ್ಸ್‌ನ 4×100 ಮೀಟರ್ಸ್ ರಿಲೇಯಲ್ಲಿ ಬೆಳ್ಳಿ ಪದಕದೊಂದಿಗೆ ಗಮನ ಸೆಳೆದ ವೆರೋನಿಕಾ ಅವರ ಪದಕ ಗಳಿಕೆ 2015ರ ವರೆಗೆ ಮುಂದುವರಿದಿತ್ತು. 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ 200 ಮೀಟರ್ಸ್ ಮತ್ತು 4×100 ಮೀಟರ್ಸ್ ರಿಲೆಯಲ್ಲಿ ಚಿನ್ನಕ್ಕೆ ಮುತ್ತಿಟ್ಟ ಅವರು 2008ರ ಬೀಜಿಂಗ್ ಒಲಿಂಪಿಕ್ಸ್‌ನ 200 ಮೀಟರ್ಸ್‌ನಲ್ಲೂ ಚಿನ್ನಕ್ಕೆ ಮುತ್ತಿಟ್ಟರು. 2004ರಲ್ಲಿ ಮೊನಾಕೊದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಫೈನಲ್ಸ್‌ನ 100 ಮತ್ತು 200 ಮೀಟರ್ಸ್‌ನಲ್ಲಿ ಚಿನ್ನ ಗಳಿಸಿದರು. ಮುಂದಿನ ವರ್ಷವೂ ಈ ಕೂಟದ 100 ಮೀಟರ್ಸ್‌ನ ಚಿನ್ನ ಮತ್ತು 200 ಮೀಟರ್ಸ್‌ನ ಬೆಳ್ಳಿ ಪದಕ ಅವರ ಕೊರಳನ್ನು ಅಲಂಕರಿಸಿದವು.

ಅಂತರರಾಷ್ಟ್ರೀಯ ಮಟ್ಟದಲ್ಲಿ ವೆರೋನಿಕಾ ಮೊದಲ ಪದಕ ಗಳಿಸಿದ್ದು 1999ರಲ್ಲಿ. 18 ವರ್ಷದೊಳಗಿನವರ ವಿಶ್ವ ಚಾಪಿಯನ್‌ಷಿಪ್‌ನ 100 ಮೀಟರ್ಸ್ ಮತ್ತು 4x100 ಮೀಟರ್ಸ್ ರಿಲೇಯಲ್ಲಿ ತೋರಿದ ‘ಚಿನ್ನದ’ ಸಾಮರ್ಥ್ಯ ಮುಂದಿನ ವರ್ಷ ಒಲಿಂಪಿಕ್ಸ್ ಪದಾರ್ಪಣೆಗೆ ಹಾದಿಯೊದಗಿಸಿತು. ಒಲಿಂಪಿಕ್ಸ್ ಮುಗಿದ ಕೆಲವೇ ವಾರಗಳ ನಂತರ ಚಿಲಿಯಲ್ಲಿ ನಡೆದ 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 100 ಮತ್ತು 200 ಮೀಟರ್ಸ್ ಚಾಂಪಿಯನ್‌ ಆಗಿ ಮೆರೆದರು. 2004ರ ಒಲಿಂಪಿಕ್ಸ್ ಅವರ ಪಾಲಿಗೆ ಮಹತ್ವದ್ದಾಗಿತ್ತು.

ಆ ಕೂಟದ 200 ಮೀಟರ್ಸ್‌ನಲ್ಲಿ ಮೊದಲಿಗರಾದ ಅವರು ಸ್ಪ್ರಿಂಟ್‌ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಜಮೈಕಾದ ಮೊದಲ ಮಹಿಳೆ ಎನಿಸಿಕೊಂಡರು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಅತ್ಯಂತ ರೋಚಕ ಫಲಿತಾಂಶಗಳಲ್ಲಿ ಒಂದು ಎಂದು ಹೇಳಲಾಗುವ 2007ರ ಒಸಾಕ ಕೂಟದ 100 ಮೀಟರ್ಸ್‌ನಲ್ಲಿ ಚಿನ್ನದ ನಗೆ ಸೂಸಿದ ಅವರು 200 ಮೀಟರ್ಸ್ ಹಾಗೂ 4x100 ಮೀಟರ್ಸ್ ರಿಲೇಯಲ್ಲಿ ಪದಕಗಳನ್ನೂ ಕೊರಳಿಗೇರಿಸಿಕೊಂಡರು.

2005, 2007 ಮತ್ತು 2009ರ ವಿಶ್ವ ಚಾಂಪಿಯನ್‌ಷಿಪ್‌ಗಳ 200 ಮೀಟರ್ಸ್ ಓಟದಲ್ಲಿ ಭಾರಿ ಪೈಪೋಟಿ ನೀಡಿ ಚಿನ್ನ ಗೆದ್ದ ಅಮೆರಿಕದ ಅಲಿಸನ್ ಫೆಲಿಕ್ಸ್‌ಗೆ ಆ ಕಾಲದಲ್ಲಿ ವೆರೋನಿಕಾ ಪ್ರಬಲ ಪ್ರತಿಸ್ಪರ್ಧಿಯಾಗಿದ್ದರು. 2011ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 200 ಮೀಟರ್ಸ್ ಓಟದ ಚಿನ್ನವನ್ನೂ ಗಳಿಸುವುದರೊಂದಿಗೆ ಫೆಲಿಕ್ಸ್ ಅವರ ಪಾರುಪತ್ಯಕ್ಕೆ ವೆರೋನಿಕಾ ಅಂತ್ಯ ಹಾಡಿದರು. 2010ರ ಒಳಾಂಗಣ ಕ್ರೀಡಾಕೂಟದ 60 ಮೀಟರ್ಸ್‌ ಓಟದಲ್ಲೂ ಮೊದಲಿಗರಾಗುವುದರೊಂದಿಗೆ 60, 100 ಮತ್ತು 200 ಮೀಟರ್ಸ್‌ ಓಟದ ಚಾಂಪಿಯನ್‌ ಆದ ವಿಶ್ವದ ಮೊದಲ ಮಹಿಳೆ ಎಂಬ ದಾಖಲೆಯೂ ಅವರ ಹೆಸರಿಗೆ ಸೇರಿತು.

2015ರ ವಿಶ್ವ ಚಾಂಪಿಯನ್‌ಷಿಪ್‌ನ 200 ಮೀಟರ್ಸ್‌ನಲ್ಲಿ ಕಂಚಿನ ಪದಕ ಗೆದ್ದ ನಂತರ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸುವುದನ್ನು ನಿಲ್ಲಿಸಿದ ಅವರು ರಿಲೇ ಕಡೆಗೆ ಹೆಚ್ಚು ಗಮನ ಕೊಟ್ಟರು. 4x100 ಮೀಟರ್ಸ್ ರಿಲೇಯಲ್ಲಿ 41.07 ಸೆಕೆಂಡುಗಳ ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆ ಬರೆದರು. 2016ರ ಒಲಿಂಪಿಕ್ಸ್‌ನ ರಿಲೇಯಲ್ಲೂ ಬೆಳ್ಳಿ ಗಳಿಸಿದರು.

2019ರಲ್ಲಿ ಹೆಣ್ಣುಮಗುವಿಗೆ (ಅವಿಯಾನ) ಜನ್ಮ ನೀಡಿದ ನಂತರವೂ ವೆರೋನಿನಾ ಟ್ರ್ಯಾಕ್‌ನಲ್ಲಿ ಸಾಧನೆ ಮಾಡಿದರು. ನಿವೃತ್ತಿಗೂ ಮುನ್ನ 60, 100 ಮತ್ತು 200 ಮೀಟರ್ಸ್‌ನಲ್ಲಿ ಋತುವೊಂದರ ಶ್ರೇಷ್ಠ ಸಾಧನೆಯೂ ಅವರಿಂದ ಮೂಡಿ ಬಂತು. ಈ ಮೂರು ವಿಭಾಗಗಳಲ್ಲಿ ಕ್ರಮವಾಗಿ 7.34 ಸೆಕೆಂಡು, 11.20 ಸೆಕೆಂಡು ಮತ್ತು 23.73 ಸೆಕೆಂಡುಗಳ ಸಾಧನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT