ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿ ಚಾಂಪಿಯನ್‌ ಒಸಾಕ, ಸಿಟ್ಸಿಪಾಸ್‌ಗೆ ಆಘಾತ

ಅಮೆರಿಕ ಓಪನ್ ಟೆನಿಸ್‌: ಯುವ ಪಟುಗಳ ಗೆಲುವಿನ ಓಟ
Last Updated 4 ಸೆಪ್ಟೆಂಬರ್ 2021, 13:28 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ತೀವ್ರ ಪೈಪೋಟಿಯ ನಡುವೆಯೂ ‘ಯುವ‘ ಶಕ್ತಿಗೆ ಶರಣಾದ ನವೊಮಿ ಒಸಾಕ ಮತ್ತು ಸ್ಟೆಫನೊಸ್‌ ಸಿಟ್ಸಿಪಾಸ್‌ ಅಮೆರಿಕ ಓಪನ್ ಟೆನಿಸ್ ಟೂರ್ನಿಯಿಂದ ಹೊರಬಿದ್ದರು.

ಅರ್ಥರ್ ಆ್ಯಷ್‌ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನಲ್ಲಿ18 ವರ್ಷದ ಕೆನಡಾ ಆಟಗಾರ್ತಿ ಲೇಲಾ ಫರ್ನಾಂಡೆಜ್‌ 5-7, 7-6 (7/2), 6-4ರಿಂದ ಹಾಲಿ ಚಾಂಪಿಯನ್‌, ಜಪಾನ್‌ನ ಒಸಾಕ ಅವರನ್ನು ಮಣಿಸಿದರು. ಫ್ರೆಂಚ್‌ ಓಪನ್ ರನ್ನರ್‌ಅಪ್‌, ಗ್ರೀಸ್‌ನ ಸಿಟ್ಸಿಪಾಸ್‌ ಅವರನ್ನು ಪುರುಷರ ಸಿಂಗಲ್ಸ್ ಮೂರನೇ ಸುತ್ತಿನ ಹಣಾಹಣಿಯಲ್ಲಿಸ್ಪೇನ್‌ನ 18ರ ಹರೆಯದ ಕಾರ್ಲೊಸ್ ಅಲ್ಕರಾಜ್ 6-3, 4-6, 7-6 (7/2), 0-6, 7-6 (7/5)ರಿಂದ ಸೋಲಿಸಿದರು.

ಈ ಸೋಲಿನ ಬಳಿಕ ನಾಲ್ಕು ಬಾರಿಯ ಗ್ರ್ಯಾಂಡ್‌ಸ್ಲಾಮ್ ಚಾಂಪಿಯನ್‌ ಒಸಾಕ, ಕೆಲವು ಕಾಲ ಆಟದಿಂದ ವಿರಾಮ ಪಡೆಯುವುದಾಗಿ ಪ್ರಕಟಿಸಿದ್ದಾರೆ.

ಅಮೆರಿಕ ಓಪನ್‌ನಲ್ಲಿ ಒಸಾಕ ಮೂರನೇ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರು. ಸತತ ಎರಡನೇ ಬಾರಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದರು.

ಎರಡನೇ ಸುತ್ತಿನ ಪಂದ್ಯದಲ್ಲಿ ವಾಕ್‌ಓವರ್ ಪಡೆದಿದ್ದ ಒಸಾಕ, ಈ ಪಂದ್ಯದ ಎರಡನೇ ಸೆಟ್‌ನ ಕೊನೆಯ ಕ್ಷಣಗಳಲ್ಲಿ ಸರ್ವ್‌ ಉಳಿಸಿಕೊಳ್ಳಲಾಗದೆ ತೀವ್ರ ಹತಾಶರಾದಂತೆ ಕಂಡುಬಂದರು. ಮೊದಲ ಸೆಟ್‌ಅನ್ನು ಅವರು 37 ನಿಮಿಷಗಳಲ್ಲಿ ವಶಪಡಿಸಿಕೊಂಡಾಗ ಆರು ಏಸ್‌ ಸಿಡಿಸಿದ್ದರು. ಎರಡನೇ ಸೆಟ್‌ 12ನೇ ಗೇಮ್‌ನಲ್ಲಿ ಕೆನಡಾ ಆಟಗಾರ್ತಿಯು ಒಸಾಕ ಅವರ ಸರ್ವ್ ಮುರಿದರು. ಟೈಬ್ರೇಕ್‌ಗೆ ಸಾಗಿದ ಸೆಟ್‌ಅನ್ನು ಲೇಲಾ ತಮ್ಮದಾಗಿಸಿಕೊಂಡರು.

ಮೂರನೇ ಸೆಟ್‌ನಲ್ಲಿ ಜಾಣತನದ ಆಟವಾಡಿದ ಲೇಲಾ ಪಂದ್ಯ ಗೆದ್ದು ಬೀಗಿದರು.

ಸಿಟ್ಸಿಪಾಸ್ ಎದುರು ಗೆದ್ದ ಅಲ್ಕರಾಜ್, ಅಮೆರಿಕದ ಮೈಕೆಲ್ ಚಾಂಗ್‌ (1989, 17 ವರ್ಷ) ಬಳಿಕ ಅಮೆರಿಕ ಓಪನ್‌ನಲ್ಲಿ ನಾಲ್ಕನೇ ಸುತ್ತು ತಲುಪಿದ ಅತಿ ಕಿರಿಯ ಆಟಗಾರ ಎನಿಸಿಕೊಂಡರು.

ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಇತರ ಹಣಾಹಣಿಗಳಲ್ಲಿ ಅಮೆರಿಕದ ಫ್ರಾನ್ಸೆಸ್‌ ಟೈಫೊಯ್‌ 4-6, 6-3, 7-6 (8/6), 4-6, 6-1ರಿಂದ ಐದನೇ ಶ್ರೇಯಾಂಕದ ರಷ್ಯಾ ಆಟಗಾರ ಆ್ಯಂಡ್ರೆ ರುಬ್ಲೆವ್‌ ಎದುರು ಗೆದ್ದರೆ, ರಷ್ಯಾದ ಇನ್ನೋರ್ವ ಆಟಗಾರ ಡ್ಯಾನಿಯಲ್ ಮೆಡ್ವೆಡೆವ್‌ 6-0, 6-4, 6-3ರಿಂದ ಸ್ಪೇನ್‌ನ ಪ್ಯಾಬ್ಲೊ ಅಂಡುಜರ್ ಎದುರು ಜಯಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಬೆಲಾರಸ್‌ನ ಅರಿನಾ ಸಬಲೆಂಕಾ 6-3, 6-3ರಿಂದ ಅಮೆರಿಕದ ಡ್ಯಾನಿಲ್ಲೆ ಕಾಲಿನ್ಸ್ ಎದುರು ಗೆದ್ದು ನಾಲ್ಕನೇ ಸುತ್ತು ಪ್ರವೇಶಿಸಿದರು.

ಸಾನಿಯಾ–ರಾಮ್‌ ಪರಾಭವ: ಮಿಶ್ರ ಡಬಲ್ಸ್‌ನಲ್ಲಿ ಸ್ಪರ್ಧಿಸಿದ್ದ ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ರಾಜೀವ್ ರಾಮ್ ಜೋಡಿಯು ಉಕ್ರೇನ್‌ನ ಡಯಾನಾ ಯಸ್ತರ್‌ಮಸ್ಕಾ ಮತ್ತು ಆಸ್ಟ್ರೇಲಿಯಾದ ಮ್ಯಾಕ್ಸ್ ಪರ್ಸೆಲ್‌ ವಿರುದ್ಧ ನಿರಾಸೆ ಅನುಭವಿಸಿದರು.

ಶ್ರೇಯಾಂಕರಹಿತ ಜೋಡಿಯಾಗಿದ್ದ ಸಾನಿಯಾ–ರಾಮ್‌ ಅವರಿಗೆ ಶುಕ್ರವಾರ 3-6 6-3 7-10ರಿಂದ ಸೋಲು ಎದುರಾಯಿತು. ಮಹಿಳಾ ಡಬಲ್ಸ್‌ನಲ್ಲಿ ಈಗಾಗಲೇ ಸೋಲು ಅನುಭವಿಸಿರುವ ಸಾನಿಯಾ ಅವರ ಅಭಿಯಾನ ಟೂರ್ನಿಯಲ್ಲಿ ಕೊನೆಗೊಂಡಿತು.

ಸದ್ಯ ರೋಹನ್ ಬೋಪಣ್ಣ ಟೂರ್ನಿಯಲ್ಲಿ ಉಳಿದುಕೊಂಡಿದ್ದು, ಕ್ರೊವೇಷ್ಯಾದ ಇವಾನ್ ದೊಡಿಗ್ ಜೊತೆಯಾಗಿ ಪುರುಷರ ಡಬಲ್ಸ್‌ನಲ್ಲಿ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT