ಗುರುವಾರ , ಸೆಪ್ಟೆಂಬರ್ 23, 2021
21 °C
ಅಂತಿಮ ಕ್ಷಣಗಳಲ್ಲಿ ಮಿಂಚಿದ ಫಿಲಿಪ್ಪೊ ತೊರ್ಟು; ಜೋಶುವಾಗೆ 5000 ಮೀಟರ್ಸ್‌ ಓಟದ ಚಿನ್ನ

Tokyo Olympics: ಇಟಲಿ, ಜಮೈಕಾಗೆ ರಿಲೇ ಪದಕ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ: ಅಂತಿಮ ಲ್ಯಾಪ್‌ನ ಕೊನೆಯಲ್ಲಿ ಮಿಂಚಿನ ವೇಗದಲ್ಲಿ ಮುನ್ನುಗ್ಗಿದ ಫಿಲಿಪ್ಪೊ ತೊರ್ಟು ಅವರು ಇಟಲಿಗೆ ಚಿನ್ನದ ಪದಕ ಗೆದ್ದು ಕೊಟ್ಟರು. ಪುರುಷರ 4x100 ಮೀಟರ್ಸ್ ರಿಲೆ ಯಲ್ಲಿ ಬ್ರಿಟನ್‌ನ ನೆಥಾನಿಯಲ್ ಮೈಕೆಲ್ ಬ್ಲೇಕ್‌ ಅವರನ್ನು ಒಂದು ಸೆಕೆಂಡಿನ ನೂರನೇ ಒಂದು ಭಾಗದಲ್ಲಿ ಹಿಂದಿಕ್ಕಿ ಫಿಲಿಪ್ಪೊ ಅಂತಿಮ ಗೆರೆ ತುಳಿದರು. 

ಲೊರೆನ್ಸೊ ಪಾಟ್ಟ, ಮಾರ್ಸೆಲ್‌ ಲ್ಯಾಮೆಂಟ್ ಮತ್ತು ಫೊಸ್ಟಿನ್ ಡೆಸಾಲು ಅವರನ್ನೂ ಒಳಗೊಂಡಿದ್ದ ಇಟಲಿ ತಂಡ 37.50 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರೆ ಬ್ರಿಟನ್ 37.51 ಸೆಕೆಂಡು ತೆಗೆದುಕೊಂಡಿತು. ಕೆನಡಾ (37.70) ಕಂಚು ಗಳಿಸಿತು.

ಮಹಿಳೆಯರ 4x100 ಮೀಟರ್ಸ್ ರಿಲೆಯ ಚಿನ್ನದ ಪದಕ ಜಮೈಕಾ (41.02 ಸೆಕೆಂಡು) ಪಾಲಾಯಿತು. ಎಲೈನ್ ಥಾಮ್ಸನ್ ಹೆರಾ, ಬ್ರಯಾನ ವಿಲಿಯಮ್ಸ್, ಶೆಲ್ಲಿ ಆ್ಯನ್ ಫ್ರೇಜರ್ ಪ್ರೈಸ್ ಮತ್ತು ಶೆರಿಕಾ ಜಾಕ್ಸನ್ ತಂಡದಲ್ಲಿದ್ದರು. ಅಮೆರಿಕ (41.45) ಮತ್ತು ಬ್ರಿಟನ್ (41.88) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿತು.

ಮಹಿಳೆಯರ 1500 ಮೀಟರ್ಸ್‌ ಓಟದಲ್ಲಿ ಕೆನ್ಯಾದ ಫೇತ್ ಕಿಪ್ಪೆಗನ್ ಒಲಿಂಪಿಕ್ಸ್ ದಾಖಲೆ ಬರೆದರು. 3 ನಿಮಿಷ 53.11ಸೆಕೆಂಡುಗಳಲ್ಲಿ ಅವರು ಗುರಿ ಮುಟ್ಟಿದರು. ಬ್ರಿಟನ್‌ನ ಲಾರಾ ಮುಯಿರ್ (3:54.50) ರಾಷ್ಟ್ರೀಯ ದಾಖಲೆಯೊಂದಿಗೆ ಬೆಳ್ಳಿ ಗಳಿಸಿದರೆ ನೆದರ್ಲೆಂಡ್ಸ್‌ನ ಸಿಫಾನ್ ಹಸನ್ (3:55.86) ಕಂಚು ಗೆದ್ದರು.

ಬಹಾಮದ ಶಾನೆ ಮಿಲ್ಲರ್ (48.36 ಸೆ) ಮಹಿಳೆಯರ 400 ಮೀಟರ್ಸ್‌ ಓಟದ ಚಿನ್ನ ತಮ್ಮದಾಗಿಸಿಕೊಂಡರು. ಡೊಮಿನಿಕಾ ರಿಪಬ್ಲಿಕ್‌ನ ಮರಿಲೀಡಿ ಪೌಲಿನೊ (49.20) ಮತ್ತು ಅಮೆರಿಕದ ಅಲಿಸನ್ ಫೆಲಿಕ್ಸ್ (49.46) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.

ಪುರುಷರ 5000 ಮೀಟರ್ಸ್‌ ಓಟದ ಚಿನ್ನದ ಪದಕ ಉಗಾಂಡದ ಜೋಶುವಾ ಚೆಪ್ಟೆಗಿ (12 ನಿಮಿಷ 58.15 ಸೆಕೆಂಡು) ಪಾಲಾಯಿತು. ಕೆನಡಾದ ಮುಹಮ್ಮದ್ ಅಹಮ್ಮದ್ (12:58.61) ಬೆಳ್ಳಿ ಮತ್ತು ಅಮೆರಿಕದ ಪೌಲ್ ಚೆಲಿಮೊ (12:59.05) ಕಂಚು ಗಳಿಸಿದರು. 

ಭಾರತದ ಹೆಸರಿಗೆ ಏಷ್ಯಾ ದಾಖಲೆ

ಪುರುಷರ 4x400 ಮೀಟರ್ಸ್ ರಿಲೆಯಲ್ಲಿ ಏಷ್ಯಾ ವಲಯದ ದಾಖಲೆ ಭಾರತದ ಪಾಲಾಯಿತು. ಮೊದಲ ಸುತ್ತಿನ ಎರಡನೇ ಹೀಟ್ಸ್‌ನಲ್ಲಿ ಓಡಿದ ಮುಹಮ್ಮದ್ ಅನಾಸ್ ಯಾಹಿಯಾ, ಟಾಮ್ ನೋಹ್‌ ನಿರ್ಮಲ್, ಆರೋಕ್ಯ ರಾಜೀವ್ ಮತ್ತು ಅಮೋಜ್ ಜೇಕಬ್‌ 3 ನಿಮಿಷ 00:25 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.  ಇಲ್ಲಿಯ ವರೆಗೆ ಏಷ್ಯಾದ ದಾಖಲೆ ಕತಾರ್ ಹೆಸರಿನಲ್ಲಿತ್ತು. 2018ರ ಏಷ್ಯನ್ ಗೇಮ್ಸ್‌ನಲ್ಲಿ ಆ ದೇಶದ ಅಥ್ಲೀಟ್ಸ್‌ 3ನಿಮಿಷ 00.56 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು. ಭಾರತ ಹೀಟ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿತು. ಒಟ್ಟಾರೆ ಒಂಬತ್ತನೇ ಸ್ಥಾನ ಪಡೆದುಕೊಂಡಿತು.

50 ಕಿಮೀ ನಡಿಗೆ ‘ಮುಕ್ತಾಯ’ಕ್ಕೆ ಆಕ್ರೋಶ

ಮುಂದಿನ ಒಲಿಂಪಿಕ್ಸ್‌ನಲ್ಲಿ 50 ಕಿಮೀ ನಡಿಗೆ ಸ್ಪರ್ಧೆ ಸೇರಿಸದೇ ಇರುವುದಕ್ಕೆ ಅಥ್ಲೀಟ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ದೊಡ್ಡ ತಪ್ಪು ಮತ್ತು ಕುತಂತ್ರ. ಇದರ ಹಿಂದೆ ಕೆಲಸ ಮಾಡಿರುವ ಕೈಗಳು ಸರಿಯಾದ ಮಾಹಿತಿ ನೀಡದೇ ಕ್ರೀಡಾಪಟುಗಳನ್ನು ಗೊಂದಲಕ್ಕೆ ಈಡು ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಶುಕ್ರವಾರ ಬೆಳಿಗ್ಗೆ ನಡೆದ ಸ್ಪರ್ಧೆಯಲ್ಲಿ ಪೋಲೆಂಡ್ ಡೇವಿಡ್ ತೊಮಾಲ (3 ತಾಸು 50 ನಿಮಿಷ 8ಸೆಕೆಂಡು) ಚಿನ್ನದ ಪದಕ ಗಳಿಸಿದರು. ಜರ್ಮನಿಯ ಜೊನಾಥನ್ ಹಿಲ್ಬರ್ಟ್‌ (3:50:44) ಮತ್ತು ಕೆನಡಾದ ಇವಾನ್ ಡನ್ಫಿ (3:50:59) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು. ಮಹಿಳೆಯರ 20 ಕಿಮೀ ನಡಿಗೆಯಲ್ಲಿ ಇಟಲಿಯ ಆಂಟೊನೆಲ ಪಲ್ಮಿಸನೊ (1 ತಾಸು 29 ನಿಮಿಷ 12 ಸೆಕೆಂಡು) ಚಿನ್ನ ಗೆದ್ದುಕೊಂಡರು. ಕೊಲಂಬಿಯಾದ ಲೊರೆನ ಅರೆನಸ್‌ (1:29:37) ಮತ್ತು ಚೀನಾದ ಹಾಂಗ್ ಲಿಯು ( 1:29:57) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.

1936ರ ಒಲಿಂಪಿಕ್ಸ್‌ನಿಂದ 50 ಕಿಮೀ ವೇಗ ನಡಿಗೆ ಸ್ಪರ್ಧೆ ಇದೆ. ಆದರೆ ಪ್ಯಾರಿಸ್‌ನಲ್ಲಿ 2024ರಲ್ಲಿ ನಡೆಯಲಿರುವ ಕೂಟದಿಂದ ಇದನ್ನು ತೆಗೆದುಹಾಕಲಾಗಿದೆ. ಮುಂದಿನ ಬಾರಿ 50 ಕಿಮೀ ವೇಗನಡಿಗೆಯ ಬದಲು ಮಿಶ್ರ ವೇಗನಡಿಗೆಯನ್ನು ಸೇರಿಸಲು ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಇ–ಮೇಲ್‌ ಮೂಲಕ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು