ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್‌ಗೆ ಅನುಮತಿ: ಅಬಕಾರಿ ಉಪ ಆಯುಕ್ತರ ಕಚೇರಿಗೆ ಮುತ್ತಿಗೆ

Last Updated 9 ಜುಲೈ 2019, 19:15 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ಚಿಕ್ಕಗೊಲ್ಲರಹಟ್ಟಿಯಲ್ಲಿ ಬಾರ್ ಆ್ಯಂಡ್ ರೆಸ್ಟೊರೆಂಟ್ ತೆರೆಯಲು ಅನುಮತಿ ನೀಡಿರುವುದನ್ನು ವಿರೋಧಿಸಿ ಅಲ್ಲಿನ ನಾಗರಿಕರು ಅಬಕಾರಿ ಉಪ ಆಯುಕ್ತರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಾಜ ಸೇವಕ ಎಚ್.ಡಿ.ಶಿವಲಿಂಗಯ್ಯ, ’ಯಾವುದೇ ಬಾರ್ ತೆರೆಯುವ ಮೊದಲು ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಆದರೆ, ಚಿಕ್ಕಗೊಲ್ಲರಹಟ್ಟಿಯಲ್ಲಿ ಮಾಲೀಕರ ಒತ್ತಾಯಕ್ಕೆ ಮಣಿದು ಏಕಾಏಕಿ ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಲಾಗಿದೆ. ಈ ಮೂಲಕ ಸಾರ್ವಜನಿಕರ ನೆಮ್ಮದಿಯ ಜೀವನಕ್ಕೆ ಕೊಡಲಿ ಏಟು ನೀಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಾರ್ ತೆರೆಯಲು ಉದ್ದೇಶಿಸಿರುವ ಅಂಗಡಿಯ ಮುಂಭಾಗದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಅಂಗನವಾಡಿ ಕೇಂದ್ರ ಇದೆ. ಶುದ್ಧ ನೀರಿನ ಘಟಕ, ಪಕ್ಕದಲ್ಲಿಯೇ ದೇವಸ್ಥಾನ, ಗಾರ್ಮೆಂಟ್ಸ್ ಕಾರ್ಖಾನೆ ಇದೆ. ಜನವಸತಿ ಪ್ರದೇಶದಲ್ಲಿ ಅನುಮತಿ ನೀಡಿರುವುದು ಸರಿಯಲ್ಲ. ಕೂಡಲೇ ಪರವಾನಗಿಯನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ಗ್ರಾಮದ ಮುಖಂಡ ತಮ್ಮಯ್ಯ, ‘ಬಾರ್ ಆರಂಭಿಸಲು ಅನುಮತಿ ನೀಡುವುದಿಲ್ಲ ಎಂದು ಅಬಕಾರಿ ಸೂಪರಿಂಟೆಂಡೆಂಟ್ ಭರವಸೆ ನೀಡಿದ್ದರು. ಆದರೆ, ಬಳಿಕ ತರಾತುರಿಯಲ್ಲಿ ಅನುಮತಿ ನೀಡಿರುವುದು ಅಕ್ಷಮ್ಯ’ ಎಂದರು.

ಗ್ರಾಮ ಪಂಚಾಯಿತಿ ಸದಸ್ಯೆ ಸಿದ್ದಗಂಗಮ್ಮ ತಮ್ಮಯ್ಯ, ‘ಬಾರ್ ಆರಂಭವಾದರೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಲಿದೆ. ಪರಿಸರದಲ್ಲಿ ಗಲಾಟೆ ಹೆಚ್ಚಾಗಲಿದೆ. ಮಕ್ಕಳಿಗೆ ಪಾಠ ಕೇಳಲು ಆಗುವುದಿಲ್ಲ’ ಎಂದರು.

ಉಪ ಆಯುಕ್ತ ಡಾ.ಬಿ.ಆರ್.ಹಿರೇಮಠ ಪ್ರತಿಕ್ರಿಯಿಸಿ, ‘ಚಿಕ್ಕಗೊಲ್ಲರಹಟ್ಟಿಯಲ್ಲಿ ಬಾರ್ ತೆರೆಯಲು ಜೂನ್ 30ರಂದು ಅನುಮತಿ ನೀಡಲಾಗಿತ್ತು. ಬಾರ್‌ಗೆ ಅನುಮತಿ ನೀಡಬಾರದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇಲ್ಲಿ ನೀಡಿರುವ ಅನುಮತಿ ರದ್ದುಪಡಿಸಿ ಬೇರೆ ಜಾಗದಲ್ಲಿ ಬಾರ್‌ ತೆರೆಯಲು ಅನುಮತಿ ನೀಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT