ಬುಧವಾರ, ಜೂನ್ 23, 2021
25 °C
ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗೆ ಇಂದು ಚಾಲನೆ

ತವರಿನಲ್ಲಿ ಮಿಂಚುವ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ (ಪಿಟಿಐ): ಪ್ರಶಸ್ತಿಗಳ ಬರ ಎದುರಿಸುತ್ತಿರುವ ಭಾರತದ ಪ್ರಮುಖ ಬ್ಯಾಡ್ಮಿಂಟನ್ ಆಟಗಾರರಿಗೆ ಇದೀಗ ತವರಿನಲ್ಲಿ ಮಿಂಚುವ ಅವಕಾಶ. ಮಂಗಳವಾರ ಇಲ್ಲಿ ಆರಂಭವಾಗಲಿರುವ ಸೈಯದ್ ಮೋದಿ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಕಿದಂಬಿ ಶ್ರೀಕಾಂತ್, ಸೈನಾ ನೆಹ್ವಾಲ್, ಸಮೀರ್ ವರ್ಮಾ, ಸಾಯಿ ಪ್ರಣೀತ್ ಅವರೊಂದಿಗೆ ಯುವ ಪ್ರತಿಭೆ ಲಕ್ಷ್ಯ ಸೇನ್ ಪ್ರಶಸ್ತಿ ಗಳಿಸುವ ಭರವಸೆಯೊಂದಿಗೆ ಕಣಕ್ಕೆ ಇಳಿಯಲಿದ್ದಾರೆ.

ಮೂರು ಬಾರಿಯ ಚಾಂಪಿಯನ್ ಸೈನಾ ನೆಹ್ವಾಲ್ ಈ ಸಲ ಅನಾರೋಗ್ಯ ಮತ್ತು ಗಾಯದ ಸಮಸ್ಯೆಗಳಿಂದ ಬಳಲಿ ನಿರಾಸೆ ಕಂಡಿದ್ದಾರೆ. ಆರು ಟೂರ್ನಿಗಳಲ್ಲಿ ಅವರು ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದಾರೆ. ಹೀಗಾಗಿ ವರ್ಷದ ಕೊನೆಯಲ್ಲಾದರೂ ಪ್ರಶಸ್ತಿಯೊಂದಿಗೆ ಸಂಭ್ರಮಿಸುವ ಗುರಿಯೊಂದಿಗೆ ಅವರು ಆಡಲಿದ್ದಾರೆ. ಇಂಗ್ಲೆಂಡ್‌ನ ಚೋಲ್ ಬಿರ್ಚ್ ವಿರುದ್ಧ ಅವರು ಮೊದಲ ಸುತ್ತಿನಲ್ಲಿ ಸೆಣಸಲಿದ್ದಾರೆ. ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಟೂರ್ನಿಯಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ.

ಡಚ್ ಮತ್ತು ಸಾರ್‌ಲಾರ್ ಲಕ್ಸ್ ‘ಸೂಪರ್ 100’ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದು ಸಂಭ್ರಮಿಸಿರುವ 18 ವರ್ಷದ ಲಕ್ಷ್ಯ ಸೇನ್ ಈ ವರ್ಷದ ಮೊದಲ ‘ಸೂಪರ್ 300’ ಪ್ರಶಸ್ತಿ ಗಳಿಸುವ ಹುಮ್ಮಸ್ಸಿನಲ್ಲಿದ್ದಾರೆ. ಡಚ್ ಮತ್ತು ಸಾರ್‌ಲಾರ್ ಲಕ್ಸ್ ಸೇರಿದಂತೆ ಲಕ್ಷ್ಯ ಸೇನ್ 3 ತಿಂಗಳಲ್ಲಿ ನಾಲ್ಕು ಪ್ರಶಸ್ತಿ ಗೆದ್ದಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 40ರ ಒಳಗೆ ಸ್ಥಾನ ಪಡೆಯಲು ಅವರಿಗೆ ಈಗ ಉತ್ತಮ ಅವಕಾಶ ಒದಗಿದೆ.

ಹಾಲಿ ಚಾಂಪಿಯನ್ ಸಮೀರ್ ವರ್ಮಾ, 2016ರಲ್ಲಿ ಪ್ರಶಸ್ತಿ ಗೆದ್ದಿರುವ ಕಿದಂಬಿ ಶ್ರೀಕಾಂತ್ ಮತ್ತು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗಳಿಸಿರುವ ಬಿ.ಸಾಯಿ ಪ್ರಣೀತ್ ಕೂಡ ಪುರುಷರ ಸಿಂಗಲ್ಸ್‌ನಲ್ಲಿ ಮಿಂಚುವ ಗುರಿ ಹೊಂದಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನ ಚಾಂಪಿಯನ್‌ ಪರುಪಳ್ಳಿ ಕಶ್ಯಪ್ ಅವರಿಗೂ ಈ ಟೂರ್ನಿ ಮಹತ್ವದ್ದಾಗಿದೆ. 2012 ಮತ್ತು 2015ರ ಆವೃತ್ತಿಯಲ್ಲಿ ಅವರು ಚಾಂಪಿಯನ್ ಆಗಿದ್ದರು.

ಚಿರಾಗ್‌–ಸಾತ್ವಿಕ್ ಮೇಲೆ ಎಲ್ಲರ ಗಮನ: ಪುರುಷರ ಡಬಲ್ಸ್‌ನಲ್ಲಿ ಈ ವರ್ಷ ಅತ್ಯುತ್ತಮ ಸಾಮರ್ಥ್ಯ ಮೆರೆದಿರುವ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿ ರಾಜ್ ರಣಕಿ ರೆಡ್ಡಿ ಉತ್ತಮ ಲಯದಲ್ಲಿದ್ದಾರೆ. ಥಾಯ್ಲೆಂಡ್ ಓಪನ್ ‘ಸೂಪರ್‌ 500’ರ ಪ್ರಶಸ್ತಿ ಗೆದ್ದಿರುವ ಈ ಜೋಡಿ ಫ್ರೆಂಚ್ ಓಪನ್‌ನ ಫೈನಲ್ ಪ್ರವೇಶಿಸಿ ಗಮನ ಸೆಳೆದಿದ್ದರು. 

ಸಾತ್ವಿಕ್ ಮತ್ತು ಅಶ್ವಿನಿ ಪೊನ್ನಪ್ಪ ಅವರ ಮಿಶ್ರ ಡಬಲ್ಸ್ ಜೋಡಿಗೂ ನೈಜ ಸಾಮರ್ಥ್ಯ ಪ್ರದರ್ಶಿಸಲು ಇಲ್ಲಿ ಉತ್ತಮ ಅವಕಾಶವಿದೆ. ಅಶ್ವಿನಿ ಪೊನ್ನಪ್ಪ ಮಹಿಳೆಯರ ಡಬಲ್ಸ್ ವಿಭಾಗದಲ್ಲೂ ಮಿಂಚುವ ವಿಶ್ವಾಸ ಹೊಂದಿದ್ದಾರೆ. ಈ ವಿಭಾಗದಲ್ಲಿ ಅವರಿಗೆ ಸಿಕ್ಕಿ ರೆಡ್ಡಿ ಜೋಡಿಯಾಗಿದ್ದಾರೆ.

 

ಮೊದಲ ಸುತ್ತಿನಲ್ಲಿ ಭಾರತದ ಸವಾಲು

ಪುರುಷರ ಸಿಂಗಲ್ಸ್‌

ಆಟಗಾರ;ಎದುರಾಳಿ

ಎಚ್‌.ಎಸ್‌.ಪ್ರಣಯ್;ಲೀ ಶಿ ಫೆಂಗ್(ಚೀನಾ)

ಕಿದಂಬಿ ಶ್ರೀಕಾಂತ್;ವ್ಲಾದಿಮಿರ್ ಮಾಲ್ಕೊವ್(ರಷ್ಯಾ)

ಪರುಪಳ್ಳಿ ಕಶ್ಯಪ್;ಲೂಕಾಸ್ ಕೊರ್ವಿ(ಫ್ರಾನ್ಸ್‌)

ಲಕ್ಷ್ಯ ಸೇನ್;ಥಾಮಸ್ ರೊಕ್ಸೆಲ್(ಫ್ರಾನ್ಸ್‌)

ಸೌರಭ್ ವರ್ಮಾ;ಲೀ ಚೊಕ್ ಯೂ(ಹಾಂಗ್‌ಕಾಂಗ್)

ಸಾಯಿ ಪ್ರಣೀತ್‌;ಇಸ್ಕದರ್ ಜುಲ್ಕರ್‌ನೈನ್(ಮಲೇಷ್ಯಾ)

ಸಮೀರ್ ವರ್ಮಾ;ಅಜಯ್‌ ಜಯರಾಮ್

 

ಮಹಿಳಾ ಸಿಂಗಲ್ಸ್‌

ಸೈನಾ ನೆಹ್ವಾಲ್;ಚೋಲ್ ಬ್ರಿಚ್‌(ಇಂಗ್ಲೆಂಡ್)

ಮುಗ್ದಾ ಅಗ್ರ;ಲಿಯಾನ್ ಟ್ಯಾನ್(ಬೆಲ್ಜಿಯಂ)

ರಿಯಾ ಮುಖರ್ಜಿ;ನತಾಲಿಯ ಪೆರ್ಮಿನೋವ(ರಷ್ಯಾ)

 

‍ಪುರುಷರ ಡಬಲ್ಸ್‌ ವಿಭಾಗ (ಪ್ರಮುಖರು)

ಅರುಣ್ ಜಾರ್ಜ್/ಸನ್ಯಮ್ ಶುಕ್ಲ;ಪವನ್ ಮಲಿಕ್/ವೆಂಕಟ್ ಪ್ರಸಾದ್‌

ತರುಣ್ ಕೋನಾ/ಶಿವಂ ಶರ್ಮಾ;ಹಿ ಜಿ ಟಿಂಗ್/ಟ್ಯಾನ್ ಕ್ವಾಂಗ್ (ಚೀನಾ)

ಮನು ಅತ್ರಿ/ಸುಮೀತ್ ರೆಡ್ಡಿ;ಒವು ಕ್ಸಾನ್/ಜಾಂಗ್ ನ್ಯಾನ್ (ಚೀನಾ)

ಚಿರಾಗ್ ಶೆಟ್ಟಿ/ಸಾತ್ವಿಕ್ ಸಾಯಿರಾಜ್;ಡಿ.ಜಿ.ಜಿಯಾನ್/ವಾಂಗ್ ಚಾಂಗ್ (ಚೀನಾ)

 

ಮಹಿಳೆಯರ ಡಬಲ್ಸ್‌ ವಿಭಾಗ (ಪ್ರಮುಖರು)

ಸಿಮ್ರನ್ ಸಿಂಗ್/ಋತಿಕಾ ಠಕ್ಕರ್;ಅರ್ಹತಾ ಸುತ್ತಿನ ವಿಜೇತರು

ಅಶ್ವಿನಿ ಪೊನ್ನಪ್ಪ/ಸಿಕ್ಕಿ ರೆಡ್ಡಿ;ನಿಂಗ್ ಯೂ/ಯುಯೆನ್ ಯಿಂಗ್(ಹಾಂಗ್‌ ಕಾಂಗ್)

ಮೇಘನಾ ಜಕ್ಕಂಪುಡಿ/ರಾಮ್ ಪೂರ್ವಿಷಾ;ಬೆಕ್ ನಾ/ಜುಂಗ್ ಕ್ಯುಂಗ್

 

ಮಿಶ್ರ ಡಬಲ್ಸ್ ವಿಭಾಗ (ಪ್ರಮುಖರು)

ಧ್ರುವ್ ಕಪಿಲ/ಮೇಘನಾ ಜಕ್ಕಂಪುಡಿ;ಅಶ್ವಿನಿ ಪೊನ್ನಪ್ಪ/ಸಾತ್ವಿಕ್ ಸಾಯಿರಾಜ್

ಸುಮಿತ್ ರೆಡ್ಡಿ/ಕುಹೂ ಗರ್ಗ್‌;ಸ್ಯಾಮ್ ಮಗಿ/ಶೋಲೆ ಮಗಿ (ಐರ್ಲೆಂಡ್)

ಪ್ರಣವ್ ಜೆರಿ ಚೋಪ್ರ/ಸಿಕ್ಕಿ ರೆಡ್ಡಿ;ಹಿ ಟಿಂಗ್‌/ಡು ಯೂ (ಚೀನಾ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು