ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಒಲಿಂಪಿಕ್ಸ್: ಜೂಡೊ – ಸುಶೀಲಾಗೆ ಒಲಿಯುವುದೇ ಪದಕ?

Last Updated 15 ಜುಲೈ 2021, 19:42 IST
ಅಕ್ಷರ ಗಾತ್ರ

ಜೂಡೊ ಒಲಿಂಪಿಕ್ಸ್‌ಗೆ ಸೇರ್ಪಡೆಯಾದದ್ದು 1964ರ ಟೋಕಿಯೊ ಕ್ರೀಡಾಕೂಟದ ಮೂಲಕ. 2000ರ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಹಾಫ್‌ ಲೈಟ್‌ವೇಟ್‌ ವಿಭಾಗದಲ್ಲಿ ಕಣಕ್ಕಿಳಿದಿದ್ದ ಲಾರೆಂಬಮ್ ಬ್ರಜೇಶೋರಿ ದೇವಿ ಸೆಮಿಫೈನಲ್‌ ತಲುಪಿದ್ದು, ಈ ಕ್ರೀಡೆಯಲ್ಲಿ ಭಾರತೀಯರೊಬ್ಬರ ಶ್ರೇಷ್ಠ ಸಾಧನೆಯಾಗಿದೆ. ಕಂಚಿನ ಪದಕದ ಸುತ್ತಿನಲ್ಲಿ ಪರಾಭವಗೊಂಡರೂ ಅವರು ತೋರಿದ ಸಾಮರ್ಥ್ಯ ಹಲವರಲ್ಲಿ ಸ್ಫೂರ್ತಿ ತುಂಬಲು ನೆರವಾಯಿತು.

ಸುಶೀಲಾದೇವಿ ಈ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಭಾರತದ ಏಕೈಕ ಜೂಡೊ ಪಟು. ಏಷ್ಯಾದ ಕೋಟಾದಡಿ ಅವರಿಗೆ ಸ್ಥಾನ ದೊರೆತಿದೆ. 48 ಕೆಜಿ ಕ್ಲಾಸ್ ವಿಭಾಗದಲ್ಲಿ ಸ್ಪರ್ಧಿಸಲಿರುವ ಅವರು, 2014ರಲ್ಲಿ ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡವರು. 26 ವರ್ಷದ ಮಣಿಪುರದ ಪಟುವಿಗೆ ಇದು ಮೊದಲ ಒಲಿಂಪಿಕ್ಸ್. ಇದನ್ನು ಸ್ಮರಣೀಯವಾಗಿರಿಸಿಕೊಳ್ಳುವ ಹಂಬಲದಲ್ಲಿ ಅವರಿದ್ದಾರೆ.

ಕವಾಸ್‌ ಬಿಲಿಮೊರಿಯಾ ಮತ್ತು ನರೇಂದರ್ ಸಿಂಗ್ 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯುವ ಮೂಲಕ ಈ ಕ್ರೀಡೆಯಲ್ಲಿ ಮೊದಲ ಬಾರಿ ದೇಶವನ್ನು ಪ್ರತಿನಿಧಿಸಿದರು. 1996ರ ಅಟ್ಲಾಂಟ ಒಲಿಂಪಿಕ್ಸ್‌ನಲ್ಲೂ ನರೇಂದರ್ ಸಿಂಗ್ ಸ್ಪರ್ಧೆಯಿತ್ತು. ಇದೇ ಕೂಟದಲ್ಲಿ ಬಿಎಸ್‌ಎಫ್‌ನಿಂದ ಸ್ಪರ್ಧಿಸಿದ್ದ ಕರ್ನಾಟಕದ ನಜೀಬ್ ಅಗಾ (65 ಕೆಜಿ ವಿಭಾಗ) 32ರ ಘಟ್ಟದಲ್ಲಿ ಸೋಲು ಅನುಭವಿಸಿದ್ದರು. ಸುನೀತ್‌ ಠಾಕೂರ್‌ (ಮಹಿಳೆಯರ 52 ಕೆಜಿ) 16ರ ಘಟ್ಟದ ಪಂದ್ಯದಲ್ಲಿ ಜಪಾನ್‌ನ ಸುಗವಾರ ಎದುರು ಮಣಿದಿದ್ದರು. ಆರತಿ ಕೊಹ್ಲಿ (ಮಹಿಳೆಯರ 72 ಕೆಜಿ ವಿಭಾಗ) ಅವರು 32ರ ಘಟ್ಟದ ಹಣಾಹಣಿಯಲ್ಲಿ ನಿರಾಸೆ ಅನುಭವಿಸಿದ್ದರು.

2004ರ ಅಥೆನ್ಸ್ ಕೂಟದಲ್ಲಿ ಎಕ್ಸ್ಟ್ರಾ ಲೈಟ್‌ವೇಟ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಕ್ರಮ್ ಶಾ ಅವರು ಗಳಿಸಿದ್ದು ಒಂಬತ್ತನೇ ಸ್ಥಾನ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಗರಿಮಾ ಚೌಧರಿ ಕಣಕ್ಕಿಳಿದಿದ್ದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಅವತಾರ್ ಸಿಂಗ್ ಅವರಿಗೆ ಅರ್ಹತೆ ಸಿಕ್ಕಿತ್ತು. 90 ಕೆಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದ ಅವರು ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದರು.

ಫೆನ್ಸಿಂಗ್‌:1896ರ ಅಥೆನ್ಸ್ ಕೂಟದಲ್ಲೇ ಈ ಕ್ರೀಡೆಯನ್ನು ಪರಿಚಯಿಸಲಾಯಿತಾದರೂ ಭಾರತೀಯರೊಬ್ಬರು ಭಾಗವಹಿಸಲು ಸಾಧ್ಯವಾಗುತ್ತಿರುವುದು ಈ ಬಾರಿಯ ಒಲಿಂಪಿಕ್ಸ್‌ಗೆ. ಸಿ.ಎ. ಭವಾನಿದೇವಿ ಅರ್ಹತೆ ಗಿಟ್ಟಿಸಿದ ಭಾರತದ ಮೊದಲ ಫೆನ್ಸಿಂಗ್ ಪಟು ಎಂಬ ಇತಿಹಾಸ ಬರೆದಿದ್ದಾರೆ.ಅಡ್ಜಸ್ಟೆಡ್‌ ಅಫಿಶೀಯಲ್ ರ‍್ಯಾಂಕಿಂಗ್ (ಎಒಆರ್‌) ಆಧಾರದಲ್ಲಿ ಟೋಕಿಯೊ ಟಿಕೆಟ್‌ ಗಳಿಸಿರುವ ತಮಿಳುನಾಡಿನ ಈ ಪಟು ಎಂಟು ಬಾರಿಯ ರಾಷ್ಟ್ರೀಯ ಚಾಂಪಿಯನ್ ಎಂಬುದು ವಿಶೇಷ. ಟೋಕಿಯೊ ಕೂಟದಲ್ಲಿ ಸೇಬರ್‌ ವಿಭಾಗದಲ್ಲಿ ಅವರು ಕಣಕ್ಕಿಳಿಯುವರು.

2018ರಲ್ಲಿ ಕ್ಯಾನ್‌ಬೆರಾದಲ್ಲಿ ನಡೆದ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನ ಸೇಬರ್‌ ವಿಭಾಗದಲ್ಲಿ ಭವಾನಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹಲವು ಪದಕಗಳನ್ನು ಒಲಿಸಿಕೊಂಡಿರುವ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT