ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌ ಮುತ್ತು; ಫಿಟ್‌ನೆಸ್ಸೇ ತಾಕತ್ತು

Last Updated 1 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಈ ಬಾರಿಯ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪಿ.ವಿ.ಸಿಂಧು ಆರಂಭಿಕ ಸುತ್ತುಗಳ ಪಂದ್ಯಗಳಲ್ಲೇ ಚುರುಕಿನ ಪಾದಚಲನೆಯ ಮೂಲಕ ಗಮನ ಸೆಳೆದಿದ್ದರು. ಈ ಲಯವನ್ನು ಕಾಪಾಡಿಕೊಂಡು ಮುಂದುವರಿದ ಹೈದರಾಬಾದ್‌ ಮುತ್ತು, ಚಿನ್ನಕ್ಕೆ ಮುತ್ತನ್ನಿತ್ತು ದೇಶದ ಕ್ರೀಡಾ ಇತಿಹಾಸದಲ್ಲಿ ತಮ್ಮ ಹೆಸರು ದಾಖಲು ಮಾಡಿದರು.

ಬ್ಯಾಡ್ಮಿಂಟನ್ ಜಗತ್ತಿನ ಅತ್ಯಂತ ಚುರುಕಿನ ಆಟಗಾರ್ತಿಯರಾದ ಬೆವೆನ್ ಜಾಂಗ್, ತಾಯ್ ಜು ಯಿಂಗ್, ಚೆನ್ ಯೂ ಫಿ ಮತ್ತು ನೊಜೊಮಿ ಒಕುಹರಾ ಅವರಿಗೆ ತಕ್ಕ ಸವಾಲೊಡ್ಡುವುದು ಅಷ್ಟು ಸುಲಭವಲ್ಲ. ಹಾಗಿದ್ದರೆ ಸಿಂಧು ಅವರಿಗೆ ಅಂಗಣದಲ್ಲಿ ಆಧಿಪತ್ಯ ಮೆರೆಯಲು ನೆರವಾದದ್ದು ಯಾವುದು? ಸಂದೇಹ ಬೇಡ; ಅವರ ಕೈ ಹಿಡಿದದ್ದು ಫಿಟ್‌ನೆಸ್.

ಮಹೀಂದ್ರಾ ಉದ್ಯಮ ಗುಂಪಿನ ಆನಂದ ಮಹೀಂದ್ರಾ ಅವರು ವಿಶ್ವ ಚಾಂಪಿಯನ್‌ಷಿಪ್ ನಂತರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಸಿಂಧು ಅವರ ಫಿಟ್‌ನೆಸ್ ತರಬೇತಿಯ ವಿಡಿಯೊಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಸಿಂಧು ಫಿಟ್‌ನೆಸ್ ಕಾಪಾಡಿಕೊಳ್ಳಲು ಪಡೆಯುತ್ತಿರುವ ತರಬೇತಿ, ವ್ಯಯಿಸುವ ಸಮಯ ಇತ್ಯಾದಿಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಾದದ್ದು ಆಗಲೇ. ಬ್ಯಾಡ್ಮಿಂಟನ್ ಅಭ್ಯಾಸಕ್ಕೆ ನೀಡುವಷ್ಟೇ ಒತ್ತನ್ನು ಸಿಂಧು ಫಿಟ್‌ನೆಸ್‌ಗೂ ನೀಡುತ್ತಾರೆ. ಈ ಬಾರಿ ಪ್ರಮುಖ ಟೂರ್ನಿಗಳಲ್ಲಿ ಸತತವಾಗಿ ಪದಕಗಳ ಕೊರತೆ ಎದುರಿಸಿದ್ದ ಸಿಂಧು ವಿಶ್ವ ಚಾಂಪಿಯನ್‌ಷಿಪ್‌ಗೂ ಮುನ್ನ ಕೆಲವು ದಿನ ಭರ್ಜರಿ ವ್ಯಾಯಾಮ ಮಾಡಿ ದೇಹವನ್ನು ಹುರಿಗೊಳಿಸಿದ್ದರು. ಸ್ಟ್ರೆಚಿಂಗ್‌ಗೆ ವಿಶೇಷ ತರಬೇತಿ ಪಡೆದು ಅಂಗಣದ ತುಂಬ ಓಡಾಡಲು ಬೇಕಾದ ‘ತಾಕತ್ತು’ ಸಿದ್ಧಿಸಿದ್ದರು.

ಸೂರ್ಯ ಮೂಡುವ ಮೊದಲು ಆರಂಭ

ಸಿಂಧು ಅವರ ಫಿಟ್‌ನೆಸ್ ತರಬೇತಿ ಸೂರ್ಯ ಮೂಡುವ ಮೊದಲೇ ಆರಂಭವಾಗುತ್ತದೆ. ಮುಂಜಾನೆ 3.30ರ ಹೊತ್ತಿಗೆ ಏಳುವ ಅವರು ವರ್ಕ್ ಔಟ್ ಅನ್ನು 4 ಅಥವಾ 4.30ಕ್ಕೆ ಆರಂಭಿಸುತ್ತಾರೆ. ಅದು ಬೆಳಿಗ್ಗೆ 7 ಗಂಟೆಯ ವರೆಗೆ ಮುಂದುವರಿಯುತ್ತದೆ. ವಿರಾಮದ ನಂತರ 8 ಗಂಟೆಯಿಂದ 11 ಗಂಟೆಯ ವರೆಗೆ ಅಂಗಣದಲ್ಲಿ ಬೆವರು ಸುರಿಸುತ್ತಾರೆ.
ಪ್ರತಿ ದಿನ 6ರಿಂದ 7 ತಾಸು ಜಿಮ್ ಮತ್ತು ಅಂಗಣದಲ್ಲಿ ಕಳೆಯುವ ಸಿಂಧು ಇಂಥ ‘ಅಭ್ಯಾಸ’ವನ್ನು ವಾರದಲ್ಲಿ ಆರು ದಿನ ಮಾಡುತ್ತಾರೆ.

ಸಿಂಧು ಪ್ರಮುಖ ವ್ಯಾಯಾಮಗಳು

*7-8 ಆಯಾಮಗಳಲ್ಲಿ 100 ಪುಶ್ ಅಪ್, 200 ಸಿಟ್ ಅಪ್. 10 ಬಾರಿ 400 ಮೀಟರ್ಸ್ ಓಟ ಅಥವಾ 2.4 ಕಿಮೀ ದೂರದ ಓಟ; ಕೆಲವೊಮ್ಮೆ 10 ಕಿಮೀ ಓಟ.

* 70ರಿಂದ 100 ವಾಲಿಬಾಲ್ ಜಂಪ್‌ಗಳು.

* ಹೊಟ್ಟೆಯ ಸ್ನಾಯುಗಳಿಗೆ ಬಲ ತುಂಬಲು 2,400 ಬಾರಿ ವಿವಿಧ ವ್ಯಾಯಾಮಗಳು.

* ಯೋಗ, ಪ್ರಾಣಯಾಮ, ಕಪಾಲಭಾತಿ, ಈಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT