ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಠೀರವ ಒಳಾಂಗಣ ಕ್ರೀಡಾಂಗಣಕ್ಕೆ ನೀರು: ಬ್ಯಾಸ್ಕೆಟ್‌ಬಾಲ್‌ ಪಂದ್ಯ ಮುಂದೂಡಿಕೆ

ಕಂಠೀರವ ಒಳಾಂಗಣ ಕ್ರೀಡಾಂಗಣಕ್ಕೆ ನುಗ್ಗಿದ ಮಳೆನೀರು
Last Updated 5 ಸೆಪ್ಟೆಂಬರ್ 2022, 19:01 IST
ಅಕ್ಷರ ಗಾತ್ರ

ಬೆಂಗಳೂರು: ಫಿಬಾ 18 ವರ್ಷದೊಳಗಿನ ಮಹಿಳಾ ಏಷ್ಯನ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯಗಳು ನಡೆಯಬೇಕಿದ್ದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಮಳೆ ನೀರಿನದ್ದೇ ಆಟ.

ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಒಳಾಂಗಣ ಕ್ರೀಡಾಂಗಣಕ್ಕೆ ನೀರು ನುಗ್ಗಿದ್ದು, ಮೊದಲ ದಿನ ನಡೆಯಬೇಕಿದ್ದ ನಾಲ್ಕು ಪಂದ್ಯಗಳನ್ನು ರದ್ದುಗೊಳಿಸಲಾಯಿತು.

ಕ್ರೀಡಾಂಗಣದ ಪಕ್ಕದಲ್ಲಿರುವ ಚರಂಡಿ ತುಂಬಿ ಹರಿದು, ನೀರು ಒಳಭಾಗಕ್ಕೆ ಬಂದಿದೆ. ಮರದ ನೆಲಹಾಸಿನ ಮೇಲೆ ಸುಮಾರು ಮೂರು ಅಡಿಯಷ್ಟು ನೀರು ನಿಂತಿತ್ತು. ಡ್ರೆಸಿಂಗ್‌ ಕೊಠಡಿ ಒಳಗೊಂಡಂತೆ, ನೆಲಮಹಡಿಯಲ್ಲಿರುವ ಎಲ್ಲ ಕೊಠಡಿಗಳೂ ನೀರಿನಿಂದ ಆವೃತವಾಗಿದ್ದವು.

ಸೋಮವಾರ ಬೆಳಿಗ್ಗೆಯಿಂದಲೇ ನೀರು ಹೊರಹಾಕುವ ಕೆಲಸ ನಡೆಯಿತು. ಕ್ರೀಡಾಂಗಣದ ಸಿಬ್ಬಂದಿಯ ಜತೆ ಡಿವೈಇಎಸ್‌ ಹಾಸ್ಟೆಲ್‌ನ ಕ್ರೀಡಾಪಟುಗಳೂ ಈ ಕೆಲಸದಲ್ಲಿ ಕೈಜೋಡಿಸಿದರು.

ಭಾರತ– ಆಸ್ಟ್ರೇಲಿಯಾ ಪಂದ್ಯ ಸೇರಿದಂತೆ ಮೊದಲ ದಿನ ‘ಎ’ ಡಿವಿಷನ್‌ನ ನಾಲ್ಕು ಪಂದ್ಯಗಳು ನಡೆಯಬೇಕಿತ್ತು. ಈ ಪಂದ್ಯಗಳನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ಸೆ.8ರ ವಿಶ್ರಾಂತಿ ದಿನವನ್ನು ರದ್ದುಪಡಿಸಿ, ಆ ದಿನವೂ ಪಂದ್ಯಗಳನ್ನು ನಡೆಸಲು ಸಂಘಟಕರು ನಿರ್ಧರಿಸಿದ್ದಾರೆ.

‘ಕ್ರೀಡಾಂಗಣದ ಒಳಗೆ ಸೇರಿದ್ದ ಎಲ್ಲ ನೀರನ್ನೂ ಹೊರಹಾಕಲಾಗಿದೆ. ಮರದ ನೆಲಹಾಸು ಹಾಗೂ ಕೊಠಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಫಿಬಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮಂಗಳವಾರದಿಂದ ಆಟ ಮುಂದುವರಿಸುವಂತೆ ಸೂಚಿಸಿದ್ದಾರೆ’ ಎಂದು ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ ಅಧ್ಯಕ್ಷ ಕೆ.ಗೋವಿಂದರಾಜ್‌ ತಿಳಿಸಿದರು.

ಜನರೇಟರ್‌ ಕೊಠಡಿಗೆ ನೀರು: ಇದೇ ಚಾಂಪಿಯನ್‌ಷಿಪ್‌ನ ‘ಬಿ’ ಡಿವಿಷನ್‌ನ ಪಂದ್ಯಗಳಿಗೆ ವೇದಿಕೆಯೊದಗಿಸಿರುವ ಕೋರಮಂಗಲ ಒಳಾಂಗಣ ಕ್ರೀಡಾಂಗಣದ ಜನರೇಟರ್‌ ಕೊಠಡಿಗೆ ಮಳೆ ನೀರು ನುಗ್ಗಿದೆ. ಇದರಿಂದ ಇಲ್ಲಿನ ಪಂದ್ಯಗಳು ತಡವಾಗಿ ಆರಂಭವಾದವು.

ಫಿಲಿಪ್ಪೀನ್ಸ್‌ಗೆ ಗೆಲುವು
ಕೋರಮಂಗಲ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಡಿವಿಷನ್‌ನ ಪಂದ್ಯದಲ್ಲಿ ಫಿಲಿಪ್ಪೀನ್ಸ್‌ 65–50 ರಲ್ಲಿ ಥಾಯ್ಲೆಂಡ್‌ ತಂಡವನ್ನು ಮಣಿಸಿತು. 22 ಪಾಯಿಂಟ್ಸ್‌ ಗಳಿಸಿದ ಕೇಟ್‌ ಕಾಲಿನ್‌ ಅವರು ಫಿಲಿಪ್ಪೀನ್ಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಎರಡನೇ ಪಂದ್ಯದಲ್ಲಿ ಜೋರ್ಡಾನ್‌ ತಂಡ 40–36 ರಲ್ಲಿ ಮಲೇಷ್ಯಾ ಎದುರು ಗೆದ್ದಿತು. ವಿಜಯಿ ತಂಡದ ಫಿಯೊನಾ ಡಾಸನ್‌ 12 ಪಾಯಿಂಟ್ಸ್ ಸಂಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT