ಶನಿವಾರ, ಫೆಬ್ರವರಿ 27, 2021
28 °C

ಡೇವಿಸ್ ಕಪ್‌: ಭಾರತದ ಏರಿಳಿತ

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಪದಾರ್ಪಣೆ ಮಾಡಿದ 22ರ ಆಟಗಾರ ಮ್ಯಾಟಿಯೊ ಬೆರೆಟಿನಿ ಎದುರು ಭಾರತದ ಅಗ್ರ ಕ್ರಮಾಂಕದ ಸಿಂಗಲ್ಸ್ ಆಟಗಾರ ಪ್ರಜ್ಞೇಶ್‌ ಗುಣೇಶ್ವರನ್‌ ನೇರ ಸೆಟ್‌ಗಳಿಂದ ಸೋತಾಗ ಕೋಲ್ಕತ್ತದ ಸೌತ್ ಕ್ಲಬ್‌ ಅಂಗಣದಲ್ಲಿ ಸೇರಿದ್ದ ಟೆನಿಸ್ ಪ್ರಿಯರು ಅವಾಕ್ಕಾಗಿದ್ದರು. ಮರುದಿನ ಆ್ಯಂಡ್ರೇಸ್ ಸೆಪ್ಪಿ ವಿರುದ್ಧವೂ ಪ್ರಜ್ಞೇಶ್‌ ಸೋತಾಗ ಭಾರತ ತಂಡ ನಿರಾಸೆಯ ಕೂಪಕ್ಕೆ ಬಿದ್ದಿತು. ಅದೇ ಸೌತ್‌ ಕ್ಲಬ್‌ ಅಂಗಣದಲ್ಲಿ ಅನುಭವಿ ರೋಹನ್‌ ಬೋಪಣ್ಣ ಮತ್ತು ಯುವ ಆಟಗಾರ ದಿವಿಜ್ ಶರಣ್‌ ಜೋಡಿ ಮೋಡಿ ಮಾಡಿದ್ದು ಕ್ರೀಡಾಪ್ರಿಯರ ಮನಸ್ಸಿಗೆ ಮುದ ನೀಡಿತ್ತು.

ಫೆಬ್ರುವರಿ ಮೊದಲ ವಾರದಲ್ಲಿ ನಡೆದ ಡೇವಿಸ್ ಕಪ್‌ ಟೆನಿಸ್‌ ಟೂರ್ನಿಯ ವಿಶ್ವ ಗುಂಪಿನ ಅರ್ಹತಾ ಹಣಾಹಣಿಯಲ್ಲಿ ಭಾರತ ತಂಡ ಇಟಲಿಗೆ 1–3ರಿಂದ ಮಣಿಯಿತು. ಎರಡು ದಿನಗಳಲ್ಲಿ ನಡೆದ ನಾಲ್ಕು ಪಂದ್ಯಗಳಲ್ಲಿ ಕಂಡ ಸೋಲು ಮತ್ತು ಗೆಲುವು ಭಾರತದ ಡೇವಿಸ್ ಕಪ್ ಇತಿಹಾಸಕ್ಕೆ ಕನ್ನಡಿ ಹಿಡಿದಂತಿತ್ತು.

ಈಚೆಗೆ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಮೋಘ ಸಾಧನೆ ಮಾಡುತ್ತಿರುವ ಪ್ರಜ್ಞೇಶ್ ಮತ್ತು ರಾಮಕುಮಾರ್ ರಾಮನಾಥನ್‌ ರಿವರ್ಸ್ ಸಿಂಗಲ್ಸ್ ಒಳಗೊಂಡಂತೆ ಮೂರು ಪಂದ್ಯಗಳಲ್ಲೂ ಸೋತಿದ್ದರು. ಆತಿಥೇಯರಿಗೆ ಸಮಾಧಾನ ತಂದವರು ಡಬಲ್ಸ್ ಜೋಡಿ ಮಾತ್ರ.

ಡೇವಿಸ್‌ ಕಪ್‌ಗೆ ಭಾರತ ಪದಾರ್ಪಣೆ ಮಾಡಿ ಶತಕ ಸಮೀಪಿಸುತ್ತಿದೆ. ಅಷ್ಟರಲ್ಲಿ, ಒಟ್ಟು 81 ವರ್ಷ ಭಾರತವು ಈ ಟೂರ್ನಿಯಲ್ಲಿ ಆಡಿದೆ. ಈ ಅವಧಿಯಲ್ಲಿ ಟೆನಿಸ್‌ನ ದಿಗ್ಗಜರು ದೇಶದ ಪರವಾಗಿ ಅಂಗಣಕ್ಕೆ ಇಳಿದಿದ್ದಾರೆ. ಆದರೆ ಒಮ್ಮೆಯೂ ತಂಡಕ್ಕೆ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಾಗಲಿಲ್ಲ. ಏಳು–ಬೀಳು, ಕೋಪ–ಪರಿತಾಪ, ಆರೋಪ–ಪ್ರತ್ಯಾರೋಪಗಳಿಂದಲೂ ಸುದ್ದಿಯಾದ ಭಾರತ ಡೇವಿಸ್‌ ಕಪ್‌ ತಂಡ ಈ ಟೂರ್ನಿಯಲ್ಲಿ ಮೂರು ಬಾರಿ ರನ್ನರ್ ಅಪ್ ಆಗಿದ್ದು ಮಾತ್ರ ಈ ವರೆಗಿನ ಗರಿಷ್ಠ ಸಾಧನೆ.

ಭಾರತದ ಅಪ್ರತಿಮ ಡಬಲ್ಸ್ ಜೋಡಿ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ನಡುವಿನ ವಿರಸ, ವರ್ಣಬೇಧ ನೀತಿಯನ್ನು ಖಂಡಿಸಿ ದಕ್ಷಿಣ ಆಫ್ರಿಕಾ ಎದುರಿನ ಹಣಾಹಣಿಯ ಬಹಿಷ್ಕಾರ, ಅದರೊಂದಿಗೆ ಕೈಗೆ ಬಂದ ತುತ್ತು ಬಾಯಿಗೆ ಹಾಕಲಾಗದೆ ಕಂಡ ನಿರಾಸೆ...ಹೀಗೆ ಸಾಗುತ್ತವೆ ಭಾರತ ಮತ್ತು ಡೇವಿಸ್ ಕಪ್‌ ನಡುವಿನ ಕಹಿ ನೆನಪುಗಳು.

ಹಸನ್‌ ಅಲಿ, ಅತರ್ ಅಲಿ, ಲೂಯಿಸ್ ಡೇನ್‌, ಸಿಡ್ನಿ ಜೇಕಬ್‌, ಮೊಹಮ್ಮದ್‌ ಸಲೀಂ ಮುಂತಾದವರ ಆರಂಭಿಕ ದಿನಗಳು, ಆನಂದ್‌, ವಿಜಯ್‌, ಅಶೋಕ್‌ ಅಮೃತರಾಜ್ ಸಹೋದರರ ತಾಕತ್ತು, ವಿಜಯ್ ಪುತ್ರ ಪ್ರಕಾಶ್‌ ಅಮೃತರಾಜ್ ಅವರ ಛಲ, ಮಹೇಶ್ ಭೂಪತಿ, ಸೋಮದೇವ ದೇವವರ್ಮನ್‌, ಲಿಯಾಂಡರ್ ಪೇಸ್‌ ಮುಂತಾದವರ ಬಲ, ರಾಮನಾಥನ್ ಕೃಷ್ಣನ್‌, ರಮೇಶ್ ಕೃಷ್ಣನ್‌, ಹರ್ಷ ಮಂಕಡ್ ಮುಂತಾದವರು ತಂದುಕೊಟ್ಟ ಗರಿಮೆ ಇತ್ಯಾದಿಗಳ ಮಧುರ ನೆನಪು ಕೂಡ ಭಾರತದ ಡೇವಿಸ್ ಕಪ್‌ ಇತಿಹಾಸದಲ್ಲಿ ಸೇರಿಕೊಂಡಿದೆ.

ಆರಂಭದ ವರ್ಷಗಳಲ್ಲಿ ಭಾರತದ ಆಟಗಾರರು ಮಹತ್ವದ ಸಾಧನೆಗಳನ್ನೇನೂ ಮಾಡಿರಲಿಲ್ಲ. ಆಂಗ್ಲೊ ಇಂಡಿಯನ್ನರನ್ನು ಒಳಗೊಂಡ ಭಾರತ ತಂಡ ಮಿಶ್ರ ಫಲವನ್ನು ಕಂಡಿದ್ದೇ ಹೆಚ್ಚು. ಕ್ರಮೇಣ ತಂಡದ ಶಕ್ತಿ ಅಧಿಕವಾಗುತ್ತ ಸಾಗಿತು. ನಾಲ್ಕು ದಶಕಗಳ ನಂತರ ತಂಡ ಮೊದಲ ಬಾರಿ ಫೈನಲ್ ಹಂತಕ್ಕೆ ತಲುಪಿದ ಸಾಧನೆ ಮಾಡಿತು. ನಂತರದ ಮೂರು ದಶಕಗಳಲ್ಲಿ ಸಾಕಷ್ಟು ಸಾಧನೆಗಳು ಕಂಡುಬಂದವು.

ಆಮೇಲೆ ಕಳೆಗುಂದಿದ ತಂಡ 1990ರಲ್ಲಿ ಲಿಯಾಂಡರ್ ಪೇಸ್‌ ಪ್ರವರ್ಧಮಾನಕ್ಕೆ ಬಂದ ನಂತರ ಮತ್ತೆ ವಿಶ್ವಮಟ್ಟದಲ್ಲಿ ಹೆಸರು ಮಾಡತೊಡಗಿತು. ಐದು ವರ್ಷಗಳ ನಂತರ ಮಹೇಶ್ ಭೂಪತಿ ಅವರು ಪೇಸ್‌ಗೆ ಹೆಗಲೆಣೆಯಾಗುತ್ತಿದ್ದಂತೆ ದೇಶದ ಹೆಸರು ಮತ್ತಷ್ಟು ಮುನ್ನೆಲೆಗೆ ಬಂತು. 2002ರಲ್ಲಿ ರೋಹನ್ ಬೋಪಣ್ಣ, 2003ರಲ್ಲಿ ಪ್ರಕಾಶ್ ಅಮೃತರಾಜ್‌, 2008ರಲ್ಲಿ ಸೋಮದೇವ ದೇವವರ್ಮನ್‌, 2009ರಲ್ಲಿ ಯೂಕಿ ಭಾಂಬ್ರಿ ಮುಂತಾದವರ ಪ್ರವೇಶವಾಯಿತು. ಈಗ ಹೊಸ ತಲೆಮಾರಿನ ಪ್ರಜ್ಞೇಶ್‌, ರಾಮಕುಮಾರ್‌, ದಿವಿಜ್‌ ಮುಂತಾದವರ ಮೇಲೆ ತಂಡ ಭರವಸೆ ಇರಿಸಿಕೊಂಡಿದೆ; ಇನ್ನಷ್ಟು ಹೊಸ ಆಟಗಾರರ ತಲಾಶೆಯಲ್ಲಿದೆ.

ಆ ಮೂರು ವರ್ಷಗಳು...

1966, 1974 ಮತ್ತು 1987 ಭಾರತದ ಪಾಲಿಗೆ ಮಹತ್ವದ್ದು. ಈ ವರ್ಷಗಳಲ್ಲಿ ತಂಡ ಶ್ರೇಷ್ಠ ಸಾಧನೆ ಮಾಡಿ ರನ್ನರ್ ಅಪ್‌ ಆಗಿತ್ತು. 1966ರಲ್ಲಿ ಪೂರ್ವ ವಿಭಾಗದ ಹಣಾಹಣಿಯಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಇರಾನ್‌ ವಿರುದ್ಧ 5–0ಯಿಂದ ಮತ್ತು ‘ಬಿ’ ಗುಂಪಿನ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ 5–0ಯಿಂದ ಗೆದ್ದಿತ್ತು. ವಲಯ ಮಟ್ಟದ ಫೈನಲ್‌ನಲ್ಲಿ ಜಪಾನ್ ಎದುರು 4–1ರಿಂದ ಗೆದ್ದಿತ್ತು. ಅಂತರ ವಲಯ ಸೆಮಿಫೈನಲ್‌ನಲ್ಲಿ ಜರ್ಮನಿ ವಿರುದ್ಧ 3–2ರಿಂದ, ಫೈನಲ್‌ನಲ್ಲಿ ಬ್ರೆಜಿಲ್ ವಿರುದ್ಧ 3–2ರಿಂದ ಗೆದ್ದಿತ್ತು. ವಿಶ್ವ ಗುಂಪು ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 1–4ರಿಂದ ಸೋತಿತ್ತು.

1974ರಲ್ಲಿ ಪೂರ್ವವಲಯದ ಸೆಮಿಫೈನಲ್‌ನಲ್ಲಿ ಜಪಾನ್ ವಿರುದ್ಧ 4–1ರಿಂದ, ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 3–2ರಿಂದ, ಅಂತರ ವಲಯ ಫೈನಲ್‌ನಲ್ಲಿ ಸೋವಿಯತ್‌ ಯೂನಿಯನ್ ವಿರುದ್ಧ 3–1ರಿಂದ ಗೆದ್ದಿದ್ದ ತಂಡ ವಿಶ್ವ ಗುಂಪಿನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಕಣಕ್ಕೆ ಇಳಿಯದೆ ಪ್ರತಿಭಟಿಸಿತ್ತು. 1987ರಲ್ಲಿ ವಿಶ್ವ ಗುಂಪಿನ ಮೊದಲ ಸುತ್ತಿನಲ್ಲಿ ಅರ್ಜೆಂಟೀನಾವನ್ನು 3–2ರಿಂದ ಮಣಿಸಿದ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಇಸ್ರೇಲ್‌ ಎದುರು 4–0 ಯಿಂದ ಜಯಿಸಿತ್ತು. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು 3–2ರಿಂದ ಬಗ್ಗುಬಡಿದು, ಫೈನಲ್‌ನಲ್ಲಿ ಸ್ವೀಡನ್‌ಗೆ 0–5ರಿಂದ ಮಣಿದಿತ್ತು.

ಭಾರತದ ಮುಂದಿನ ನಡೆ ಪಾಕ್ ಕಡೆಗೆ

ವಿಶ್ವ ಗುಂಪಿನ ಅರ್ಹತಾ ಸುತ್ತಿನಲ್ಲಿ ಇಟಲಿಗೆ ಮಣಿದು ನಿರಾಸೆಗೆ ಒಳಗಾಗಿರುವ ಭಾರತದ ಮುಂದಿನ ನಡೆ ಪಾಕಿಸ್ತಾನದ ಕಡೆಗೆ. ವಿಶ್ವ ಗುಂಪಿನ ಅರ್ಹತಾ ಸುತ್ತಿಗೆ ಮರು ಪ್ರವೇಶ ಪಡೆಯಲು ಭಾರತ ಮತ್ತೆ ಏಷ್ಯಾ ಒಸಿನಿಯಾ ಗುಂಪು ಒಂದರಲ್ಲಿ ಸೆಣಸಬೇಕು. ಇದರ ವೇಳಾಪಟ್ಟಿ ಕಳೆದ ವಾರಾಂತ್ಯದಲ್ಲಿ ಬಿಡುಗಡೆಯಾಗಿದ್ದು ಭಾರತದ ತವರಿನಾಚೆಗಿನ ಪಂದ್ಯ ಪಾಕಿಸ್ತಾನ ಜೊತೆ ನಿಗದಿಯಾಗಿದೆ. ನೆರೆ ದೇಶಕ್ಕೆ ತೆರಳಲು ಕೇಂದ್ರ ಸರ್ಕಾರವು ತಂಡಕ್ಕೆ ಅವಕಾಶ ನೀಡುವ ಸಾಧ್ಯತೆಗಳಿವೆ ಎಂಬುದು ತಜ್ಞರ ಅಭಿಪ್ರಾಯ.

ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಹಣಾಹಣಿಯಲ್ಲಿ ಭಾರತ ತಂಡ ಆಡದೇ ಇದ್ದರೆ ಭಾರತ ಟೆನಿಸ್ ಸಂಸ್ಥೆಯ ಮೇಲೆ ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್ ಭಾರಿ ಮೊತ್ತದ ದಂಡ ಹೇರಲಿದೆ. ಕೆಲವು ಟೂರ್ನಿಗಳಿಗೆ ನಿಷೇಧವನ್ನೂ ಹೇರಲಿದೆ. 2017ರಿಂದ ಇರಾನ್‌, ಥಾಯ್ಲೆಂಡ್‌, ದಕ್ಷಿಣ ಕೊರಿಯಾ ಮತ್ತು ಉಜ್ಬೆಕಿಸ್ತಾನ ಎದುರಿನ ಪಂದ್ಯಗಳನ್ನು ಸುಸೂತ್ರವಾಗಿ ಪಾಕಿಸ್ತಾನ ಆಯೋಜಿಸಿದೆ. ಹೀಗಾಗಿ ಭದ್ರತೆಯ ವಿಷಯದಲ್ಲಿ ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್‌ಗೆ ಆತಂಕವಿಲ್ಲ. ಈ ಕಾರಣದಿಂದ ಪಾಕಿಸ್ತಾನಕ್ಕೆ ಮತ್ತೆ ಅವಕಾಶ ನೀಡಿದೆ. ಭಾರತ, 1964ರಲ್ಲಿ ಕೊನೆಯದಾಗಿ ಪಾಕಿಸ್ತಾನದಲ್ಲಿ ಡೇವಿಸ್ ಕಪ್ ಆಡಿತ್ತು. ಲಾಹೋರ್‌ನಲ್ಲಿ‌ ನಡೆದಿದ್ದ ಹಣಾಹಣಿಯಲ್ಲಿ ಭಾರತ 4–0ಯಿಂದ ಗೆದ್ದಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.