ಗುರುವಾರ , ಆಗಸ್ಟ್ 5, 2021
23 °C
ನಗರದಲ್ಲಿ ಸೋಂಕಿತರ ಸಂಖ್ಯೆ 11,361ಕ್ಕೆ ಏರಿಕೆ

800 ಕೋವಿಡ್‌ ಪ್ರಕರಣಗಳು ಪತ್ತೆ, ಒಂದೇ ವಾರದಲ್ಲಿ 6,806 ಜನರು ಸೋಂಕಿತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಮಂಗಳವಾರ ಒಂದೇ ದಿನ 800 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ 11,361ಕ್ಕೆ ಏರಿಕೆಯಾಗಿದೆ. 

ಕೇವಲ ವಾರದಲ್ಲಿ 6,806 ಮಂದಿ ಕೊರೊನಾ ಪೀಡಿತರಾಗಿ ಆಸ್ಪತ್ರೆ ಸೇರಿದ್ದಾರೆ. ಇದೇ ಅವಧಿಯಲ್ಲಿ 60 ಮಂದಿ ಸಾವಿಗೀಡಾಗಿದ್ದಾರೆ. ನಗರದಲ್ಲಿ ಸೋಂಕಿತರ ಸಂಖ್ಯೆ ಏಕಾಏಕಿ ಹೆಚ್ಚಳವಾದ ಪರಿಣಾಮ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಹಾಸಿಗೆಗಳ ಸಮಸ್ಯೆ ಉಂಟಾಗಿದೆ. ಇನ್ನೊಂದೆಡೆ ಹೊಸದಾಗಿ ವರದಿಯಾದ ಪ್ರಕರಣಗಳಲ್ಲಿ ವ್ಯಕ್ತಿಗಳಿಗೆ ಹೇಗೆ ಸೋಂಕು ತಗುಲಿತು ಎನ್ನುವುದೇ ಪತ್ತೆಯಾಗುತ್ತಿಲ್ಲ. 

ಇದರಿಂದಾಗಿ ಸೋಂಕಿತರೊಂದಿಗೆ ನೇರ ಸಂಪರ್ಕ ಹೊಂದಿದವರನ್ನು ಪತ್ತೆ ಮಾಡಿ, ಕ್ವಾರಂಟೈನ್‌ಗೆ ಒಳಪಡಿಸುವ ಪ್ರಕ್ರಿಯೆಯೂ ನಡೆಯುತ್ತಿಲ್ಲ. 

ಸದ್ಯ 9,395 ರೋಗಿಗಳು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚೇತರಿಸಿಕೊಂಡವರನ್ನು ಬೇಗ ಮನೆಗೆ ಕಳುಹಿಸಲಾಗುತ್ತಿದೆ. ಸೋಂಕು ಲಕ್ಷಣಗಳು ಗೋಚರಿಸದವರಿಗೆ ಮನೆಯಲ್ಲಿಯೇ ಆರೈಕೆಗೆ ಸೂಚಿಸಲಾಗುತ್ತಿದೆ. ಇದರಿಂದಾಗಿ ಆಸ್ಪತ್ರೆಯಿಂದ ಮನೆಗೆ ತೆರಳುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಮಂಗಳವಾರ ಒಂದೇ ದಿನ 265 ಮಂದಿ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ. ಸದ್ಯ 175 ರೋಗಿಗಳ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  

ನೆಫ್ರೋ ಯುರಾಲಜಿ ಸಂಸ್ಥೆಯಲ್ಲಿ ವೈದ್ಯರಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಡಯಾಲಿಸಿಸ್ ಹಾಗೂ ತುರ್ತು ಚಿಕಿತ್ಸೆಗಳನ್ನು ಮಾತ್ರ ನೀಡಲಾಗುತ್ತಿದೆ.

ವಿಕ್ಟೋರಿಯಾಗೆ ಸಚಿವರ ದಿಢೀರ್ ಭೇಟಿ

ಚಿಕಿತ್ಸೆ ಹಾಗೂ ರೋಗಿಗಳಿಗೆ ಕಳಪೆ ಆಹಾರ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ವಿಕ್ಟೋರಿಯಾ ಆಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದರು. ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ ಅವರು, ರೋಗಿಗಳ ಜತೆಗೆ ವಿಡಿಯೊ ಸಂವಾದ ನಡೆಸಿ ಮಾಹಿತಿ ಪಡೆದರು.

ಕೋವಿಡ್ ರೋಗಿಗಳ ಚಿಕಿತ್ಸೆ ಮತ್ತು ಸೌಲಭ್ಯಗಳ ವಿಷಯದಲ್ಲಿ ಲೋಪಗಳಿಗೆ ಅವಕಾಶವಿಲ್ಲದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಲು ಸೂಚಿಸಿದರು.

‘ಪ್ರತಿದಿನ ದಾಖಲಾಗುತ್ತಿರುವ ಸೋಂಕಿತರು ಮತ್ತು ಗುಣಮುಖರಾಗಿ ಬಿಡುಗಡೆ ಆಗುವವರ ಸಂಖ್ಯೆಯನ್ನು ಅಧಿಕೃತವಾಗಿ ತಿಳಿಸುವ ವ್ಯವಸ್ಥೆ ಮಾಡಬೇಕು’ ಎಂದು ಸೂಚಿಸಿದರು.

ಕಾಳಸಂತೆಯಲ್ಲಿ ಮಾರಾಟ: ಕೋವಿಡ್–19 ಚಿಕಿತ್ಸೆಗೆ ಬಳಸುವ ರೆಮಿಡಿಸ್ಪಿಯರ್‌ ಔಷಧವನ್ನು ಖಾಸಗಿಯವರು ವಿವಿಧ ಮೂಲಗಳಿಂದ ತರಿಸಿಕೊಂಡು ಕಾಳಸಂತೆಯಲ್ಲಿ ಮಾರುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ರೆಮಿಡಿಸ್ಪಿಯರ್‌ ಮಾತ್ರೆ ಮತ್ತು ಇಂಜೆಕ್ಷನ್‌ ರೂಪದಲ್ಲಿ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ. ಇದರಿಂದ ಸಾಕಷ್ಟು ಉತ್ತಮ ಫಲಿತಾಂಶ ಸಿಕ್ಕಿ, ರೋಗಿಗಳು ಗುಣಮುಖರಾಗುತ್ತಿದ್ದಾರೆ’ ಎಂದು ಸುಧಾಕರ್‌ ತಿಳಿಸಿದರು.

ಜಂಟಿ ಆಯುಕ್ತರಿಗೂ ಕೋವಿಡ್‌

ಬಿಬಿಎಂಪಿಯ ವಲಯವೊಂದರ ಜಂಟಿ ಆಯುಕ್ತರಿಗೂ ಕೋವಿಡ್‌ ದೃಢಪಟ್ಟಿದೆ. ಅವರೊಂದಿಗೆ ಅವರ ಆಪ್ತ ಸಹಾಯಕ ಹಾಗೂ ಅವರ ಕಚೇರಿಯ ಇನ್ನಿಬ್ಬರು ಸಹಾಯಕ ಸಿಬ್ಬಂದಿಗೆ ಸೋಂಕು ತಗುಲಿದೆ. ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ 25ಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ. ಕೆಲವರು ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ.

'ಮೃತ ಪೊಲೀಸ್ ಕುಟುಂಬಗಳಿಗೆ ₹1 ಕೋಟಿ ನೆರವು ನೀಡಿ'

ಬೆಂಗಳೂರು: ‘ಕೊರೊನಾ ಸೇವೆಯಲ್ಲಿ ನಿರತರಾಗಿರುವ ಪೊಲೀಸ್ ಸಿಬ್ಬಂದಿ ಮರಣ ಹೊಂದಿದರೆ, ಅವರ ಕುಟುಂಬಗಳಿಗೆ ಸರ್ಕಾರ ₹1 ಕೋಟಿ ಪರಿಹಾರ ನೀಡಬೇಕು’ ಎಂದು ಶಾಸಕ ಆರ್.ಮಂಜುನಾಥ್ ಒತ್ತಾಯಿಸಿದ್ದಾರೆ.

‘ಕೊರೊನಾದಿಂದ ರಾಜ್ಯದಲ್ಲಿ 5 ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದು, ಇವರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು. 450 ಪೊಲೀಸ್ ಸಿಬ್ಬಂದಿ ಸೋಂಕಿನಿಂದ ಬಳಲುತ್ತಿದ್ದು, ಇವರಿಗೆ ತುರ್ತಾಗಿ ಗುಣಮಟ್ಟದ ಚಿಕಿತ್ಸೆಯನ್ನು ಸರ್ಕಾರ ಒದಗಿಸಬೇಕು. ಇದಕ್ಕಾಗಿ ತಲಾ ₹5 ಲಕ್ಷ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

‘ವಿವಿಧ ಬೇಡಿಕೆಗಳ ಈಡೇರಿಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಇದೇ 10ರಂದು ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಅವರು ಪ್ರತಿಭಟನೆ ಮಾಡಿದ್ದೇ ಆದರೆ, ಆರೋಗ್ಯ ವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡಲೇ ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂದು ಮನವಿ ಮಾಡಿದ್ದಾರೆ.

***

ನಾವು ರೋಗದ ವಿರುದ್ಧ ಹೋರಾಟ ಮಾಡುತ್ತಿದ್ದೇವೆಯೇ ಹೊರತು, ರೋಗಿಯ ವಿರುದ್ಧವಲ್ಲ. ಸೋಂಕಿತರನ್ನು ಅನುಕಂಪದಿಂದ ನೋಡಬೇಕು
- ಡಾ.ಕೆ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು