ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಲ್ಲದಿದ್ದರೆ ಮೈಸೂರಿನಲ್ಲಿ ಟೂರ್ನಿ

ಬೆಂಗಳೂರು ರ‍್ಯಾಪ್ಟರ್ಸ್‌ ತಂಡದ ಇಂಗಿತ
Last Updated 14 ಫೆಬ್ರುವರಿ 2020, 18:48 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೀಮಿಯರ್ ಬ್ಯಾಡ್ಮಿಂಟನ್‌ ಲೀಗ್ ಟೂರ್ನಿಯಲ್ಲಿ ಎರಡನೇ ಬಾರಿ ಪ್ರಶಸ್ತಿ ಗೆದ್ದಿರುವ ಬೆಂಗಳೂರು ರ‍್ಯಾಪ್ಟರ್ಸ್‌ ತಂಡವು ಮುಂದಿನ ವರ್ಷ ಬೆಂಗಳೂರಿನಲ್ಲಿಯೇ ಪಂದ್ಯಗಳನ್ನು ಆಯೋಜಿಸಲು ಸರ್ವಪ್ರಯತ್ನ ಮಾಡುವುದಾಗಿ ತಿಳಿಸಿದೆ. ಒಂದೊಮ್ಮೆ ಆಗದಿದ್ದರೆ ಮೈಸೂರಿನಲ್ಲಾದರೂ ಆಯೋಜಿಸುವ ಇಂಗಿತ ವ್ಯಕ್ತಪಡಿಸಿದೆ.

ಪ್ರಶಸ್ತಿ ಗೆದ್ದ ತಂಡವನ್ನು ಅಭಿನಂದಿಸಲು ಶುಕ್ರವಾರ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ)ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಂಡದ ಮಾಲೀಕ ಪ್ರಶಾಂತ್ ರೆಡ್ಡಿ, ‘ಈ ವರ್ಷ ಬೆಂಗಳೂರಿನಲ್ಲಿ ಟೂರ್ನಿಯ ಪಂದ್ಯಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಅದೇ ಸಂದರ್ಭದಲ್ಲಿ ಮಿನಿ ಒಲಿಂಪಿಕ್ಸ್‌ ಇದ್ದ ಕಾರಣ ಕಂಠೀರವ ಕ್ರೀಡಾಂಗಣವು ಲಭ್ಯವಾಗಲಿಲ್ಲ. ಸಂಬಂಧಪಟ್ಟ ಇಲಾಖೆಗೆ ಬಹಳಷ್ಟು ಬಾರಿ ಮನವಿ ಮಾಡಲಾಯಿತು. ವಿಶ್ವದರ್ಜೆಯ ಆಟಗಾರರು ಆಡುವ ಟೂರ್ನಿಗೆ ಬೆಂಗಳೂರಿನಲ್ಲಿ ಆಯೋಜನೆಗೆ ಅವಕಾಶ ಸಿಗದಿರುವುದು ದುರದೃಷ್ಟಕರ’ ಎಂದರು.

‘ಪ್ರಕಾಶ್ ಪಡುಕೋಣೆ ಅವರಂತಹ ದಿಗ್ಗಜ ಬ್ಯಾಡ್ಮಿಂಟನ್ ಪಟುವಿನ ಊರು ಇದು. ಅನೂಪ್ ಶ್ರೀಧರ್, ಅರವಿಂದ್ ಭಟ್ ಅವರಂತಹ ಉತ್ತಮ ಆಟಗಾರರನ್ನು ಕೊಡುಗೆಯಾಗಿ ನೀಡಿರುವ ನಗರದಲ್ಲಿ ಈ ಪರಿಸ್ಥಿತಿ ಬರಬಾರದು. ಮುಂದಿನ ವರ್ಷವಾದರೂ ಕಂಠೀರವ ಕ್ರೀಡಾಂಗಣ ಲಭ್ಯವಾಗಬೇಕು. ಟಿ.ವಿ. ವಾಹಿನಿಯ ವೇಳಾಪಟ್ಟಿಯ ಪ್ರಕಾರ ನಡೆಯುವ ಟೂರ್ನಿ ಇದಾಗಿದೆ’ ಎಂದರು.

ಈ ಸಂದರ್ಭದಲ್ಲಿ ಹಾಜರಿದ್ದ ತಂಡದ ಮುಖ್ಯ ಕೋಚ್ ಅರವಿಂದ್ ಭಟ್, ‘ತಂಡಕ್ಕೆ ಬೆಂಗಳೂರು ಎಂದು ಹೆಸರಿಟ್ಟಿದ್ದೇವೆ. ಆದರೆ, ಇಲ್ಲಿಯೇ ನಡೆಯದಿದ್ದರೆ ಬೇಸರವಾಗುತ್ತದೆ. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣವನ್ನು ಅಧಿಕೃತ ಪ್ರಸಾರ ಟಿವಿ ವಾಹಿನಿಯ ತಂಡವು ಪರಿಶೀಲನೆ ನಡೆಸಿದೆ. ಅದು ಪ್ರಶಸ್ತವೂ ಆಗಿದೆ. ಬೆಂಗಳೂರಿನಲ್ಲಿ ಅವಕಾಶ ಸಿಗದಿದ್ದರೆ ಅಲ್ಲಿ ನಡೆಸುತ್ತೇವೆ. ಪಿಬಿಎಲ್‌ ಲೀಗ್ ಪಂದ್ಯಗಳಿಗೆ ಅವಕಾಶ ನೀಡಿದರೆ, ಕ್ರೀಡಾ ಇಲಾಖೆಗೆ ಶುಲ್ಕದ ರೂಪದಲ್ಲಿ ಉತ್ತಮ ಮೊತ್ತ ಸಂದಾಯವಾಗುತ್ತದೆ. ಅದು ಕ್ರೀಡಾಭಿವೃದ್ಧಿಗೆ ಬಳಕೆಯಾಗುತ್ತದೆ’ ಎಂದರು.

ಈ ವೇಳೆ ಕೆಬಿಎ ಅಧ್ಯಕ್ಷ ಮನೋಜ್, ಕಾರ್ಯದರ್ಶಿ ರಾಜೇಶ್, ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಜಂಟಿ ಕಾರ್ಯದರ್ಶಿ ಚಕ್ರಪಾಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT