ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ‌ಜಿಲ್ಲೆಯಲ್ಲಿ ಅನ್‌ಲಾಕ್‌–2 ಜಾರಿ: ಡಿಸಿ

ಮನೆಮನೆಗೆ ತೆರಳಿ ಆಂಟಿಜೆನ್‌ ಟೆಸ್ಟ್: ಅರ್ಧಗಂಟೆಯಲ್ಲೇ ವರದಿ
Last Updated 22 ಜುಲೈ 2020, 16:28 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಅನ್‌ಲಾಕ್‌–2 ಜಾರಿ ಮಾಡಲಾಗಿದೆ. ಅದರಂತೆ ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೂ ಮಾತ್ರ ನಿಷೇಧಾಜ್ಞೆ ಜಾರಿಯಲ್ಲಿ ಇರುತ್ತದೆ ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರುಕಟ್ಟೆಗಳನ್ನು ವೀಕೇಂದ್ರೀಕರಣ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯನ್ನು 18 ಕಡೆಗಳಲ್ಲಿ ವಿಕೇಂದ್ರಿಕೃತವಾಗಿದ್ದು, ಸಿಂಧನೂರು, ಲಿಂಗಸುಗೂರು, ಮಾನ್ವಿಗಳಲ್ಲಿಯೂ ಪಾಲನೆ ಆಗಿದೆ ಎಂದರು.

ಉದ್ಯಾನಗಳಲ್ಲಿ ವಾಕಿಂಗ್‌ ಮಾಡುವುದಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ. ಎಲ್ಲಿಯೂ ಕುಳಿತುಕೊಳ್ಳಲು ಅವಕಾಶವಿಲ್ಲ. ಮುಂದಿನ ಎರಡು ಭಾನುವಾರಗಳು ಸಂಪೂರ್ಣ ಲಾಕ್‌ಡೌನ್‌ ಇರುತ್ತವೆ. ಔಷಧಿ ಅಂಗಡಿಗಳು ಮತ್ತು ಆಸ್ಪತ್ರೆಗಳು ಮಾತ್ರ ತೆರೆದಿರುತ್ತವೆ. ಬೇರೆ ಜಿಲ್ಲೆಗಳಿಂದ ಬರುವವರಿಗೆ ಏಳು ದಿನಗಳು ಹೋಂ ಕ್ವಾರಂಟೈನ್‌ ಇರಬೇಕು. ಬೇರೆ ರಾಜ್ಯಗಳಿಂದ ಬರುವವರಿಗೆ 15 ದಿನಗಳು ಕ್ವಾರಂಟೈನ್‌ ಇರಬೇಕು ಎಂದು ತಿಳಿಸಿದರು.

ಕೋವಿಡ್‌ ಕೇರ್‌ ಸೆಂಟರ್‌ಗಳು: ಪ್ರತಿ ತಾಲ್ಲೂಕುಗಳಲ್ಲಿ ತಲಾ 100 ಹಾಸಿಗೆ ಸೌಲಭ್ಯ ಇರುವ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಆರಂಭಿಸಲಾಗಿದೆ. ಒಟ್ಟು ಆರು ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ತೀವ್ರ ಉಸಿರಾಟ ತೊಂದರೆ ಇರುವವರನ್ನು ಮಾತ್ರ ಆಸ್ಪತ್ರೆಗೆ ಕಳುಹಿಸಬೇಕು ಎಂದು ತಿಳಿಸಲಾಗಿದೆ.ಗಂಭೀರ ಪ್ರಕರಣಗಳನ್ನು ಮಾತ್ರ ಒಪೆಕ್‌ಗೆ ಕಳುಹಿಸಲು ತಿಳಿಸಲಾಗಿದೆ. ಇನ್ನುಳಿದವರೆಲ್ಲ ಅಲ್ಲಿಯೇ ಉಳಿದುಕೊಳ್ಳುತ್ತಾರೆ.‌ ಕೋವಿಡ್ ಇರುವವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ಅನುಮತಿ ನೀಡುವ ಕಾರ್ಯ ನಡೆಸಲಾಗಿದೆ. ಇದರೊಂದಿಗೆ ಖಾಸಗಿ ಹೋಟೆಲ್‌ಗೂ ಅನುಮತಿ ನೀಡಲಾಗುತ್ತಿದೆ ಎಂದರು.

ಸ್ಥಳದಲ್ಲೇ ವರದಿ: ಜಿಲ್ಲೆಯಲ್ಲಿ 12 ಮೊಬೈಲ್‌ ವ್ಯಾನ್‌ ಮೂಲಕ ಆಂಟಿಜೆನ್‌ ಟೆಸ್ಟ್‌ ಕಿಟ್‌ ಆರಂಭಿಸಲಾಗಿದೆ. ಮೂರಕ್ಕಿಂತ ಹೆಚ್ಚು ಪ್ರಕರಣಗಳು ಕಂಡು ಬಂದಿರುವ ಕಡೆಗಳಲ್ಲಿ ಈ ಪರೀಕ್ಷೆ ನಡೆಸಲಾಗುವುದು. ರಾಯಚೂರು ನಗರದಲ್ಲೇ 25 ಹಾಟ್‌ಸ್ಪಾಟ್‌ ಗುರುತಿಸಲಾಗಿದೆ. ಸಿಂಧನೂರಿನಲ್ಲಿ 8 ದೇವದುರ್ಗ 3, ಲಿಂಗಸುಗೂರು 5 ಹಾಗೂ ಮಾನ್ವಿಯಲ್ಲಿ 10 ಹಾಟ್‌ಸ್ಪಾಟ್‌ಗಳಿವೆ. ಅಲ್ಲಿಗೆ ವ್ಯಾನ್‌ ಮೂಲಕ ಅಂಗನವಾಡಿ ಕಾರ್ಯಕರ್ತೆಯರು, ಆಶಾಗಳು ತೆರಳುವರು. ಕೆಮ್ಮು, ನೆಗಡಿ, ಜ್ವರ ಇದ್ದವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುವುದು. ಈಗಾಗಲೇ ಮೂರು ಸಾವಿರ ಪರೀಕ್ಷಾ ಕಿಟ್‌ಗಳು ಬಂದಿವೆ ಎಂದು ತಿಳಿಸಿದರು.

ಮನೆಮನೆಗೆ ಹೋಗಿ ತಪಾಸಣೆ ಮಾಡಲಾಗುತ್ತದೆ. ಪಾಸಿಟಿವ್‌ ಇರುವವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗುವುದು. ಒಪೆಕ್‌ಗೆ ಬರುವ ಅನಿವಾರ್ಯತೆ ಇಲ್ಲ ಎಂದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ನಗರದಲ್ಲಿ ಅಂತರ ಕಾಯ್ದುಕೊಳ್ಳಲು ವ್ಯಾಪಾರಿಗಳು ಸಹಕರಿಸಬೇಕು. ಎಲ್ಲರೂ ಬಿಸಿನೀರು ಸೇವಿಸಬೇಕು. ಕೋವಿಡ್‌ನಿಂದ ಗಂಭೀರ ಸ್ಥಿತಿಗೆ ತಲುಪಿದವರಿಗೆ ಚಿಕಿತ್ಸೆ ನೀಡಲು ಪೂರ್ವಸಿದ್ಧತೆ ಮಾಡಲಾಗಿದೆ ಎಂಧು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT