ಬೆಂಗಳೂರು: ಮೆಟ್ರೊ ವಯಾಡಕ್ಟ್ ಕೆಳಗಿನ ಕ್ರಾಸ್ ಬೀಮ್‌ನಲ್ಲಿ ಕಾಂಕ್ರಿಟ್ ದುರ್ಬಲಗೊಂಡಿರುವುದನ್ನು ಸರಿಪಡಿಸಲು ಡಿ.22 ಮತ್ತು 23ರಂದು ಎಂ.ಜಿ. ರಸ್ತೆಯಿಂದ ಇಂದಿರಾನಗರ ನಿಲ್ದಾಣದವರೆಗೆ ರೈಲು ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದರು.
ಟ್ರಿನಿಟಿ ನಿಲ್ದಾಣದ ಬಳಿಯ ಪಿಲ್ಲರ್ ಸಂಖ್ಯೆ 155ರಲ್ಲಿರುವ ಕ್ರಾಸ್ ಬೀಮ್‌ನ ಬಳಿ ಕಾಂಕ್ರಿಟ್ ದುರ್ಬಲಗೊಂಡ ಘಟನೆಯ ಹಿನ್ನೆಲೆಯಲ್ಲಿ ಅವರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿದರು.
ಮೆಟ್ರೊ ಪ್ರಯಾಣ ಎಲ್ಲ ರೀತಿಯಲ್ಲೂ ಸುರಕ್ಷಿತವಾಗಿದೆ. ದುರಸ್ತಿ ಕಾರ್ಯದ ದಿನದಂದು ಈ ನಿಲ್ದಾಣಗಳ ನಡುವೆ ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಬಸ್‌ನಲ್ಲಿ ಎಂ.ಜಿ.ರಸ್ತೆ ನಿಲ್ದಾಣಕ್ಕೆ ಬಂದು ಮೈಸೂರು ರಸ್ತೆವರೆಗೆ ಮೆಟ್ರೊದಲ್ಲಿ ಪ್ರಯಾಣ ಮಾಡಬಹುದು ಎಂದು ಅವರು ಹೇಳಿದರು.
2012ರಲ್ಲೂ ಸಮಸ್ಯೆ: 2012ರಲ್ಲಿಯೂ ಇದೇ ಪಿಲ್ಲರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಪರಿಶೀಲನಾ ವೇಳೆ ಗಮನಕ್ಕೆ ಬಂದಿದ್ದು ಅದನ್ನು ಸರಿಪಡಿಸಲಾಗಿದೆ. ಮುಂದೆಯೂ ಗುಣಮಟ್ಟ, ಸುರಕ್ಷತಾ ಪರೀಕ್ಷೆಗಳಲ್ಲಿ ಯಾವುದೇ ರಾಜಿ ಇಲ್ಲ ಎಂದು ಕೋರಿದರು.
‘ವಾರಾಂತ್ಯದ ದಿನಗಳಲ್ಲಿ ಮೆಟ್ರೊ ಬಳಕೆ ಸ್ವಲ್ಪ ಕಡಿಮೆ ಇರುವುದರಿಂದ ಈ ದಿನಗಳಲ್ಲಿ ಕಾಮಗಾರಿ ಮಾಡಲು ಉದ್ದೇಶಿಸಿದ್ದೇವೆ. ಈ ಕಾರ್ಯಕ್ಕೆ ಸಮರ್ಥರಿರುವ ತಜ್ಞರನ್ನು ಕರೆಸಿದ್ದೇವೆ. ಸಮಸ್ಯೆ ಬಗೆಹರಿಸಲು ಮೊದಲು ಆದ್ಯತೆ ನೀಡುತ್ತೇವೆ. ನಂತರ ಕಾರಣಗಳನ್ನು ಹುಡುಕುತ್ತೇವೆ’ ಎಂದರು.
‘ಈ ಪ್ರದೇಶದಲ್ಲಿ ಮಾತ್ರ ರೈಲುಗಳ ವೇಗವನ್ನು 10 ಕಿಲೋಮೀಟರ್‌ಗಳಷ್ಟು ಕಡಿಮೆ ಮಾಡಿದ್ದೇವೆ. ಅತಿ ಸಮೀಪದಲ್ಲೇ ನಿಲ್ದಾಣ ಇರುವುದರಿಂದ ಇಲ್ಲಿ ರೈಲುಗಳು ಸಹಜವಾಗಿ ನಿಧಾನಗತಿಯಲ್ಲಿ ಸಂಚರಿಸುತ್ತವೆ’ ಎಂದರು.
‘ದೊಡ್ಡ ನಿರ್ಮಾಣಗಳಲ್ಲಿ ಹನಿ ಕಾಂಬಿಂಗ್ ಸಲ್ಲದು’
ಕಾಂಕ್ರಿಟ್ ರಚನೆಗಳಿಗೆ ಹನಿಕಾಂಬಿಂಗ್ (ಕಾಂಕ್ರಿಟ್ ಟೊಳ್ಳಾಗುವುದು) ಹೊಸ ವಿಷಯವಲ್ಲ. ಆದರೆ, ಬೃಹತ್ ಸಾರಿಗೆ ಯೋಜನೆಗಳ ನಿರ್ಮಾಣಗಳಲ್ಲಿ ಹೀಗಾಗಲೇಬಾರದು ಎಂದು ರಾಜ್ಯದ ಸಿವಿಲ್ ಎಂಜಿನಿಯರ್‌ಗಳು ಮತ್ತು ಈ ಕ್ಷೇತ್ರದ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಎಂಜಿನಿಯರ್‌ಗಳ ಸಂಸ್ಥೆ ಮತ್ತು ಇತರ ತಜ್ಞರು, ‘ಮೆಟ್ರೊ ಸೇತುವೆಯ ರಚನೆಯಲ್ಲಿ ಸಮಸ್ಯೆ ಇದೆ. ಆದರೆ, ಮೆಟ್ರೊ ನಿಗಮ ಅದನ್ನು ಮರೆಮಾಚುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸರಿಯಾದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.
ಎಂಜಿನಿಯರ್‌ಗಳ ಸಂಸ್ಥೆಯ ಕಾರ್ಯದರ್ಶಿ ಎಂ.ನಾಗರಾಜ್ ಪ್ರಕಾರ, ‘ನಿರ್ಮಾಣ ಹಂತದಲ್ಲಿಯೇ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರು ಸರಿಯಾದ ಕಾಳಜಿ ವಹಿಸಬೇಕು. ರಚನೆಯ ಅಚ್ಚು ತೆಗೆದು ಹಾಕಿದಾಗಲೇ ಅಲ್ಲಲ್ಲಿ ಬಿರುಕುಗಳು ಗೋಚರಿಸುತ್ತವೆ. ತಕ್ಷಣವೇ ಅದಕ್ಕೆ ಕಾಂಕ್ರಿಟ್ ಸುರಿದು ಸರಿಪಡಿಸಬೇಕು. ಬಹುಶಃ ಕಾಮಗಾರಿ ನಿರ್ವಹಣೆ ವೇಳೆಯೇ ಲೋಪವಾಗಿರಬಹುದು’ ಎಂದು ಶಂಕೆ ವ್ಯಕ್ತಪಡಿಸಿದರು.
‘ಮೆಟ್ರೊ ಸೇತುವೆ ನಿರ್ಮಾಣದ ದೀರ್ಘಾವಧಿ ಬಾಳಿಕೆ ಬಗ್ಗೆ ಯಾವುದೇ ಪರೀಕ್ಷೆಗಳು ನಡೆದಿಲ್ಲ’ ಎಂದು ಸರ್ಕಾರಿ ಯೋಜನೆ ಕಾಮಗಾರಿಗಳಲ್ಲಿ ತೊಡಗಿರುವ ನಿರ್ಮಾಣ ಎಂಜಿನಿಯರ್‌ರೊಬ್ಬರು ಹೇಳಿದರು.
‘ಇಂಥದ್ದೇ ಲೋಪ ಈ ಹಿಂದೆಯೂ ಆಗಿರುವುದನ್ನು ಬಿಎಂಆರ್‌ಸಿಎಲ್ ಒಪ್ಪಿಕೊಂಡಿದೆ. ಹಾಗಿದ್ದರೂ ಮತ್ತೆ ದೋಷ ಕಾಣಿಸಿದೆಯೆಂದಾದರೆ ಇದು ನಿಗಮದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಅಲ್ಟ್ರಾಸೋನಿಕ್ ಪರೀಕ್ಷೆಗಳನ್ನು ಈ ಹಿಂದೆಯೇ ಮಾಡಬೇಕಿತ್ತು. ಪಿಲ್ಲರ್ ನಿರ್ಮಾಣದ ವೇಳೆ ಕಾಂಕ್ರಿಟ್ ಸುರಿಯುವಾಗಲೇ ಹನಿಕಾಂಬಿಂಗ್ (ಗಾಳಿಯ ಗುಳ್ಳೆಗಳು ಸೇರಿ ಕಾಂಕ್ರಿಟ್ ಟೊಳ್ಳಾಗುವುದು) ಆಗುತ್ತದೆ. ಮೊದಲ ಹಂತದಲ್ಲಿಯೇ ಕಾಮಗಾರಿ ಸರಿಯಾಗಿ ನಿರ್ವಹಿಸದ ಕಾರಣ ಹೀಗಾಗಿದೆ. ಈಗ ಕಾಂಕ್ರಿಟ್ ಮಿಶ್ರಣ, ಸಿಮೆಂಟ್ ಗುಣಮಟ್ಟದ ಬಗೆಗೂ ಸಂಶಯಗಳು ಮೂಡಿವೆ’ ಎಂದು ಅವರು ಹೇಳಿದರು.
ಸ್ಟ್ರಕ್ಚರಲ್ ಎಂಜಿನಿಯರಿಂಗ್ ಲ್ಯಾಬೊರೇಟರಿಯ ಪ್ರಾಧ್ಯಾಪಕ, ಮೆಟ್ರೋ ಫೇಸ್–2 ಕಾಮಗಾರಿಯ ಸಲಹೆಗಾರ ಚಂದ್ರಕಿಶನ್ ಜೆ.ಎಂ. ಹೇಳುವಂತೆ, ‘ಕಾಂಕ್ರಿಟ್ ಸುರಿದ ಬಳಿಕ ಅದನ್ನು ವೈಬ್ರೇಟರ್ ಮೂಲಕ ಸರಿಯಾಗಿ ಕೂರಿಸದೇ ಇದ್ದಾಗ ಹನಿ ಕಾಂಬಿಂಗ್ ಸೃಷ್ಟಿಯಾಗುತ್ತದೆ. ಅದಕ್ಕಾಗಿ ಗುಣಮಟ್ಟ ಖಾತ್ರಿ ತಂಡವು ಸಿಮೆಂಟ್ ಮಿಶ್ರಣ ಹಾಗೂ ಅದನ್ನು ಸುರಿಯುವ ಪ್ರತಿ ಹಂತದಲ್ಲಿ ಪರೀಕ್ಷಿಸಬೇಕು’ ಎಂದರು. ‘ರಚನೆಯ ಹೊರಭಾಗದಲ್ಲಿ ಹನಿಕಾಂಬಿಂಗ್ ಕಂಡುಬಂದರೆ ದೊಡ್ಡ ಸಮಸ್ಯೆ ಇಲ್ಲ. ಆದರೆ, ವರ್ಷಗಳು ಕಳೆದಂತೆ ನೀರು ಮತ್ತು ಉಪ್ಪಿನ ಅಂಶ ಸೇರಿ ನಿರ್ಮಾಣವನ್ನು ಕೊರೆಯುತ್ತವೆ. ಮೆಟ್ರೊ ಫೇಸ್ –2ನ ಪಿಲ್ಲರ್‌ಗಳಲ್ಲಿಯೂ ಹನಿ ಕಾಂಬಿಂಗ್ ಉಂಟಾಗಿರುವುದನ್ನು ಗಮನಿಸಿದ್ದೇನೆ. ನಿಗಮದವರಿಗೆ ಹೇಳಿದ್ದೇನೆ. ಅದನ್ನು ಕೂಡಲೇ ಸರಿಪಡಿಸಿದ್ದಾರೆ’ ಎಂದು ಕಿಶನ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.