ಶನಿವಾರ, ಮೇ 15, 2021
25 °C
ಉಡುಗೆ, ಕನ್ನಡಕ, ಕ್ಯಾಪ್‌ ಖರೀದಿಗೆ ನೆರವು ನೀಡಲು ಚಿಂತನೆ; ಮಹಿಳಾ ಕೋಚ್‌ಗಳಿಗೆ ಆದ್ಯತೆ

ಈಜುಪಟುಗಳಿಗೆ ಕೆಎಸ್‌ಎ ‘ಆರ್ಥಿಕ ಚೇತನ’

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದುಬಾರಿ ವೆಚ್ಚ ಭರಿಸಿ ಈಜುಡುಗೆ ಮತ್ತು ಇತರ ಪರಿಕರಗಳನ್ನು ಖರೀದಿಸಲು ಸಾಧ್ಯವಾಗದ ಈಜುಪಟುಗಳು ಮತ್ತು ಕೋಚ್‌ಗಳಿಗೆ ನೆರವು ನೀಡಲು ರಾಜ್ಯ ಈಜು ಸಂಸ್ಥೆ (ಕೆಎಸ್‌ಎ) ಮುಂದಾಗಿದೆ. ಇದಕ್ಕಾಗಿ ಯೋಜನೆಯೊಂದನ್ನು ಸಿದ್ಧಪಡಿಸುತ್ತಿದ್ದು ಎರಡು ತಿಂಗಳಲ್ಲಿ ಕ್ರೀಡಾಪಟುಗಳಿಗೆ ಇದರ ಪ್ರಯೋಜನ ಸಿಗಲಿದೆ.

ನಗರದಲ್ಲಿ ಕೆಎಸ್‌ಎ ಆಯೋಜಿಸಿರುವ ಕೋಚ್‌ಗಳ ಎರಡು ದಿನಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ನಂತರ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅಧ್ಯಕ್ಷ ಗೋಪಾಲ್ ಬಿ.ಹೊಸೂರು ಯೋಜನೆಯ ಮಾಹಿತಿ ನೀಡಿದರು.

‘ಈಜು ಕಲಿಯಲು ಮಕ್ಕಳು ಮತ್ತು ತರಬೇತಿ ನೀಡಲು ಕೋಚ್‌ಗಳು ಹಿಂದೇಟು ಹಾಕುವುದರ ಕಾರಣವನ್ನು ಹುಡುಕುವ ಪ್ರಯತ್ನವನ್ನು ಸಂಸ್ಥೆ ಈಚೆಗೆ ಮಾಡಿತ್ತು. ದುಬಾರಿ ಬೆಲೆಯ ಪರಿಕರಗಳನ್ನು ಕೊಳ್ಳಲು ಸಾಧ್ಯವಾಗದೇ ಇರುವುದು ಇದಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂತು. ಹೀಗಾಗಿ ಆರ್ಥಿಕ ಶಕ್ತಿ ಇಲ್ಲದವರಿಗೆ ನೆರವು ನೀಡುವುದು ಒಳಿತು ಎಂಬ ನಿರ್ಧಾರಕ್ಕೆ ಬರಲಾಯಿತು’ ಎಂದು ಅವರು ತಿಳಿಸಿದರು.

ನೆರವಿನ ಅಗತ್ಯ ಇರುವವರನ್ನು ಗುರುತಿಸುವ ಜವಾಬ್ದಾರಿಯನ್ನು ಆಯಾ ಜಿಲ್ಲೆಗಳ ಕ್ಲಬ್‌ಗಳಿಗೆ ವಹಿಸಲಾಗುವುದು. ಕ್ಲಬ್‌ಗಳು ನೀಡುವ ವಿವರವನ್ನು ಆಧರಿಸಿ ಪರಿಕರಗಳನ್ನು ಸರಬರಾಜು ಮಾಡಲಾಗುವುದು’ ಎಂದು ಹೊಸೂರು ವಿವರಿಸಿದರು.

ಈಜು ಸಂಕೀರ್ಣಕ್ಕೆ ನಿರ್ಮಾಣಕ್ಕೆ ಚಿಂತನೆ: ರಾಜ್ಯದಲ್ಲಿ ಸರ್ಕಾರದ ಮತ್ತು ಖಾಸಗಿ ಆಡಳಿತದ ಈಜುಕೊಳಗಳು ಸಾಕಷ್ಟಿವೆ. ಸಣ್ಣಪುಟ್ಟ ಪಟ್ಟಣಗಳಲ್ಲೂ ಸೌಲಭ್ಯಗಳು ಇವೆ. ಆದರೆ ಮಹತ್ವದ ಕೂಟಗಳನ್ನು ಏರ್ಪಡಿಸಲು ಸೌಕರ್ಯಗಳು ಇಲ್ಲ. ಹೀಗಾಗಿ ಬೆಂಗಳೂರು ಹೊರವಲಯದಲ್ಲಿ ಬೃಹತ್ ಈಜು ಸಂಕೀರ್ಣ ನಿರ್ಮಿಸಲು ಕೆಎಸ್‌ಎ ಚಿಂತನೆ ನಡೆಸಿದೆ.

‘ವಾಟರ್ ಪೋಲೊ, ಡೈವಿಂಗ್‌, ಸಿಂಕ್ರನೈಸ್ಡ್ ಈಜಿಗೆ ಸೌಲಭ್ಯ ಹಾಗೂ ಜಿಮ್‌ ಒಳಗೊಂಡ ಸಂಕೀರ್ಣ ನಿರ್ಮಾಣಕ್ಕೆ ನಾಲ್ಕು ಎಕರೆ ಜಾಗದ ಅಗತ್ಯವಿದೆ. ಇದಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಗೋಪಾಲ ಹೊಸೂರು ತಿಳಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಮೂರು ಸರ್ಕಾರಿ ಶಾಲೆಗಳಲ್ಲಿ ಈಜುಕೊಳ ನಿರ್ಮಿಸುವುದಕ್ಕೂ ಸರ್ಕಾರವನ್ನು ಕೋರಲಾಗಿದೆ. ಮುಂದಿನ ಬಜೆಟ್‌ನಲ್ಲಿ ಇದಕ್ಕೆ ಹಣ ತೆಗೆದಿರಿಸುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಿಳಾ ಕೋಚ್‌ಗಳು ಕಡಿಮೆ
ರಾಜ್ಯದಲ್ಲಿ ಮಹಿಳಾ ಕೋಚ್‌ಗಳ ಸಂಖ್ಯೆ ತೀರಾ ಕಡಿಮೆ ಇದೆ. ಹೀಗಾಗಿ ಕೋಚಿಂಗ್ ಕ್ಷೇತ್ರಕ್ಕೆ ಮಹಿಳೆಯರನ್ನು ಕರೆತರುವುದಕ್ಕೂ ಪ್ರಯತ್ನ ನಡೆಯುತ್ತಿದೆ. ಒಟ್ಟಾರೆ 150ಕ್ಕೂ ಹೆಚ್ಚು ಕೋಚ್‌ಗಳು ರಾಜ್ಯದಲ್ಲಿ ಇದ್ದು ಮಹಿಳೆಯರ ಸಂಖ್ಯೆ 10ರಿಂದ 12 ಮಾತ್ರ. ಮಹಿಳಾ ಕೋಚ್‌ಗಳ ಸಂಖ್ಯೆ ಹೆಚ್ಚಾದರೆ ಹೆಚ್ಚು ಹೆಣ್ಣುಮಕ್ಕಳು ಈಜುಕೊಳದ ಕಡೆಗೆ ಬರುವ ಸಾಧ್ಯತೆ ಇದೆ ಎಂದು ಗೋಪಾಲ ಹೊಸೂರು ಅಭಿಪ್ರಾಯಪಟ್ಟರು.

ಜಿಲ್ಲಾವಾರು ಈಜು ಕ್ಲಬ್‌ಗಳು

ಜಿಲ್ಲೆ; ಕ್ಲಬ್‌ಗಳು

ಬೆಂಗಳೂರು; 27

ಬೆಂಗಳೂರು ಗ್ರಾಮಾಂತರ; 1

ಮಂಗಳೂರು; 6

ಬೆಳಗಾವಿ; 4

ಮಂಡ್ಯ; 1

ಉಡುಪಿ; 1

ಕೊಡಗು; 1

ಬಾಗಲಕೋಟೆ; 1

ದಾವಣಗೆರೆ; 1

ಮೈಸೂರು; 1  

(ಆಧಾರ: ಕೆಎಸ್‌ಎ ವೆಬ್‌ಸೈಟ್)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು