ಬುಧವಾರ, ಆಗಸ್ಟ್ 4, 2021
27 °C
ಶಮನಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಪ್ರಯತ್ನ

ಪೈಲಟ್‌ ಪಟ್ಟು; ಗೆಹ್ಲೋಟ್‌ಗೆ ಇಕ್ಕಟ್ಟು: ಬಿಕ್ಕಟ್ಟಿನಲ್ಲಿ ರಾಜಸ್ಥಾನ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ನಡುವಣ ಭಿನ್ನಮತ ತಾರಕಕ್ಕೇರಿದೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂಬ ಆರೋಪದ ತನಿಖೆಗೆ ಸಂಬಂಧಿಸಿ ಪೈಲಟ್‌ಗೆ ಪೊಲೀಸರು (ವಿಶೇಷ ಕಾರ್ಯಪಡೆ–ಎಸ್‌ಒಜಿ) ನೀಡಿದ ನೋಟಿಸ್‌, ಭಿನ್ನಮತ ತೀವ್ರಗೊಳ್ಳಲು ಕಾರಣವಾಗಿದೆ. ಭಿನ್ನಮತ ಶಮನಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಶ್ರಮಿಸುತ್ತಿದೆ.

ತಮ್ಮ ಬೆಂಬಲಿಗರಾದ 16 ಶಾಸಕರೊಂದಿಗೆ ಪೈಲಟ್‌ ಅವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು  ಪಕ್ಷದ ನಾಯಕರನ್ನು ಭೇಟಿ ಮಾಡಲು ಬಯಸಿದ್ದಾರೆ. ಕಾಂಗ್ರೆಸ್ ಪಕ್ಷದ ಖಜಾಂಚಿ ಅಹ್ಮದ್‌ ಪಟೇಲ್‌ ಅವರನ್ನು ಪೈಲಟ್‌ ಅವರು ಶನಿವಾರ ರಾತ್ರಿ ಭೇಟಿಯಾಗಿದ್ದರು. ಆ ಬಳಿಕ ಅವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಹಾಗಾಗಿ, ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹರಡಿತ್ತು.

ಇದೇ ವೇಳೆ, ಗೆಹ್ಲೋಟ್ ಅವರು ಜೈಪುರದಲ್ಲಿ ಶಾಸಕರ ಸಭೆ ಕರೆದಿದ್ದು, ಕತೂಹಲಕ್ಕೆ ಕಾರಣವಾಗಿದೆ. 

ಬಿಕ್ಕಟ್ಟಿಗೆ ಕಾರಣವೇನು?
ಬಿಜೆಪಿ ಮುಖಂಡರೊಬ್ಬರು ರೂಪಿಸಿದ್ದರು ಎನ್ನಲಾದ ಶಾಸಕರ ಖರೀದಿ ಸಂಚನ್ನು ಬಯಲು ಮಾಡಿದ್ದಾಗಿ ಹೇಳಿಕೊಂಡಿದ್ದ ವಿಶೇಷ ಕಾರ್ಯಪಡೆ ಪೊಲೀಸರು, ಇಬ್ಬರ ವಿಚಾರಣೆ ಆರಂಭಿಸಿದ್ದರು. 

ಘಟನೆ ಸಂಬಂಧ ಹೇಳಿಕೆ ದಾಖಲಿಸುವಂತೆ ಸೂಚಿಸಿ ಗೆಹ್ಲೋಟ್ ಹಾಗೂ ಪೈಲಟ್‌ಗೆ ಎಸ್‌ಒಜಿ ನೋಟಿಸ್ ನೀಡಿತ್ತು. ಇದರಿಂದ ಕೋಪಗೊಂಡ ಪೈಲಟ್, ರಾಜ್ಯದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ವಿವರಿಸಲು ದೆಹಲಿಗೆ ಬಂದಿದ್ದರು. 

‘ಶಾಸಕರ ಖರೀದಿ ಮೂಲಕ ರಾಜಸ್ಥಾನ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ಸಫಲವಾಗುವುದಿಲ್ಲ. ತಮ್ಮ ನಿಷ್ಠೆ ಬದಲಿಸಲು ಬಿಜೆಪಿಯು ಶಾಸಕರಿಗೆ ಯಾವ ಆಮಿಷಗಳನ್ನು ಒಡ್ಡುತ್ತಿದೆಯೋ ಗೊತ್ತಿಲ್ಲ. ಆದರೆ ನಮ್ಮ ಶಾಸಕರು ಹಾಗೂ ಕಾಂಗ್ರೆಸ್ ಬೆಂಬಲಿತ ಪಕ್ಷೇತರರು ಗೆಹ್ಲೋಟ್ ಸರ್ಕಾರದ ಬೆಂಬಲಕ್ಕೆ ಇದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಹೇಳಿದ್ದಾರೆ.

ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಿಗ್ಗೆ ಜೈಪುರದಲ್ಲಿ ಹಲವು ಸಚಿವರು ಹಾಗೂ ಶಾಸಕರ ಜತೆ ಸಭೆ ನಡೆಸಿದ ಗೆಹ್ಲೋಟ್, ವಿಧಾನಸಭೆಯಲ್ಲಿ ತಮಗೆ ಬೆಂಬಲವಿದೆ ಎಂಬ ಸಂದೇಶವನ್ನು ರವಾನಿಸಿದರು. ಅವರು ಶಾಸಕರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. 

200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ 124 ಶಾಸಕರ ಬೆಂಬಲವಿದೆ. ಕಾಂಗ್ರೆಸ್‌ನ 107 ಶಾಸಕರು, 10 ಮಂದಿ ‍ಪಕ್ಷೇತರರು, ಬಿಟಿಪಿ ಹಾಗೂ ಸಿಪಿಎಂನ ತಲಾ ಇಬ್ಬರು ಹಾಗೂ ಆರ್‌ಎಲ್‌ಡಿಯ ಒಬ್ಬ ಶಾಸಕ ಗೆಹ್ಲೋಟ್ ಸರ್ಕಾರವನ್ನು ಬೆಂಬಲಿಸಿದ್ದಾರೆ. ಮೊದಲು ಬೆಂಬಲ ನೀಡಿದ್ದ ಇಬ್ಬರು ಪಕ್ಷೇತರರನ್ನು ಕಾಂಗ್ರೆಸ್ ಹೊರಗಿಟ್ಟಿದೆ. 

ಬಿಜೆಪಿ ನಿರಾಕರಣೆ
ಸರ್ಕಾರ ಉರುಳಿಸುವ ಯತ್ನ ನಡೆಯುತ್ತಿದೆ ಎಂಬ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ. ‘ಕಾಂಗ್ರೆಸ್ ಸರ್ಕಾರವು ಆಂತರಿಕ ಕಚ್ಚಾಟದಿಂದ ಎರಡು ಬಣಗಳಾಗಿ ಒಡೆದಿದೆ. ಸರ್ಕಾರವು ಸ್ವತಃ ತೊಂದರೆಯಲ್ಲಿ ಸಿಲುಕಿಕೊಂಡಿದೆ. ಸರ್ಕಾರವನ್ನು ಮುನ್ನಡೆಸುವುದು ಹಾಗೂ ರಕ್ಷಿಸಿಕೊಳ್ಳುವುದು ಮುಖ್ಯಮಂತ್ರಿಯ ಜವಾಬ್ದಾರಿ’ ಎಂದು ರಾಜಸ್ಥಾನ ವಿಧಾನಸಭೆಯ ಬಿಜೆಪಿ ಉಪನಾಯಕ ರಾಜೇಂದ್ರ ರಾಥೋಡ್ ತಿಳಿಸಿದ್ದಾರೆ.  

ಸಿಂಧಿಯಾಗೆ ಬೇಸರ
‘ನನ್ನ ಮಾಜಿ ಸಹೋದ್ಯೋಗಿ ಸಚಿನ್ ಪೈಲಟ್‌ ಅವರನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಕಡೆಗಣಿಸುತ್ತಿರುವುದು ಬೇಸರ ಮೂಡಿಸಿದೆ. ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಕಾಂಗ್ರೆಸ್‌ನಲ್ಲಿ ಬೆಲೆ ಇಲ್ಲ ಎಂಬುದನ್ನು ಇದು ತೋರಿಸುತ್ತದೆ’ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಕಾಂಗ್ರೆಸ್‌ನಲ್ಲಿದ್ದ ಸಿಂಧಿಯಾ ಅವರು ಮಾರ್ಚ್‌ನಲ್ಲಿ ಬಿಜೆಪಿ ಸೇರಿದ್ದಾರೆ. ಸಿಂಧಿಯಾ ಮತ್ತು ಅವರ ಬೆಂಬಲಿಗ ಶಾಸಕರು ಬಿಜೆಪಿ ಸೇರಿದ್ದರಿಂದ ಮಧ್ಯಪ್ರದೇಶದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಪತನವಾಗಿದೆ. 

ರಾಜಕೀಯ ಬೆಳವಣಿಗೆ
ಜುಲೈ 10:
ಶಾಸಕರ ಖರೀದಿ ವಿಚಾರದಲ್ಲಿ ಹೇಳಿಕೆ ದಾಖಲಿಸುವಂತೆ ವಿಶೇಷ ಕಾರ್ಯಪಡೆ ಪೊಲೀಸರಿಂದ (ಎಸ್‌ಒಜಿ) ಗೆಹ್ಲೋಟ್ ಹಾಗೂ ಪೈಲಟ್‌ಗೆ ನೋಟಿಸ್‌
ಜುಲೈ 11: ಸುದ್ದಿಗೋಷ್ಠಿ ನಡೆಸಿದ ಗೆಹ್ಲೋಟ್. ₹10 ಕೋಟಿಯಿಂದ ₹15 ಕೋಟಿ ನೀಡಿ ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪ
ಜುಲೈ 11: ನೋಟಿಸ್‌ ವಿಚಾರಕ್ಕೆ ಕೋಪಗೊಂಡು ದೆಹಲಿಗೆ ಹೊರಟ ಪೈಲಟ್; ಅಹ್ಮದ್ ಪಟೇಲ್ ಭೇಟಿ
ಜುಲೈ 12: ಸಂಪರ್ಕಕ್ಕೆ ಸಿಗದ ಪೈಲಟ್; ಬೆಂಬಲಿಗರ ಜತೆ ಬಿಜೆಪಿ ಸೇರುವ ಊಹಾಪೋಹಗಳಿಗೆ ರೆಕ್ಕೆಪುಕ್ಕ
ಜುಲೈ 12: ಪೈಲಟ್ ಜತೆ ಗುರುತಿಸಿಕೊಂಡಿದ್ದ ಮೂವರು ಶಾಸಕರ ಪೆರೇಡ್ ನಡೆಸಿದ ಗೆಹ್ಲೋಟ್; ಪಕ್ಷ ಹಾಗೂ ಗೆಹ್ಲೋಟ್‌ಗೆ ಬೆಂಬಲ ನೀಡುವುದಾಗಿ ಶಾಸಕರ ಘೋಷಣೆ
ಜುಲೈ 12: ರಾತ್ರಿ 9 ಗಂಟೆಗೆ ಕಾಂಗ್ರೆಸ್ ಶಾಸಕರು, ಪಕ್ಷೇತರ ಶಾಸಕರ ಸಭೆ ಕರೆದ ಮುಖ್ಯಮಂತ್ರಿ ಗೆಹ್ಲೋಟ್
ಜುಲೈ 12: ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ, ರಣದೀಪ್ ಸುರ್ಜೇವಾಲ ಹಾಗೂ ಅಜಯ್ ಮಾಕನ್‌ರನ್ನು ಜೈಪುರಕ್ಕೆ ಕಳುಹಿಸಿದ ಎಐಸಿಸಿ
ಜುಲೈ 12: ಜೈಪುರದಲ್ಲಿ ಸೋಮವಾರ 10.30ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಿಗದಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು