ಏಷ್ಯಾಡ್‌ ಸ್ಕ್ವಾಷ್‌: ಭಾರತದ ಮಹಿಳಾ ತಂಡಕ್ಕೆ ಬೆಳ್ಳಿ

7

ಏಷ್ಯಾಡ್‌ ಸ್ಕ್ವಾಷ್‌: ಭಾರತದ ಮಹಿಳಾ ತಂಡಕ್ಕೆ ಬೆಳ್ಳಿ

Published:
Updated:

ಜಕಾರ್ತ: ಬಲಿಷ್ಠ ಹಾಂಕಾಂಗ್ ತಂಡಕ್ಕೆ ಫೈನಲ್‌ನಲ್ಲಿ ಮಣಿದ ಭಾರತ ತಂಡದವರು ಮಹಿಳೆಯರ ಸ್ಕ್ವಾಷ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಹಾಂಕಾಂಗ್ ಎದುರು ಮೂರು ದಿನಗಳ ಅಂತರದಲ್ಲಿ ಭಾರತದ ಎರಡನೇ ಸೋಲು ಇದಾಗಿದೆ. ಗುರುವಾರ ನಡೆದಿದ್ದ ಗುಂಪು ಹಂತದ ಕೊನೆಯ ಪಂದ್ಯದಲ್ಲೂ ಭಾರತ ಈ ತಂಡಕ್ಕೆ ಮಣಿದಿತ್ತು.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಭರವಸೆಯ ಆಟಗಾರ್ತಿಯರಾದ ಜೋಷ್ನಾ ಚಿಣ್ಣಪ್ಪ ಮತ್ತು ಸುನಯನಾ ಕುರುವಿಳ ಅವರು ಸಿಂಗಲ್ಸ್ ವಿಭಾಗದ ಪಂದ್ಯಗಳಲ್ಲಿ ಸೋತರು. ಹೀಗಾಗಿ ತಂಡ 0–2ರಿಂದ ಪರಾಭವಗೊಂಡಿತು.

ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಮಲೇಷ್ಯಾವನ್ನು ಮಣಿಸಿದ್ದ ಭಾರತ ತಂಡದವರು ದಾಖಲೆಯ ಜಯದ ಕನಸು ಹೊತ್ತು ಕಣಕ್ಕೆ ಇಳಿದಿದ್ದರು. ಆದರೆ ಹಾಂಕಾಂಗ್ ಆಟಗಾರ್ತಿಯರಿಗೆ ಪೈಪೋಟಿ ನೀಡಲು ಆಗದೆ ಸಂಕಷ್ಟಕ್ಕೆ ಈಡಾದರು. ಕಳೆದ ವರ್ಷವೂ ತಂಡ ಬೆಳ್ಳಿ ಗೆದ್ದಿತ್ತು.

ಮೊದಲ ಪಂದ್ಯದಲ್ಲಿ ಸುನಯನಾ ಮತ್ತು ತ್ಸಿ ಲಾಕ್ ಹೊ ಸೆಣಸಾಡಿದರು. ಗುಂಪು ಹಂತದ ಪಂದ್ಯದಲ್ಲಿ ಇವರಿಬ್ಬರು ಮುಖಾಮುಖಿಯಾದಾಗ ಭಾರತದ ಆಟಗಾರ್ತಿ ಗೆಲುವು ಸಾಧಿಸಿದ್ದರು.

ಶನಿವಾರವೂ ಇವರಿಬ್ಬರು ಪ್ರಬಲ ಪೈಪೋಟಿ ನಡೆಸಿದರು. ಮೊದಲ ಎರಡು ಗೇಮ್‌ಗಳನ್ನು ಸೋತ ಸುನಯನಾ, ಮೂರನೇ ಗೇಮ್‌ನಲ್ಲಿ ತಿರುಗೇಟು ನೀಡಿದರು. ಆದರೆ ನಾಲ್ಕನೇ ಗೇಮ್‌ನಲ್ಲಿ ಭಾರತದ ಆಟಗಾರ್ತಿ ಹಿನ್ನಡೆ ಅನುಭವಿಸಿ ಪಂದ್ಯ ಸೋತರು.

ಮುಂದಿನ ಪಂದ್ಯದಲ್ಲಿ ಜೋಷ್ನಾ ಮತ್ತು ಆವ್‌ ವಿಂಗ್ ಆ್ಯನಿ ಮುಖಾಮುಖಿಯಾದರು. ಎಂಟು ಬಾರಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ನಿಕೋಲ್‌ ಅವರನ್ನು ಸೆಮಿಫೈನಲ್‌ನಲ್ಲಿ ಸೋಲಿಸಿದ್ದ ಜೋಷ್ನಾ ಭರವಸೆಯಿಂದಲೇ ಕಣಕ್ಕೆ ಇಳಿದರು.

ಆದರೆ ಮೊದಲ ಗೇಮ್‌ನಲ್ಲಿ ಸೋತು ನಿರಾಸೆ ಅನುಭವಿಸಿದರು. ಎರಡನೇ ಗೇಮ್‌ನಲ್ಲಿ ಪ್ರತಿರೋಧ ತೋರಿದರೂ ಸೋಲಿನಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಮೂರನೇ ಗೇಮ್‌ನ ಆರಂಭದಲ್ಲೇ ಅಭೂತಪೂರ್ವ ಆಟವಾಡಿದ ಆ್ಯನಿ 10–2ರ ಮುನ್ನಡೆಯೊಂದಿಗೆ ಭಾರತದ ಆಟಗಾರ್ತಿಯನ್ನು ದಂಗುಬಡಿಸಿದರು. 11–3, 11–9, 11–5ರಿಂದ ಗೆದ್ದು ಭಾರತದ ಕನಸನ್ನು ನುಚ್ಚುನೂರು ಮಾಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !