ಗುರುವಾರ , ಆಗಸ್ಟ್ 18, 2022
25 °C

ವಿಂಬಲ್ಡನ್ ಟೆನಿಸ್: ಸೆರೆನಾಗೆ ಆಘಾತ ಜೊಕೊವಿಚ್ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಂಬಲ್ಡನ್ (ಎಪಿ/ಎಎಫ್‌ಪಿ): ಅಮೆರಿಕದ ಸೆರೆನಾ ವಿಲಿಯಮ್ಸ್‌ 364 ದಿನಗಳ ನಂತರ ಕಣಕ್ಕಿಳಿದ ಮೊದಲ ಗ್ರ್ಯಾನ್‌ಸ್ಲಾಮ್ ಪಂದ್ಯದಲ್ಲಿಯೇ ಆಘಾತ ಅನುಭವಿಸಿದರು. ಇದರೊಂದಿಗೆ ಅವರಿಗೆ ಈ ಸಲದ ವಿಂಬಲ್ಡನ್‌ ಟೂರ್ನಿಯ ಪಯಣ ಅಂತ್ಯವಾಯಿತು. 

ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಚ್ ಮೂರನೇ ಸುತ್ತಿಗೆ ಪ್ರವೇಶಿಸಿದರು. 

ಇದೇ ಮೊದಲ ಬಾರಿಗೆ ವಿಂಬಲ್ಡನ್‌ ಟೂರ್ನಿಯಲ್ಲಿ ಆಡುತ್ತಿರುವ ಫ್ರಾನ್ಸ್‌ನ ಹಾರ್ಮನಿ ಟ್ಯಾನ್ 7-5, 1-6, 7-6 (10-7) ಇಪ್ಪತ್ಮೂರು ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ ಸೆರೆನಗೆ ಆಘಾತ ನೀಡಿದರು. 40 ವರ್ಷದ ಸೆರೆನಾ ವೇಗದ ಸರ್ವ್ ಮತ್ತು ಸ್ಟ್ರೋಕ್‌ಗಳನ್ನು ಪ್ರಯೋಗಿಸಿದರು. ಅವರ ಹಾವಭಾವ ಮತ್ತು ಚಲನೆಗಳಲ್ಲಿ ಆತ್ಮ ವಿಶ್ವಾಸ ತುಂಬಿತ್ತು. ಆದರೆ 115ನೇ ರ‍್ಯಾಂಕ್ ಆಟಗಾರ್ತಿ ಹಾರ್ಮನಿ ಅವರ ಸವಾಲು ಮೀರಿ ನಿಲ್ಲಲು ಸೆರೆನಾಗೆ ಸಾಧ್ಯವಾಗಲಿಲ್ಲ. 

‘ಕಳೆದ ಬಾರಿಗಿಂತ ಇದು ಉತ್ತಮ ಆರಂಭ’ ಎಂದು ಸೆರೆನಾ ಪಂದ್ಯದ ನಂತರ ಹೇಳಿದರು. 

ನಿವೃತ್ತಿಯ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಇದೊಂದು ಪ್ರಶ್ನೆಗೆ  ಉತ್ತರಿಸಲು ಸಾಧ್ಯವಾಗುತ್ತಿಲ್ಲ. ನಂಗೊತ್ತಿಲ್ಲ. ಯಾರಿಗೆ ಗೊತ್ತು. ನಾನು ಯಾವ ಹಂತಕ್ಕೆ ಹೋಗಿ ನಿಲ್ಲುತ್ತೇನೆಂದು’ ಎಂದರು. 

ಸೆರೆನಾ ಅವರು ಪಾಯಿಂಟ್ ಗಳಿಸಿದಾಗಲೆಲ್ಲ  ಗಣ್ಯ ಅತಿಥಿಗಳ ಬಾಕ್ಸ್‌ನಲ್ಲಿದ್ದ ಅವರ ಅಕ್ಕ ವೀನಸ್ ಕುಣಿದು ಕುಪ್ಪಳಿಸಿ, ಸಂಭ್ರಮಿಸಿದರು.

ಜೊಕೊವಿಚ್ ಮುನ್ನಡೆ
ಸರ್ಬಿಯಾದ ನೊವಾಕ್ ಜೊಕೊವಿಚ್ ಪುರುಷರ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದರು. ವಿಂಬಲ್ಡನ್ ಟೆನಿಸ್‌ನಲ್ಲಿ 16ನೇ ಬಾರಿ ಅವರು ಈ ಸಾಧನೆ ಮಾಡಿದರು. 

ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ  ಏಳು ಬಾರಿ ಪ್ರಶಸ್ತಿ ಗೆದ್ದಿರುವ ಪೀಟ್ ಸ್ಯಾಂಪ್ರಾಸ್ ದಾಖಲೆಯನ್ನು ಸರಿಗಟ್ಟುವ ಪ್ರಯತ್ನದಲ್ಲಿ ಜೊಕೊವಿಚ್ ಇದ್ದಾರೆ. 

ಎರಡನೇ ಸುತ್ತಿನ ಪಂದ್ಯದಲ್ಲಿ ನೊವಾಕ್  6-1, 6-4, 6-2ರಿಂದ ಆಸ್ಟ್ರೇಲಿಯಾದ ತನಾಸಿ ಕೊಕಿನಾಕಿಸ್ ವಿರುದ್ಧ ಗೆದ್ದರು. 

ಮುಂದಿನ ಸುತ್ತಿನಲ್ಲಿ ನೊವಾಕ್ ತಮ್ಮದೇ ದೇಶದ ಮಿಯೊಮಿರ್ ಕೆಮಾನೊವಿಚ್ ಅಥವಾ ಚಿಲಿಯ ಅಲೆಜಾಂಡ್ರೊ ಟಾಬಿಲೊ ವಿರುದ್ಧ ಸೆಣಸುವರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು