ಮಂಗಳವಾರ, ಸೆಪ್ಟೆಂಬರ್ 29, 2020
22 °C

ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಗೆ ಅಯೋಧ್ಯೆಯಲ್ಲಿ ಹೇಗೆ ನಡೆಯುತ್ತಿದೆ ಸಿದ್ಧತೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಯೋಧ್ಯೆ: ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಆ.5ರ ಬುಧವಾರ ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರಲಿದೆ. ಪ್ರಧಾನಿ ಸೇರಿದಂತೆ ಸೀಮಿತ ಗಣ್ಯರ ಸಮ್ಮುಖದಲ್ಲಿ ನೆರವೇರುತ್ತಿರುವ ಈ ಐತಿಹಾಸಿಕ ಸಮಾರಂಭಕ್ಕೆ ಸಿದ್ಧತೆಗಳೆಲ್ಲವೂ ಈಗಾಗಲೇ ಪೂರ್ಣಗೊಂಡಿದ್ದು, ಧಾರ್ಮಿಕ ಆಚರಣೆಗಳು ಆರಂಭವಾಗಿವೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಸ್ವತಃ ಮುಂದೆ ನಿಂತು ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ. ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್‌ ಭಾಗವತ್‌, ಯೋಗ ಗುರು ಬಾಬಾ ರಾಮದೇವ್‌ ಸೇರಿದಂತೆ ಹಲವರು ಅಯೋಧ್ಯೆ ತಲುಪಿದ್ದು, ಕಾರ್ಯಕ್ರಮ ಒಂದು ರೀತಿ ಧಾರ್ಮಿಕ ನಾಯಕರ ಸಮಾಗಮವೋ ಎನಿಸಿಕೊಂಡಿರುವುದಂತೂ ನಿಜ. ಇನ್ನೊಂದೆಡೆ ಭೂಮಿ ಪೂಜೆ ದಿನ ನಡೆಯುವ ಹೋಮ–ಹವನ, ಪೂಜೆಗಳನ್ನು ನೆರವೇರಿಸುವ ಸಲುವಾಗಿ ಅರ್ಚಕ ಸಮೂಹವೇ ಅಯೋಧ್ಯೆಯಲ್ಲಿ ಬೀಡು ಬಿಟ್ಟಿದೆ.


ರಾಮ ಮಂದಿರ ನಿರ್ಮಾಣದ ಅಡಿಗಲ್ಲು ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರು ಆಗಮಿಸುವ ರಸ್ತೆಗಳಲ್ಲಿ ತಾಲೀಮು ನಡೆಸುತ್ತಿರುವ ಬೆಂಗಾವಲು ವಾಹನಗಳು.  

ಭೂಮಿ ಪೂಜೆ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಅರ್ಚಕರು ಅಯೋಧ್ಯೆಯ ಸರಯು ನದಿ ತಟದಲ್ಲಿ ಆರತಿ ಬೆಳಗುವ ಕಾರ್ಯಕ್ರಮ ನಡೆಸಿದರು. ಮಂಗಳ ವಾದ್ಯಗಳೊಂದಿಗೆ ನಡೆದ ಈ ಕಾರ್ಯಕ್ರಮ ಭಕ್ತರನ್ನು ಭಾವ ಪರವಶರನ್ನಾಗಿಸಿತು. ಅದರ ಬೆನ್ನಿಗೇ ರಾಮ್‌ ಕಿ ಪೌಡಿ ಎಂಬಲ್ಲಿರುವ ಯಜ್ಞಶಾಲೆಯಲ್ಲಿ ರಾಮ್‌ಡಾಲ್‌ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕಲ್ಕಿ ರಾಮ್‌ ಸೇರಿದಂತೆ ಹಲವರು ಯಜ್ಞ ನೆರವೇರಿಸಿದರು.

ಭೂಮಿ ಪೂಜೆ ನಡೆಯುತ್ತಿರುವುದರ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಮಂಗಳವಾರ ರಾತ್ರಿ ದೀಪೋತ್ಸವಕ್ಕೆ ಚಾಲನೆ ನೀಡಿದ್ದಾರೆ. ತಮ್ಮ ಅಧಿಕೃತ ನಿವಾಸದಲ್ಲಿ ಸ್ವತಃ ಯೋಗಿ ಅವರೇ ದೀಪ ಬೆಳಗಿದ್ದಾರೆ. ಈ ಮೂಲಕ ಭೂಮಿ ಪೂಜೆ ಕಾರ್ಯಕ್ಕೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ.

ಸಿಎಂ ಯೋಗಿ ಆದಿತ್ಯನಾಥ್ ಈ ಘಟನೆಯನ್ನು ಐತಿಹಾಸಿಕ ಎಂದು ಕರೆದಿದ್ದಾರೆ. "ಇದು ಐತಿಹಾಸಿಕ ಮಾತ್ರವಲ್ಲ. 500 ವರ್ಷಗಳ ನಂತರ ರಾಮ ದೇವಾಲಯದ ನಿರ್ಮಾಣ ಕಾರ್ಯ ಪ್ರಾರಂಭವಾಗುತ್ತಿದೆ. ಇದರಿಂದಾಗಿ ಭಾವನಾತ್ಮಕ ಕ್ಷಣವೂ ಆಗಿದೆ. ಇದು ಹೊಸ ಭಾರತದ ಅಡಿಪಾಯ. ಸಮಾರಂಭದಲ್ಲಿ ಕೋವಿಡ್‌-19 ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುವುದು. ಈ ಕಾರ್ಯಕ್ರಮದ ಮೂಲಕ ಪ್ರಧಾನಿ ಇಲ್ಲಿ 135 ಕೋಟಿ ಜನರನ್ನು ಪ್ರತಿನಿಧಿಸಲಿದ್ದಾರೆ. ಆಹ್ವಾನಿತರು ಮಾತ್ರ ಅಯೋಧ್ಯೆಗೆ ಭೇಟಿ ನೀಡಬೇಕೆಂದು ನಾನು ಮನವಿ ಮಾಡುತ್ತೇನೆ. ಉಳಿದವರು ಆಯಾ ಸ್ಥಳಗಳಲ್ಲಿದ್ದು ಪ್ರಾರ್ಥಿಸಬೇಕು ಎಂದು ಕೋರುತ್ತೇನೆ,’ ಎಂದು ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆ ಭೇಟಿ ವೇಳೆ ಹೇಳಿದ್ದರು.

ವೇದಿಕೆಯಲ್ಲಿ ಇರುವವರು

ಮತ್ತೊಂದೆಡೆ ಆರ್‌ಎಸ್‌ಎಸ್‌ನ ಮೋಹನ್‌ ಭಾಗವತ್‌ ಅವರು ಬಿಗಿ ಭದ್ರತೆಯಲ್ಲಿ ಮಂಗಳವಾರ ಸಂಜೆ ಅಯೋಧ್ಯೆ ತಲುಪಿದರು. ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯೂ ಸೇರಿದಂತೆ ಇರಲಿರುವ ಕೇವಲ ಐದು ಗಣ್ಯರಲ್ಲಿ ಮೋಹನ್‌ ಭಾಗವತ್‌ ಅವರೂ ಒಬ್ಬರು. ಇನ್ನುಳಿದಂತೆ ಯೋಗಿ ಆದಿತ್ಯನಾಥ್‌, ರಾಜ್ಯಪಾಲೆ ಆನಂದಿಬೇನ್‌ ಪಟೇಲ್‌, ರಾಮ ಮಂದಿರ ಟ್ರಸ್ಟ್‌ನ ನಿತ್ಯ ಗೋಪಾಲ ದಾಸ್‌ ಅವರು ವೇದಿಕೆಯಲ್ಲಿ ಇರಲಿದ್ದಾರೆ.

ಐವರು ಮುಸ್ಲಿಮರಿಗೆ ಆಹ್ವಾನ

ರಾಮ ಮಂದಿರ ಭೂಮಿ ಪೂಜೆಗೆ ಸರ್ಕಾರ ಐವರು ಮುಸ್ಲಿಂ ಪ್ರಮುಖರನ್ನು ಆಹ್ವಾನಿಸಿದೆ. ಅಯೋಧ್ಯೆ ಭೂ ವ್ಯಾಜ್ಯದ ಮುಸ್ಲಿಂ ಸಮುದಾಯದ ಪರ ಪ್ರತಿನಿಧಿ ಇಕ್ಬಾಲ್‌ ಅನ್ಸಾರಿ, ಉತ್ತರ ಪ್ರದೆಶದ ಶಿಯಾ ವಕ್ಫ್‌ ಬೋರ್ಡ್‌ ಅಧ್ಯಕ್ಷ ವಾಸೀಮ್‌ ರಿಜ್ವಿ, ಪದ್ಮಶ್ರೀ ಪುರಸ್ಕೃತ ಮೊಹಮದ್‌ ಶರೀಫ್‌, ಉತ್ತರ ಪ್ರದೇಶ ಸುನ್ನಿ ವಕ್ಫ್‌ ಬೋರ್ಡ್‌ನ ಜಫರ್‌ ಅಹ್ಮದ್‌ ಫಾರೂಖಿ ಅವರು ಮುಸ್ಲಿಂ ಸಮುದಾಯದ ಪರವಾಗಿ ಆಹ್ವಾನಗೊಂಡಿರುವ ಪ್ರಮುಖರು.

ತಮ್ಮ ಕೈಲಾದ ಸೇವೆ

ಕೋವಿಡ್‌ ಹಿನ್ನೆಲೆಯಲ್ಲಿ ಈ ಐತಿಹಾಸಿಕ ಕಾರ್ಯಕ್ರಮ ಸಾಂಕೇತಿಕವಾಗಿ ನಡೆಯುತ್ತಿದ್ದರೂ, ಸಂಘ ಸಂಸ್ಥೆಗಳು ತಮ್ಮ ಮಿತಿಯಲ್ಲೇ ರಾಮ ಮಂದಿ ನಿರ್ಮಾಣದ ಅಡಿಗಲ್ಲು ಕಾರ್ಯಕ್ರಮಕ್ಕಾಗಿ ಕೆಲಸ ಮಾಡುತ್ತಿವೆ. ಪ್ರಸಾದ ವಿನಿಯೋಗ, ಸಿಹಿ ವಿತರಣೆ ಮಾಡುವಲ್ಲಿ ಸಂಘಟನೆಗಳು ತೊಡಗಿಸಿಕೊಂಡಿವೆ.

ಬಿಗಿ ಭದ್ರತೆ

ಅಡಿಗಲ್ಲು ಕಾರ್ಯಕ್ರಮಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಭಾರಿ ಭದ್ರತೆಯನ್ನೂ ಒದಗಿಸಲಾಗಿದೆ. ಅಯೋಧ್ಯೆ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಎಲ್ಲ ರಸ್ತೆಗಳಲ್ಲೂ ಪೊಲೀಸರು ಬೀಡು ಬಿಟ್ಟಿದ್ದಾರೆ.

ಅಯೋಧ್ಯಯ ಬೀದಿ ಬೀದಿಗಳೂ ದೀಪಾಲಂಕಾರ, ಕಲಾಕೃತಿಗಳಿಂದ ಕಂಗೊಳಿಸುತ್ತಿದೆ. ವಿದ್ಯುತ್‌ ದೀಪಾಲಂಕಾರವಂತೂ ಇಡೀ ಅಯೋಧ್ಯೆಯನ್ನು ಜಗಮಗಿಸುವಂತೆ ಮಾಡಿದೆ.

ಈ ಮಧ್ಯೆ ಸರ್ಕಾರವು ಅಯೋಧ್ಯೆ ರಾಮ ಮಂದಿರದ ಉದ್ದೇಶಿದ ಚಿತ್ರ ಬಿಡುಗಡೆ ಮಾಡಿದೆ. ಅಯೋಧ್ಯೆ ಭೂ ವ್ಯಾಜ್ಯಕ್ಕೆ ಪೂರ್ವದಲ್ಲಿ ರೂಪಿಸಲಾದ ಯೋಜನೆಯನ್ನು ಕೈ ಬಿಟ್ಟು ಹೊಸ ಯೋಜನೆ ರೂಪಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು