ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

US Open 2023: ಅರಿನಾ ವಿರುದ್ಧ ಗೆಲುವು, ಕೊಕೊ ಗಾಫ್‌ಗೆ ಅಮೆರಿಕ ಓಪನ್ ಗರಿ

Published 10 ಸೆಪ್ಟೆಂಬರ್ 2023, 23:30 IST
Last Updated 10 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಮೊದಲ ಸೆಟ್‌ ಸೋತರೂ ಅಮೋಘವಾಗಿ ಮರುಹೋರಾಟ ನಡೆಸಿದ ಕೊಕೊ ಗಾಫ್‌ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕಿರೀಟ ಮುಡಿಗೇರಿಸಿಕೊಂಡರು.

ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಅಮೆರಿಕದ 19 ವರ್ಷದ ಗಾಫ್‌ 2–6, 6–3, 6–2 ರಿಂದ ಬೆಲರೂಸ್‌ನ ಅರಿನಾ ಸಬಲೆಂಕಾ ಅವರನ್ನು ಮಣಿಸಿದರು. 6ನೇ ಶ್ರೇಯಾಂಕ ಹೊಂದಿದ್ದ ಫ್ಲಾರಿಡಾದ ಆಟಗಾರ್ತಿಗೆ ಲಭಿಸಿದ ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಇದು.

ಆರ್ಥರ್‌ ಆ್ಯಷ್‌ ಕ್ರೀಡಾಂಗಣದಲ್ಲಿ ದಾಖಲೆ ಸಂಖ್ಯೆಯಲ್ಲಿ (28, 143) ನೆರೆದಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ಈ ಜಿದ್ದಾಜಿದ್ದಿನ ಸೆಣಸಾಟ 2 ಗಂಟೆ ಆರು ನಿಮಿಷ ನಡೆಯಿತು.

ಗಾಫ್‌ ಅವರು ಟ್ರೇನಿ ಆಸ್ಟಿನ್‌ ಮತ್ತು ಸೆರೆನಾ ವಿಲಿಯಮ್ಸ್‌ ಬಳಿಕ ಇಲ್ಲಿ ಚಾಂಪಿಯನ್‌ ಆದ ಆತಿಥೇಯ ದೇಶದ ಮೂರನೇ ಹದಿಹರೆಯದ ಆಟಗಾರ್ತಿ ಎನಿಸಿಕೊಂಡರು.

ಜುಲೈನಲ್ಲಿ ನಡೆದಿದ್ದ ವಿಂಬಲ್ಡನ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದ ಗಾಫ್‌, ಅಲ್ಪ ಅವಧಿಯಲ್ಲೇ ತಮ್ಮ ಆಟದಲ್ಲಿ ಸುಧಾರಣೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅಮೆರಿಕ ಓಪನ್‌ಗೆ ಮುನ್ನ ವಾಷಿಂಗ್ಟನ್‌ ಮತ್ತು ಸಿನ್ಸಿನಾಟಿಯಲ್ಲಿ ನಡೆದಿದ್ದ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದ್ದರು. 

ಕಳೆದ ವರ್ಷ ಫ್ರೆಂಚ್‌ ಓಪನ್‌ ಫೈನಲ್‌ ತಲುಪಿದ್ದ ಅವರು ಇಗಾ ಶ್ವಾಂಟೆಕ್‌ ಎದುರು ಸೋತು ‘ರನ್ನರ್‌ ಅಪ್‌’ ಆಗಿದ್ದರು. ವೃತ್ತಿಜೀವನದ ಎರಡನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌ನಲ್ಲಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ.

’ಈ ಗೆಲುವು ನನ್ನ ಪಾಲಿಗೆ ಬಹಳ ದೊಡ್ಡದು. ಈ ಕ್ಷಣದಲ್ಲಿ ಸ್ವಲ್ಪ ಆಘಾತಕ್ಕೆ ಒಳಗಾಗಿದ್ದೇನೆ ಎನಿಸುತ್ತದೆ’ ಎಂದು ಪಂದ್ಯದ ಬಳಿಕ ಗಾಫ್‌ ಪ್ರತಿಕ್ರಿಯಿಸಿದರು.

‘ಫ್ರೆಂಚ್ ಓಪನ್ ಫೈನಲ್‌ನಲ್ಲಿ ಎದುರಾಗಿದ್ದ ಸೋಲು (ಕಳೆದ ವರ್ಷ) ಆಘಾತ ಉಂಟುಮಾಡಿತ್ತು. ಆದರೆ ಕ್ಷಣ ನಾನು ಊಹಿಸಿದ್ದಕ್ಕಿಂತಲೂ ಹೆಚ್ಚು ಮಧುರವಾಗಿದೆ’ ಎಂದರು.

ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ಸಬಲೆಂಕಾ, ಮೊದಲ ಸೆಟ್‌ನ ಆರಂಭದಲ್ಲೇ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿದರು. ಮರುಹೋರಾಟ ನಡೆಸಿದ ಗಾಫ್‌ 2–2 ರಿಂದ ಸಮಬಲ ಸಾಧಿಸಿದರು. ಆದರೆ ಸರ್ವ್‌ ವೇಳೆ ಲಯ ಕಂಡುಕೊಳ್ಳಲು ಗಾಫ್‌ ವಿಫಲರಾದರು. ಇದರ ಲಾಭ ಪಡೆದ ಸಬಲೆಂಕಾ ಮತ್ತೆ ಎರಡು ಸಲ ಬ್ರೇಕ್‌ ಮಾಡಿ ಸೆಟ್‌ಅನ್ನು ಸುಲಭವಾಗಿ ತಮ್ಮದಾಗಿಸಿಕೊಂಡರು.

2ನೇ ಸೆಟ್‌ನಲ್ಲಿ ಶಿಸ್ತಿನ ಆಟವಾ ಡಿದ ಗಾಫ್‌ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿ 3–1 ರಿಂದ ಮುನ್ನಡೆ ಪಡೆದರು. ಮುಂದಿನ ಗೇಮ್‌ನಲ್ಲಿ ತಮ್ಮ ಸರ್ವ್‌ನಲ್ಲಿ ಪ್ರಯಾಸದಿಂದ ಪಾಯಿಂಟ್‌ ಗಳಿಸಿ 4–1 ರಿಂದ ಮೇಲುಗೈ ಸಾಧಿಸಿದರು. ತಮ್ಮ ಇನ್ನುಳಿದ ಸರ್ವ್‌ಗಳನ್ನು ಕಾಪಾಡಿಕೊಂಡು ಸೆಟ್‌ ಜಯಿಸಿದರು.

ನಿರ್ಣಾಯಕ ಸೆಟ್‌ನಲ್ಲಿ ಒತ್ತಡಕ್ಕೆ ಒಳಗಾದ ಸಬಲೆಂಕಾ ಸಾಕಷ್ಟು ಸ್ವಯಂಕೃತ ತಪ್ಪುಗಳನ್ನು ಮಾಡಿದರು. ಗಾಫ್‌ 4–0 ಯಿಂದ ಮೇಲುಗೈ ಗಳಿಸಿದರು. ಬೆಲಾರಸ್‌ನ ಆಟಗಾರ್ತಿ ಹಿನ್ನಡೆಯನ್ನು 2–4 ಕ್ಕೆ ತಗ್ಗಿಸಿದರಾದರೂ, ಪಂದ್ಯದ ಮೇಲಿನ ಹಿಡಿತವನ್ನು ಬಿಗಿಗೊಳಿಸಿದ ಗಾಫ್‌ ಸೆಟ್‌ ಗೆದ್ದು ಚಾಂಪಿಯನ್‌ ಆದರು. ವೇಗದ ಹೊಡೆತಗಳಿಗೆ ಹೆಸರು ಮಾಡಿರುವ ಸಬಲೆಂಕಾ ಒಟ್ಟು 46 ಸ್ವಯಂಕೃತ ತಪ್ಪುಗಳನ್ನು ಮಾಡಿದರೆ, ಗಾಫ್‌ ಅವರಿಂದ 19 ಸ್ವಯಂಕೃತ ತಪ್ಪುಗಳು ಆದವು. ಆದರೆ ನಿರ್ಣಾಯಕ ಘಟ್ಟಗಳಲ್ಲಿ ಪಾಯಿಂಟ್‌ ಗೆದ್ದುಕೊಂಡ ಅಮೆರಿಕದ ಆಟಗಾರ್ತಿ ಪ್ರಶಸ್ತಿಯತ್ತ ಹೆಜ್ಜೆಯಿಟ್ಟರು.

* ಅಮೆರಿಕ ಓಪನ್‌ ಟೂರ್ನಿ ಜಯಿಸಿದ ಕೊಕೊ ಗಾಫ್‌ ಅವರು ಮಿರುಗುವ ಟ್ರೋಫಿಯೊಂದಿಗೆ ₹ 24.93 ಕೋಟಿ ನಗದು ಬಹುಮಾನ ತಮ್ಮದಾಗಿಸಿಕೊಂಡರು.

* ‘ರನ್ನರ್‌ ಅಪ್‌’ ಸಬಲೆಂಕಾ ಅವರಿಗೆ ₹ 12.46 ಕೋಟಿ ಲಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT