ತುಮಕೂರು: ದೇವೇಗೌಡರ ಮೇಲೆ ಆಸೆ, ಮೋದಿ ಬಗ್ಗೆ ಪ್ರೀತಿ

ಶನಿವಾರ, ಏಪ್ರಿಲ್ 20, 2019
24 °C
ಅಖಾಡದಲ್ಲೊಂದು ಸುತ್ತು

ತುಮಕೂರು: ದೇವೇಗೌಡರ ಮೇಲೆ ಆಸೆ, ಮೋದಿ ಬಗ್ಗೆ ಪ್ರೀತಿ

Published:
Updated:
Prajavani

ಹಾಸನ ತೊರೆದು ತುಮಕೂರಿಗೆ ಕಾಲಿಟ್ಟಿರುವ ಎಚ್‌.ಡಿ.ದೇವೇಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಪರ ಈ ಕ್ಷೇತ್ರದ ಪ್ರಬಲ ಎರಡು ಜಾತಿಗಳ ಮತಗಳು ಕಡ್ಡಿ ತುಂಡು ಮಾಡಿದಂತೆ ವಿಭಜನೆಯಾಗಿರುವುದು ಪಯಣದ ಹಾದಿಗುಂಟ ಢಾಳಾಗಿ ಕಣ್ಣಿಗೆ ರಾಚುತ್ತದೆ. ಮಾತಿನಲ್ಲೂ ಜಾತಿಯ ಗುಂಗು ಗುನುಗುತ್ತದೆ.

ಇದನ್ನೂ ಓದಿ: ಕ್ಷೇತ್ರ ನೋಟ– ದೇವೇಗೌಡ–ಬಸವರಾಜು ಜಿದ್ದಾಜಿದ್ದಿ

‘ದೇಶಕ್ಕೆ ಮೋದಿ, ತುಮಕೂರಿಗೆ ಗೌಡರು’ ಎಂಬ ಮಾತುಗಳನ್ನು ಬಲು ಎಚ್ಚರದಿಂದಲೇ ಇಲ್ಲಿನ ಜನ ಆಡುತ್ತಾರೆ. ಯಡಿಯೂರಪ್ಪನವರ ಕೈ ಬಲಪಡಿಸಬೇಕಾದರೆ ‘ನಮ್ಮ’ ಮತಗಳು ಅತ್ತಿತ್ತ ಹೋಗಬಾರದು ಎಂಬ ಭಾವನೆಯೂ ಹರಿದಾಡುತ್ತಿದೆ. ಒಕ್ಕಲಿಗರ ಉಪಪಂಗಡವಾದ ಕುಂಚಟಿಗರ ಸಾರಾಸಗಟು ಮತಗಳು ಗೌಡರಿಗೆ ಬೀಳುವುದಿಲ್ಲ ಎಂಬ ಅಭಿಮತವೂ ಇಲ್ಲಿ ಕಿವಿಗೆ ಬೀಳುತ್ತದೆ. ‘ಒಕ್ಕಲಿಗರಾದ ಕುಮಾರಣ್ಣ ಮುಖ್ಯಮಂತ್ರಿಯಾಗಿದ್ದಾರೆ. ಬಿಜೆಪಿ ಹೆಚ್ಚು ಸ್ಥಾನ ಗೆದ್ದರೆ, ಸರ್ಕಾರ ಬೀಳಲಿದೆ. ಅದಕ್ಕೆ ಅವಕಾಶ ಕೊಡಬಾರದು’ ಎಂದು ಉಸುರಲು ಜಾತಿ ಪ್ರೇಮಿಗಳು ಮರೆಯಲಿಲ್ಲ.

ಹಾಲಿ ಸಂಸದ ಕಾಂಗ್ರೆಸ್‌ನ ಎಸ್.ಪಿ. ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಿದ ಕೊರಗು, ಒಳಬೇಗುದಿ ಅನೇಕರಲ್ಲಿ ಇದೆ. ‘ಮೈತ್ರಿ ಇದ್ದಾಗ ಇದೆಲ್ಲ ಅನಿವಾರ್ಯ’ ಎಂಬ ಸಮರ್ಥನೆಯೂ ಇದಕ್ಕೆ ಜತೆಯಾಗಿದೆ. ‘ದೇವೇಗೌಡರ ಕೊನೆಯ ಚುನಾವಣೆ ಇದಾಗಿದ್ದು, ‘ಮಾಜಿ ಪ್ರಧಾನಿ’ಯನ್ನು ಸೋಲಿಸಿದ ಪಾಪಕ್ಕೆ ಗುರಿಯಾಗುವುದು ಬೇಡ. ಅವರು ಗೆದ್ದರೆ ಮಾಜಿ ಪ್ರಧಾನಿ ಕ್ಷೇತ್ರ ಎಂಬ ಹೆಮ್ಮೆಯೂ ನಮ್ಮದಾಗಲಿದೆ’ ಎಂಬ ಮಾತುಗಳು ಅಲ್ಲಲ್ಲಿ ಹರಿದಾಡಿದವು.

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಸಂದರ್ಶನ– ‘ತುಮಕೂರನ್ನು ದೇಶದ ಮಾದರಿ ಜಿಲ್ಲೆ ಮಾಡುವೆ’

ಕೊಳಾಲ ಸಂತೆಯಲ್ಲಿ ಮಾತಿಗೆ ಸಿಕ್ಕಿದ ರಾಮಕೃಷ್ಣಪ್ಪ, ‘ನಾವೆಲ್ಲ ಮೊದಲಿನಿಂದಲೂ ಜೆಡಿಎಸ್‌. ಮೊಮ್ಮಕ್ಕಳನ್ನು ಆಡಿಸಿಕೊಂಡು ಇರಬೇಕಾದ ವಯಸ್ಸಿನಲ್ಲಿ ಗೌಡರಿಗೆ ಚುನಾವಣೆ ಬೇಕಿರಲಿಲ್ಲ’ ಎಂದು ಅಸಮಾಧಾನ ಹೊರಹಾಕಿದರು. ‘ಗೌಡರು ಗೆದ್ದರೆ ಚೆನ್ನಮ್ಮ ಅವರನ್ನು ಗೆಲ್ಲಿಸಿ ವಿದೇಶಾಂಗ ಸಚಿವೆಯನ್ನಾಗಿ ಮಾಡುತ್ತಾರೆ. ದೇಶಕ್ಕೆ ಬಿಜೆಪಿ ಬೇಕು. ಬಸವರಾಜು ಮುಖನೇ ನೋಡಿಲ್ಲ; ಮೋದಿ ಮುಖ ನೋಡಿ ವೋಟು ಹಾಕುತ್ತೇವೆ’ ಎಂದರು ಕೆ.ಎನ್‌. ರಮೇಶ.

ಸಂತೆಗೆ ಬಂದವರಿಗೆ ಟೀ ಮಾಡಿಕೊಡುವ ಗಡಿಬಿಡಿಯಲ್ಲಿದ್ದ ರಂಗನಾಥಪ್ಪ, ‘ನಾನು ಮೋದಿಯವರ ಗಾಣಿಗ ಜಾತಿಯವನೇ. ಆದರೂ ದೇವೇಗೌಡರು ಈ ವಯಸ್ಸಿನಲ್ಲಿ ಚುನಾವಣೆಗೆ ನಿಂತಿದ್ದಾರೆ. ಒಂದು ಸಾರಿ ಗೆಲ್ಲಿಸಿಬಿಡೋಣ ಬಿಡಿ’ ಎಂದರು.

‘ಮೋದಿಯವರು ಯುವಕರಿಗೆ ಏನೂ ಮಾಡಿಲ್ಲ. ದೇವೇಗೌಡರು ಪ್ರಧಾನಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಮೋದಿ–ಗೀದಿ ಎಲ್ಲ ಇಲ್ಲಿ ನಡೆಯಲ್ಲ’ ಎಂದು ಟಪಟಪ ಎಂದು ಮಾತು ಉದುರಿಸಿದರು ದಲಿತ ಸಮುದಾಯಕ್ಕೆ ಸೇರಿದ 19 ವರ್ಷದ ನರೇಂದ್ರ. ತೀತಾದಲ್ಲಿ ಗ್ಯಾರೇಜ್ ಎದುರು ಕುಳಿತಿದ್ದ ವರ್ಜಿಗುರಕಿಯ ನರಸಿಂಹಯ್ಯ ‘ಬಸವರಾಜು ನಾಲ್ಕು ಸಾರಿ ಗೆದ್ದಿದ್ದಾರೆ. ತುಮಕೂರಿಗೆ ಏನು ಮಾಡಿದ್ದಾರೆ. ಮೋದಿ ವಾರಾಣಸಿಯಲ್ಲಿ ಗೆಲ್ಲಲಿ ಬಿಡಿ. ಇಲ್ಲಿ ಗೌಡರನ್ನೇ ಗೆಲ್ಲಿಸುತ್ತೇವೆ’ ಎಂದು ಏರುಧ್ವನಿಯಲ್ಲೇ ಹೇಳಿದರು.

‘ಮೋದಿ ಯಾರು; ನಂಗೆ ಗೊತ್ತಿಲ್ಲಪ್ಪ. ಕುಮಾರಣ್ಣಂಗೆ ನಮ್ಮ ವೋಟು’ ಎಂದು ಗೊರವನಹಳ್ಳಿಯಲ್ಲಿ ಹೂವು ಮಾರುತ್ತಿದ್ದ ಗೀತಾ ತಮ್ಮ ಅನಿಸಿಕೆ ಹಂಚಿಕೊಂಡರು. ಕೊರಟಗೆರೆಯಲ್ಲಿ ವಿದ್ಯುತ್ ಸಲಕರಣೆಗಳ ಅಂಗಡಿ ಇಟ್ಟುಕೊಂಡಿರುವ ಇನಾಯತ್ ಉಲ್ಲಾ ಷರೀಫ್‌, ‘86 ವರ್ಷ ಸಾರ್ ಗೌಡ್ರಿಗೆ. ಅವರು ಇಲ್ಲಿಂದ ಎಂ.ಪಿಯಾಗಲಿ ಬಿಡಿ’ ಎಂದರು.

ಇದನ್ನೂ ಓದಿ: ಎಚ್‌.ಡಿ.ದೇವೇಗೌಡ ಸಂದರ್ಶನ- ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ನೀರಿನ ಭರವಸೆ

ದಿನಸಿ ಅಂಗಡಿ ಇಟ್ಟುಕೊಂಡಿರುವ ಪುಟ್ಟರಾಜು, ‘86 ವರ್ಷದ ಮುದುಕನ ಕೈಯಲ್ಲಿ ದೇಶದ ರಕ್ಷಣೆ ಹೇಗೆ ಸಾಧ್ಯ? ಮೋದಿ ಮಾತ್ರ ದೇಶ ಕಾಯಬಲ್ಲರು. ಇಲ್ಲಿ ಬಂದು ನಿಂತಿರುವ ಮಾಜಿ ಪ್ರಧಾನಿ ಹೀನಾಯವಾಗಿ ಸೋಲ್ತಾರೆ ಎಂಬ ನೋವು ನಮಗೆ ಇದೆ’ ಎಂದು ಹೇಳಿದರು.

ಆಟೋ ಡ್ರೈವರ್ ಭಕ್ತರಹಳ್ಳಿಯ ಚೇತನ್‌ (ಮಧುಗಿರಿ), ‘ದೇಶದಲ್ಲಿ ಮೋದಿ ಗೆಲ್ತಾರೆ. ತುಮಕೂರಿನಲ್ಲಿ  ನಾವೆಲ್ಲ ಸೇರಿ ಗೌಡರನ್ನು ಗೆಲ್ಲಿಸ್ತೀವಿ’ ಎಂದರು. ‘ಕಾಂಗ್ರೆಸ್‌ ಮುಖಂಡ ಕೆ.ಎನ್. ರಾಜಣ್ಣ ಕೈಕೊಟ್ಟರೆ ಹಿನ್ನಡೆಯಾಗಬಹುದು. ಈಗಂತೂ ಗೌಡರಿಗೆ ಹಾಕಿ ಅಂದಿದ್ದಾರೆ. ಕೊನೆಯ ಎರಡು ದಿನ ಏನು ಮೆಸೇಜು ಕೊಡ್ತಾರೋ ಗೊತ್ತಿಲ್ಲ’ ಎಂದು ಕ್ಷೇತ್ರದ ಮಹಿಮೆಯನ್ನು ಹೊರಹಾಕಿದರು ಹೋಟೆಲ್ ಮಾಲೀಕ ಪ್ರಶಾಂತ್. 

ಮಧುಗಿರಿ ಬೆಟ್ಟದ ತಪ್ಪಲಿನ ಸಿದ್ದಾಪುರ ಎ.ಕೆ. ಕಾಲೊನಿಯ ಗೂಡಂಗಡಿ ಮುಂದೆ ಕುಳಿತು ಬೀಡಿ ಸೇದುತ್ತಿದ್ದ ಸಂಜೀವಪ್ಪ, ‘ನೋಡಿ ಸೋಮಿ. ದೇವೇಗೌಡರು, ಅವರ ಮಕ್ಕಳು ಮಧುಗಿರಿ ಬೆಟ್ಟದ ಥರ ಬೆಳೆಯುತ್ತಲೇ ಇದ್ದಾರೆ. ನಾವು ಕೂಲಿ ಮಾಡಿ ತಿಂಬಬೇಕು. ನಮಗೆ ಕೊನೆಗೆ ಸಿಗೋದು ಚಿಪ್ಪು ಅಷ್ಟೆ. ಮೋದಿ ಸಿಲಿಂಡರ್‌ ಕೊಟ್ಟಿದ್ದಾರೆ. ಗೌಡರು ಏನು ಕೊಟ್ಟಾರೆ’ ಎಂದು ಕಿಡಿ ಕಾರಿದರು.

ಸಿದ್ದಾಪುರದ ಊರಿನೊಳಗೆ ಜೆಡಿಎಸ್‌ ಶಾಸಕ ವೀರಭದ್ರಯ್ಯ ಬರುವುದಕ್ಕೆ ಕಾಯುತ್ತಿದ್ದ ದಲಿತ ಸಮುದಾಯ ಗಣೇಶಪ್ಪನವರ ಅಭಿಪ್ರಾಯವೇ ಬೇರೆಯಾಗಿತ್ತು. ‘ಗೌಡರು ಬಂದಿರೋದೇ ನಮ್ಮ ಪುಣ್ಯ. ಸಾಯೋ ವಯಸ್ಸಿನಲ್ಲಿ ಜಿಲ್ಲೆಗೆ ಬಂದಿದ್ದಾರೆ. ಗೆಲ್ಲಿಸಿ ಋಣ ತೀರಿಸ್ತೀವಿ’ ಎಂದರು.

ಅಲ್ಲಿಯೇ ಇದ್ದ ಶ್ರೀನಿವಾಸ, ‘ನಾವೆಲ್ಲ ಕಾಂಗ್ರೆಸ್ಸು, ಮೈತ್ರಿ ಆಗಿದೆ. ಗೌಡರಿಗೆ ವೋಟು ಹಾಕೋದು ನಮ್ಮ ಧರ್ಮ ಅಲ್ವರಾ’ ಎಂದು ಹೇಳಿದರು. ‌ಪರಿಶಿಷ್ಟ ಜಾತಿಯ ತುಂಗೇಟಪ್ಪ, ‘ಮೋದಿ ಏನು ಮಾಡಿದಾರೆ ಅಂತ ಅವರಿಗೆ ವೋಟು ಹಾಕಬೇಕು’ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು.

ಇದನ್ನೂ ಓದಿ: ತುಮಕೂರು ಲೋಕಸಭಾ ಕ್ಷೇತ್ರ ದರ್ಶನ

ಹುಳಿಯಾರು ಬಸ್ ಸ್ಟ್ಯಾಂಡ್‌ ಎದುರಿನ ಬೇಕರಿಯಲ್ಲಿ ಮಾತಿಗೆ ಸಿಕ್ಕ ನಾಗೇಶ, ‘ಗೌಡ್ರಿಗೆ ಕುರುಬರು ಸ್ವಲ್ಪ ವಿರೋಧ ಇದ್ದರು. ಸಿದ್ದರಾಮಯ್ಯ ಬಂದು ಹೋದಮೇಲೆ ಸ್ವಲ್ಪ ಬದಲಾವಣೆಯಾಗಿದೆ’ ಎಂದರೆ, ಪಕ್ಕದ ಕೋಡಿಪಾಳ್ಯದ ದುರ್ಗಯ್ಯ ಉಪ್ಪಾರ, ‘ದೊಡ್ಡವರು ನಿಂತಿದ್ದಾರೆ. ಏನಾಗುತ್ತೆ ಅಂತ ಈಗ ಹೇಗೆ ಹೇಳೋದು. ಕೊನೆಯ ಎರಡು ದಿನದ ಲೆಕ್ಕ ಸ್ವಾಮಿ’ ಎಂದು ಗೆಲುವಿನ ‘ರಹಸ್ಯ’ವನ್ನು ಬಿಚ್ಚಿಟ್ಟರು.

ಚಿಕ್ಕನಾಯಕನಹಳ್ಳಿಯ ನಿವೃತ್ತ ನೌಕರರ ಸಂಘದ ಕಚೇರಿ ಎದುರು ಕುಳಿತಿದ್ದ ಹಿರಿಯರ ಗುಂಪು, ‘ನಮ್ಮ ಹೆಸರುಗಳು ಬೇಡ. ದೇಶಕ್ಕೆ ಮೋದಿ–ತುಮಕೂರಿಗೆ ಗೌಡರು ಎಂದು ಬರೆದುಕೊಳ್ಳಿ’ ಎಂದರು.

ತಿಪಟೂರಿನಲ್ಲಿ ಭಿನ್ನವಾದ ಅಭಿಪ್ರಾಯ ಇತ್ತು.  ಅನಿಲ್‌, ‘ಲಿಂಗಾಯತರ ಪ್ರಭಾವ ಜಾಸ್ತಿ ಇದೆ. ಜೆಡಿಎಸ್ ಬಲ ಇಲ್ಲಿ ಇಲ್ಲ. ಹೀಗಾಗಿ ಇಲ್ಲಿ ಬಿಜೆಪಿಗೆ ಲೀಡ್ ಸಿಗುತ್ತದೆ. ಕಾಂಗ್ರೆಸ್‌ನ ಷಡಕ್ಷರಿ ಕೂಡ ಅಷ್ಟಾಗಿ ಓಡಾಡುತ್ತಿಲ್ಲ. ಇಲ್ಲಿ ಗೌಡರಿಗೆ ಹಿನ್ನಡೆ ಖಚಿತ’ ಎಂದರು.

‘ತುರುವೇಕೆರೆ ಕ್ಷೇತ್ರದಲ್ಲಿ ಗೌಡರದ್ದೇ ಹವಾ. ಇಲ್ಲಿ ಮೋದಿ ಮೋಡಿ ನಡೆಯಲ್ಲ. ಇಲ್ಲಿ ಗೌಡರದ್ದೇ ಲೆಕ್ಕ’ ಎಂಬುದು ಅನೇಕರ ಅಭಿಪ್ರಾಯವಾಗಿತ್ತು. ದಬ್ಬೇಘಟ್ಟದಲ್ಲಿ ಎದುರಾದ ರಾಮೇಗೌಡ, ಚಿಕ್ಕಣ್ಣ, ‘ಕೇಂದ್ರದಲ್ಲಿ ಮೋದಿ ಬರಬೇಕು. ಇಲ್ಲಿ ರೈತರ ಸಾಲಮನ್ನಾ ಮಾಡಿದ ಕುಮಾರಣ್ಣ ಬೇಕು. ರೈತರ ಹಿತಕಾಯಬೇಕಾದರೆ ಗೌಡರೇ ಬೇಕು’ ಎಂದರು.

ಮಾಯಸಂದ್ರದಲ್ಲಿ ಸಿಕ್ಕಿದ ಬೆಟ್ಟೇಗೌಡ, ‘ಹಿರಿಯರೆಲ್ಲ ಗೌಡರ ಕಡೆ. ಇದೆಲ್ಲ ಜೆಡಿಎಸ್‌ ಭದ್ರಕೋಟೆ’ ಎಂದರು. ಸಿ.ಎಸ್‌. ಪುರದಲ್ಲಿ ಮಾತಿಗೆ ಸಿಕ್ಕಿದ ನಂಜುಂಡ, ‘ಕಾಂಗ್ರೆಸ್–ಜೆಡಿಎಸ್‌ನವರು ಒಟ್ಟಾಗಿದ್ದಾರೆ. ಇಲ್ಲಿ ಬಿಜೆಪಿಗೆ ಹಿನ್ನೆಡೆಯಾಗಲಿದೆ’ ಎಂದು ಹೇಳಿದರು.

ಗುಬ್ಬಿ ವೃತ್ತದಲ್ಲಿ ಎದುರಾದ ರಾಮಯ್ಯ, ‘ಬಸವರಾಜು ಕೈಗೆ ಸಿಗುವುದಿಲ್ಲ. ಗೌಡರೇ ಸೂಕ್ತ’ ಎಂದರು. ಗೌಡರು ಬೆಂಗಳೂರಿನಲ್ಲಿ ಸಿಗುವುದೇ ಅನುಮಾನ ಅಲ್ವಾ ಎಂಬ ಪ್ರಶ್ನೆಗೆ, ಗೌಡರು ಸಿಗದಿದ್ದರೂ ಇಲ್ಲಿನ ಶಾಸಕರು ಕೈಗೆ ಸಿಕ್ತಾರೆ. ಅವರನ್ನು ನೋಡಿ ವೋಟು ಹಾಕ್ತಿವಿ’ ಎಂದರು.

ಇದನ್ನೂ ಓದಿ: ಮುದ್ದಹನುಮೇಗೌಡರಿಗೆ ಮತ್ತೆ ಭ್ರಮನಿರಸನ

ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಗ್ಗೆರೆ, ಭೀಮಸಂದ್ರ ಹಾಗೂ ಬೆಳ್ಳಾವೆಯಲ್ಲಿ ಪರಿಸ್ಥಿತಿ ಪೂರ್ಣ ಭಿನ್ನವಾಗಿತ್ತು. ‘ಇದೆಲ್ಲ ಲಿಂಗಾಯತರ ಬೆಲ್ಟ್. ಸುರೇಶ್‌ಗೌಡರು ಶಾಸಕರಾಗಿದ್ದಾಗ ಒಳ್ಳೆಯ ಕೆಲಸ ಮಾಡಿದ್ದಾರೆ. ನೀರು ತಂದಿದ್ದಾರೆ. ರಸ್ತೆ ನೋಡಿ ಹೇಗೆ ಹೊಳೆಯುತ್ತಿದೆ. ವಿಧಾನಸಭೆಯಲ್ಲಿ ಗೌರಿಶಂಕರ್ ಗೆಲ್ಲಿಸಿ ತಪ್ಪು ಮಾಡಿದ್ದೇವೆ ಎಂಬ ಭಾವನೆ ಇದೆ. ಇಲ್ಲೆಲ್ಲ ಬಿಜೆಪಿಗೆ ವೋಟು ಬೀಳುತ್ತೆ’ ಎಂಬುದು ಅನೇಕರ ಅಭಿಮತ.

ತುಮಕೂರು ನಗರದಲ್ಲಿ ಎದುರಾದ ಸುರೇಶಯ್ಯ, ‘ಮೈತ್ರಿ ಆಗದೇ ಇದ್ದರೆ ಗೌಡರಿಗೆ ವೋಟು ಸಿಗುವುದು ಕಷ್ಟ ಇತ್ತು. ಆದರೆ, ಹಿಂದಿನ ಶಾಸಕ ರಫೀಕ್ ಅಹ್ಮದ್‌, ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದ ಗೋವಿಂದರಾಜು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಲಿಂಗಾಯತರ ಮತಗಳು ಬಸವರಾಜುಗೆ ಬಿದ್ದರೂ ಒಕ್ಕಲಿಗರು, ಮುಸ್ಲಿಮರು, ತಿಗಳರು ಗೌಡರಿಗೆ ವೋಟು ಹಾಕುತ್ತಾರೆ. ಮುಸ್ಲಿಮರ ಮತ ಪ್ರಾಬಲ್ಯ ಗೌಡರಿಗೆ ವರದಾನವಾಗಲಿದೆ’ ಎಂದು ಹೇಳಿದರು.

ಹಾದಿ ಹೊರಳಿಸಿ ಗೂಳೂರಿನಲ್ಲಿ ಹಣ್ಣು ಮಾರುತ್ತಿದ್ದ ಸ್ವಾಮಿ, ‘ಇಲ್ಲೆಲ್ಲ ಗೌಡರದ್ದೇ ಪ್ರಭಾವ ಸ್ವಾಮಿ. ಗೌರಿಶಂಕರ್ ನೋಡಿ ಮತ ಹಾಕುತ್ತೇವೆ’ ಎಂದರು.

ಹೆಬ್ಬೂರಿಗೆ ಹೋದಾಗ, ಬಿಜೆಪಿ ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದರು.  ಹೇರ್ ಕಟ್ಟಿಂಗ್ ಶಾಪ್‌ನಲ್ಲಿ ಕುಳಿತಿದ್ದ ರಂಗನಾಥ್‌, ‘ನಮ್ಮದೇನಿದ್ದರೂ ಈ ಬಾರಿ ಮೋದಿ, ಗೌಡರಿಗೆ ಯಾಕೆ ವೋಟು ಹಾಕಬೇಕು’ ಎಂದು ಪ್ರಶ್ನಿಸಿದರು.

ಅಲ್ಲಿಂದ ನಾಲ್ಕಾರು ಮಾರು ದೂರಲ್ಲಿದ್ದ ಮಟನ್ ಸ್ಟಾಲ್ ಎದುರು ಕುಳಿತಿದ್ದ ಆಂಜನೇಯಪ್ಪ, ‘ಸಿದ್ದರಾಮಯ್ಯ ಅನ್ನ ಕೊಟ್ಟಿದ್ದಾರೆ. ಮುದ್ದ ಹನುಮೇಗೌಡರು ದಲಿತರು ಎನ್ನದೇ ಸೈಟು ಕೊಡಿಸಿದ್ದಾರೆ. ಅನ್ನ–ನೆಲದ ಋಣ ಮರೆಯಲು ಸಾಧ್ಯವೇ ಎಂದರು. ಮುದ್ದ ಹನುಮೇಗೌಡರಿಗೆ ಕೈಕೊಟ್ಟರಲ್ಲ ಎಂದಿದ್ದಕ್ಕೆ, ಮೈತ್ರಿ ಮಾಡಿಕೊಂಡಿದಾರಲ್ಲ. ನಾವು ಬಿಜೆಪಿಗೆ ಹಾಕೋರಲ್ಲ. ಸಿದ್ದರಾಮಣ್ಣನ ಮುಖ ನೋಡಿ ಗೌಡ್ರಿಗೆ ವೋಟು ಹಾಕುತ್ತೇವೆ’ ಎಂದರು.

ಇದನ್ನೂ ಓದಿ: ದೇವೇಗೌಡ ಸ್ಪರ್ಧೆಗೆ ತೀವ್ರ ವಿರೋಧ– ಪರಮೇಶ್ವರ ತುರ್ತು ಸಭೆ

‘ಗೌಡರಿಗೆ ಎಲೆಕ್ಷನ್‌ ಬೇಕಿರಲಿಲ್ಲ...’

‘ಆ ದೇವೇಗೌಡ ಬಂದಿದ್ದು ಏಳೂವರೆ ಶನಿ ವಕ್ಕರಿಸಿದ ಹಾಗಾಗಿದೆ. ಸ್ವಾಮಿ ನಾವೂ ಕೂಡ ಇಷ್ಟು ವರ್ಷ ಜೆಡಿಎಸ್‌ ಕಟ್ಟಲು ಜೋಡು ಸವೆಸಿದ್ದೇವೆ. ಮಗ, ಸೊಸೆ ರಾಜಕೀಯಕ್ಕೆ ತಂದಿದ್ದಾಯ್ತು. ಮೊಮ್ಮಕ್ಕಳಿಗೆ ನೆಟ್ಟಗೆ ಮೀಸೆ ಬಂದಿಲ್ಲ. ಇಷ್ಟು ಬೇಗ ರಾಜಕೀಯ ಏಕೆ ಬೇಕಿತ್ತು. ಅವರ ಕುಟುಂಬದವರು ರಾಜಕಾರಣದಲ್ಲಿ ಮೇಲೆ ಬರಬೇಕು. ನಾವು ಹೊಲ ಗೆಯ್ಯುತ್ತಾ ಇರಬೇಕು. ಅವರು ಮಾತ್ರ ಒಕ್ಕಲಿಗರು, ನಾವೇನು ದಕ್ಕಲನವರಾ’ ಎಂದು ಕಟುವಾಗಿ ಪ್ರಶ್ನಿಸಿದವರು ಕೊರಟಗೆರೆ ಬಸ್‌ ನಿಲ್ದಾಣದ ಎದುರಿನ ಚಹಾದಂಗಡಿಯಲ್ಲಿ ಮಾತಿಗೆ ಸಿಕ್ಕ ಬೈರೇನಹಳ್ಳಿಯ ಬೋರೇಗೌಡ(70 ವರ್ಷ).

‘ಮುದ್ದಹನುಮೇಗೌಡ ಈ ದೇವೇಗೌಡನಿಗೆ ವಿಷ ಇಕ್ಕಿದ್ನಾ? ಅವನೂ ಮೊದಲು ದಳದಲ್ಲೇ ಇದ್ದ. ಈಗ ಅವನನ್ನು(ಮುದ್ದಹನುಮೇಗೌಡ) ತುಳಿಯೋಕೆ ಗೌಡ ಇಲ್ಲಿಗೆ ಬಂದಿದಾನೆ. ಅವ್ನು ಮಾಜಿ ಪ್ರಧಾನಿ. ಅವ್ನ ಬಗ್ಗೆ ಅಷ್ಟೆಲ್ಲ ಗೌರವ ಇದ್ರೆ ಅವಿರೋಧವಾಗಿ ಯಾವುದಾದರೂ ಕ್ಷೇತ್ರದಿಂದ ಆಯ್ಕೆ ಆಗಬೇಕಿತ್ತಲ್ವ.

ಪಾರ್ಲಿಮೆಂಟ್‌ನಲ್ಲಿ ಅನುಭವ ಇರುವವರು ಇಲ್ಲ. ಅದಕ್ಕೆ ನೀವು ಬನ್ನಿ ಎಂದು ಯಾರೋ ಗೋಗರೆದರು ಎಂದು ಹೇಳ್ತಾ ಇದಾನೆ. ಹೌದಪ್ಪ. . ನಿನ್ನಂತ ಬುದ್ಧಿವಂತ ಪ್ರಪಂಚಲ್ಲೇ ಇಲ್ಲ ಬಿಡಪ್ಪ. ಸಾಯೋ ವಯಸ್ಸಿನಲ್ಲಿ ಎಲೆಕ್ಷನ್‌ ಯಾಕೆ ಬೇಕಿತ್ತು. ಜಾತಿಯಿಂದ ನಾನೂ ಒಕ್ಕಲಿಗನೇ. ಆದರೂ ಈ ಸರ್ತಿ ವೋಟ್‌ ಹಾಕಲ್ಲ’ ಎಂದು
ಹೇಳಿದರು.

ಬಸವರಾಜು ಅವರದ್ದು ಕುಟುಂಬ ರಾಜಕಾರಣವಲ್ಲವೇ?

‘ದೇವೇಗೌಡರು ಮಾತ್ರ ಕುಟುಂಬ ರಾಜಕಾರಣ ಮಾಡ್ತಾರಾ. ಬಿಜೆಪಿ ಅಭ್ಯರ್ಥಿ ಬಸವರಾಜು ಮಗ ಜ್ಯೋತಿ ಗಣೇಶ್‌ ತುಮಕೂರು ಶಾಸಕ ಅಲ್ವಾ? ಟೀಕೆ ಮಾಡೋಕೆ ಗೌಡರ ಕುಟುಂಬ ಮಾತ್ರ ಸಿಗೋದಾ’ ಎಂದು ಮಧುಗಿರಿ ವೃತ್ತದ ಅರಳೀಕಟ್ಟೆಯ ಮೇಲೆ ಕುಳಿತಿದ್ದ ಭಕ್ತರಹಳ್ಳಿಯ ಸಣ್ಣಪ್ಪ, ವೆಂಕಟಾಪುರದ ಹನುಮಂತರಾಯಪ್ಪ ಪ್ರಶ್ನಿಸಿದರು.

‘ಈ ವಯಸ್ಸಿನಲ್ಲೂ ಹೋರಾಟ ನಡೆಸುತ್ತಿರೋ ಆ ಧಣಿ (ಗೌಡರು)ಯನ್ನು ಎಲ್ಲಾದರೂ ಸೋಲಿಸೋದುಂಟ’ ಎಂದು ಹೇಳುತ್ತಾ ಮಡಿವಾಳ ಸಮುದಾಯದವರಾದ ಸಣ್ಣಪ್ಪ ಕೈಮುಗಿದರು.

ಇದನ್ನೂ ಓದಿ: ಮನವೊಲಿಕೆಗೆ ಬಗ್ಗಿದ ಮುದ್ದಹನುಮೇಗೌಡ, ರಾಜಣ್ಣ?

ಗೌಡರು ಸೋತರೆ ಹೇಮಾವತಿ ಹರಿವಿಗೆ ಅಡ್ಡಿ

‘ದೇವೇಗೌಡರು ಹಾಸನ ಪ್ರತಿನಿಧಿಸುತ್ತಿದ್ದರು. ಅಲ್ಲಿಯ ಹಿತ ಅವರಿಗೆ ಮುಖ್ಯವಾಗಿತ್ತು. ಹಾಗಾಗಿಯೇ ಹೇಮಾವತಿ ನೀರು ಕೊಡಲು ತಕರಾರು ಮಾಡಿರಬಹುದು. ಈಗ ತುಮಕೂರಿನಿಂದ ಗೆದ್ದರೆ ಇಲ್ಲಿಗೆ ನೀರು ಕೊಡಿಸುತ್ತಾರೆ. ಒಂದು ವೇಳೆ ಸೋತರೆ ಯಾವುದೇ ಕಾರಣಕ್ಕೂ ತೊಟ್ಟು ನೀರು ಹರಿಯಲು ಬಿಡುವುದಿಲ್ಲ. ಆ ಕಾರಣಕ್ಕಾದರೂ ಅವರನ್ನು ಗೆಲ್ಲಿಸಲೇಬೇಕು’ ಎಂಬುದು ಗುಬ್ಬಿ, ಗ್ರಾಮಾಂತರ ಕ್ಷೇತ್ರದ ಅನೇಕರ ಅಭಿಮತ.

ಅಷ್ಟಕ್ಕೂ ನೀರಿನ ವಿಷಯ ದೊಡ್ಡ ಸಂಗತಿಯೇ ಅಲ್ಲ. ಎಲ್ಲೆಲ್ಲಿ ಹೇಮಾವತಿ ನೀರು ಹರಿಯುತ್ತದೋ ಆ ಭಾಗದ ದಲಿತರು, ಉಪ್ಪಾರರು, ಮಡಿವಾಳರು, ಕುರುಬರು, ತಿಗಳರು, ಗೊಲ್ಲರು ಹೀಗೆ ಅನೇಕ ತಳಸಮುದಾಯದವರಿಗೆ ಜಮೀನೇ ಇಲ್ಲ. ಹೀಗಾಗಿ ನೀರಿನ ವಿಷಯ ಅವರಿಗೆ ದೊಡ್ಡ ಸಂಗತಿಯೇ ಅಲ್ಲ ಎಂದು ಗುಬ್ಬಿಯಲ್ಲಿ ಮಾತಿಗೆ ಸಿಕ್ಕ ವೀರಭದ್ರಪ್ಪ ಹೇಳಿದರು.

 

ಪ್ರಜಾವಾಣಿ ವಿಶೇಷ ಸಂದರ್ಶನಗಳು...

ನಾನೆಂದೂ ಕುಟುಂಬ ರಾಜಕಾರಣ ಮಾಡಿಲ್ಲ: ದೇವೇಗೌಡ

ಕುಟುಂಬ ರಾಜಕಾರಣದಿಂದಲೇ ಉಳಿದಿವೆ ಪ್ರಾದೇಶಿಕ ಪಕ್ಷಗಳು: ಕುಮಾರಸ್ವಾಮಿ

ನಾನು ಈ ಜನ್ಮದಲ್ಲಿ ಯಾವ ರಾಜ್ಯದ ರಾಜ್ಯಪಾಲನೂ ಆಗಲ್ಲ: ಯಡಿಯೂರಪ್ಪ

ಮೈತ್ರಿ ಸರ್ಕಾರಕ್ಕೆ ನಾನು ಮೂಗುದಾರ ಹಾಕಿಲ್ಲ: ಸಿದ್ದರಾಮಯ್ಯ

ನಾಯಕರ ಮೌನದಿಂದ ಅವಮಾನವಾಗಿದೆ: ತೇಜಸ್ವಿನಿ ಅನಂತಕುಮಾರ್‌

ಬಡವರದ್ದಲ್ಲ, ಕಾಂಗ್ರೆಸ್‌ನವರ ಗರೀಬಿ ಹಠಾವ್ ಆಯಿತು: ಸದಾನಂದಗೌಡ

ದಲಿತರನ್ನು ಒಡೆಯಬೇಡಿ, ಎಡಗೈ–ಬಲಗೈ ಅಂತ ಎತ್ತಿಕಟ್ಟಿದರೆ ಯಾರಿಗೂ ಲಾಭವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಬರಹ ಇಷ್ಟವಾಯಿತೆ?

 • 24

  Happy
 • 0

  Amused
 • 4

  Sad
 • 1

  Frustrated
 • 10

  Angry

Comments:

0 comments

Write the first review for this !