ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್ ಟೆನಿಸ್ ಟೂರ್ನಿ: ಸಿಲಿಕ್ ಸವಾಲು ಮೀರಿದ ಮೆಡ್ವೆಡೆವ್‌

ಸಿನಿಯಾಕೋವ ಎದುರು ಗೆದ್ದ ಆ್ಯಶ್ಲಿ ಬಾರ್ಟಿ
Last Updated 4 ಜುಲೈ 2021, 14:24 IST
ಅಕ್ಷರ ಗಾತ್ರ

ಲಂಡನ್: ಎರಡನೇ ಶ್ರೇಯಾಂಕಿತ, ರಷ್ಯಾ ಆಟಗಾರ ಡ್ಯಾನಿಯಲ್ ಮೆಡ್ವೆಡೆವ್ ವಿಂಬಲ್ಡನ್ ಟೆನಿಸ್ ಟೂರ್ನಿಯ ನಾಲ್ಕನೇ ಸುತ್ತು ಪ್ರವೇಶಿಸಿದರು. ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಅವರು ಮಾಜಿ ರನ್ನರ್ ಅಪ್ ಕ್ರೊವೇಷ್ಯಾದ ಮರಿನ್ ಸಿಲಿಕ್ ಸವಾಲು ಮೀರಿದರು.

25 ವರ್ಷದ ಮೆಡ್ವೆಡೆವ್ ಮೊದಲ ಸೆಟ್‌ನಲ್ಲಿ ಪ್ರಬಲ ಪೈಪೋಟಿ ನೀಡಿದರೂ ಟೈಬ್ರೇಕರ್‌ನಲ್ಲಿ ಮಣಿದರು. ಎರಡನೇ ಸೆಟ್‌ನಲ್ಲಿ ನೀರಸ ಆಟವಾಡಿದರು. ಆದರೆ ನಂತರ ಚೇತರಿಸಿಕೊಂಡು ಎದುರಾಳಿಯನ್ನು ಕಂಗೆಡಿಸಿ 6-7(3) 3-6 6-3 6-3 6-2 ಗೆಲುವಿನ ನಗೆ ಬೀರಿದರು.

ಈ ವರ್ಷ ಮೆಡ್ವೆಡೆವ್ ಪಾಲಿಗೆ ಸಾಧನೆ ಅದೃಷ್ಟದ್ದಾಗಿದೆ. ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ವೃತ್ತಿಜೀವನದ ಶ್ರೇಷ್ಠ ಸಾಧನೆ ಮಾಡಿ ರನ್ನರ್ ಅಪ್ ಆಗಿದ್ದ ಅವರು ಫ್ರೆಂಚ್‌ ಓಪನ್‌ನಲ್ಲಿ ಇದೇ ಮೊದಲು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ನಾಲ್ಕನೇ ಸುತ್ತು ಪ್ರವೇಶಿಸುವ ಮೂಲಕ ವಿಂಬಲ್ಡನ್‌ನಲ್ಲೂ ಜೀವನ ಶ್ರೇಷ್ಠ ಸಾಧನೆ ಮಾಡಿದಂತಾಗಿದೆ.

ಜೆಕ್ ಗಣರಾಜ್ಯದ ಕ್ಯಾತರಿನಾ ಸಿನಿಯಾಕೋವ ಅವರನ್ನು ಮಣಿಸಿದ ಅಗ್ರ ಶ್ರೇಯಾಂಕದ ಆಸ್ಟ್ರೇಲಿಯಾದ ಆ್ಯಶ್ಲಿ ಬಾರ್ಟಿ ಮಹಿಳೆಯರ ವಿಭಾಗದ ನಾಲ್ಕನೇ ಸುತ್ತು ಪ್ರವೇಶಿಸಿದರು.

ವಿಶ್ವ ರ‍್ಯಾಂಕಿಂಗ್‌ನ ಒಂದನೇ ಸ್ಥಾನದಲ್ಲಿರುವ ಬಾರ್ಟಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ 6-3 7-5ರಲ್ಲಿ ಗೆಲುವು ಸಾಧಿಸಿದರು. 2019ರ ಟೂರ್ನಿಯಲ್ಲೂ ನಾಲ್ಕನೇ ಸುತ್ತು ಪ್ರವೇಶಿಸಿದ್ದು ಬಾರ್ಟಿ ಅವರ ಶ್ರೇಷ್ಠ ಪ್ರದರ್ಶನವಾಗಿತ್ತು.

ಬ್ಯಾಕ್‌ಹ್ಯಾಂಡ್ ಸ್ಲೈಸ್ ಮತ್ತು ಡ್ರಾಪ್ ಶಾಟ್‌ಗಳ ಮೂಲಕ ಪಾಯಿಂಟ್‌ಗಳನ್ನು ಕಲೆ ಹಾಕಿದ ಆಸ್ಟ್ರೇಲಿಯಾ ಆಟಗಾರ್ತಿಯ ಮುಂದೆ ಸಿನಿಯಕೋವ ನಿರುತ್ತರರಾದರು.

ಫಲಿತಾಂಶಗಳು:

ಪುರುಷರ ವಿಭಾಗ: ಇಟಲಿಯ ಮಟಿಯೊ ಬೆರೆಟಿನಿಗೆ ಸ್ಲೊವೇನಿಯಾದ ಅಲ್ಜಾಸ್ ಬೆದೆನಿ ವಿರುದ್ಧ 6-4 6-4 6-4ರಲ್ಲಿ ಜಯ; ಬೆಲಾರಸ್‌ನ ಈಲ್ಯಾ ಇವಾಸ್ಕಗೆ ಅಮೆರಿಕದ ಜೋರ್ಡಾನ್ ಥಾಮ್ಸನ್ ವಿರುದ್ಧ 6-4 6-4 6-4ರಲ್ಲಿ ಗೆಲುವು; ಕೆನಡಾದ ಫೆಲಿಕ್ಸ್‌ ಆಗರ್‌ಗೆ ಆಸ್ಟ್ರಿಯಾದ ನಿಕ್ ಕಿರ್ಗಿಯೋಸ್‌ ವಿರುದ್ಧ 2-6 6-1ರಲ್ಲಿ ಜಯ (ನಿವೃತ್ತಿ); ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್‌ಗೆ ಅಮೆರಿಕದ ತೇಲರ್ ಫ್ರಿಟ್ಸ್‌ ಎದುರು 6-7(3) 6-4 6-3 7-6(4)ರಲ್ಲಿ ಜಯ; ಇಟಲಿಯ ಲೊರೆನ್ಸೊ ಸೊನೆಗೊಗೆ ಆಸ್ಟ್ರಿಯಾದ ಜೇಮ್ಸ್‌ ಡಕ್ವರ್ಥ್‌ ವಿರುದ್ಧ 6-3 6-4 6-4ರಲ್ಲಿ ಜಯ.

ಮಹಿಳೆಯರ ವಿಭಾಗ: ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಸಿಕೋವಗೆ ಲ್ಯಾಟ್ವಿಯಾದ ಅನಸ್ತೇಸಿಜ ಸೆವಸ್ತೋವ ಎದುರು 7-6(1) 3-6 7-5ರಲ್ಲಿ ಜಯ; ಬ್ರಿಟನ್‌ನ ಎಮಾ ರಡುಕಾನುಗೆ ರೊಮೇನಿಯಾದ ಸೊರಾನ ಸಿಸ್ಟಿಯಾ ವಿರುದ್ಧ 6-3, 7-5ರಲ್ಲಿ ಜಯ, ಆಸ್ಟ್ರೇಲಿಯಾದ ಅಜ್ಲಾಗೆ ಲ್ಯಾಟ್ವಿಯಾದ ಜೆಲೆನಾ ಓಸ್ತಪೆಂಕೊ ವಿರುದ್ಧ 4-6, 6-4, 6-2ರಲ್ಲಿ ಜಯ; ಸ್ಪೇನ್‌ನ ಪೌಲಾ ಬಡೋಸಾಗೆ ಪೋಲೆಂಡ್‌ನ ಮಗ್ದಾ ಲಿನೆಟಿ ವಿರುದ್ಧ 5-7, 6-2, 6-4ರಲ್ಲಿ ಜಯ; ಜೆಕ್ ಗಣರಾಜ್ಯದ ಕರೋಲಿನ ಮುಚೋವಗೆ ಅನಸ್ತೇಸಿಯಾ ವಿರುದ್ಧ 7-5, 6-3ರಲ್ಲಿ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT