ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಏಮ್ಸ್: ಸೋಮವಾರದಿಂದ ಮನುಷ್ಯನ ಮೇಲೆ 'ಕೊವ್ಯಾಕ್ಸಿನ್‌' ಲಸಿಕೆ ಪ್ರಯೋಗ

Last Updated 19 ಜುಲೈ 2020, 4:05 IST
ಅಕ್ಷರ ಗಾತ್ರ

ನವದೆಹಲಿ: ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿರುವ ಕೋವಿಡ್‌–19 ಲಸಿಕೆ ಕೊವ್ಯಾಕ್ಸಿನ್‌ನ್ನು ಮನುಷ್ಯನ ಮೇಲೆ ಪ್ರಯೋಗ ನಡೆಸಲು ದೆಹಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಸಮ್ಮತಿಸಿದೆ. ಸೋಮವಾರದಿಂದ ಮನುಷ್ಯನ ಮೇಲೆ ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ ಪ್ರಕ್ರಿಯೆಗಳು ಪ್ರಾರಂಭಗೊಳ್ಳಲಿವೆ.

'ಮನುಷ್ಯನ ಮೇಲೆ ಕೊವ್ಯಾಕ್ಸಿನ್‌ ಕ್ಲಿನಿಕಲ್‌ ಟ್ರಯಲ್‌ ನಡೆಸಲು ಏಮ್ಸ್‌ ನೈತಿಕ ಸಮಿತಿಯಿಂದ ಅನುಮತಿ ದೊರೆತಿದೆ. ಸೋಮವಾರದಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಿದ್ದೇವೆ. ಕೋವಿಡ್‌–19 ಇರದ ಹಾಗೂ ಯಾವುದೇ ರೋಗಗಳಿಗೆ ಒಳಗಾಗಿರದ ಆರೋಗ್ಯವಂತರನ್ನು ಪ್ರಯೋಗಕ್ಕೆ ಆಯ್ಕೆ ಮಾಡಲಾಗುತ್ತದೆ. 18ರಿಂದ 55 ವರ್ಷ ವಯಸ್ಸಿನ ವ್ಯಕ್ತಿಗಳ ಮೇಲೆ ಕ್ಲಿನಿಕಲ್‌ ಟ್ರಯಲ್‌ ನಡೆಸಿ ಅಧ್ಯಯನ ನಡೆಸಲಾಗುತ್ತದೆ' ಎಂದು ಏಮ್ಸ್‌ ಕಮ್ಯುನಿಟಿ ಮೆಡಿಸಿನ್‌ ಕೇಂದ್ರದ ಪ್ರೊಫೆಸರ್‌ ಡಾ.ಸಂಜಯ್‌ ರಾಯ್‌ ಹೇಳಿದ್ದಾರೆ.

ಐಸಿಎಂಆರ್ ಸಹಯೋಗದೊಂದಿಗೆ 'ಭಾರತ್ ಬಯೋಟೆಕ್ ಲಿಮಿಟೆಡ್' ಕೊವ್ಯಾಕ್ಸಿನ್‌ ಅಭಿವೃದ್ಧಿಪಡಿಸಿದೆ. ಮತ್ತೊಂದು ಲಸಿಕೆಯನ್ನು 'ಝೈಡಸ್ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್‌' ಅಭಿವೃದ್ಧಿಪಡಿಸಿದ್ದು, ಮನುಷ್ಯನ ಮೇಲೆ ಮೊದಲ ಮತ್ತು ಎರಡನೇ ಹಂತದ ಪ್ರಯೋಗ ನಡೆಯಲಿದೆ. ಈ ಎರಡೂ ಲಸಿಕೆಗಳಿಗೆ ಭಾರತದ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಇತ್ತೀಚೆಗಷ್ಟೇ ಅನುಮತಿ ನೀಡಿದೆ.

'ಕ್ಲಿನಿಕಲ್‌ ಟ್ರಯಲ್‌ನಲ್ಲಿ ಭಾಗಿಯಾಗಲು ಇಚ್ಛಿಸುವ ಆರೋಗ್ಯವಂತ ವ್ಯಕ್ತಿ Ctaiims.covid19@gmail.com ಕಳುಹಿಸಬಹುದು ಅಥವಾ 7428847499ಗೆ ಎಸ್‌ಎಂಎಸ್ ಅಥವಾ ಕರೆ ಮಾಡಬಹುದು. ದೆಹಲಿಯ ಏಮ್ಸ್‌ ಮೊದಲು ಮತ್ತು ಎರಡನೇ ಹಂತದ ಕ್ಲಿನಿಕಲ್‌ ಟ್ರಯಲ್‌ಗೆ 100 ಜನರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಿದೆ. ಈಗಾಗಲೇ ಹಲವು ಜನ ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು, ಲಸಿಕೆ ನೀಡುವ ಮುನ್ನ ನಮ್ಮ ತಂಡ ಅವರ ಆರೋಗ್ಯ ತಪಾಸಣೆ ನಡೆಸಲಿದೆ' ಎಂದು ಡಾ.ಸಂಜಯ್‌ ರಾಯ್‌ ಹೇಳಿದ್ದಾರೆ.

ಐಸಿಎಂಆರ್‌ ಪ್ರಕಾರ ದೇಶದ 12 ಕಡೆ ಕೊವ್ಯಾಕ್ಸಿನ್‌ ಟ್ರಯಲ್‌ ನಡೆಯಲಿದೆ. ಈಗಾಗಲೇ ಪಟನಾದ ಏಮ್ಸ್‌ ಹಾಗೂ ಹರಿಯಾಣದ ರೋಹ್ಟಕ್‌ನ ಪಿಜಿಐಎಂಎಸ್‌ನಲ್ಲಿ ಟ್ರಯಲ್‌ ಆರಂಭವಾಗಿದೆ.

ಕೊವ್ಯಾಕ್ಸಿನ್‌ ಮತ್ತು ಝೈಕೋವ್‌–ಡಿ ಎರಡೂ ಲಸಿಕೆಗಳನ್ನು ಇಲಿಗಳು, ಮೊಲಗಳ ಮೇಲೆ ಆರಂಭಿಕ ಟ್ರಯಲ್‌ ನಡೆಸಲಾಗಿತ್ತು. ಅದೇ ಅಧ್ಯಯನ ವರದಿಯನ್ನು ಆಧರಿಸಿ ಡಿಸಿಜಿಐ ಮನುಷ್ಯನ ಮೇಲೆ ಪ್ರಯೋಗಿಸಲು ಅನುಮತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT