ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರ ಓಪನ್‌ ರದ್ದು: ಸೈನಾ, ಶ್ರೀಕಾಂತ್ ಕನಸು ಭಗ್ನ

Last Updated 12 ಮೇ 2021, 17:07 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19ರಿಂದ ಉಂಟಾಗಿರುವ ವಿಷಮ ಸ್ಥಿತಿಯಿಂದಾಗಿ ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯನ್ನು ರದ್ದುಗೊಳಿಸಲಾಗಿದೆ ಎಂದು ಆಯೋಜಕರು ಬುಧವಾರ ತಿಳಿಸಿದ್ದಾರೆ.

ಟೂರ್ನಿ ರದ್ದುಗೊಳಿಸಲು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್‌) ಮತ್ತು ಸಿಂಗಪುರ ಬ್ಯಾಡ್ಮಿಂಟನ್ ಸಂಸ್ಥೆ ಜಂಟಿಯಾಗಿ ತೀರ್ಮಾನಿಸಿದೆ. ಈ ನಿರ್ಧಾರದಿಂದಾಗಿ ಭಾರತದ ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಅವರ ಟೋಕಿಯೊ ಕನಸು ಭಗ್ನಗೊಂಡಿದೆ.

‘ಆಟಗಾರರು, ಟೂರ್ನಿಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಸ್ಥಳೀಯ ಜನರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಟೂರ್ನಿಯನ್ನು ನಡೆಸದೇ ಇರಲು ನಿರ್ಧರಿಸಲಾಗಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಂಡು ನಿರಾತಂಕವಾಗಿ ಟೂರ್ನಿ ಆಯೋಜಿಸಲು ಎಲ್ಲ ಬಗೆಯ ಪ್ರಯತ್ನಗಳನ್ನು ನಡೆಸಲಾಗಿತ್ತು. ಆದರೆ ಜಾಗತಿಕ ಮಟ್ಟದಲ್ಲಿ ಕೋವಿಡ್ ಉಂಟುಮಾಡಿರುವ ವಿಷಮ ಸ್ಥಿತಿಯಿಂದಾಗಿ ಉದ್ದೇಶ ಈಡೇರಲಿಲ್ಲ’ ಎಂದು ಬಿಡಬ್ಲ್ಯುಎಫ್‌ ತಿಳಿಸಿದೆ.

ಟೋಕಿಯೊ ಒಲಿಂಪಿಕ್ಸ್‌ ಅರ್ಹತೆಗೆ ಸಂಬಂಧಿಸಿ ಶೀಘ್ರದಲ್ಲೇ ಪ್ರಕಟಣೆ ನೀಡಲಾಗುವುದು ಎಂದು ಅದು ವಿವರಿಸಿದೆ.

ಮೇ 25ರಿಂದ ನಡೆಯಬೇಕಾಗಿದ್ದ ಮಲೇಷ್ಯಾ ಓಪನ್ ಟೂರ್ನಿಯನ್ನು ಮೇ ಏಳರಂದು ರದ್ದುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ ಅರ್ಹತೆಗೆ ಯಾವ ಮಾನದಂಡವನ್ನು ಅನುಸರಿಸಲಾಗುತ್ತದೆ ಎಂದು ಭಾರತ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ವಿಶ್ವ ಫೆಡರೇಷನ್‌ ಅನ್ನು ಪ್ರಶ್ನಿಸಿದೆ.

ಪಿ.ವಿ.ಸಿಂಧು, ಬಿ.ಸಾಯಿ ಪ್ರಣೀತ್‌, ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಸಿಂಗಪುರ ಓಪನ್ ಟೂರ್ನಿ ನಡೆದಿದ್ದರೂ ಭಾರತದ ಆಟಗಾರರಿಗೆ ಪಾಲ್ಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ಸಿಂಗಪುರ ಸರ್ಕಾರವು ಭಾರತದ ವಿಮಾನಗಳನ್ನು ನಿಷೇಧಿಸಿದೆ.

ಜಪಾನ್ ಕ್ರೀಡಾಪಟುಗಳಿಗೆ ಲಸಿಕೆ
ಟೋಕಿಯೊ (ಎಎಫ್‌ಪಿ):
ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಜಪಾನ್‌ನ ಎಲ್ಲ ಕ್ರೀಡಾಪಟುಗಳಿಗೆ ಕೋವಿಡ್‌–19 ಸಿಗಲಿದೆ. ಈ ವಿಷಯವನ್ನು ಬುಧವಾರ ವರದಿಯಾಗಿದ್ದು ಒಲಿಂಪಿಕ್ಸ್‌ ಸ್ಪರ್ಧಾಳುಗಳಿಗೆ ಆದ್ಯತೆಯ ಮೇಲೆ ಲಸಿಕೆ ನೀಡಲಾಗುವುದು ಎಂದು ತಿಳಿಸಲಾಗಿದೆ.

ನಿಕ್ಕಿ ಮತ್ತು ಯೊಮಿವುರಿ ಶಿಂಬುಮ್‌ ದಿನಪತ್ರಿಕೆಗಳಲ್ಲಿ ಈ ಕುರಿತು ಸುದ್ದಿ ಪ್ರಕಟವಾಗಿದೆ. ಆದರೆ ಇದನ್ನು ಸರ್ಕಾರವಾಗಲಿ, ಒಲಿಂಪಿಕ್ಸ್ ಆಯೋಜಕರಾಗಲಿ ಜಪಾನ್ ಒಲಿಂಪಿಕ್ಸ್ ಸಮಿತಿಯಾಗಲಿ ಸ್ಪಷ್ಟಪಡಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT