ಶನಿವಾರ, ಏಪ್ರಿಲ್ 17, 2021
22 °C
ಸರ್ವರಿಗೂ ಸುಸ್ಥಿರ ಸಂಚಾರ ವ್ಯವಸ್ಥೆ ಕುರಿತು ಸಂವಾದದಲ್ಲಿ ಹ್ಯಾರಿಸ್ ಹೇಳಿಕೆ

‘ಸಾರ್ವಜನಿಕ ಸಾರಿಗೆಗೆ ಪ್ರತ್ಯೇಕ ಮಾರ್ಗ ಅವಶ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಿದೇಶಗಳಲ್ಲಿ ಸಾರ್ವಜನಿಕ ವಾಹನಗಳು ಸಂಚರಿಸಲು ಪ್ರತ್ಯೇಕ ಮಾರ್ಗ ಮಾಡಲಾಗಿರುತ್ತದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಮತ್ತು ಸಾರ್ವಜನಿಕ ಸಾರಿಗೆ ಉತ್ತೇಜಿಸಲು ನಗರದಲ್ಲಿಯೂ ಇಂತಹ ವ್ಯವಸ್ಥೆ ಜಾರಿಗೆ ತರುವ ಅವಶ್ಯಕತೆಯಿದೆ’ ಎಂದು ಬಿಎಂಟಿಸಿ ಅಧ್ಯಕ್ಷ ಎನ್.ಎ. ಹ್ಯಾರಿಸ್‌ ಅಭಿಪ್ರಾಯಪಟ್ಟರು. 

ಸಮಗ್ರ ಸಂಚಾರ ಯೋಜನೆ (ಸಿಎಂಪಿ) ರೂಪಿಸುವ ಕುರಿತು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿ ಪ್ಯಾಕ್‌) ಮತ್ತು ಉಬರ್‌ ಸಂಸ್ಥೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ ಸಾರಿಗೆ ಉತ್ತೇಜಿಸಬೇಕಾದ ಅವಶ್ಯಕತೆ ಇದೆ. ಆದರೆ, ನಾಲ್ಕು ವರ್ಷಗಳಿಂದ ಬಸ್‌ ಪ್ರಯಾಣ ದರ ಏರಿಸಲು ಸಾಧ್ಯವಾಗಿಲ್ಲ. ಸಿಬ್ಬಂದಿ ವೇತನ ಹಾಗೂ ಡೀಸೆಲ್‌ ದರ ಏರಿಕೆಯಾದಂತೆ, ಬಿಎಂಟಿಸಿ ಸಹಜವಾಗಿ ನಷ್ಟದಲ್ಲಿರಬೇಕಾಗುತ್ತದೆ’ ಎಂದು ಹೇಳಿದರು. 

‘ನಾಲ್ಕು ವರ್ಷಗಳವರೆಗೆ ಡೀಸೆಲ್‌ ಬಸ್‌ಗಳನ್ನು ಖರೀದಿಸದಂತೆ ಬಿಎಂಟಿಸಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಜಿಎನ್‌ಟಿ) ಆದೇಶಿಸಿದೆ. ಇಡೀ ದೇಶದಲ್ಲಿ ಬಿಎಂಟಿಸಿಗೆ ಮಾತ್ರ ಇಂತಹ ತಡೆ ನೀಡಿದೆ. ಸಿಎನ್‌ಜಿ ಬಸ್‌ಗಳನ್ನು ಖರೀದಿಸಲು ಹೇಳಿದ್ದಾರೆ. ನಾವು ಅವುಗಳನ್ನು ಖರೀದಿಸಲು ಮುಂದಾಗದಿದ್ದರೆ ನಾಲ್ಕು ವರ್ಷಗಳವರೆಗೆ ಹೆಚ್ಚುವರಿ ಬಸ್‌ಗಳನ್ನು ಖರೀದಿಸಲು ಸಾಧ್ಯವೇ ಇಲ್ಲ’ ಎಂದು ಹೇಳಿದರು. 

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್. ಅನಿಲ್‌ ಕುಮಾರ್‌, ‘ನಾವು ಈವರೆಗೆ ಸಮಗ್ರ ಸಂಚಾರ ಯೋಜನೆ ಹೊಂದಲು ಆಗಿಲ್ಲ. ಇದನ್ನು ರೂಪಿಸುವ ಕೆಲಸವಾಗಬೇಕಿದೆ. ಆದರೆ, ಸುಸ್ಥಿರ ಮತ್ತು ಸಮಗ್ರ ಸಂಚಾರ ವ್ಯವಸ್ಥೆ ಕಲ್ಪಿಸುವಾಗ ಭೂಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಈ ಪ್ರಕ್ರಿಯೆ ಸವಾಲಿನದ್ದು. ಇದು ಕೆಲವೊಮ್ಮೆ ನಮ್ಮ ನಿಯಂತ್ರಣಕ್ಕೆ ಬಾರದಿರುವುದರಿಂದ ಮತ್ತು ಕೆಲವು ಮಿತಿಗಳು ಇರುವುದರಿಂದ ನಿಗದಿತ ಅವಧಿಯಲ್ಲಿ ಸಿಎಂಪಿ ಅನುಷ್ಠಾನ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು. 

‘ಉಪನಗರ ರೈಲು ಯೋಜನೆ ಅನುಷ್ಠಾನ, ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಾಣ,  ಫಾಸ್ಟ್‌ ಟ್ರ್ಯಾಕ್‌ಗಳ ನಿರ್ಮಾಣದಂತಹ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಸುಸ್ಥಿರ ಸಂಚಾರ ವ್ಯವಸ್ಥೆ ಅನುಷ್ಠಾನಗೊಳಿಸಬಹುದಾಗಿದೆ’ ಎಂದು ಹೇಳಿದರು. 

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌, ‘ಸಂಚಾರ ವ್ಯವಸ್ಥೆಯಲ್ಲಿ ಮೆಟ್ರೊ ರೈಲು ಒಂದು ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿದೆ. ಮೆಟ್ರೊ ಮಾರ್ಗ ವಿಸ್ತರಣೆಯಾದಂತೆ ಸಂಚಾರ ವ್ಯವಸ್ಥೆ ಸರಾಗವಾಗಬಹುದು’ ಎಂದರು. 

‘ಮೆಟ್ರೊದಲ್ಲಿ ಇಂಗ್ಲೆಂಡ್‌ನಲ್ಲಿ ದಿನಕ್ಕೆ ಒಂದು ಕಿ.ಮೀ.ಗೆ 34 ಸಾವಿರ ಜನರು ಪ್ರಯಾಣಿಸಿದರೆ, ಹಾಂಗ್‌ಕಾಂಗ್‌ನಲ್ಲಿ ಈ ಸಂಖ್ಯೆ 22 ಸಾವಿರ ಇದೆ. ದೆಹಲಿಯಲ್ಲಿ 9 ಸಾವಿರ, ಬೆಂಗಳೂರಿನಲ್ಲಿ 8.5 ಸಾವಿರ ಮಂದಿ ಪ್ರಯಾಣಿಸುತ್ತಿದ್ದಾರೆ. ಈ ಸಂಖ್ಯೆ ದುಪ್ಪಟ್ಟು ಆದರೆ, ಸದ್ಯ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿರುವ ‘ನಮ್ಮ ಮೆಟ್ರೊ’ ಅತಿ ಪ್ರಮುಖ ಸಂಚಾರ ವ್ಯವಸ್ಥೆಯಾಗಿ ಬದಲಾಗುತ್ತದೆ’ ಎಂದರು. 

ನಗರ ಯೋಜನಾ ತಜ್ಞ ಆರ್.ಕೆ. ಮಿಶ್ರಾ, ‘ಬಿಎಂಟಿಸಿಯಲ್ಲಿ ದಿನಕ್ಕೆ 45 ಲಕ್ಷ ಜನ ಪ್ರಯಾಣಿಸುತ್ತಿದ್ದರೆ, ಮೆಟ್ರೊದಲ್ಲಿ ಸುಮಾರು 42 ಕಿ.ಮೀ. ವ್ಯಾಪ್ತಿಯಲ್ಲಿ ದಿನಕ್ಕೆ 4 ಲಕ್ಷದಿಂದ 5 ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ. ಮೆಟ್ರೊ ರೈಲು 250 ಕಿ.ಮೀ.ವರೆಗೆ ಸಂಚರಿಸುವಂತಾದರೆ, ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಸಾಕಷ್ಟು ಕಡಿಮೆಯಾಗುತ್ತದೆ’ ಎಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು