ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ನಡೆಯುವ ಬಗ್ಗೆ ಖಚಿತವಾಗಿ ಹೇಳಲಾರೆ: ನವೊಮಿ

Last Updated 11 ಮೇ 2021, 6:39 IST
ಅಕ್ಷರ ಗಾತ್ರ

ಟೋಕಿಯೊ: ಕೊರೊನಾವೈರಸ್‌ ಭೀತಿಗೆ ಒಳಗಾಗಿರುವ ಟೋಕಿಯೊ ಒಲಿಂಪಿಕ್ಸ್‌ ನಿಗದಿಯಂತೆ ನಡೆಯುವ ಬಗ್ಗೆ ಅನುಮಾನಗಳು ದಿನದಿಂದ ದಿನಕ್ಕೆ ಬಲವಾಗತೊಡಗಿವೆ. ‘ಈ ಕ್ರೀಡೆಗಳು ನಡೆಯುವ ಬಗ್ಗೆ ಖಚಿತವಾಗಿ ಹೇಳಲಾಗದು’ ಎಂದು ಜಪಾನ್‌ನ ದಿಗ್ಗಜ ಆಟಗಾರ್ತಿ ನವೊಮಿ ಓಸಾಕಾ ಕೂಡ ಒಪ್ಪಿಕೊಂಡಿದ್ದಾರೆ.

ಜಪಾನ್‌ ರಾಜಧಾನಿಯಲ್ಲಿ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭ ಆರಂಭವಾಗಲು ಇನ್ನು ಕೆಲವೇ ವಾರಗಳು ಉಳಿದಿವೆ.

ಟೋಕಿಯೊ ಜೊತೆಗೆ ಜಪಾನ್‌ನ ಇತರ ಭಾಗಗಳಲ್ಲಿ ವೈರಸ್‌ ಉಪಟಳ ಮೇರೆಮೀರುವುದನ್ನು ತಡೆಯಲು ತುರ್ತು ಸ್ಥಿತಿ ಹೇರಲಾಗಿದೆ. ಈ ಬಗ್ಗೆ ಜಪಾನ್‌ನ ಆಟಗಾರ ಕಿ ನಿಶಿಕೋರಿ ಕೂಡ ಕಳವಳ ವ್ಯಕ್ತಪಡಿಸಿದ್ದು, ಅವರ ಸಾಲಿಗೆ ನಾಲ್ಕು ಗ್ರ್ಯಾಂಡ್‌ಸ್ಲಾಮ್‌ ಟ್ರೋಫಿಗಳ ಒಡತಿ ಒಸಾಕಾ ಕೂಡ ಸೇರಿದ್ದಾರೆ.

ಒಲಿಂಪಿಕ್ ಕ್ರೀಡೆಗಳನ್ನು ನಡೆಸುವುದಕ್ಕೆ ಜಪಾನ್‌ ನಾಗರಿಕರಿಗೆ ಸ್ವಲ್ಪವೂ ಇಷ್ಟವಿಲ್ಲ ಎಂಬುದು ಜನಾಭಿಪ್ರಾಯ ಸಂಗ್ರಹಣೆಯಲ್ಲೂ ವ್ಯಕ್ತವಾಗಿದೆ. ಕ್ರೀಡೆ ನಡೆಸುವುದಕ್ಕೆ ಸಂಬಂಧಿಸಿ ಜಪಾನ್‌, ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕು ಎಂದು ಪ್ರಮುಖ ರಾಜಕೀಯ ಮುಖಂಡರೊಬ್ಬರು ಹೇಳಿದ್ದಾರೆ.‌

ಸೋಮವಾರ ಬಿಡುಗಡೆಯಾದ ಜ‍ಪಾನ್‌ನ ಪ್ರಮುಖ ಪತ್ರಿಕೆಯ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 59 ಜನ ಒಲಿಂಪಿಕ್ಸ್‌ ರದ್ದುಗೊಳಿಸುವುದೇ ಲೇಸು ಎಂದಿದ್ದಾರೆ.

ಈ ಹಿಂದೆ ಒಲಿಂಪಿಕ್‌ ಸಂಸ್ಥೆ ಅಧಿಕಾರಿಗಳು ಮತ್ತು ವ್ಯವಸ್ಥಾಪಕ ಸಮಿತಿ ಮುಖ್ಯಸ್ಥರು ನಿಗದಿಯಂತೆ ಒಲಿಂಪಿಕ್ಸ್ ನಡೆಸುವುದಾಗಿ ಉತ್ಸಾಹ ಹೇಳಿದ್ದರು. ಆದರೆ ಕೊರೊನಾ ವೈರಸ್‌ ಎಲ್ಲೆಡೆ ಕಬಂಧಬಾಹುಗಳನ್ನು ಚಾಚಿದ ಕಾರಣ, ಕಳೆದ ವರ್ಷದ ಜುಲೈ–ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಕ್ರೀಡೆಗಳನ್ನು ಒಂದು ವರ್ಷ ಮುಂದೂಡಲಾಗಿತ್ತು.

ಒಲಿಂಪಿಕ್ಸ್‌ ನಡೆಯುವುದೇ‌ ಎಂಬ ಪ್ರಶ್ನೆಗೆ, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೇ ಖಚಿತವಿಲ್ಲ’ ಎಂದು ಜಪಾನ್‌ನ ಅತ್ಯುನ್ನತ ಕ್ರೀಡಾ ತಾರೆ ಒಸಾಕಾ ಪ್ರತಿಕ್ರಿಯಿಸಿದ್ದಾರೆ. ಅವರು ಒಲಿಂಪಿಕ್ಸ್‌ ಟೆನಿಸ್‌ ಚಿನ್ನ ಗೆಲ್ಲುವ ನೆಚ್ಚಿನ ಆಟಗಾರ್ತಿಯೂ ಸಹ.

‘ನಾನೊಬ್ಬ ಆಟಗಾರ್ತಿ, ನನ್ನ ತಕ್ಷಣದ ಯೋಚನೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದಷ್ಟೇ’ ಎಂದೂ ಹೇಳಿದ್ದಾರೆ. ‘ಆದರೆ ಮನುಷ್ಯತ್ವದಿಂದ ಹೇಳುವುದಾದರೆ, ನಾವೀಗ ಸಾಂಕ್ರಾಮಿಕ ಪಿಡುಗಿನ ಮಧ್ಯದಲ್ಲಿದ್ದೇವೆ. ಜನರು ಸ್ವಸ್ಥರಾಗಿಲ್ಲದಿದ್ದರೆ ಮತ್ತು ಸುರಕ್ಷಿತವಾಗಿಲ್ಲವೆಂಬ ಭಾವನೆ ಅವರಿಗೆ ಮೂಡದಿದ್ದರೆ ಅದು ನಿಜಕ್ಕೂ ಕಳವಳಕಾರಿ’ ಎಂದು ನವೊಮಿ ‘ಬಿಬಿಸಿ’ ವಾಹಿನಿಗೆ ತಿಳಿಸಿದ್ದಾರೆ.

‘ಒಲಿಂಪಿಕ್ಸ್‌ ನಡೆಸಬೇಕೇ ಎಂಬ ಬಗ್ಗೆ ಚರ್ಚೆಯಾಗಬೇಕು. ಇದು ಸಣ್ಣ ಟೂರ್ನಿಯಲ್ಲ. ಒಲಿಂಪಿಕ್‌ ಗ್ರಾಮದಲ್ಲಿ ಸಾವಿರಾರು ಜನ ಒಟ್ಟುಗೂಡುತ್ತಾರೆ. ಈಗ ಜಪಾನ್‌ನ ಪರಿಸ್ಥಿತಿ ನೋಡಿದರೆ ಈ ಕ್ರೀಡೆಗಳನ್ನು ನಡೆಸುವುದು ಸುಲಭದ ಮಾತಲ್ಲ. ಇದು ಒಳ್ಳೆಯ ಪರಿಸ್ಥಿತಿಯಲ್ಲ’ ಎನ್ನುವುದು ನಿಶಿಕೋರಿ ಅವರ ಅನಿಸಿಕೆ.

ಭೇಟಿ ರದ್ದು:

ಮಾಸಾಂತ್ಯದಲ್ಲಿ ಜಪಾನ್‌ಗೆ ಭೇಟಿ ನೀಡಬೇಕಾಗಿದ್ದ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್‌ ಬ್ಯಾಕ್‌, ಆ ದೇಶದಲ್ಲಿ ತುರ್ತುಸ್ಥಿತಿ ವಿಸ್ತರಿಸಿದ ಕಾರಣ ತಮ್ಮ ಪ್ರವಾಸವನ್ನು ರದ್ದುಗೊಳಿಸಿರುವುದಾಗಿ ಸೋಮವಾರ ಪ್ರಕಟಿಸಿದ್ದರು.

ಆಡಳಿತಾರೂಢ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದಲ್ಲಿ ಎರಡನೇ ಉನ್ನತ ಸ್ಥಾನದಲ್ಲಿರುವ ತೊಶಿಹಿರೊ ನಿಕಾಯಿ ಅವರೂ ಜಪಾನ್‌ಗೆ ಎಚ್ಚರಿಕೆ ಹೇಳಿದ್ದಾರೆ. ಕ್ರೀಡೆಗಳನ್ನು ನಡೆಸುವ ಮೊದಲು ದೇಶವು, ಒಲಿಂಪಿಕ್‌ ತಜ್ಞರಿಂದ ಸಲಹೆಗಳನ್ನು ಪಡೆಯುವ ಅಗತ್ಯವಿದೆ ಎಂದಿದ್ದಾರೆ.

‘ಒಲಿಂಪಿಕ್ಸ್‌ಗೆ ಎಂದೂ ಹೆಚ್ಚಿನ ಆದ್ಯತೆ ನೀಡಿರಲಿಲ್ಲ. ಜಪಾನ್‌ ಜೀವ ಮತ್ತು ಆರೋಗ್ಯಕ್ಕೆ ನನ್ನ ಆದ್ಯತೆ‘ ಎಂದು ಪ್ರಧಾನಿ ಯೊಶಿಹಿಡೆ ಸುಗಾ ಈಗಾಗಲೇ ಹೇಳಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT