ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿನಿ ಲಾಲ್‌ಬಾಗ್‌’ಗೆ ಇನ್ನೂ ಸಿಕ್ಕಿಲ್ಲ ಮುಕ್ತಿ

ಸಾಲುತ್ತಿಲ್ಲ ಅನುದಾನ: ವೇಗ ಪಡೆದಿಲ್ಲ ನಿರ್ಮಾಣ
Last Updated 9 ಮೇ 2019, 19:59 IST
ಅಕ್ಷರ ಗಾತ್ರ

ಬೆಂಗಳೂರು: ವೈಟ್‌ಫೀಲ್ಡ್‌ ಬಳಿಯ ಕನ್ನಮಂಗಲದಲ್ಲಿ ಮಿನಿ ಲಾಲ್‌ಬಾಗ್‌ ನಿರ್ಮಾಣ ಕಾರ್ಯ ಅನುದಾನದ ಕೊರತೆಯಿಂದಾಗಿ ಆಮೆಗತಿಯಲ್ಲಿ ಸಾಗುತ್ತಿದ್ದು, ಮೊದಲ ಹಂತದ ಕಾಮಗಾರಿಯೂ ಮುಗಿದಿಲ್ಲ. ಇದರಿಂದಾಗಿ, ನಗರದ ಪಶ್ಚಿಮ ಭಾಗದ ನಿವಾಸಿಗಳು ಉದ್ಯಾನದಲ್ಲಿ ಅಡ್ಡಾಡಲು ಇನ್ನೂ 8 ವರ್ಷ ಕಾಯಬೇಕಾಗಿದೆ.

ಉದ್ಯಾನ ನಿರ್ಮಾಣಕ್ಕಾಗಿ ಅ.ನ.ಯಲ್ಲಪ್ಪರೆಡ್ಡಿ ನೇತೃತ್ವದ ತಜ್ಞರ ಸಮಿತಿಯು 2018ರ ಮೇ ತಿಂಗಳಲ್ಲಿ ಕ್ರಿಯಾಯೋಜನೆ ರೂಪಿಸಿತ್ತು. ಇದಕ್ಕಾಗಿ 150 ಜಾತಿಯ 3,500 ತೆಂಗಿನಮರಗಳಿರುವ 70 ಎಕರೆ ತೋಟವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಕ್ರಿಯಾಯೋಜನೆ ರೂಪಿಸಿ ಒಂದು ವರ್ಷ ಗತಿಸಿದ್ದು, ₹50 ಲಕ್ಷದಂತೆ ಹಂತ ಹಂತವಾಗಿ ಇಲ್ಲಿಯವರೆಗೆ ₹1.25 ಕೋಟಿ ಅನುದಾನ ಮಾತ್ರ ಬಿಡುಗಡೆಯಾಗಿದೆ. ಇದರಿಂದಾಗಿ ಮೊದಲ ಹಂತದ ಕಾಮಗಾರಿಯೂ ಮುಗಿದಿಲ್ಲ.

ಏನೇನು ಕೆಲಸಗಳಾಗಿವೆ?: ಇಲ್ಲಿರುವ ತೆಂಗಿನ ಮರಗಳಿಗೆ ಸಾವಯವ ಗೊಬ್ಬರ ಬಳಸಲಾಗುತ್ತಿದೆ. ರಕ್ಷಣೆಗಾಗಿ ತೋಟದ ಸುತ್ತ ಆವರಣ ಗೋಡೆ ನಿರ್ಮಿಸಲಾಗಿದೆ. ತೋಟದೊಳಗೆ ಒಂದೂವರೆ ಕಿ.ಮೀ ಪಾದಚಾರಿ ಮಾರ್ಗ ಸಿದ್ಧಗೊಂಡಿದೆ. ಮಳೆನೀರು ಸಂಗ್ರಹಕ್ಕಾಗಿ ಮೂರು ಕಡೆ ಹೊಂಡಗಳನ್ನು ನಿರ್ಮಿಸಲಾಗಿದೆ. ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ.

‘ನೆರಳು ಉದ್ಯಾನವನ್ನು ನಿರ್ಮಿಸಲಾಗುತ್ತದೆ. ಅಲ್ಲಿ ಸುಗಂಧ ಬೀರುವ ಸಸ್ಯಗಳನ್ನು ನೆಡಲಾಗುತ್ತದೆ. ಅದರ ನೆರಳಿನಲ್ಲಿ ಔಷಧಿ ಸಸ್ಯಗಳನ್ನು ಬೆಳೆಸಲಾಗುತ್ತದೆ. ಜತೆಗೆ, ವಿದೇಶದ ಸಸ್ಯಗಳನ್ನೂ ನೆಡಬೇಕಿದೆ. ಆ ತೋಟದಲ್ಲಿರುವ ಸಸ್ಯಗಳ ಕುರಿತು ಮಾಹಿತಿ ನೀಡಲು ಕೇಂದ್ರ ಸ್ಥಾಪಿಸಬೇಕಿದೆ. ಸಸ್ಯೋತ್ಪಾದನ ಕೇಂದ್ರ ತಲೆ ಎತ್ತಬೇಕಿರುವುದರಿಂದ ಮಿನಿ ಲಾಲ್‌ಬಾಗ್‌ ಸಿದ್ಧವಾಗಲು ಇನ್ನೂ 8 ವರ್ಷ ಬೇಕು’ ಎಂದು ಹೇಳುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು

‘ಹಂತ–ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಯತ್ನಿಸುತ್ತೇವೆ’ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತುಮಕೂರಿನ ದೊಡ್ಡಸಾಗರ, ಚಿಕ್ಕಬಳ್ಳಾಪುರದ ಅನ್ನಕುನೂರು, ಮೈಸೂರಿನ ದತ್ತಗಳ್ಳಿ, ಉತ್ತರ ಕನ್ನಡದ ತರಕನಹಳ್ಳಿ ಹಾಗೂ ಬೆಂಗಳೂರಿನ ಕನ್ನಮಂಗಲದಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಚಿಕ್ಕ ತೋಟಗಳ ನಿರ್ಮಾಣ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ 2011ರಲ್ಲಿ ಪ್ರಕಟಿಸಿತ್ತು.

ಸಿಎಸ್‌ಆರ್‌ ಬಳಕೆಗೆ ಚಿಂತನೆ
‘ಸರ್ಕಾರದ ಅನುದಾನವೊಂದನ್ನೇ ನೆಚ್ಚಿಕೊಂಡರೆ, ಆಗುವುದಿಲ್ಲ. ಆದ್ದರಿಂದ ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ’ ಎಂದು ಅ.ನ.ಯಲ್ಲಪ್ಪ ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT