ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌: ನೋರಿ, ಗೊಫಿನ್‌ಗೆ ಗೆಲುವು

Last Updated 4 ಜುಲೈ 2022, 13:47 IST
ಅಕ್ಷರ ಗಾತ್ರ

ಲಂಡನ್‌ (ರಾಯಿಟರ್ಸ್/ ಎಎಫ್‌ಪಿ): ಸತತ ನಾಲ್ಕನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸರ್ಬಿಯದ ನೊವಾಕ್‌ ಜೊಕೊವಿಚ್‌ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದರು.

ಭಾನುವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪ್ರೀಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಅವರು 6-2, 4-6, 6-1, 6-2 ರಲ್ಲಿ ನೆದರ್ಲೆಂಡ್ಸ್‌ನ ಟಿಮ್ ವ್ಯಾನ್ ರಿಜ್‌ಥೊವೆನ್‌ ಅವರನ್ನು ಮಣಿಸಿದರು.

ಇಲ್ಲಿ ಅಗ್ರಶ್ರೇಯಾಂಕ ಪಡೆದಿರುವ ಜೊಕೊವಿಚ್‌, ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ 13ನೇ ಬಾರಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು.

2017 ರ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಥಾಮಸ್‌ ಬೆರ್ಡಿಚ್‌ ಎದುರು ಆಡುತ್ತಿದ್ದಾಗ ಗಾಯಗೊಂಡು ಹಿಂದೆ ಸರಿದಿದ್ದ ಸರ್ಬಿಯದ ಆಟಗಾರ, ಆ ಬಳಿಕ ಇಲ್ಲಿ ಅಜೇಯ ಓಟ ಮುಂದುವರಿಸಿದ್ದಾರೆ.

ಮೊದಲ ಸೆಟ್‌ನಲ್ಲಿ ಎರಡು ಸಲ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿದ ಜೊಕೊವಿಚ್, 6–2 ರಲ್ಲಿ ಗೆದ್ದು ಮುನ್ನಡೆ ಸಾಧಿಸಿದರು.

ವಿಂಬಲ್ಡನ್‌ ಟೂರ್ನಿಗೆ ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿದ್ದ ರಿಜ್‌ಥೊವೆನ್‌ ಎರಡನೇ ಸೆಟ್‌ನಲ್ಲಿ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿ ಅಚ್ಚರಿ ಉಂಟುಮಾಡಿದರು. ತಮ್ಮ ಎಲ್ಲ ಸರ್ವ್‌ಗಳಲ್ಲಿ ಪಾಯಿಂಟ್‌ ಗಿಟ್ಟಿಸಿ ಸೆಟ್ ಗೆದ್ದರಲ್ಲದೆ 1–1 ರಲ್ಲಿ ಸಮಬಲ ಸಾಧಿಸಿದರು.

ಆದರೆ ಮುಂದಿನ ಎರಡೂ ಸೆಟ್‌ಗಳಲ್ಲಿ ಜೊಕೊವಿಚ್‌ ಪೂರ್ಣ ಪ್ರಭುತ್ವ ಸಾಧಿಸಿದರು. ಕೇವಲ ಮೂರು ಗೇಮ್‌ಗಳನ್ನು ಎದುರಾಳಿಗೆ ಬಿಟ್ಟುಕೊಟ್ಟು 2 ಗಂಟೆ 39 ನಿಮಿಷಗಳಲ್ಲಿ ಗೆಲುವಿನ ನಗು ಬೀರಿದರು.

ಜೊಕೊವಿಚ್‌ ಅವರು ಶುಕ್ರವಾರ ನಡೆಯಲಿರುವ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಇಟಲಿಯ ಯಾನಿಕ್ ಸಿನೆರ್‌ ವಿರುದ್ಧ ಪೈಪೋಟಿ ನಡೆಸುವರು.

20ರ ಹರೆಯದ ಸಿನೆರ್‌ ಅವರು ಇನ್ನೊಂದು ಪ್ರೀಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 6-1, 6-4, 6-7(8), 6-3 ರಲ್ಲಿ ಐದನೇ ಶ್ರೇಯಾಂಕದ ಆಟಗಾರ ಸ್ಪೇನ್‌ನ ಕಾರ್ಲೊಸ್ ಅಲ್ಕಾರಜ್‌ ಅವರನ್ನು ಮಣಿಸಿದರು.

ನೋರಿ, ಗೊಫಿನ್‌ಗೆ ಗೆಲುವು: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಆತಿಥೇಯ ದೇಶದ ಭರವಸೆ ಎನಿಸಿರುವ ಕ್ಯಾಮರನ್‌ ನೋರಿ ಮತ್ತು ಬೆಲ್ಜಿಯಂನ ಡೇವಿಡ್ ಗೊಫಿನ್‌ ಎಂಟರಘಟ್ಟ ಪ್ರವೇಶಿಸಿದರು.

ಒಂಬತ್ತನೇ ಶ್ರೇಯಾಂಕದ ಆಟಗಾರ ನೋರಿ 6-4 7-5 6-4 ರಲ್ಲಿ ಅಮೆರಿಕದ ಟಾಮಿ ಪೌಲ್‌ ವಿರುದ್ಧ ಗೆದ್ದರು. ವಿಂಬಲ್ಡನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ ಬ್ರಿಟನ್‌ನ ಐದನೇ ಆಟಗಾರ ಎಂಬ ಗೌರವ ಅವರಿಗೆ ಒಲಿಯಿತು.

ರೋಚಕ ಹೋರಾಟ ನಡೆದ ಪಂದ್ಯದಲ್ಲಿ ಗೊಫಿನ್‌ ಅವರು 7-6(3), 5-7, 5-7, 6-4, 7-5 ರಲ್ಲಿ ಅಮೆರಿಕದ ಫ್ರಾನ್ಸೆಸ್‌ ಟಿಯಾಫೊ ಅವರನ್ನು ಸೋಲಿಸಿದರು.

ಎಂಟರಘಟ್ಟಕ್ಕೆ ಜಬೇರ್‌: ಟುನೀಷ್ಯದ ಆನ್ಸ್‌ ಜಬೇರ್ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನ‌ಲ್‌ ಪ್ರವೇಶಿಸಿದರು. ಅವರು 7–6, 6–4 ರಲ್ಲಿ ಬೆಲ್ಜಿಯಂನ ಎಲೈಸ್ ಮಾರ್ಟೆನ್ಸ್‌ ಎದುರು ಜಯ ಸಾಧಿಸಿದರು.

ಇನ್ನೊಂದು ಪಂದ್ಯದಲ್ಲಿ ಜರ್ಮನಿಯ ಯೂಲ್ ನೀಮಯೆರ್ 6–2, 6–4 ರಲ್ಲಿ ಬ್ರಿಟನ್‌ನ ಹೆದರ್ ವಾಟ್ಸನ್‌ ಅವರನ್ನು ಸೋಲಿಸಿದರು.

ಸಿಸಿಪಸ್‌, ಕಿರ್ಗಿಯೊಸ್‌ಗೆ ದಂಡ

ವಿಂಬಲ್ಡನ್‌ ಟೂರ್ನಿಯ ಪಂದ್ಯದ ವೇಳೆ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸಿದ ಸ್ಟೆಫಾನೊಸ್‌ ಸಿಸಿಪಸ್‌ಗೆ ₹ 7.80 ಲಕ್ಷ ಹಾಗೂ ನಿಕ್‌ ಕಿರ್ಗಿಯೊಸ್‌ಗೆ ₹ 3.15 ಲಕ್ಷ ದಂಡ ವಿಧಿಸಲಾಗಿದೆ.

ಇವರಿಬ್ಬರ ನಡುವಿನ ಮೂರನೇ ಸುತ್ತಿನ ಪಂದ್ಯ ಕಾವೇರುವಂತೆ ಮಾಡಿತ್ತು. ಸಿಸಿಪಸ್‌ ಅವರು ಹತಾಶೆಯಿಂದ ಚೆಂಡನ್ನು ಪ್ರೇಕ್ಷಕರತ್ತ ಹೊಡೆದಿದ್ದರು. ಕಿರ್ಗಿಯೊಸ್‌ ಅಶ್ಲೀಲ ಪದಗಳನ್ನು ಬಳಸಿ ತೆಗಳಿದ್ದರು.

ಮೊದಲ ಸುತ್ತಿನ ಪಂದ್ಯದ ವೇಳೆ ಪ್ರೇಕ್ಷಕನತ್ತ ಉಗುಳಿದ್ದಕ್ಕೆ ಕಿರ್ಗಿಯೊಸ್‌ಗೆ ₹ 7.80 ಲಕ್ಷ ದಂಡ ವಿಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT