ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Cincinnati Open | ಸಿನ್ನರ್‌, ಸಬಲೆಂಕಾಗೆ ಕಿರೀಟ

ಸಿನ್ಸಿನಾಟಿ ಓಪನ್‌ ಟೆನಿಸ್‌: ಅಮೆರಿಕದ ಟಿಯಾಫೊ, ಪೆಗುಲಾಗೆ ನಿರಾಸೆ
Published 20 ಆಗಸ್ಟ್ 2024, 15:59 IST
Last Updated 20 ಆಗಸ್ಟ್ 2024, 15:59 IST
ಅಕ್ಷರ ಗಾತ್ರ

ಸಿನ್ಸಿನಾಟಿ: ಇಟಲಿಯ ಯಾನಿಕ್‌ ಸಿನ್ನರ್‌ ಮತ್ತು ಬೆಲಾರಸ್‌ನ ಅರಿನಾ ಸಬಲೆಂಕಾ ಅವರು ಮಂಗಳವಾರ ಸಿನ್ಸಿನಾಟಿ ಓಪನ್‌ ಎಟಿಪಿ ಮಾಸ್ಟರ್‌ ಟ್ರೋಫಿ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ಕಿರೀಟವನ್ನು ಮುಡಿಗೇರಿಸಿಕೊಂಡರು.

ವಿಶ್ವದ ಅಗ್ರಮಾನ್ಯ ಆಟಗಾರ ಸಿನ್ನರ್‌ ಫೈನಲ್‌ ಹಣಾಹಣಿಯಲ್ಲಿ 7-6 (7/4), 6-2ರ ನೇರ ಸೆಟ್‌ಗಳಿಂದ ಅಮೆರಿಕದ ಫ್ರಾನ್ಸಿಸ್ ಟಿಯಾಫೊ ಅವರನ್ನು ಸೋಲಿಸಿದರು. ಈ ಇಬ್ಬರು ಆಟಗಾರರಿಗೆ ಮೊದಲ ಸಿನ್ಸಿನಾಟಿ ಫೈನಲ್‌ ಆಗಿತ್ತು. ಈ ಹಿಂದಿನ ಆವೃತ್ತಿಗಳಲ್ಲಿ ಮೂರನೇ ಸುತ್ತು ತಲುಪ‍ಲಷ್ಟೇ ಶಕ್ತವಾಗಿದ್ದರು.

2008ರ ಬಳಿಕ ಸಿನ್ಸಿನಾಟಿ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ಹೆಗ್ಗಳಿಕೆಗೆ ಸಿನ್ನರ್‌ ಪಾತ್ರವಾದರು. 16 ವರ್ಷಗಳ ಹಿಂದೆ 21 ವರ್ಷ ವಯಸ್ಸಿನಲ್ಲಿ ಇಂಗ್ಲೆಂಡ್‌ನ ಆ್ಯಂಡಿ ಮರ್ರೆ ಚಾಂಪಿಯನ್‌ ಆಗಿ ದಾಖಲೆ ಬರೆದಿದ್ದಾರೆ.

23 ವರ್ಷ ವಯಸ್ಸಿನ ಸಿನ್ನರ್‌ ಅವರಿಗೆ ಪ್ರಸ್ತುತ ಋತುವಿನಲ್ಲಿ ಇದು ಐದನೇ ಕಿರೀಟವಾಗಿದೆ. ಮೆಲ್ಬರ್ನ್‌ನಲ್ಲಿ ಆಸ್ಟ್ರೇಲಿಯಾ ಓಪನ್ ಕಿರೀಟದೊಂದಿಗೆ ಅವರು ಋತುವನ್ನು ಪ್ರಾರಂಭಿಸಿದ್ದರು. ವೃತ್ತಿಜೀವನದಲ್ಲಿ ಇದು 15ನೇ ಪ್ರಶಸ್ತಿಯಾಗಿದೆ.

ಈ ಗೆಲುವಿನೊಂದಿಗೆ ಆ.26ರಂದು ಆರಂಭವಾಗುವ ಅಮೆರಿಕ ಓಪನ್‌ಗೆ ಸಿನ್ನರ್‌ ಭರ್ಜರಿಯಾಗಿ ತಯಾರಿ ಮಾಡಿಕೊಂಡರು. ಜೊತೆಗೆ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ನೊವಾಕ್‌ ಜೊಕೊವಿಚ್‌ (ಸರ್ಬಿಯಾ) ಅವರಿಗಿಂತ 2000 ಪಾಯಿಂಟ್ಸ್‌ ಮುಂದಿದ್ದಾರೆ.

ಅಮೆರಿಕದ 26 ವರ್ಷ ವಯಸ್ಸಿನ ಶ್ರೇಯಾಂಕರಹಿತ ಆಟಗಾರ ಟಿಯಾಫೊ ಮೊದಲ ಸೆಟ್‌ನಲ್ಲಿ ಸಿನ್ನರ್‌ಗೆ ತೀವ್ರ ಪೈಪೋಟಿ ನೀಡಿ ಗಮನ ಸೆಳೆದರು. ಆದರೆ, ಇಟಲಿಯ ಆಟಗಾರ ಟೈಬ್ರೇಕರ್‌ ಮೂಲಕ ಮೇಲುಗೈ ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಎದುರಾಳಿಗೆ ಪ್ರತಿರೋಧಕ್ಕೆ ಅವಕಾಶ ನೀಡದೆ ಸಿನ್ನರ್‌ ಸುಲಭ ಜಯ ಸಾಧಿಸಿದರು. ಟೂರ್ನಿಯುದ್ದಕ್ಕೂ ಗಮನಾರ್ಹ ಪ್ರದರ್ಶನ ನೀಡಿದ ಟಿಯಾಫೊ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 20ರಲ್ಲಿ ಸ್ಥಾನ ಪಡೆದರು.

‘ಸೆಮಿಫೈನಲ್‌ ಮತ್ತು ಫೈನಲ್‌ ಪ‍ಂದ್ಯಗಳ ಮಧ್ಯೆ ಹೆಚ್ಚು ಸಮಯ ಇಲ್ಲದ ಕಾರಣ ನಾನು ಮತ್ತು ಟಿಯಾಫೊ ಸಾಕಷ್ಟು ದಣಿದ್ದಿದ್ದೆವು. ಒತ್ತಡದ ಮಧ್ಯೆಯೂ ಪ‍್ರಶಸ್ತಿ ಗೆದ್ದಿರುವುದು ಖುಷಿ ತಂದಿದೆ. ಈ ಗೆಲುವು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ’ ಎಂದು ಸಿನ್ನರ್ ಪ್ರತಿಕ್ರಿಯಿಸಿದರು.

ಸಬಲೆಂಕಾಗೆ ಪ್ರಶಸ್ತಿ: ಮೂರನೇ ಶ್ರೇಯಾಂಕದ ಸಬಲೆಂಕಾ 6-3, 7-5ರಿಂದ ಆರನೇ ಶ್ರೇಯಾಂಕದ ಅಮೆರಿಕದ ಜೆಸ್ಸಿಕಾ ಪೆಗುಲಾ ಅವರನ್ನು ಹಿಮ್ಮೆಟ್ಟಿಸಿದರು. ಅಲ್ಲದೆ, ಟೂರ್ನಿಯಲ್ಲಿ ಒಂದೂ ಸೆಟ್‌ ಕಳೆದುಕೊಳ್ಳದೆ ಪ್ರಶಸ್ತಿಯನ್ನು ಗೆದ್ದುಕೊಂಡ ಹಿರಿಮೆಗೆ ಪಾತ್ರವಾದರು.

ಜನವರಿಯಲ್ಲಿ ಆಸ್ಟ್ರೇಲಿಯಾ ಓಪನ್‌ನಲ್ಲಿ ತನ್ನ ಎರಡನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ನಂತರ ಮತ್ತೊಂದು ಟ್ರೋಫಿಯನ್ನು ತನ್ನದಾಗಿಸಿಕೊಂಡರು. ಭುಜದ ಗಾಯದ ಕಾರಣಕ್ಕಾಗಿ ಅವರು ವಿಂಬಲ್ಡನ್‌ನಿಂದ ಹೊರಗುಳಿದಿದ್ದರು.

ಫೈನಲ್‌ ಪಂದ್ಯಕ್ಕೂ ಮೊದಲು ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರರಿಂದ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದ ಸಬಲೆಂಕಾಗೆ ಇದು ವೃತ್ತಿಜೀವನದಲ್ಲಿ ಆರನೇ ಡಬ್ಲ್ಯುಟಿಎ 1000 ಪ್ರಶಸ್ತಿಯಾಗಿದೆ. ಒಟ್ಟಾರೆಯಾಗಿ 15ನೇ ಕಿರೀಟವಾಗಿದೆ.

26 ವರ್ಷ ವಯಸ್ಸಿನ ಸಬಲೆಂಕಾ ಸಿನ್ಸಿನಾಟಿ ಓಪನ್‌ನಲ್ಲಿ ಇದೇ ಮೊದಲ ಬಾರಿ ಫೈನಲ್‌ ತಲುಪಿದ್ದರು. ಈ ಹಿಂದೆ ಸೆಮಿಫೈನಲ್‌ ಪ್ರವೇಶಿಸುವ ಹಾದಿಯಲ್ಲಿ ಮೂರು ಬಾರಿ ನಿರಾಸೆ ಅನುಭವಿಸಿದ್ದರು.

 ‘ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ಖುಷಿಯಾಗಿದೆ. ಇದರಿಂದ ಅಮೆರಿಕ ಓಪನ್‌ನಲ್ಲಿ ಇನ್ನೂ ಹೆಚ್ಚಿನ ಮಟ್ಟವನ್ನು ತಲುಪುವ ಆತ್ಮವಿಶ್ವಾಸ ಹೊಂದಿದ್ದೇನೆ’ ಎಂದು ಸಬಲೆಂಕಾ ಪ್ರತಿಕ್ರಿಯಿಸಿದರು. 

2020ರಿಂದ 10ಕ್ಕಿಂತ ಹೆಚ್ಚಿನ ಡಬ್ಲ್ಯುಟಿಎ ಪ್ರಶಸ್ತಿಗಳನ್ನು ಗೆದ್ದಿರುವ ಪೋಲೆಂಡ್‌ನ ಇಗಾ ಶ್ವಾಂಟೆಕ್‌ ಅವರ ಸಾಲಿಗೆ ಈಗ ಸಬಲೆಂಕಾ ಸೇರಿಕೊಂಡರು. ವಿಶ್ವದ ಅಗ್ರಮಾನ್ಯ ಆಟಗಾರ್ತಿ ಶ್ವಾಂಟೆಕ್‌ ಅವರನ್ನು ಸೆಮಿಫೈನಲ್‌ನಲ್ಲಿ ಸಬಲೆಂಕಾ ಸೋಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT