ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೆ ಹತ್ಯೆ ಬೆನ್ನಿಗೇ ಟ್ವಿಟರ್‌ನಲ್ಲಿ ಟ್ರೆಂಡ್‌ ಆದ ‘ನಕಲಿ ಎನ್‌ಕೌಂಟರ್‌’

ಅಕ್ಷರ ಗಾತ್ರ

ನವದೆಹಲಿ: ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ,ಎಂಟು ಪೊಲೀಸರನ್ನುಕೊಂದಿದ್ದ, ರಾಜಕಾರಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎಂದು ಹೇಳಲಾದ ವಿಕಾಸ್‌ ದುಬೆ ಶುಕ್ರವಾರ ಮುಂಜಾನೆ ಪೊಲೀಸರ ಎನ್‌ಕೌಂಟರ್‌ನಲ್ಲಿ ಕೊಲೆಯಾಗಿದ್ದಾನೆ.

ಇದರ ಬೆನ್ನಿಗೇ ಸಾಮಾಜಿಕ ತಾಣಗಳಲ್ಲಿ #FakeEncounter (ನಕಲಿ ಎನ್‌ಕೌಂಟರ್‌) ಎಂಬ ಹ್ಯಾಶ್‌ಟ್ಯಾಗ್‌ ಟ್ರೆಂಡ್‌ ಆಗಿದೆ.

ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ 60 ಸಾವಿರಕ್ಕೂ ಅಧಿಕ ಮಂದಿ ಈ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಂಧನಕ್ಕೊಳಗಾದ ಮರುದಿನವೇ ಸಂಭವಿಸಿದ ಈ ಎನ್‌ಕೌಂಟರ್‌ ಅನ್ನು ದೇಶದ ಹಲವು ರಂಗಗಳ ಪ‍್ರಮುಖರು ನಕಲಿ ಎಂದು ಕರೆದಿದ್ದಾರೆ. ವಿಕಾಸ್‌ ದುಬೆಗಿದ್ದ ರಾಜಕಾರಣಿಗಳ ನಂಟು ಮತ್ತು ಆತನಲ್ಲಿದ್ದ ರಹಸ್ಯಗಳನ್ನು ಅಂತ್ಯಗಾಣಿಸಲು ‘ನಕಲಿ ಎನ್‌ಕೌಂಟರ್‌’ ಮಾಡಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಕಾಸ್‌ ದುಬೆಯನ್ನು ಸೆರೆಹಿಡಿಯಲು ಹೋಗಿ ಹುತಾತ್ಮಕರಾದ ಎಂಟು ಮಂದಿ ಪೊಲೀಸರಿಗೆ ಈ ನಕಲಿ ಎನ್‌ಕೌಂಟರ್‌ ಮೂಲಕ ಅಪಚಾರ ಮಾಡಲಾಗಿದೆ ಎಂದೂ, ದುಬೆ ನ್ಯಾಯಾಂಗ ಪ್ರಕ್ರಿಯೆಗಳ ಮೂಲಕ ಶಿಕ್ಷೆಗೆ ಒಳಪಟ್ಟು ಸಾಯಬೇಕಿತ್ತು ಎಂದೂ ಟ್ವಿಟರ್‌ನಲ್ಲಿ ಅಭಿಪ್ರಾಯಗಳೂ ವ್ಯಕ್ತವಾಗಿವೆ.

‘ಒಂದು ಬಾರಿ ನಾವು ನಕಲಿ ಎನ್‌ಕೌಂಟರ್‌ ಅನ್ನು ಪ್ರೋತ್ಸಾಹಿಸಿದರೆ, ಅದು ನಮ್ಮ ಬಳಿಯೇ ಬಂದು ನಿಲ್ಲುತ್ತದೆ,’ ಎಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ.

#FakeEncounter ಅಭಿಪ್ರಾಯಗಳಿವು

‘ವಿಕಾಸ್ ದುಬೆ ನಕಲಿ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿರುವ ಎಲ್ಲಾ ಪೊಲೀಸ್ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಲು ಆದಿತ್ಯನಾಥ್ ಆದೇಶಿಸದೇ ಹೋದರೆ, ಈ ನಕಲಿ ಎನ್‌ಕೌಂಟರ್‌ಗೆ ಆದಿತ್ಯನಾಥ್‌ ಅವರ ಸಮ್ಮತಿ ಇತ್ತು ಎಂಬುದು ಸ್ಪಷ್ಟವಾಗುತ್ತದೆ. ಅಂದರೆ ಆದಿತ್ಯನಾಥ್ ಅವರು ದುಬೆ ಜೊತೆಗೆ ಸಂಬಂಧವನ್ನು ಹೊಂದಿದ್ದರು ಎಂದಾಗುತ್ತದೆ,’ ಎಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಹೇಳಿದ್ದಾರೆ.

‘ಆಡಳಿತವು ಯಾರನ್ನಾದರೂ ಕೊಲ್ಲುವುದನ್ನು ನೀವು ಬೆಂಬಲಿಸಿದ್ದೇ ಆದರೆ, ಆಡಳಿತವು ಒಂದು ದಿನ ನಿಮ್ಮನ್ನು ಕೊಲ್ಲಲು ನಿಲ್ಲುತ್ತದೆ,’ ಎಂದು ವಿವೇಕ್‌ ನಂಬಿಯಾರ್‌ ಎಂಬ ಕೇರಳ ಮೂಲದ ಪತ್ರಕರ್ತ ಹೇಳಿಕೊಂಡಿದ್ದಾರೆ.

‘ಎನ್‌ಕೌಂಟರ್‌ ಅಲ್ಲದೇ ಇದ್ದರೂ ಬೇರೆ ಹೇಗಾದರೂ ವಿಕಾಸ್‌ ದುಬೆ ಸಾಯುತ್ತಿದ್ದ. ಆದರೆ ಈ ದಶಕಗಳಲ್ಲಿ ಅವನನ್ನು ಪೋಷಿಸಿದ ಹೆಚ್ಚು ಅಪಾಯಕಾರಿ ರಾಜಕಾರಣಿಗಳು ಮತ್ತು ಪೊಲೀಸರು, ವಿಚಾರಣೆಯಲ್ಲಿ ಆತ ಬಹಿರಂಗಪಡಿಸಬೇಕಾಗಿದ್ದ ಹೆಸರುಗಳು ಅವನ ಸುತ್ತ ಉಳಿದಿವೆ. ಸತ್ಯವನ್ನು ನಾವು ನೆನಪಿನಲ್ಲಿಟ್ಟುಕೊಳ್ಳೋಣ,’ ಎಂದು ಬೆಂಗಳೂರು ಮೂಲದ ಲೇಖಕರೊಬ್ಬರು ಹೇಳಿಕೊಂಡಿದ್ದಾರೆ.

‘ಯಾವುದೇ ಹಂತದಲ್ಲಿ, ಯಾವುದೇ ನೆಪದಲ್ಲಿ ನ್ಯಾಯಾಂಗವನ್ನೂ ಮೀರಿದ ಹತ್ಯೆಗಳನ್ನು ನೀವು ಬೆಂಬಲಿಸಿದರೆ, ನಂತರದವರೇ ನೀವಾಗಿರುತ್ತೀರಿ. ಇದು ನೆನಪಿರಲಿ. ಇಷ್ಟವಾಗದವರನ್ನು ಕಾನೂನಿನ ನಿಯಮಗಳನ್ನು ಮೀರಿ ರಾಜಕಾರಣಿಗಳು ಮತ್ತು ಪೊಲೀಸರು ಹೊಡೆದುಹಾಕುವುದಲ್ಲ ಕಾನೂನು. ಅಷ್ಟೇ...,’ ಎಂದು ಲೇಖಕಿ ಸಭಾ ನಖ್ವಿ ಅವರು ಹೇಳಿದ್ದಾರೆ.

‘ಪಾತಕಿ ವಿಕಾಸ್ ದುಬೆಯ ಕೊಲೆ ನಮ್ಮ ಸಂವಿಧಾನಕ್ಕೆ ಮತ್ತು ನ್ಯಾಯಾಂಗ ಪ್ರಕ್ರಿಯೆಗೆ ಮಾಡಿದ ಅಪಮಾನ. ನಮ್ಮ ನ್ಯಾಯಾಂಗವು ಸತ್ವ ಪರೀಕ್ಷೆಯ ಕಾಲಘಟ್ಟದಲ್ಲಿದೆ ಎಂಬುದರ ಸಂಕೇತ ಈ ಪ್ರಕರಣ. ಇದರ ವಿರುದ್ಧ ಅವರು ನಮ್ಮ ಸಂವಿಧಾನವನ್ನು ಸಮರ್ಥಿಸುತ್ತಾರೆಯೇ ಅಥವಾ ಅವರು ಬೇರೆಯದ್ದೇ ಮಾರ್ಗ ಹಿಡಿಯುತ್ತಾರೆಯೇ,’ ಎಂದು ಬರಹಗಾರ ನಿಖಿಲ್‌ ಅಳ್ವಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಾಲಿವುಡ್‌ ನಟಿ ತಪ್ಸಿ ಪನ್ನು ಅವರು ಈ ಪ್ರಕರಣವನ್ನು ಆಡಳಿತಗಾರರ ವಿರುದ್ಧದ ವ್ಯಂಗ್ಯಕ್ಕೆ ಬಳಸಿಕೊಂಡಿದ್ದಾರೆ. ‘ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಇದೆಲ್ಲದರ ನಂತರ ಅವರು ನಮ್ಮ ಬಾಲಿವುಡ್ ಕಥೆಗಳು ವಾಸ್ತವದಿಂದ ದೂರವಿದೆ ಎಂದು ಹೇಳುತ್ತಾರೆ,’ ಎಂದು ಗೇಲಿ ಮಾಡಿದ್ದಾರೆ.

ಕಳೆದ ಶುಕ್ರವಾರ (ಜುಲೈ 3) ಕುಖ್ಯಾತ ರೌಡಿ ಶೀಟರ್‌ ವಿಕಾಸ್‌ ದುಬೆಯನ್ನು ಬಂಧಿಸಲು ಪೊಲೀಸರು ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಬಿಕ್ರು ಗ್ರಾಮಕ್ಕೆ ತೆರಳಿದ್ದರು. ಆದರೆ, ಪೊಲೀಸರ ಬರುವಿಕೆ ಮಾಹಿತಿ ಪಡೆದಿದ್ದ ದುಬೆ ಗ್ಯಾಂಗ್‌, ಪೊಲೀಸರ ಮೇಲೆಯೇ ದಾಳಿ ನಡೆಸಿತ್ತು. ಏಕಾಏಕಿ ನಡೆದ ದಾಳಿಯಲ್ಲಿ ಡಿವೈಎಸ್‌ಪಿ ಸೇರಿದಂತೆ ಎಂಟು ಪೊಲೀಸರು ಹತ್ಯೆಯಾದರು. ಆ ದುರ್ಘಟನೆ ನಡೆದು ಸರಿಯಾಗಿ ಒಂದು ವಾರಕ್ಕೆ ವಿಕಾಸ್‌ ದುಬೆ ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಸುಮಾರು 60 ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದ ಕಾನ್ಪುರದ ಡಾನ್‌ ಕಥೆ ಮುಗಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT