ಭಾನುವಾರ, ಸೆಪ್ಟೆಂಬರ್ 22, 2019
23 °C
ಬೆಂಗಳೂರಿನ ಜೆ.ಪಿ ನಗರದಲ್ಲಿ ಘಟನೆ

ಹಾವೇರಿಯ ಮಹಿಳಾ ಟೆಕಿ ಆತ್ಮಹತ್ಯೆ: ಪತಿ ವಶಕ್ಕೆ

Published:
Updated:

ಬೆಂಗಳೂರು: ಜೆ.ಪಿ.ನಗರದ ಮೂರನೇ ಹಂತದಲ್ಲಿ ಸುಪ್ರಿಯಾ (31) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘‍ಪತಿ ಅಕ್ಷಯ್‌ ಕಿರುಕುಳದಿಂದ ಬೇಸತ್ತು ಸುಪ್ರಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಪೋಷಕರು ದೂರು ನೀಡಿದ್ದಾರೆ. ಅಕ್ಷಯ್‌ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ಹುಬ್ಬಳ್ಳಿಯ ಸುಪ್ರಿಯಾ ಹಾಗೂ ಹಾವೇರಿಯ ಅಕ್ಷಯ್ ಪರಸ್ಪರ ಪ್ರೀತಿಸಿ ಪೋಷಕರ ವಿರೋಧದ ನಡುವೆಯೇ ಮದುವೆಯಾಗಿದ್ದರು. ಇಬ್ಬರೂ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ನಗರದ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿಗೆ ಒಂದು ವರ್ಷದ ಮಗು ಇದೆ’ ಎಂದು ಜೆ.ಪಿ.ನಗರ ಪೊಲೀಸರು ತಿಳಿಸಿದರು.

‘ಇತ್ತೀಚೆಗೆ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿತ್ತು. ಭಾನುವಾರ ಮಧ್ಯಾಹ್ನ ಮಗುವಿಗೆ ಊಟ ಮಾಡಿಸಿದ್ದ ಸುಪ್ರಿಯಾ, ಅತ್ತೆಯ ಕೈಗೆ ಮಗುವನ್ನು ಕೊಟ್ಟು ತಮ್ಮ ಕೊಠಡಿಗೆ ತೆರಳಿದ್ದರು. ರಾತ್ರಿಯಾದರೂ ಹೊರಗೆ ಬಂದಿರಲಿಲ್ಲ. ಅನುಮಾನಗೊಂಡ ಸಂಬಂಧಿಕರು, ಕೊಠಡಿಗೆ ಹೋಗಿ ನೋಡಿದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗಿದೆ’ ಎಂದು ಮಾಹಿತಿ ನೀಡಿದರು.

ನಿತ್ಯವೂ ಕಿರುಕುಳ: ‘ಸುಪ್ರಿಯಾಗೆ ಪತಿ ಹಾಗೂ ಅವರ ಮನೆಯವರು ನಿತ್ಯವೂ ಕಿರುಕುಳ ನೀಡುತ್ತಿದ್ದರು. ಈ ವಿಚಾರವನ್ನು ಮಗಳು ನಮ್ಮ ಬಳಿ ಹೇಳಿಕೊಂಡಿದ್ದಳು ಎಂದು ಪೋಷಕರು ದೂರಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

Post Comments (+)