ಮಂಗಳವಾರ, ಏಪ್ರಿಲ್ 20, 2021
32 °C
ಮಲ್ಲೇಶ್ವರ ಲಿಂಕ್‌ ರಸ್ತೆಯಲ್ಲಿ ನಾಲ್ಕು ತಿಂಗಳಿಂದ ನಡೆಯುತ್ತಿದೆ ಒಳಚರಂಡಿ ಕಾಮಗಾರಿ

ಮುಗಿಯದ ಕಾಮಗಾರಿ; ನಿವಾಸಿಗಳಿಗೆ ಕಿರಿಕಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಲ್ಲೇಶ್ವರ–ಶೇಷಾದ್ರಿ ಪುರ ಲಿಂಕ್‌ ರಸ್ತೆ ಬಳಿಯ ಸೌತ್ ಎಂಡ್‌ ರೋಡ್‌ನಲ್ಲಿ ಜಲಮಂಡಳಿಯು ಒಳ ಚರಂಡಿ ಕಾಮಗಾರಿ ಕೈಗೆತ್ತಿ ಕೊಂಡಿದೆ. ನಾಲ್ಕು ತಿಂಗಳಿಂದ ನಡೆಯುತ್ತಿರುವ ಈ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಒಳಚರಂಡಿ ಪೈಪ್‌ಲೈನ್‌ ಅಳವಡಿಕೆಗಾಗಿ ಕಳೆದ ಮಾರ್ಚ್‌ನಲ್ಲಿ ರಸ್ತೆಯನ್ನು ಅಗೆದಿದ್ದಾರೆ. ಆದರೆ, ಈವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನೂ ಎರಡು–ಮೂರು ತಿಂಗಳವರೆಗೆ ಕೆಲಸ ನಡೆಯುವ ಸಾಧ್ಯತೆ ಇದೆ. ಮನೆಯ ಮುಂದೆಯೇ ರಾಶಿ ಮಣ್ಣು ಸುರಿದಿದ್ದು ಓಡಾಟಕ್ಕೆ ತುಂಬಾ ತೊಂದರೆಯಾಗುತ್ತಿದೆ’ ಎಂದು ನಿವಾಸಿ ರಮೇಶ್‌ ದೂರಿದರು.

‘ಮನೆ ಮುಂದೆಯೇ ಒಳಚರಂಡಿ ಅಳವಡಿಕೆಗೆ ಕಳೆದ ಜನವರಿಯಲ್ಲಿ ಕಾಮಗಾರಿ ನಡೆದಿತ್ತು. ಕಾಮಗಾರಿ ಪೂರ್ಣಗೊಳಿಸಿದ ನಂತರ ರಸ್ತೆಗೆ ಟಾರ್‌ ಕೂಡ ಹಾಕಲಾಗಿತ್ತು. ಆದರೆ, ಮಾರ್ಚ್‌ನಲ್ಲಿ ನೀರು ಸರಾಗವಾಗಿ ಹೋಗದೆ ಕಟ್ಟಿಕೊಂಡಿತು. ಏಪ್ರಿಲ್‌ನಿಂದ ಈ ಕಾಮಗಾರಿ  ಕೈಗೆತ್ತಿಕೊಳ್ಳಲಾಗಿದೆ’ ಎಂದು ಅವರು ಹೇಳಿದರು.

‘ಹನ್ನೊಂದು ಪೈಪ್‌ಗಳನ್ನು ಗುಂಡಿಯೊಳಗೆ ಹಾಕಲಾಗಿದೆ ಎಂದು ಕೆಲಸಗಾರರು ಹೇಳುತ್ತಾರೆ. ಆದರೆ, ನಾವಂತೂ ನೋಡಿಲ್ಲ. ನಿತ್ಯ ಬಂದು ಮೋಟರ್‌ ಹಾಕುತ್ತಾರೆ. ನೀರು ತೆಗೆದು ಆಚೆ ಬದಿಯ ಚರಂಡಿಗೆ ಬಿಡುತ್ತಿದ್ದಾರೆ. ಮಣ್ಣು ಅಗೆದು ರಸ್ತೆಯ ಬದಿ ಹಾಕಲಾಗಿದೆ. ಮಳೆ ಬಂದಾಗ ಆ ಮಣ್ಣು ಮತ್ತೆ ಗುಂಡಿಗೆ ಸೇರು ತ್ತಿದೆ’ ಎಂದು ನಿವಾಸಿ ಕುಸುಮಾ ಹೇಳಿದರು.

‘ಹೋಟೆಲ್‌ ಮುಂದೆಯೇ ಮಣ್ಣು ಹಾಕಿದ್ದಾರೆ. ದೂಳು ಮತ್ತು ವಾಸನೆಯ ಕಾರಣದಿಂದ ಹೆಚ್ಚು ಗ್ರಾಹಕರು ಬರುತ್ತಿಲ್ಲ. ನಮಗೆ ನಷ್ಟವಾಗುತ್ತಿದೆ’ ಎಂದು ಹೋಟೆಲ್‌ನ ಮಾಲೀಕರು ಅಳಲು ತೋಡಿಕೊಂಡರು.

‘ಮೆಜೆಸ್ಟಿಕ್‌ಗೆ ಇದೇ ಮಾರ್ಗದಲ್ಲಿ ಹೋಗಬೇಕು. ಐರಾವತ, ವೋಲ್ವೊ ಸೇರಿದಂತೆ ಎಲ್ಲ ಬಸ್ಸುಗಳು, ಬೃಹತ್‌ ವಾಹನಗಳು ಇದೇ ರಸ್ತೆಯಲ್ಲಿ ಸಾಗು ತ್ತವೆ. ರಸ್ತೆ ಕುಸಿದು ಗುಂಡಿ ಬೀಳುವ ಸಾಧ್ಯತೆ ಇದೆ’ ಎಂದು ನಿವಾಸಿ ಮನು ಆತಂಕ ವ್ಯಕ್ತಪಡಿಸಿದರು.

‘ಮೇಯರ್‌ ಗಂಗಾಂಬಿಕೆ, ಶಾಸಕ ದಿನೇಶ್‌ ಗುಂಡೂರಾವ್ ಬಂದು ಕಾಮಗಾರಿ ವೀಕ್ಷಿಸಿ ಹೋಗಿದ್ದಾರೆ. ಆದರೂ, ಬೇಗ ಮುಗಿಸುತ್ತಿಲ್ಲ’ ಎಂದು ಅವರು ಹೇಳಿದರು. 

ಕಾಮಗಾರಿ ವಿಳಂಬದ ಕುರಿತು ಮಾಹಿತಿ ಪಡೆಯಲು ಜಲಮಂಡಳಿ ಅಧಿಕಾರಿಗಳನ್ನು ಸಂಪರ್ಕಿಸಲಾಯಿತು. ಆದರೆ, ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ.

**

ಕಳೆದ ಶುಕ್ರವಾರ ಮಲ್ಲೇಶ್ವರ ಲಿಂಕ್‌ ರಸ್ತೆಯಲ್ಲಿ ಆಳೆತ್ತರದ ಗುಂಡಿ ಬಿದ್ದಿತ್ತು. ರಾತ್ರೋರಾತ್ರಿ ಇದನ್ನು ಮಣ್ಣಿನಿಂದ ಮುಚ್ಚಲಾಗಿದೆ. ರಸ್ತೆ ಮತ್ತೆ ಕುಸಿಯುವ ಸಾಧ್ಯತೆ ಇದೆ
- ಕುಸುಮಾ, ನಿವಾಸಿ

**

ಸುತ್ತು–ಮುತ್ತ ಇರುವವರಿಗೆ ದೂಳಿನ ಅಲರ್ಜಿ ಕಾಡುತ್ತಿದೆ. ಮೋಟರ್‌ನ ಶಬ್ದದಿಂದ ತಲೆನೋವು ಬರುತ್ತಿದೆ. ಒಂದು ಕಾಮಗಾರಿ ಮುಗಿಸಲು ನಾಲ್ಕು ತಿಂಗಳು ಬೇಕಾ?
-  ಮನು, ನಿವಾಸಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.