ಸರ್ಕಾರಿ ವೈದ್ಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ: ಪ್ರತಿಭಟನೆ
ಬೆಂಗಳೂರು: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ ಜಾರಿ ತರುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ವೈದ್ಯಕೀಯ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಈ ಸಂಬಂಧ ಪ್ರಸ್ತಾವನೆ ಮಂಡಿಸಲಾಗಿತ್ತು. ಮುಂಬರುವ ಶೈಕ್ಷಣಿಕ ವರ್ಷದಿಂದ ಶೇ.10 ರಷ್ಟು ಸೀಟುಗಳನ್ನು ಎನ್‌ಆರ್‌ಐ ಕೋಟಾದಡಿ ವಿತರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇದರಿಂದ ಬಡ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ಸೀಟುಗಳನ್ನು ಕಡಿತ ಮಾಡುವ ಸಾಧ್ಯತೆ ಇದೆ ಎಂದು ವೈದ್ಯಕೀಯ ವಿದ್ಯಾರ್ಥಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಈಗಾಗಲೇ ಎನ್‌ಆರ್‌ಐ ಕೋಟಾ ಇದ್ದು, ಈ ಮೂಲಕ ಭಾರಿ ಪ್ರಮಾಣದಲ್ಲಿ ಹಣ ಮಾಡುತ್ತಿವೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಎನ್‌ಆರ್‌ಐ ಕೋಟಾದಡಿ ಹಣ ಮಾಡಲು ಮುಂದಾಗಿದೆ. ಸರ್ಕಾರದ ಈ ನಿರ್ಧಾರದಿಂದ ಸೀಟುಗಳು ಸಂಖ್ಯೆ ಕಡಿತವಾಗಿ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ವಿದ್ಯಾರ್ಥಿ ರಾಜೇಶ್ ತಿಳಿಸಿದರು.
ಬೆಳಗಾವಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಅಂದಿನ ವೈದ್ಯ ಶಿಕ್ಷಣ ಸಚಿವರು ಸರ್ಕಾರಿ ವೈದ್ಯಕೀಯ ಮತ್ತು ದಂತ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ ಜಾರಿ ಮಾಡಲು ಶಾಸಕರ ಬೆಂಬಲ ಕೋರಿದ್ದರು. ಎನ್‌ಆರ್‌ಐ ಕೋಟಾದಡಿ ಎಂಬಿಬಿಎಸ್‌ಗೆ ಶೇ 300 ರಷ್ಟು ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಶೇ 800 ರಷ್ಟು ಹೆಚ್ಚಳ ಶುಲ್ಕವನ್ನು ಪಡೆಯಬಹುದು ಎಂದೂ ಹೇಳಿದ್ದರು. ಇದು ಸಂವಿಧಾನ ವಿರೋಧಿ ಎಂದು ಅವರು ಬಣ್ಣಿಸಿದರು.
ರಾಜ್ಯದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು 2000 ಸೀಟುಗಳು ಇದ್ದು, ಸುಮಾರು 200 ಸೀಟುಗಳನ್ನು ಎನ್‌ಆರ್‌ಐ ಕೋಟಾಗಳ ಮೂಲಕ ನೀಡಲು ಸರ್ಕಾರ ಮುಂದಾಗಿದೆ. ಇದರ ವಿರುದ್ಧ ರಾಜ್ಯದ ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಹೋರಾಟ ಆರಂಭಿಸಿದ್ದಾರೆ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿಗಳ ಸಂಘಟನೆ ಬೆಂಗಳೂರು ಜಿಲ್ಲಾ ಉಪಾಧ್ಯಕ್ಷೆ ಸಿತಾರ ತಿಳಿಸಿದರು.
ಹೊರೆಯಾದ ಶುಲ್ಕ ಹೆಚ್ಚಳ: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶುಲ್ಕವನ್ನು ₹17,000 ದಿಂದ ₹ 50 ಸಾವಿರಕ್ಕೆ (ಅಂಡರ್ ಗ್ರಾಜುಯೇಟ್) ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕವನ್ನು ₹50 ಸಾವಿರದಿಂದ ₹ 3.5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳ ಮೇಲೆ ದೊಡ್ಡ ಹೊರೆಯಾಗಿದೆ ಎಂದು ಅವರು ಹೇಳಿದರು.
ಸರ್ಕಾರ ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು. ಇದಕ್ಕಾಗಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಇದೇ 9 ರಂದು ಬೆಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.