ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SL: ರೋಹಿತ್ ಬಳಗದ ಅಬ್ಬರಕ್ಕೆ ಕೊಚ್ಚಿಹೋದ ಲಂಕಾ

Published 2 ನವೆಂಬರ್ 2023, 12:43 IST
Last Updated 2 ನವೆಂಬರ್ 2023, 12:43 IST
ಅಕ್ಷರ ಗಾತ್ರ

ಮುಂಬೈ: ಅರಬ್ಬೀ ಸಮುದ್ರದ ತಟದಲ್ಲಿರುವ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ಭಾರತದ ಬ್ಯಾಟರ್‌ಗಳು ರನ್‌ಪ್ರವಾಹ ಹರಿಸಿದರೆ, ಬೌಲರ್‌ಗಳು ಬೆಂಕಿ ಚೆಂಡು ಎಸೆದರು. ವಿಶ್ವಕಪ್ ಟೂರ್ನಿಯಲ್ಲಿ ಸತತ ಏಳನೇ ಪಂದ್ಯ ಗೆದ್ದ ರೋಹಿತ್ ಶರ್ಮಾ ಬಳಗವು ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿತು.

ರೌಂಡ್ ರಾಬಿನ್ ಲೀಗ್ ಪಂದ್ಯದಲ್ಲಿ ಶುಭಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಮುಂದೆ ಲಂಕಾ ಬೌಲರ್‌ಗಳು ಬಸವಳಿದರು. 358 ರನ್‌ಗಳ ಗುರಿ ಬೆನ್ನಟ್ಟಿದ ಲಂಕಾ ಪಡೆಯು ಮೊಹಮ್ಮದ್ ಶಮಿ (18ಕ್ಕೆ5), ಮೊಹಮ್ಮದ್ ಸಿರಾಜ್ (16ಕ್ಕೆ3) ಮತ್ತು ಜಸ್‌ಪ್ರೀತ್ ಬೂಮ್ರಾ (8ಕ್ಕೆ1) ಅವರ ಬೌಲಿಂಗ್ ಮುಂದೆ ದೂಳೀಪಟವಾಯಿತು.

ಶ್ರೀಲಂಕಾ ಕೇವಲ 55 ರನ್‌ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ 302 ರನ್‌ಗಳ ಬೃಹತ್ ಅಂತರದಿಂದ ಸೋತಿತು. ಇನಿಂಗ್ಸ್‌ನಲ್ಲಿ 30.2 ಓವರ್‌ಗಳು ಬಾಕಿಯಿದ್ದವು!

‌ಶಮಿ ದಾಖಲೆ: ಈ ವಿಶ್ವಕಪ್ ಟೂರ್ನಿಯಲ್ಲಿ ಮೂರನೇ ಪಂದ್ಯ ಆಡಿದ ಮಧ್ಯಮವೇಗಿ ಮೊಹಮ್ಮದ್ ಶಮಿ ಎರಡನೇ ಬಾರಿ ಐದು ವಿಕೆಟ್‌ಗಳ ಗೊಂಚಲು ಗಳಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಅವರು ಗಳಿಸಿದ ವಿಕೆಟ್ ಸಂಖ್ಯೆಯು 14ಕ್ಕೇರಿತು.

ವಿಶ್ವಕಪ್ ಕ್ರಿಕೆಟ್‌ನಲ್ಲಿ ಒಟ್ಟು ಮೂರು ಬಾರಿ ಪಂಚಗುಚ್ಛ ಗಳಿಸಿದ ಅವರು ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ದಾಖಲೆ ಸರಿಗಟ್ಟಿದರು. ಒಟ್ಟು 45 ವಿಕೆಟ್‌ಗಳನ್ನು ಗಳಿಸಿದ ಅವರು, ಜಾವಗಲ್ ಶ್ರೀನಾಥ್ ಹಾಗೂ ಜಹೀರ್ ಖಾನ್ ದಾಖಲೆಯನ್ನೂ ಮುರಿದರು.

ತಮ್ಮ ಶಿಸ್ತುಬದ್ಧ ಲೈನ್ ಮತ್ತು ಲೆಂಗ್ತ್ ಜೊತೆಗೆ ಸ್ವಿಂಗ್‌ ಮಿಶ್ರಣ ಮಾಡಿ ಬ್ಯಾಟರ್‌ಗಳನ್ನು ಕಂಗೆಡಿಸಿದರು. ಇಲ್ಲಿ ಬೂಮ್ರಾ ಮತ್ತು ಸಿರಾಜ್ ಬೌಲಿಂಗ್‌ ಮುಂದೆ  ಮೊದಲೇ ಹೈರಾಣಾಗಿದ್ದ ಬ್ಯಾಟರ್‌ಗಳು ಶಮಿಯ ಎಸೆತಗಳನ್ನು ಅಂದಾಜು ಮಾಡಲಾಗದೇ ಶರಣಾದರು.

ಬೂಮ್ರಾ ಮತ್ತು ಸಿರಾಜ್ ದಾಳಿಗೆ ಮೊದಲ ಎರಡು ಓವರ್‌ಗಳಲ್ಲಿ ಕೇವಲ ಎರಡು ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು. ಇನಿಂಗ್ಸ್‌ನ ಮೊದಲ ಎಸೆತದಲ್ಲಿ ಬೂಮ್ರಾ ಬೀಸಿದೆ ಎಲ್‌ಬಿಡಬ್ಲ್ಯು ಬಲೆಗೆ ಪಥುಮ್ ನಿಸಾಂಕ ಬಿದ್ದರು.

ಸಿರಾಜ್ ಹಾಕಿದ ಎರಡನೇ ಓವರ್‌ ಮೊದಲ ಎಸೆತ ಮತ್ತು ಕೊನೆಯ ಎಸೆತದಲ್ಲಿ ಕ್ರಮವಾಗಿ ದಿಮುತ ಕರುಣರತ್ನೆ ಹಾಗೂ ಸದೀರ ಸಮರವಿಕ್ರಂ ಔಟಾದರು. ನಾಲ್ಕನೇ ಓವರ್‌ನಲ್ಲಿ ಕುಸಾಲ ಮೆಂಡಿಸ್ ವಿಕೆಟ್ ಎಗರಿಸಿದ ಸಿರಾಜ್ ಕುಣಿದಾಡಿದರು. ಸ್ಪಿನ್ನರ್ ರವೀಂದ್ರ ಜಡೇಜ ಲಂಕಾದ ಕೊನೆಯ ವಿಕೆಟ್ ಉರುಳಿಸಿದರು.

ಐವರು ಸೊನ್ನೆ: ಶ್ರೀಲಂಕಾದ  ಐವರು ಬ್ಯಾಟರ್‌ಗಳು ಈ ಪಂದ್ಯದಲ್ಲಿ ಸೊನ್ನೆ ಸುತ್ತಿದರು. ಅದರಲ್ಲಿ ಆರಂಭಿಕ ಬ್ಯಾಟರ್‌ಗಳಿಬ್ಬರು ಸೇರಿದ್ದರು. ಏಂಜೆಲೊ ಮ್ಯಾಥ್ಯೂಸ್ (12), ಮಹೀಷ ತೀಕ್ಷಣ (ಔಟಾಗದೆ 12) ಮತ್ತು ಕಸುನ್ ರಜಿತಾ (14) ಅವರನ್ನು ಬಿಟ್ಟರೆ ಉಳಿದವರು ಎರಡಂಕಿ ಮುಟ್ಟಲಿಲ್ಲ. ಬೌಲರ್ ದಿಲ್ಶಾನ್ ಮಧುಶಂಕ ಅವರು ಐದು ವಿಕೆಟ್ ಗೊಂಚಲು ಗಳಿಸಿದ್ದಷ್ಟೇ ಲಂಕಾ ತಂಡಕ್ಕೆ ಸಮಾಧಾನ ನೀಡಿದ ಸಾಧನೆ.

ನೂರರ ಸನಿಹ ಎಡವಿದ ಮೂವರು

ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕಗಳ ದಾಖಲೆಯನ್ನು ಅವರ ತವರಿನಂಗಳದಲ್ಲಿ ಯೇ ಸರಿಗಟ್ಟುವ ಅವಕಾಶ ವಿರಾಟ್ ಕೊಹ್ಲಿಗೆ ಇತ್ತು. ಆದರೆ ಅವರು ಕೇವಲ 12  ರನ್‌ಗಳ ಅಂತರದಿಂದ ಈ ಅವಕಾಶ ಕೈಚೆಲ್ಲಿದರು. 94ಎಸೆತಗಳಲ್ಲಿ 88 ರನ್ ಗಳಿಸಿ ಔಟಾದರು.

ಯುವ ಬ್ಯಾಟರ್ ಶುಭಮನ್ ಗಿಲ್ (92; 92ಎ) ಕೂಡ ಎಂಟು ರನ್‌ಗಳಿಂದ ಶತಕ ತಪ್ಪಿಸಿಕೊಂಡರು. ಗಣ್ಯರ ಗ್ಯಾಲರಿಯಲ್ಲಿದ್ದ ಸಚಿನ್ ತೆಂಡೂಲ್ಕರ್ ಅವರ ಎದುರು ಶತಕ ಗಳಿಸಿ ಬೀಗುವ ಅವಕಾಶ ಅವರಿಂದ ತಪ್ಪಿತು.

ಆದರೆ ಗಿಲ್ ಮತ್ತು ಕೊಹ್ಲಿ  ಎರಡೆನೇ ವಿಕೆಟ್ ಜೊತೆಯಾಟದಲ್ಲಿ 189 ರನ್‌ ಸೇರಿಸಿದರು. ಮೊದಲ ಓವರ್‌ನಲ್ಲಿಯೇ ರೋಹಿತ್ ಶರ್ಮಾ (4 ರನ್) ನಿರ್ಗಮನದಿಂದ ಉಂಟಾಗಿದ್ದ ಆತಂಕವನ್ನೂ ದೂರ ಮಾಡಿದರು. 

ಶ್ರೇಯಸ್ ಬೀಸಾಟ: ಕಳೆದ ಕೆಲವು ಪಂದ್ಯಗಳಲ್ಲಿ ಲಯ ಕಂಡುಕೊಳ್ಳುವಲ್ಲಿ ವಿಫರಾಗಿದ್ದ ಶ್ರೇಯಸ್ ಅಯ್ಯರ್ (82; 56ಎ) ತಮ್ಮ ತವರಿನಂಗಳದಲ್ಲಿ ಅಬ್ಬರಿಸಿದರು. ಅರ್ಧ ಡಜನ್ ಸಿಕ್ಸರ್ ಸಿಡಿಸಿದ ಅವರು ಅಭಿಮಾನಿಗಳ ಗ್ಯಾಲರಿಯಲ್ಲಿ ಮಿಂಚಿನ ಸಂಚಲನ ಮೂಡಿಸಿದರು.

146.43ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು. ಅವರು ಕೆ.ಎಲ್. ರಾಹುಲ್ ಜೊತೆಗೆ 60 ರನ್ ಸೇರಿಸಿದರು. ಕೊನೆಯ ಹಂತದ ಓವರ್‌ನಲ್ಲಿ ರವೀಂದ್ರ ಜಡೇಜ (35; 24ಎ) ಮಿಂಚಿದರು.

ಸಚಿನ್ ದಾಖಲೆ ಮೀರಿದ ವಿರಾಟ್

ವಿರಾಟ್ ಕೊಹ್ಲಿ ಅವರು ಒಂದು ಕ್ಯಾಲೆಂಡರ್ ವರ್ಷದಲ್ಲಿ ಒಂದು ಸಾವಿರ ರನ್‌ ಗಳಿಸಿದ ಸಾಧನೆ ಮಾಡಿದರು.  ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ  ಎಂಟನೇ ಬಾರಿ ಈ ಸಾಧನೆ ಮಾಡಿದರು.

ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಕೊಹ್ಲಿ ಮೀರಿ ನೀತರು. ತೆಂಡೂಲ್ಕರ್‌  ಏಳು ಬಾರಿ ಮಾಡಿದ್ದ ದಾಖಲೆಯನ್ನು ಕೊಹ್ಲಿ ಮುರಿದರು.

ವಿರಾಟ್ 2011, 2012, 2013, 2014, 2017, 2018 ಮತ್ತು 2019ರಲ್ಲಿ ಕ್ರಮವಾಗಿ ಸಾವಿರ ರನ್‌ಗಳನ್ನು ಕಲೆಹಾಕಿದ್ದರು.

ತೆಂಡೂಲ್ಕರ್ 1994, 1996, 1997, 1998, 2000, 2003 ಮತ್ತು 2007ರಲ್ಲಿ ಈ ಸಹಸ್ರ ರನ್‌ಗಳ ಸಾಧನ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT