ಸೋಮವಾರ, ಜೂನ್ 21, 2021
30 °C

ಒಳನೋಟ| ಪದೋನ್ನತಿ ಇಲ್ಲ, ಹೆಚ್ಚುವರಿ ಕೆಲಸದ ಹೊರೆ

ಪ್ರೊ.ಶೇಷಣ್ಣ Updated:

ಅಕ್ಷರ ಗಾತ್ರ : | |

Prajavani

ದೈಹಿಕ ಶಿಕ್ಷಣ ಶಿಕ್ಷಕರಿಗೆ ದೈಹಿಕ ಶಿಕ್ಷಣದ ಎಲ್ಲ ಆಯಾಮಗಳ ಪರಿಚಯವಿದ್ದು, ತಾಂತ್ರಿಕವಾಗಿ ತರಬೇತಿ ನೀಡುವರು. ಇದರಿಂದ ಮಕ್ಕಳ ದೈಹಿಕ ಸಾಮರ್ಥ್ಯಗಳ ವೃದ್ಧಿಯಾಗುತ್ತದೆ. ದೈಹಿಕ ಸಾಮರ್ಥ್ಯವನ್ನು ಮೇಲ್ನೋಟಕ್ಕೆ ‘ಫಿಸಿಕಲ್‌ ಫಿಟ್‌ನೆಸ್‌’ ಅಂತ ಹೇಳಿಬಿಡುತ್ತೇವೆ. ಆದರೆ ಇದು ವಿಶಾಲ ಅರ್ಥವನ್ನು ಹೊಂದಿದೆ.

ಶಾಲೆಗಳಲ್ಲಿ ಕಲಿಸುವ ದೈಹಿಕ ಶಿಕ್ಷಣ ಚಟುವಟಿಕೆ ಬರೀ ಕ್ರೀಡೆಗೆ ಸೀಮಿತವಾದುದಲ್ಲ. ನಮ್ಮ ದೈನಂದಿನ ಜೀವನಕ್ಕೂ ಅವಶ್ಯಕವಾಗಿವೆ. ಆದ್ದರಿಂದ ಶಾಲೆ, ಕಾಲೇಜುಗಳಲ್ಲಿ ಅವರ ಉಪಸ್ಥಿತಿ ಇರಲೇಬೇಕು. ಶಾಲೆಯ ಕಬಡ್ಡಿ ಅಥವಾ ವಾಲಿಬಾಲ್‌ ತಂಡವನ್ನು ಯಾವುದೋ ಟೂರ್ನಿಗೆ ಕರೆದೊಯ್ದು ಗೆಲ್ಲಿಸಿಕೊಂಡು ಬರುವುದು ಮಾತ್ರ ದೈಹಿಕ ಶಿಕ್ಷಣ ಶಿಕ್ಷಕನ ಕೆಲಸವಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗೂ ದೈಹಿಕ ಶಿಕ್ಷಣವನ್ನು ಕಲಿಸಿಕೊಡಬೇಕು.

ಕೊರತೆಯಿಂದ ಭಾರಿ ನಷ್ಟ: ದೈಹಿಕ ಶಿಕ್ಷಣ ಶಿಕ್ಷಕನಿಂದ ಲಾಭಗಳು ಹಲವು. ಆದ್ದರಿಂದ ಆತನ ಅನುಪಸ್ಥಿತಿ ನಿರ್ದಿಷ್ಟ ಶಾಲೆ ಮಾತ್ರವಲ್ಲದೆ, ಸಮಾಜಕ್ಕೂ ಬಲುದೊಡ್ಡ ನಷ್ಟ. ಒಂದು ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಇಲ್ಲದಿದ್ದರೆ, ಇನ್ನೊಂದು ಶಾಲೆಯ ಶಿಕ್ಷಕನನ್ನು ಕರೆಸಲು ಅಥವಾ ಇಲ್ಲಿನ ವಿದ್ಯಾರ್ಥಿಗಳನ್ನು ಅಲ್ಲಿಗೆ ಕಳುಹಿಸಲು ಆಗದು.

ದೈಹಿಕ ಶಿಕ್ಷಣ ನೀಡುವ ಕೆಲಸವನ್ನು ಬೇರೆಯನಿಗೆ ಮಾಡಲು ಸಾಧ್ಯವಿಲ್ಲ. ಕನ್ನಡ, ಇತಿಹಾಸ, ಅರ್ಥಶಾಸ್ತ್ರ ವಿಷಯ ಕಲಿಸುವ ಶಿಕ್ಷಕರು ಅವರಿಗೆ ಸಂಬಂಧಪಟ್ಟ ವಿಷಯವನ್ನು ತಿಳಿದುಕೊಂಡಿರುವರೇ ಹೊರತು ದೈಹಿಕ ಶಿಕ್ಷಣದ ಬಗ್ಗೆ ಅರಿತುಕೊಂಡಿರುವುದಿಲ್ಲ. ಅವರು ಸ್ವಂತ ಆಸಕ್ತಿಯಿಂದ ಒಂದಷ್ಟು ಕಲಿತಿರಬಹುದು. ಆದರೆ ದೈಹಿಕ ಶಿಕ್ಷಣವನ್ನು ಶಾಸ್ತ್ರೀಯವಾಗಿ ಹೇಗೆ ಕಲಿಸಬೇಕು ಎಂಬುದನ್ನು ತಿಳಿದಿರುವುದಿಲ್ಲ.

ಕೊರತೆಗೆ ಏನು ಕಾರಣ?: ದೈಹಿಕ ಶಿಕ್ಷಣದಿಂದ ಆಗುವ ಲಾಭಗಳ ಬಗ್ಗೆ ಸ್ಪಷ್ಟ ತಿಳುವಳಿಕೆಯ ಅಭಾವ ಶಿಕ್ಷಣ ಸಂಸ್ಥೆಗಳನ್ನು ನಡೆಸುವವರಲ್ಲಿದೆ. ಸಮಾಜಕ್ಕೆ ಆಗಬಹುದಾದ ಲಾಭಗಳ ಬಗ್ಗೆ ಶಿಕ್ಷಣ ಕ್ಷೇತ್ರದ ಧುರೀಣರಿಗೆ ಮನವರಿಕೆ ಮಾಡಿಕೊಡುವಲ್ಲಿ ದೈಹಿಕ ಶಿಕ್ಷಣ ಕ್ಷೇತ್ರದ ವಿವಿಧ ಸ್ತರಗಳ ಅಧಿಕಾರಿಗಳು ವಿಫಲವಾಗಿದ್ದಾರೆ.

ಸರ್ಕಾರದ ಬದ್ಧತೆಯ ಕೊರತೆ ಕೂಡಾ ಕಾಣುತ್ತದೆ. ದೈಹಿಕ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಸರ್ಕಾರ ಕಾಲಕಾಲಕ್ಕೆ ಸಮಿತಿಗಳನ್ನು ನೇಮಿಸುತ್ತಾ ಬಂದಿದೆ. 2006–07 ರಲ್ಲಿ ವೈದ್ಯನಾಥನ್‌ ಸಮಿತಿಯನ್ನು ನೇಮಿಸಲಾಗಿತ್ತು. ಸಮಿತಿಯ ವರದಿ ಇನ್ನೂ ಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಸರ್ಕಾರಕ್ಕೆ ತೊಂದರೆ ಆಗದಂತಹ ಶಿಫಾರಸುಗಳನ್ನು ಮಾತ್ರ ಜಾರಿಗೆ ತರಲಾಗಿದೆ. ವರದಿಯನ್ನು ಒಪ್ಪಿಕೊಂಡ ಮೇಲೆ ಅನುಷ್ಠಾನಗೊಳಿಸಲು ಬದ್ಧತೆ ತೋರಿಸಬೇಕಿತ್ತು.

ಮಕ್ಕಳು ಪಡೆಯುವ ಅಂಕಗಳು ಮತ್ತು ಗ್ರೇಡ್‌ಗಳಿಗೆ ಇರುವ ಪ್ರಾಧಾನ್ಯತೆ ಕ್ರೀಡೆಗೆ ಇಲ್ಲ. ಇಂಗ್ಲಿಷ್‌, ಕನ್ನಡ ಒಳಗೊಂಡಂತೆ ಇತರ ಎಲ್ಲ ಪಠ್ಯಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಆದರೆ ದೈಹಿಕ ಶಿಕ್ಷಣದ ಪಠ್ಯ ಮುಗಿದಿದೆಯೇ ಎಂದು ಯಾರೂ ಗಮನ ಹರಿಸುವುದಿಲ್ಲ. ದೈಹಿಕ ಶಿಕ್ಷಕರಿಗೆ ಪದೋನ್ನತಿಗೂ ಅವಕಾಶ ಇಲ್ಲ. ಹೀಗಿರುವಾಗ ಕೆಲಸ ಮಾಡಲು ಆಸಕ್ತಿ ಹೇಗೆ ಬರಬೇಕು?

ಹೆಚ್ಚುವರಿ ಕೆಲಸದ ಹೊರೆ: ಸಾಕಷ್ಟು ಜವಾಬ್ದಾರಿ ಇರುವ ದೈಹಿಕ ಶಿಕ್ಷಣ ಶಿಕ್ಷಕನಿಗೆ ಶಾಲೆಗಳಲ್ಲಿ ಹೆಚ್ಚುವರಿ ಕೆಲಸ ನೀಡಲಾಗುತ್ತದೆ. ಸರ್ಕಾರದಿಂದ ಕೊಡುವ ಸಮವಸ್ತ್ರ ಹಂಚಿಕೆ, ಸೈಕಲ್‌ ವಿತರಣೆ, ಮಧ್ಯಾಹ್ನದ ಬಿಸಿಯೂಟದ ಯೋಜನೆ ಉಸ್ತುವಾರಿಯನ್ನು ವಹಿಸಿಕೊಡುತ್ತಾರೆ. ಜತೆಗೆ ಕೆಲವು ಕಡೆ ಅವರಿಂದ ಪಾಠವನ್ನೂ ಮಾಡಿಸಲಾಗುತ್ತದೆ.

ಕೆಲವು ಶಾಲೆಗಳಲ್ಲಿ ಗುಮಾಸ್ತನ ರೀತಿ ನಡೆಸಿಕೊಳ್ಳುವುದು ನೋವಿನ ಸಂಗತಿ. ಬಿಇಒ ಹಾಗೂ ಇತರ ಕಚೇರಿಗಳಿಗೆ ಕಳುಹಿಸಿ ನೋಡಪ್ಪಾ... ಆ ಕೆಲಸ ಮಾಡಪ್ಪಾ... ಎಂದು ಹೇಳುವರು. ಬೇರೆ ಶಿಕ್ಷಕರ ಮೂಲಕ ಅಂತಹ ಕೆಲಸ ಮಾಡಿಸಲ್ಲ. ಅವರಿಗೆ ತಕ್ಷಣಕ್ಕೆ ಕಾಣಸಿಗುವುದು ದೈಹಿಕ ಶಿಕ್ಷಣ ಶಿಕ್ಷಕರು.

ವಿವಿಧ ಜಾಗೃತಿ ಜಾಥಾಗಳಿಗೆ ಶಾಲಾ ಮಕ್ಕಳನ್ನು ಕರೆದೊಯ್ಯುವ ಕೆಲಸವನ್ನೂ ಮಾಡಬೇಕು. ಇವೆಲ್ಲವನ್ನೂ ನಿಭಾಯಿಸುವ ಸವಾಲು ಅವರ ಮುಂದಿದೆ. ಇಷ್ಟೆಲ್ಲಾ ಕೆಲಸ ಮಾಡುವ ಚೈತನ್ಯ ಇರುವ ದೈಹಿಕ ಶಿಕ್ಷಕ ಶಿಕ್ಷಕರನ್ನು ನಡೆಸಿಕೊಳ್ಳುವ ರೀತಿ ನೋವು ಉಂಟುಮಾಡುತ್ತದೆ. ಶಿಕ್ಷಕರು ಒಂದು ವೇಳಾಪಟ್ಟಿ ಹಾಕಿಕೊಂಡಿರುತ್ತಾರೆ. ಹೆಚ್ಚುವರಿ ಕೆಲಸ ನೀಡುವುದರಿಂದ ಅವರ ಯೋಜನೆಗಳೆಲ್ಲವೂ ತಲೆಕೆಳಗಾಗುತ್ತವೆ. ಇಂತಹ ದುರ್ಬರ ಪ್ರಸಂಗದಲ್ಲಿ ದೈಹಿಕ ಶಿಕ್ಷಣ ಸಿಕ್ಕಿಹಾಕಿಕೊಂಡು ಬಿಟ್ಟಿದೆ.

ಪೋಷಕರ ನಿರ್ಲಕ್ಷ್ಯ

ಇಂದಿನ ಪೋಷಕರಿಗೆ ಮಕ್ಕಳ ಆರೋಗ್ಯ ಬೇಕಾಗಿಲ್ಲ. ಮಕ್ಕಳು ಬೆಳಿಗ್ಗೆ ಹೇಗೆ ನೀಟಾಗಿ ಸಮವಸ್ತ್ರ ಧರಿಸಿಕೊಂಡು ಹೋಗುತ್ತಾರೋ, ಸಂಜೆ ಅದೇ ರೀತಿ ನೀಟಾಗಿ ಬಂದರೆ ಖುಷಿಯಾಗುತ್ತದೆ. ಸಾಕ್ಸ್‌, ಸಮವಸ್ತ್ರ ಕೊಳೆಯಾ ದರೆ, ಅಂಗಿಯ ಬಟನ್‌ ಕಿತ್ತು ಹೋದರೆ ಶಾಲೆಯ ಶಿಕ್ಷ ಕರ ವಿರುದ್ಧ ರೇಗಾಡುವರು. ಮಕ್ಕ ಳನ್ನು ಆಟವಾಡಿಸಬೇಡಿ ಎಂದು ಸೂಚಿಸುವರು. ಮಗು ಆಡಿದರೆ ಅದರಲ್ಲಿ ಆಗುವ ಲಾಭ ಏನೆಂಬುದು ಪೋಷಕರಿಗೆ ತಿಳಿದಿಲ್ಲ.

ಲೇಖಕ: ಹಿರಿಯ ಕ್ರೀಡಾತಜ್ಞ, ಮೈಸೂರು – ನಿರೂಪಣೆ: ಮಹಮ್ಮದ್‌ ನೂಮಾನ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು