ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮಹಾನ್‌ನಿಂದ 350 ಹಾಸಿಗೆ ವ್ಯವಸ್ಥೆ

ಕೋವಿಡ್‌ ಚಿಕಿತ್ಸೆ–ಖಾಸಗಿ ಆಸ್ಪತ್ರೆಗಳಲ್ಲಿನ ವ್ಯವಸ್ಥೆ ಪರಿಶೀಲಿಸಿದ ಪ್ರತಾಪಸಿಂಹ
Last Updated 20 ಜುಲೈ 2020, 14:05 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಸೇಂಟ್‌ ಜೋಸೆಫ್‌ ಆಸ್ಪತ್ರೆ, ನಾರಾಯಣ ಆಸ್ಪತ್ರೆ ಹಾಗೂ ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳಲ್ಲಿ ಫೀವರ್‌ ಕ್ಲಿನಿಕ್‌ ತೆರೆಯಲಾಗಿದೆ.

ಸಂಸದ ಪ್ರತಾಪಸಿಂಹ ಅವರು ಸೋಮವಾರ ಈ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೋಂಕಿತರ ಚಿಕಿತ್ಸೆಗಾಗಿ ಅಗತ್ಯ ಸಂದರ್ಭದಲ್ಲಿ ಹಾಸಿಗೆ ದೊರಕಿಸಿಕೊಡುವುದಾಗಿ ಈ ಮೂರೂ ಆಸ್ಪತ್ರೆಗಳ ಆಡಳಿತ ಮಂಡಳಿಯವರು ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಖಾಸಗಿ ಆಸ್ಪತ್ರೆಗಳವರು ‘ಮಹಾನ್‌’ ಸಂಘಟನೆ ಮಾಡಿಕೊಂಡಿದ್ದಾರೆ. ಅದರಡಿ ವಿಕ್ರಂ ಆಸ್ಪತ್ರೆ, ಬಿ.ಎಂ.ಆಸ್ಪತ್ರೆ, ಸೇಂಟ್‌ ಜೋಸೆಫ್‌ ಆಸ್ಪತ್ರೆ, ನಾರಾಯಣ ಆಸ್ಪತ್ರೆ ಸೇರಿ ಸುಮಾರು 350 ಹಾಸಿಗೆ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ, ಬೃಂದಾವನ ಆಸ್ಪತ್ರೆಯವರು 75 ಹಾಸಿಗೆ ಕೊಡಲು ಸಿದ್ಧರಿದ್ದಾರೆ ಎಂದರು.

‘ಸೇಂಟ್‌ ಜೋಸೆಫ್‌ ಆಸ್ಪತ್ರೆಯಲ್ಲಿ ಒಬ್ಬ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ’ ಎಂದು ಹೇಳಿದರು.

‘ನರಸಿಂಹರಾಜ ಕ್ಷೇತ್ರದಲ್ಲಿ ವೈರಾಣುವಿನ ಸಾಂದ್ರತೆ ಹೆಚ್ಚಿದೆ. ಈ ಭಾಗದಲ್ಲಿ ಅತಿ ಹೆಚ್ಚು ಸೋಂಕಿತರಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚು ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕ್ಷೇತ್ರದ ಜನರ ರಕ್ಷಣೆಗಾಗಿ ಈ ಕ್ರಮ ಕೈಗೊಂಡಿದ್ದೇವೆ. ಅಪಪ್ರಚಾರ ಮಾಡುವುದಾಗಲಿ, ಹಿಂಜರಿಯುವುದಾಗಲಿ ಮಾಡಬಾರದು. ಜನರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ಮೈಸೂರಿಗೆ 3,000 ರಿಂದ 3,500 ರ‍್ಯಾಪಿಡ್‌ ಆ್ಯಂಟಿಜೆನ್‌ ಕಿಟ್‌ಗಳು ಬೇಕು ಎಂದು ರಾಜ್ಯ ಸರ್ಕಾರವನ್ನು ಕೇಳಿದ್ದೇವೆ. ಕಿಟ್‌ಗಳನ್ನು ಸದ್ಯದಲ್ಲೇ ಕಳುಹಿಸಿ ಕೊಡಲಿದ್ದಾರೆ’ ಎಂದು ತಿಳಿಸಿದರು.

ನರಸಿಂಹರಾಜ ಕ್ಷೇತ್ರದ ಜವಾಬ್ದಾರಿಯನ್ನು ಸಂಸದರಿಗೆ ವಹಿಸಿರುವುದನ್ನು ಪ್ರಶ್ನೆ ಮಾಡಿರುವ ಕಾಂಗ್ರೆಸ್‌ ಮುಖಂಡ ವಾಸು ಅವರಿಗೆ ತಿರುಗೇಟು ನೀಡಿದ ಪ್ರತಾಸಸಿಂಹ, ‘ಕೋವಿಡ್ ಪ್ರಾರಂಭದಿಂದಲೂ ಈ ಕ್ಷೇತ್ರದ ಶಾಸಕ ತನ್ವೀರ್‌ ಸೇಠ್‌ ಯಾವುದೇ ಸಭೆಗೆ ಬಂದಿಲ್ಲ. ಸೋಂಕಿತರಿಗೆ ಹಾಸಿಗೆ ಕೊಟ್ಟು, ಆಹಾರ ಕೊಟ್ಟರೆ ಆಗುವುದಿಲ್ಲ.ಈ ರೀತಿಯ ವ್ಯರ್ಥ ಪ್ರಲಾಪನೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ’ ಎಂದರು.

‘ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ನೇತೃತ್ವದಲ್ಲಿ ಟಾಸ್ಕ್‌ ಫೋರ್ಸ್‌ ರಚಿಸಲಾಗಿದೆ. ತನ್ವೀರ್‌ ಸೇಠ್‌ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ, ನರಸಿಂಹರಾಜ ಕ್ಷೇತ್ರದ ಕೋವಿಡ್‌ ಉಸ್ತುವಾರಿಯನ್ನು ನನಗೆ ನೀಡಲಾಗಿದೆ. ಹೀಗಾಗಿ, ಈ ಭಾಗದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ’ ಎಂದು ನುಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಲೆಸ್ಲಿ ಮೊರಾಸ್, ಆಸ್ಪತ್ರೆಯ ಆಡಳಿತಾಧಿಕಾರಿ ಸಂಜಯ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT