ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

US Open 2022: ಸ್ಪೇನ್‌ನ 19 ವರ್ಷದ ಅಲ್ಕರಾಜ್‌ ಮುಡಿಗೆ ಚೊಚ್ಚಲ ಕಿರೀಟ

Last Updated 12 ಸೆಪ್ಟೆಂಬರ್ 2022, 2:06 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಸ್ಪೇನ್‌ನ ಯುವ ಪ್ರತಿಭೆ ಕಾರ್ಲೊಸ್‌ ಅಲ್ಕರಾಜ್‌, ಪ್ರತಿಷ್ಠಿತ ಅಮೆರಿಕ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಈ ಮೂಲಕ 19 ವರ್ಷದ ಅಲ್ಕರಾಜ್, ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಅತಿ ಕಿರಿಯ ಆಟಗಾರ ಎನಿಸಿದ್ದಾರೆ.

ಭಾನುವಾರ ನಡೆದ ಫೈನಲ್ ಮುಖಾಮುಖಿಯಲ್ಲಿ ಅಲ್ಕರಾಜ್‌ ಅವರು ನಾರ್ವೆಯ ಕ್ಯಾಸ್ಪರ್‌ ರೂಡ್‌ ವಿರುದ್ಧ 6-4, 2-6, 7-6 (7/1), 6-3ರ ಅಂತರದಲ್ಲಿ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು.

ಅಲ್ಕರಾಜ್‌ ಮತ್ತು ರೂಡ್ ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದ್ದರು. ಈಗ ರೂಡ್ ಸವಾಲು ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಗಿರುವ ಅಲ್ಕರಾಜ್, ಮೂರು ತಾಸು 20 ನಿಮಿಷಗಳಲ್ಲಿ ಪಂದ್ಯ ವಶಪಡಿಸಿಕೊಂಡರು.

ಅಲ್ಕರಾಜ್, 2005ರಲ್ಲಿ ರಫೆಲ್ ನಡಾಲ್ ಬಳಿಕ ಗ್ರ್ಯಾನ್ ಸ್ಲಾಮ್ ಪುರುಷರ ಸಿಂಗಲ್ಸ್ ಗೆದ್ದ ಅತಿ ಕಿರಿಯ ಮತ್ತು 1990ರಲ್ಲಿ ಪೀಟ್ ಸಾಂಪ್ರಾಸ್ ಬಳಿಕ ಅಮೆರಿಕ ಓಪನ್ ಗೆದ್ದ ಅತಿ ಕಿರಿಯ ಆಟಗಾರ ಎನಿಸಿದ್ದಾರೆ.

'ನಾನು ಚಿಕ್ಕಂದಿನಿಂದಲೂ ಇದೇ ಕ್ಷಣಕ್ಕಾಗಿ ಕನಸು ಕಾಯುತ್ತಿದ್ದೆ. ವಿಶ್ವ ನಂ.1 ಆಟಗಾರನಾಗಬೇಕು, ಗ್ರ್ಯಾನ್ ಸ್ಲಾಮ್ ಗೆಲ್ಲಬೇಕು. ಇದಕ್ಕಾಗಿ ಕಠಿಣ ಪರಿಶ್ರಮ ವಹಿಸಿದ್ದೇನೆ. ನನ್ನ ಕನಸು ಈಗ ನನಸಾಗಿದೆ' ಎಂದು ಗೆಲುವಿನ ಬಳಿಕ ಅಲ್ಕರಾಜ್ ಪ್ರತಿಕ್ರಿಯಿಸಿದ್ದಾರೆ.

ಸ್ಪೇನ್‌ನವರೇ ಆಗಿರುವ ದಾಖಲೆಯ 22 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ಒಡೆಯ ರಫೆಲ್ ನಡಾಲ್, ಯುವ ಆಟಗಾರನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫೈನಲ್ ತಲುಪಲು ಸತತ ಮೂರು ಐದು-ಸೆಟ್ ಪಂದ್ಯಗಳನ್ನು ಜಯಿಸಿರುವ ಅಲ್ಕರಾಜ್, ಅಮೆರಿಕ ಓಪನ್ ಜಯಿಸಲು ಕೋರ್ಟ್‌ನಲ್ಲಿ 23 ತಾಸು 40 ನಿಮಿಷ ವ್ಯಯಿಸುವ ಮೂಲಕ ಮಗದೊಂದು ದಾಖಲೆ ಬರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT