ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದುರಾಳಿಯನ್ನು ಕೂಡಿಹಾಕಿದರೆ, ಸೆಮಿಫೈನಲ್ ತಲುಪಬಹುದು: ಪಾಕ್ ಪಡೆ ಕಾಲೆಳೆದ ಅಕ್ರಂ

Published 10 ನವೆಂಬರ್ 2023, 10:21 IST
Last Updated 10 ನವೆಂಬರ್ 2023, 10:21 IST
ಅಕ್ಷರ ಗಾತ್ರ

ನವದೆಹಲಿ: ಶ್ರೀಲಂಕಾ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ 5 ವಿಕೆಟ್‌ಗಳ ಗೆಲುವು ಸಾಧಿಸುತ್ತಿದ್ದಂತೆಯೇ, ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಪಾಕಿಸ್ತಾನ ಬಳಗದ ಕನಸು ಕಮರಿದೆ.

ಪಾಕ್‌ ಪಡೆಗೆ ನಾಕೌಟ್‌ ಬಾಗಿಲು ಬಹುತೇಕ ಬಂದ್ ಆಗಿರುವ ಬಗ್ಗೆ ಆ ದೇಶದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಬಾಬರ್‌ ಅಜಂ ನೇತೃತ್ವದ ತಂಡ ಈಗಲೂ ಸೆಮಿಫೈನಲ್‌ ತಲುಪಬಲ್ಲದು. ಆದರೆ ಅದಕ್ಕಾಗಿ ಅವರು ಎದುರಾಳಿ ಆಟಗಾರರನ್ನು ಡ್ರೆಸ್ಸಿಂಗ್ ರೂಂನಲ್ಲೇ ಕೂಡಿಹಾಕಬೇಕು ಎಂದು ಕಾಲೆಳೆದಿದ್ದಾರೆ.

'ಎ ಸ್ಪೋರ್ಟ್ಸ್‌' ವಾಹಿನಿಯೊಂದಿಗೆ ಮಾತನಾಡಿರುವ ಅಕ್ರಂ, ಪಾಕಿಸ್ತಾನ ತಂಡ ತನ್ನ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಮೊದಲು ಬ್ಯಾಟಿಂಗ್‌ ಮಾಡಬೇಕು. ಬಳಿಕ, ಆಂಗ್ಲರನ್ನು ಟೈಮ್ಡ್ ಔಟ್ ಆಗುವವರೆಗೆ ಡ್ರೆಸ್ಸಿಂಗ್ ರೂಂನಲ್ಲೇ ಕೂಡಿಹಾಕಬೇಕು' ಎಂದಿದ್ದಾರೆ.

ಟೂರ್ನಿಯಲ್ಲಿ ಈವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ ತಲಾ ನಾಲ್ಕು ಜಯ ಮತ್ತು ನಾಲ್ಕು ಸೋಲು ಅನುಭವಿಸಿರುವ ಪಾಕ್‌ ತಂಡ ತನ್ನ ಕೊನೇ ಪಂದ್ಯದಲ್ಲಿ ನಾಳೆ (ನವೆಂಬರ್ 11ರಂದು) ಇಂಗ್ಲೆಂಡ್‌ ವಿರುದ್ಧ ಕಣಕ್ಕಿಳಿಯಲಿದೆ.

ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಪಾಕ್‌ ನಂತರರ ಸತತ 4 ಪಂದ್ಯಗಳಲ್ಲಿ ಮುಗ್ಗರಿಸಿತು. ಭಾರತ ಎದುರು ಹೀನಾಯ ಸೋಲು ಎದುರಾದ ಬಳಿಕ ಅಫ್ಗಾನಿಸ್ತಾನ ವಿರುದ್ಧವೂ ಸೋಲು ಕಂಡಿದ್ದು, ಭಾರಿ ಹಿನ್ನಡೆಯಾಯಿತು.

ವಿಶ್ವಕಪ್‌ಗೂ ಮುನ್ನ ಏಕದಿನ ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದ್ದ ನಾಯಕ ಬಾಬರ್‌ ಅಜಂ ಸಾಮರ್ಥ್ಯಕ್ಕೆ ತಕ್ಕ ಆಟವಾಡಲು ವಿಫಲರಾದರು. ಶಾಹೀನ್‌ ಅಫ್ರಿದಿ, ಹ್ಯಾರಿಸ್‌ ರೌಫ್‌ ಅವರನ್ನೊಳಗೊಂಡ ವೇಗದ ಬೌಲಿಂಗ್‌ ವಿಭಾಗವೂ ಪರಿಣಾಮಕಾರಿ ಪ್ರದರ್ಶನ ನೀಡುವುಲ್ಲಿ ಎಡವಿತು.

ನ್ಯೂಜಿಲೆಂಡ್ ಹಿಂದಿಕ್ಕುವುದು ಸುಲಭವಲ್ಲ
ಪಾಯಿಂಟ್‌ ಪಟ್ಟಿಯಲ್ಲಿ ಸದ್ಯ ಮೊದಲ ಮೂರು ಸ್ಥಾನಗಳಲ್ಲಿರುವ ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್‌ ಟಿಕೆಟ್‌ ಖಾತ್ರಿಪಡಿಸಿಕೊಂಡಿವೆ. ಇನ್ನೊಂದು ಸ್ಥಾನಕ್ಕಾಗಿ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ಪೈಪೋಟಿ ನಡೆಸುತ್ತಿವೆಯಾದರೂ, ನ್ಯೂಜಿಲೆಂಡ್‌ಗಿಂತ ಹಿಂದಿವೆ.

ಉತ್ತಮ ರನ್‌ರೇಟ್‌ ಹೊಂದಿರುವ ಕಿವೀಸ್‌ ಪಡೆಯನ್ನು ಮೀರಿ ನಿಲ್ಲುವುದು ಈ ತಂಡಗಳಿಗೆ ಸುಲಭವಲ್ಲ.

ಆಡಿರುವ 9 ಪಂದ್ಯಗಳಲ್ಲಿ 5 ಜಯ ಸಾಧಿಸಿರುವ ನ್ಯೂಜಿಲೆಂಡ್‌, 10 ಅಂಕ ಹೊಂದಿದ್ದು, ಪಾಕ್‌ (0.036) ಮತ್ತು ಅಫ್ಗನ್‌ (–0.338) ತಂಡಗಳಿಗಿಂತ ಉತ್ತಮ ರನ್‌ರೇಟ್‌ (+0.743) ಹೊಂದಿದೆ.

ಹೀಗಾಗಿ ಪಾಕ್‌ ಪಡೆ ಕೊನೇ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು ಗೆದ್ದರಷ್ಟೇ ಸಾಲದು. ಆ ತಂಡವನ್ನು 287 ರನ್‌ಗಳಿಗೂ ಅಧಿಕ ಅಂತರದಿಂದ ಸೋಲಿಸಿದರೆ ಮಾತ್ರ, ಸೆಮಿ ಪ್ರವೇಶಿಸಲು ಸಾಧ್ಯ.

ಇಂಗ್ಲೆಂಡ್‌ ಮೊದಲು ಬ್ಯಾಟ್‌ ಮಾಡಿದರೆ ಕಡಿಮೆ ಓವರ್‌ಗಳಲ್ಲಿ ರನ್‌ ಬೆನ್ನಟ್ಟಬೇಕು. ಒಂದುವೇಳೆ 150 ರನ್‌ಗಳಿಗೆ ನಿಯಂತ್ರಿಸಿದರೆ, ಪಾಕ್‌ 3.4 ಓವರ್‌ಗಳಲ್ಲಿ ಗುರಿ ಬೆನ್ನಟ್ಟಬೇಕಿದೆ.

ಅಫ್ಗನ್ನರ ಪರಿಸ್ಥಿತಿ ಇದಕ್ಕಿಂತಲೂ ಕಠಿಣವಾಗಿದೆ. ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 438 ರನ್‌ ಅಂತರದಿಂದ ಮಣಿಸಬೇಕಿದೆ.

ಚಾಂಪಿಯನ್ಸ್‌ ಟ್ರೋಫಿ ಅರ್ಹತೆಗೆ ಆಂಗ್ಲರ ಹೋರಾಟ
ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ 2025ರ ಚಾಂಪಿಯನ್ಸ್‌ ಟ್ರೋಫಿಗೆ ಅರ್ಹತೆ ಗಿಟ್ಟಿಸಲು ಇಂಗ್ಲೆಂಡ್‌ ಪಡೆ ಸೆಣಸಾಟ ನಡೆಸುತ್ತಿದೆ. ಟೂರ್ನಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದಿರುವ ಆಂಗ್ಲರು ಸದ್ಯ ಪಾಯಿಂಟ್‌ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ನಿಯಮಗಳ ಪ್ರಕಾರ ವಿಶ್ವಕಪ್‌ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ 7 ಸ್ಥಾನಗಳಲ್ಲಿ ಉಳಿಯುವ ತಂಡಗಳು, ಆತಿಥ್ಯ ವಹಿಸುವ ರಾಷ್ಟ್ರದೊಂದಿಗೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡಲಿವೆ.

ಟೂರ್ನಿಯಲ್ಲಿ ಪಾಕ್ ತಂಡದ ಪ್ರದರ್ಶನ
01. ನೆದರ್ಲೆಂಡ್ಸ್‌ ವಿರುದ್ಧ 81 ರನ್ ಅಂತರದ ಜಯ
02. ಶ್ರೀಲಂಕಾ ವಿರುದ್ಧ 6 ವಿಕೆಟ್ ಜಯ
03. ಭಾರತ ವಿರುದ್ಧ 7 ವಿಕೆಟ್ ಸೋಲು
04. ಆಸ್ಟ್ರೇಲಿಯಾ ಎದುರು 62 ರನ್ ಸೋಲು
05. ಅಫ್ಗಾನಿಸ್ತಾನ ಎದುರು 8 ವಿಕೆಟ್ ಸೋಲು
06. ದಕ್ಷಿಣ ಆಫ್ರಿಕಾ ವಿರುದ್ಧ 1 ವಿಕೆಟ್ ಸೋಲು
07. ಬಾಂಗ್ಲಾದೇಶ ವಿರುದ್ಧ 7 ವಿಕೆಟ್ ಜಯ
08. ನ್ಯೂಜಿಲೆಂಡ್ ವಿರುದ್ಧ (ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ) 21 ರನ್ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT