ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆಗೆ ಒತ್ತಾಯಿಸಿದರೆ ಗ್ರ್ಯಾನ್‌ಸ್ಲಾಮ್‌ ತ್ಯಾಗ: ನೊವಾಕ್ ಜೊಕೊವಿಚ್‌

Last Updated 15 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ಲಂಡನ್‌: ನಾನು ಕೋವಿಡ್‌ ಲಸಿಕೆಯ ವಿರೋಧಿಯಲ್ಲ; ಆದರೆ ವಿಂಬಲ್ಡನ್‌ ಮತ್ತು ಫ್ರೆಂಚ್ ಓಪನ್ ಟೂರ್ನಿಗಳಲ್ಲಿ ಲಸಿಕೆ ತೆಗೆದುಕೊಳ್ಳುವುದಕ್ಕೆ ಒತ್ತಾಯ ಬಂದರೆ ಆ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಆಡದೇ ಇರಲೂ ಸಿದ್ಧ ಎಂದು ವಿಶ್ವದ ಅಗ್ರ ಕ್ರಮಾಂಕದ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರು ಹೇಳಿದ್ದಾರೆ.

ಕಳೆದ ತಿಂಗಳು ನಡೆದ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಕೋವಿಡ್‌ ಲಸಿಕೆ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಜೊಕೊವಿಚ್‌ ಅವರಿಗೆ ಆಡಲು ಅನುಮತಿ ನಿರಾಕರಿಸಲಾಗಿತ್ತು. ಇದರಿಂದಾಗಿ ಸ್ಪೇನ್‌ನ ರಫೆಲ್ ನಡಾಲ್ ಅವರು ಪ್ರಶಸ್ತಿ ಜಯಿಸಿ ಜೊಕೊವಿಚ್‌ ಮತ್ತು ರೋಜರ್ ಫೆಡರರ್‌ ಅವರನ್ನು ಹಿಂದಿಕ್ಕಿ ಅತಿ ಹೆಚ್ಚುಗ್ರ್ಯಾನ್‌ಸ್ಲಾಮ್ (21) ಗೆದ್ದ ಆಟಗಾರ ಎನಿಸಿಕೊಂಡಿದ್ದರು.

ಮಂಗಳವಾರ ಪ್ರಕಟವಾಗಿರುವ ಬಿಬಿಸಿ ಸಂದರ್ಶನದಲ್ಲಿ ಈ ಕುರಿತು ಜೊಕೊವಿಚ್ ಮಾತನಾಡಿದ್ದಾರೆ. ಒಂದು ವೇಳೆ ಅವರು ಲಸಿಕೆಯ ಕುರಿತು ತಮ್ಮ ನಿಲುವಿಗೆ ಅಂಟಿಕೊಂಡು ವಿಂಬಲ್ಡನ್‌ ಮತ್ತು ಫ್ರೆಂಚ್‌ ಓಪನ್ ಟೂರ್ನಿಗಳಲ್ಲಿ ಭಾಗವಹಿಸದೇ ಇದ್ದರೆ ಇತಿಹಾಸ ನಿರ್ಮಿಸುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ.

‘ಹೌದು, ನಾನು ಬೆಲೆ ತೆರಲು ಸಿದ್ಧ.ಜಾಗತಿಕ ಕ್ರೀಡೆಯ ಭಾಗವಾಗಿರುವ ನಾನು ಪ್ರತಿವಾರ ಬೇರೆ ತಾಣಗಳಿಗೆ ಆಡಲು ತೆರಳಬೇಕಾಗುತ್ತದೆ. ನನ್ನ ನಿರ್ಧಾರದ ಪರಿಣಾಮಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆಸ್ಟ್ರೇಲಿಯಾಕ್ಕೆ ಹೋಗದಿರಲು ನಾನು ಸಿದ್ಧನಾಗಿದ್ದೆ. ಈಗಲೂ ನಾನು ಲಸಿಕೆ ಹಾಕಿಸಿಕೊಂಡಿಲ್ಲ. ಹೀಗಾಗಿ ಹೆಚ್ಚು ಟೂರ್ನಿಗಳಲ್ಲಿ ಆಡಲು ಸಾಧ್ಯವಾಗುತ್ತಿಲ್ಲ‘ ಎಂದು ಜೊಕೊವಿಚ್
ಹೇಳಿದ್ದಾರೆ.

ಆದಾಗ್ಯೂ, ಜೊಕೊವಿಚ್‌ ಅವರು ವಿಂಬಲ್ಡನ್ ಟೂರ್ನಿಯಲ್ಲಿ ಆಡುವುದಕ್ಕೆ ಹಸಿರು ನಿಶಾನೆ ಸಿಗುವ ಸಾಧ್ಯತೆಯಿದೆ. ಏಕೆಂದರೆ ಲಸಿಕೆ ಹಾಕಿಸಿಕೊಳ್ಳದವರಿಗೆಇನ್ನು ಮುಂದೆ ಬ್ರಿಟನ್‌ನಲ್ಲಿ ಕ್ವಾರಂಟೈನ್ ಅಗತ್ಯವಿಲ್ಲಎಂದು ಕೆಲವು ದಿನಗಳ ಹಿಂದೆ ಹೇಳಲಾಗಿದೆ. ಅವರು ಕೋವಿಡ್‌ ಪರೀಕ್ಷೆಯನ್ನು ಮಾತ್ರ ಮಾಡಿಸಿಕೊಳ್ಳಬೇಕಾಗುತ್ತದೆ.

ಕೊರೊನಾದ ಮತ್ತೊಂದು ಅಲೆ ಬಾರದಿದ್ದರೆ ಕ್ರೀಡಾಂಗಣಕ್ಕೆ ಬರುವವರಿಗೆ ಲಸಿಕೆಯ ಪಾಸ್‌ಪೋರ್ಟ್‌ ಅಗತ್ಯವಿಲ್ಲ ಎಂದು ಫ್ರಾನ್ಸ್ ಆರೋಗ್ಯ ಸಚಿವ ಒಲಿವಿಯರ್ ವೆರಾನ್ ಈ ತಿಂಗಳು ಹೇಳಿರುವುದರಿಂದ ಫ್ರೆಂಚ್‌ ಓಪನ್ ಟೂರ್ನಿಯಲ್ಲೂ ಜೊಕೊವಿಚ್‌ ಕಣಕ್ಕಿಳಿಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT