ಅಹಮದಾಬಾದ್: ಗುಜರಾತ್ ರಾಜ್ಯದ ಮಹಾನಗರಿ ಅಹಮದಾಬಾದಿನಲ್ಲಿ ಭಾನುವಾರ ರಾತ್ರಿಯಿಂದ ನೀರವ ಮೌನ ಆವರಿಸಿದೆ. ಭಾರತ ಕ್ರಿಕೆಟ್ ತಂಡವು ವಿಶ್ವಕಪ್ ಗೆದ್ದರೆ ನೃತ್ಯ, ಗಾಯನ, ಮೆರವಣಿಗೆಗಳು ಮತ್ತು ಸಿಹಿಯೂಟ ಹಂಚಿಕೆಯ ಮೂಲಕ ಸಂಭ್ರಮಿಸಲು ಸಜ್ಜಾಗಿದ್ದ ಅಭಿಮಾನಿಗಳೆಲ್ಲ ನಿರಾಶೆ ಪರದೆಯೊಳಗೆ ಸೇರಿಹೋಗಿದ್ದಾರೆ.
ಸದಾ ಲವಲವಿಕೆಯ ಈ ನಗರಿಯಲ್ಲಿ ಈಗ ಮೌನವೇ ಮಾತನಾಡುತ್ತಿದೆ. ಭಾರತದ ಸೋಲಿಗೆ ಪ್ರಮುಖ ಕಾರಣವಾದ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅವರ ಬಗ್ಗೆ ಮಾತ್ರ ಮಾತುಗಳು ಕೇಳಿಬರುತ್ತಿವೆ. ಆದರೆ ಅದು ಅವರು ಫೈನಲ್ ಪಂದ್ಯದಲ್ಲಿ ಹೊಡೆದ ಶತಕ ಅಥವಾ ಮಾರ್ನಸ್ ಲಾಬುಷೇನ್ ಅವರೊಂದಿಗಿನ ಜೊತೆಯಾಟದ ಬಗ್ಗೆ ಅಲ್ಲ. ಅವರು ಅದ್ಭುತವಾಗಿ ಪಡೆದ ರೋಹಿತ್ ಶರ್ಮಾ ಅವರ ಕ್ಯಾಚ್ ಬಗ್ಗೆ ಮಾತುಗಳು ಜೋರಾಗಿವೆ.
’ರೋಹಿತ್ ಒಳ್ಳೆ ಫ್ಲೋನಲ್ಲಿದ್ದರು. ಆ ಓವರ್‌ನಲ್ಲಿ ಹೆಚ್ಚು ರನ್‌ಗಳು ಬಂದಿದ್ದವು. ಅಂತಹ ಶಾಟ್ ಹೊಡೆಯುವ ಅಗತ್ಯವಿರಲಿಲ್ಲ. ಆದರೂ ರನ್ ಆಸೆಗೆ ಬಿದ್ದು ಪ್ರಯೋಗ ಮಾಡಿದರು. ಏನೇ ಹೇಳಿ, ಟ್ರಾವಿಸ್ ಹೆಡ್ ಓಡಿ ಹೋಗಿ ಪಡೆದ ಆ ಕ್ಯಾಚ್ ಪಂದ್ಯದಲ್ಲಿ ಪ್ರಮುಖ ತಿರುವಾಯಿತು. ರೋಹಿತ್ ಇನ್ನೊಂದು ಹತ್ತು ಓವರ್‌ಗಳಷ್ಟು ಹೊತ್ತು ಕ್ರೀಸ್‌ನಲ್ಲಿದ್ದಿದ್ದರೆ ಭಾರತದ ಸ್ಕೋರು 300ರ ಆಸುಪಾಸಿಗೆ ಬರುತ್ತಿತ್ತು. ಆಗ ಮಜಾ ಇತ್ತು’ ಎಂದು ಟ್ಯಾಕ್ಸಿ ಚಾಲಕ ಕಲ್ಪೇಶ್ ಗುಜರಾತಿ ಧಾಟಿಯ ಹಿಂದಿಯಲ್ಲಿ ಪಟಪಟನೇ ವಿಶ್ಲೇಷಿಸಿದರು.
ಭಾರತ ತಂಡದ ವಿಶ್ವಕಪ್ ವಿಜಯದ ದೃಶ್ಯ ಕಣ್ತುಂಬಿಕೊಳ್ಳಲು ಬಂದವರೆಲ್ಲ ನಿರಾಶೆಯಿಂದ ಮರಳಲು ವಿಮಾನ ನಿಲ್ದಾಣದಲ್ಲಿ ಸೇರಿದ್ದರು. ಅವರ ಮಧ್ಯೆಯೂ ಇದೇ ಚರ್ಚೆ ನಡೆದಿತ್ತು. ಒಂದಂತೂ ದಿಟವಾಗಿದ್ದು ಬ್ಯಾಟಿಂಗ್ ಮತ್ತು ಬೌಲಿಂಗ್‌ನಷ್ಟೇ ಮುಖ್ಯ ಫೀಲ್ಡಿಂಗ್ ಎಂಬುದು. ಚುರುಕಾದ ಫೀಲ್ಡಿಂಗ್ ಮತ್ತು ಸಾಹಸಭರಿತ ಕ್ಯಾಚ್‌ಗಳನ್ನು ಪಡೆಯುವ ಸಾಮರ್ಥ್ಯವಿರುವ ತಂಡವೇ ವಿಶ್ವ ಕಿರೀಟ ಧರಿಸಲು ಸಾಧ್ಯ ಎಂಬುದು ಮತ್ತೊಮ್ಮೆ ಸಾಬೀತಾಯಿತು.
ರೋಹಿತ್ ಔಟಾಗುವವರೆಗೂ ಒಂದು ರೀತಿಯ ಒತ್ತಡದಲ್ಲಿದ್ದ ಆಸ್ಟ್ರೇಲಿಯ ಆಟಗಾರರು ನಂತರ ಅತೀವ ಚುರುಕಾಗಿ ಆಡತೊಡಗಿದರು. ಅವರ ಹಾವಭಾವಗಳಲ್ಲಿ ಚೈತನ್ಯ ಪುಟಿಯುತ್ತಿತ್ತು. ಇದು ಬೌಲರ್‌ಗಳ ವಿಶ್ವಾಸ ಇಮ್ಮಡಿಸಿತು. ಹೀಗಾಗಿಯೇ ರೋಹಿತ್ ನಂತರ ಉಳಿದ ಯಾವ ಬ್ಯಾಟರ್‌ಗಳೂ ಸಿಕ್ಸರ್ ಹೊಡೆಯಲಿಲ್ಲ. ಶ್ರೇಯಸ್ ಹೊಡೆಯಲು ಹೋಗಿ ಕೈಸುಟ್ಟುಕೊಂಡರು. ವಿರಾಟ್ ಮತ್ತು ಕೆ.ಎಲ್. ರಾಹುಲ್ ತಾಳ್ಮೆಯ ಚಿಪ್ಪಿನೊಳಗೆ ಸೇರಿಕೊಂಡರು. ವೇಗವಾಗಿ ಆಡಿದರೆ ವಿಕೆಟ್ ಚೆಲ್ಲಬೇಕಿತ್ತು. ಆದ್ದರಿಂದ ಒಂದು ಮತ್ತು ಎರಡು ರನ್ ಪಡೆಯುವಲ್ಲಿಯೇ ಮಗ್ನರಾದರು. ಸೆಮಿಫೈನಲ್‌ನಲ್ಲಿ ಬ್ಯಾಟ್ ಬೀಸಿದ್ದ ರಾಹುಲ್ ಇಲ್ಲಿ ತಮ್ಮನ್ನು ನಿಯಂತ್ರಿಸಿಕೊಂಡರು. ಅವರು 40ಕ್ಕೂ ಹೆಚ್ಚು ಡಾಟ್ ಬಾಲ್ ಎದುರಿಸಿದರು.
ಇದರಿಂದಾಗಿ ಭಾರತ ತಂಡವನ್ನು 240 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಪ್ಯಾಟ್ ಕಮಿನ್ಸ್ ಬಳಗದ ಬೌಲಿಂಗ್‌ನಷ್ಟೇ ಫೀಲ್ಡಿಂಗ್ ಕೂಡ ಕಾರಣವಾಗಿತ್ತು. ನಾಲ್ಕು ರನ್‌ಗಳು ಲಭಿಸುವಲ್ಲಿ ಒಂದು ಅಥವಾ ಎರಡು ರನ್ ಬಿಟ್ಟುಕೊಟ್ಟ ಆಸ್ಟ್ರೇಲಿಯಾ ಕ್ಷೇತ್ರರಕ್ಷಣೆಯಿಂದಲೇ ಸುಮಾರು 40–45 ರನ್‌ಗಳನ್ನು ಉಳಿಸಿತು. ಆದರೆ ಭಾರತದ ಫೀಲ್ಡಿಂಗ್ ಅಷ್ಟೇನೂ ಉನ್ನತ ಮಟ್ಟದಲ್ಲಿ ಇರಲಿಲ್ಲ. ಇನಿಂಗ್ಸ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಹಾಕಿನ ಮೊದಲ ಓವರ್‌ನ ಮೊದಲ ಎಸೆತದಲ್ಲಿ ಸ್ಲಿಪ್‌ನಲ್ಲಿದ್ದ ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಅವರಲ್ಲಿ ಒಬ್ಬರು ಕ್ಯಾಚ್ ಪಡೆಯಬಹುದಿತ್ತು. ಆದರೆ ಅವರಿಬ್ಬರೂ ತಮ್ಮ ಸ್ಥಾನದಿಂದ ಮಿಸುಕಲಿಲ್ಲ.
ನಂತರದ ಆಟದಲ್ಲಿಯೂ ದೊಡ್ಡಮಟ್ಟದ ಡೈವ್‌ಗಳು ಕಾಣಲಿಲ್ಲ. ಓವರ್ ಥ್ರೋ, ಕೀಪರ್ ಪಕ್ಕದಲ್ಲಿ ಹಾದು ಹೋದ ಚೆಂಡು ಬೌಂಡರಿ ಸೇರುವುದು ನಡೆಯಿತು. ಇದರಿಂದಾಗಿ ಟ್ರಾವಿಸ್ ಹೆಡ್ ಶತಕ ಗಳಿಸಲು ಸುಲಭವಾಯಿತು.
ಟೂರ್ನಿಯ ಲೀಗ್ ಪಂದ್ಯದಲ್ಲಿ ಕೊಹ್ಲಿ ಕ್ಯಾಚ್ ಬಿಟ್ಟಿದ್ದ ಮಿಚೆಲ್ ಮಾರ್ಷ್ ಅವರಿಂದಾಗಿ ಆಸ್ಟ್ರೇಲಿಯಾ ಸೋತಿತ್ತು. ಆ ಪಂದ್ಯದಲ್ಲಿ 2 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಭಾರತ ಗೆದ್ದಿತ್ತು. ಅಫ್ಗನ್ ವಿರುದ್ಧದ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕ್ಯಾಚ್ ಬಿಟ್ಟ ಆಟಗಾರರು ಪರಿತಪಿಸಿದ್ದರು. ಬೆಂಗಳೂರಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ಕ್ಯಾಚ್ ಬಿಟ್ಟಿದ ಪಾಕಿಸ್ತಾನ ನಂತರ ಕೈಕೈ ಹಿಸುಕಿಕೊಂಡಿತ್ತು. ಈ ಎಲ್ಲದರಿಂದ ಪಾಠಕ ಕಲಿತ ಆಸ್ಟ್ರೇಲಿಯಾ ಫೈನಲ್‌ನಲ್ಲಿ ಗೆದ್ದಿತು.
ಹಾಗೇ ನೋಡಿದರೆ, ಈ ಟೂರ್ನಿಯುದ್ದಕ್ಕೂ ಸುಮಾರು 12 ಕ್ಯಾಚ್‌ಗಳನ್ನು ಆಸ್ಟ್ರೇಲಿಯಾ ನೆಲಕ್ಕೆ ಚೆಲ್ಲಿತ್ತು. ಆದರೆ, ಭಾರತವು ಆರು ಕ್ಯಾಚ್‌ಗಳನ್ನು ಮಾತ್ರ ಬಿಟ್ಟಿತ್ತು. ಫೀಲ್ಡಿಂಗ್ ಕೂಡ ಉಳಿದ ಪಂದ್ಯಗಳಲ್ಲಿ ಚುರುಕಾಗಿಯೇ ಇತ್ತು. ಆದರೆ ಫೈನಲ್‌ನಲ್ಲಿ ಎಲ್ಲವೂ ತಿರುವುಮುರುವಾಯಿತು.
1983ರಲ್ಲಿ ಕಪಿಲ್ ದೇವ್ ಅವರು ವಿವಿಯನ್ ರಿಚರ್ಡ್ಸ್ ಕ್ಯಾಚ್ ಪಡೆಯದೇ ಹೋಗಿದ್ದರೆ ಇತಿಹಾಸ ನಿರ್ಮಾಣವಾಗುತ್ತಿರಲಿಲ್ಲ. ಕ್ರಿಕೆಟ್ ಈ ಮಟ್ಟಕ್ಕೆ ಬೆಳೆಯುವುದು ಅನುಮಾನವಿತ್ತು. ಆದ್ದರಿಂದ ಮಹೇಂದ್ರ ಸಿಂಗ್ ಧೋನಿ ಕೂಡ ತಮ್ಮ ಅವಧಿಯಲ್ಲಿ ಫೀಲ್ಡಿಂಗ್‌ಗೆ ಹೆಚ್ಚು ಒತ್ತು ಕೊಟ್ಟಿದ್ದರು. ಅದೇ ಪರಂಪರೆ ಮುಂದುವರೆದರೆ ತಂಡಕ್ಕೆ ಲಾಭವಾಗಬಹುದೇನೋ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.