ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಬಿಕ್ಕಟ್ಟು: ತಕರಾರು ಸ್ಥಳದಿಂದ ಸೈನಿಕರು ಹಿಂದಕ್ಕೆ

ಎರಡು ಗಸ್ತು ಪಾಯಿಂಟ್‌, ಪಾಂಗಾಂಗ್‌ ಸರೋವರದಲ್ಲಿ ಮುಂದುವರಿದ ಪ್ರಕ್ರಿಯೆ
Last Updated 8 ಜುಲೈ 2020, 20:07 IST
ಅಕ್ಷರ ಗಾತ್ರ

ನವದೆಹಲಿ: ಪೂರ್ವ ಲಡಾಖ್‌ನ ವಾಸ್ತವ ಗಡಿ ನಿಯಂತ್ರಣ ರೇಖೆಯಿಂದ (ಎಲ್‌ಎಸಿ) ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಭಾರತ ಮತ್ತು ಚೀನಾ ಸೇನೆಗಳು ಬುಧವಾರವೂ ನಡೆಸಿವೆ. ಗಡಿ ಸಂಘರ್ಷದ ಸ್ಥಳಗಳಲ್ಲಿ ಒಂದಾದ ಗಸ್ತು ಪಾಯಿಂಟ್‌ 15ರಿಂದ ಸೈನಿಕರನ್ನು ಎರಡೂ ದೇಶಗಳು ಸಂಪೂರ್ಣವಾಗಿ ತೆರವು ಮಾಡಿವೆ.

ಗಸ್ತು ಪಾಯಿಂಟ್‌ 15ರ ಗೋಗ್ರಾ ಠಾಣೆ ಮತ್ತು ಹಾಟ್‌ ಸ್ಪ್ರಿಂಗ್ಸ್‌ ಪ್ರದೇಶದಲ್ಲಿದ್ದ ಸೈನಿಕರನ್ನು ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ. ಸೈನಿಕರು ಎಲ್‌ಎಸಿಯಿಂದ ಸುಮಾರು ಎರಡು ಕಿ.ಮೀ. ಹಿಂದಕ್ಕೆ ಹೋಗಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಗಸ್ತು ಪಾಯಿಂಟ್‌ 17 ಮತ್ತು 17ಎಯಲ್ಲಿನ ಸಂಘರ್ಷ ಶಮನ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಒಂದೆರಡು ದಿನ ಬೇಕಾಗಬಹುದು.

ಇದರೊಂದಿಗೆ, ಗಸ್ತು ಪಾಯಿಂಟ್‌ 14 ಮತ್ತು 15ರಿಂದ ಸೈನಿಕರು ಪೂರ್ಣವಾಗಿ ಹಿಂದಕ್ಕೆ ಸರಿದಂತಾಗಿದೆ. ಜೂನ್‌ 15ರಂದು ಹಿಂಸಾತ್ಮಕ ಬಡಿದಾಟ ನಡೆದು ಭಾರತದ 20 ಯೋಧರು ಹುತಾತ್ಮರಾಗಿದ್ದ ಪ್ರದೇಶ ಗಸ್ತು ಪಾಯಿಂಟ್‌ 14. ಎರಡೂ ಗಸ್ತು ಪಾಯಿಂಟ್‌ಗಳಿಂದ ಸೈನಿಕರು ಹಿಂದಕ್ಕೆ ಹೋಗಿದ್ದಾರೆ ಎಂಬುದನ್ನು ಉಪಗ್ರಹ ಚಿತ್ರಗಳು ಕೂಡ ದೃಢಪಡಿಸಿವೆ.

ತಕರಾರಿನ ಇನ್ನೊಂದು ಸ್ಥಳವಾದ ಪಾಂಗಾಂಗ್‌ ಸರೋವರ ಪ್ರದೇಶದಲ್ಲಿ ಚೀನಾವು ಭಾರಿ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿತ್ತು. ಅಲ್ಲಿಯೂ ಚೀನಾದ ಸೈನಿಕರ ಸಂಖ್ಯೆ ಈಗ ಕಡಿಮೆಯಾಗಿದೆ. ಆದರೆ, ಇಲ್ಲಿನ ಫಿಂಗರ್‌–4 ಪ್ರದೇಶದಿಂದ ಸೈನಿಕರನ್ನುಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳುವ ಲಕ್ಷಣ ಈವರೆಗೆ ಕಾಣಿಸಿಲ್ಲ.

135 ಕಿ.ಮೀ. ಉದ್ದದ ಪಾಂಗಾಂಗ್‌ ಸರೋವರದ ಉತ್ತರ ದಂಡೆಯ ಫಿಂಗರ್‌ 8 ಪ್ರದೇಶದವರೆಗೆ ಭಾರತದ ಯೋಧರು ಗಸ್ತು ನಡೆಸುತ್ತಿದ್ದರು. ಈ ಪ್ರದೇಶವು ಫಿಂಗರ್‌–4 ಪ್ರದೇಶದಿಂದ 8 ಕಿ.ಮೀ. ಪೂರ್ವಕ್ಕಿದೆ.

ಸೈನಿಕರ ತೆರವನ್ನು ದೃಢೀಕರಿಸುವುದಕ್ಕಾಗಿ ಎರಡೂ ದೇಶಗಳ ಸೇನೆಯ ಹಿರಿಯ ಕಮಾಂಡರ್‌ ಮಟ್ಟದ ಮಾತುಕತೆಯ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಇದಕ್ಕಾಗಿ ಸಮಯವನ್ನು ಇನ್ನೂ ನಿಗದಿ ಮಾಡಲಾಗಿಲ್ಲ. ತಾತ್ಕಾಲಿಕ ನಿರ್ಮಾಣಗಳು ಮತ್ತು ಸೈನಿಕರ ತೆರವು ಪೂರ್ಣಗೊಂಡ ಬಳಿಕ ಜಂಟಿ ದೃಢೀಕರಣವು ನಡೆಯಲಿದೆ. ಇದಲ್ಲದೆ, ಎಲ್‌ಎಸಿಯಲ್ಲಿ ಶಾಂತಿ ಸ್ಥಾಪನೆ ಮತ್ತು ಈ ಪ್ರದೇಶವನ್ನು ಸಹಜ ಸ್ಥಿತಿಗೆ ತರುವ ಪ್ರಕ್ರಿಯೆಗಳ ಬಗ್ಗೆಯೂ ಮಾತುಕತೆ ನಡೆಯಬೇಕಿದೆ.

ಎಲ್‌ಎಸಿಯ ಉದ್ದಕ್ಕೂ ಸೈನಿಕರು ಮತ್ತು ಯುದ್ಧೋಪಕರಣಗಳನ್ನು ಜಮಾಯಿಸುವ ಕೆಲಸವನ್ನು ಚೀನಾ ಏಪ್ರಿಲ್‌ ಮಧ್ಯಭಾಗದಲ್ಲಿಯೇ ಆರಂಭಿಸಿತ್ತು. ಮೇ 5ರ ಹೊತ್ತಿಗೆ ಇದು ಬಿಕ್ಕಟ್ಟಿನ ಸ್ವರೂಪ ಪಡೆದುಕೊಂಡಿತ್ತು. ಚೀನಾದ ನಡೆಗೆ ಪ್ರತಿಯಾಗಿ ಭಾರತವೂ ಗಡಿಯಲ್ಲಿ ಸಾವಿರಾರು ಯೋಧರು, ಟ್ಯಾಂಕ್‌ ಮತ್ತು ಫಿರಂಗಿಗಳನ್ನು ನಿಯೋಜಿಸಿತ್ತು.

ಎಲ್‌ಎಸಿಯಲ್ಲಿ ಚೀನಾವು ಮಾಡಿಕೊಂಡಿರುವ ಸನ್ನಾಹಗಳನ್ನು ಹಿಂದಕ್ಕೆ ಪಡೆಯುವವರೆಗೆ ಭಾರತ ಕೂಡ ಅದಕ್ಕೆ ತಕ್ಕುದಾದ ಎಚ್ಚರದಲ್ಲಿ ಇರಲಿದೆ ಎಂದು ಮೂಲಗಳು ತಿಳಿಸಿವೆ.

ಗಡಿ ರಸ್ತೆ: ಭೂತಾನ್ ಮೇಲೆ ಭಾರತ ಒತ್ತಡ ಸಾಧ್ಯತೆ

ಭೂತಾನ್‌ನ ‘ಯೇತಿ ಪ್ರಾಂತ್ಯ’ವನ್ನು ಹಾದು ಹೋಗುವ ರಸ್ತೆ ನಿರ್ಮಿಸಲು ಭಾರತಕ್ಕೆ ಆ ದೇಶ ಅನುಮತಿ ನೀಡಲು ಮೀನಮೇಷ ಎಣಿಸುತ್ತಿದೆ. ಈಗ, ಭೂತಾನ್‌ನ ಪೂರ್ವದ ಪ್ರದೇಶವೊಂದರ ಮೇಲೆ ಹಕ್ಕು ಸಾಧಿಸಲು ಚೀನಾ ಮುಂದಾಗಿದೆ. ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ನೀಡುವಂತೆ ಭೂತಾನ್‌ನ ಮೇಲೆ ಭಾರತವು ಒತ್ತಡ ಹೇರುವ ಸಾಧ್ಯತೆ ಇದೆ.

ಈ ರಸ್ತೆಯು ಪೂರ್ಣಗೊಂಡರೆ, ಅಸ್ಸಾಂನ ಗುವಾಹಟಿಯಿಂದ ಅರುಣಾಚಲ ಪ್ರದೇಶದಲ್ಲಿನ ಭಾರತ–ಚೀನಾ ಗಡಿ ವಿವಾದವಿರುವ ಸ್ಥಳಕ್ಕೆ ಸಮೀಪದ ತವಾಂಗ್‌ ನಡುವಣ ದೂರವು ಸುಮಾರು 150 ಕಿ.ಮೀ.ನಷ್ಟು ಕಡಿಮೆಯಾಗಲಿದೆ. ಪ್ರಯಾಣದ ಅವಧಿಯು ಈಗಿನ 15 ತಾಸಿನಿಂದ 9–10 ತಾಸಿಗೆ ಇಳಿಯಲಿದೆ. ಗಡಿ ಪ್ರದೇಶದಲ್ಲಿ ಚೀನಾವು ಯಾವುದೇ ಕ್ರಮ ಕೈಗೊಂಡಾಗ ಅಲ್ಲಿಗೆ ಸೈನಿಕರನ್ನು ಕಳುಹಿಸುವುದು ಭಾರತಕ್ಕೆ ಸುಲಭವಾಗಲಿದೆ. ಅಗತ್ಯ ಬಿದ್ದರೆ, ಭೂತಾನ್‌ನ ಪೂರ್ವ ಪ್ರದೇಶಕ್ಕೂ ಭಾರತದ ಸೈನಿಕರು ತ್ವರಿತವಾಗಿ ತಲುಪಬಹುದು.

ರಸ್ತೆ ಯೋಜನೆ ಬಹಳ ಹಿಂದೆಯೇ ಸಿದ್ಧವಾಗಿತ್ತು. ಗಡಿ ರಸ್ತೆಗಳ ಸಂಘಟನೆ (ಬಿಆರ್‌ಒ) ಮೂಲಕ ಈ ರಸ್ತೆ ನಿರ್ಮಿಸಲು ಭಾರತ ಸಿದ್ಧವೂ ಇದೆ. ಆದರೆ, ಅನುಮತಿ ನೀಡಲು ಭೂತಾನ್‌ ವಿಳಂಬ ಮಾಡಿದ್ದರಿಂದಾಗಿ ಯೋಜನೆ ನನೆಗುದಿಗೆ ಬಿತ್ತು. ಈಗ, ಭಾರತವು ಈ ಯೋಜನೆಯನ್ನು ತ್ವರಿತವಾಗಿ ಜಾರಿಗೆ ತರಲು ಮುಂದಾಗಿದೆ.

ಭಾರತ ಮತ್ತು ಭೂತಾನ್‌ಗೆ ಸಮಾನವಾದ ರಕ್ಷಣಾ ಹಿತಾಸಕ್ತಿಗಳಿವೆ. ಅರುಣಾಚಲ ಪ್ರದೇಶದ 9 ಸಾವಿರ ಚದರ ಕಿ.ಮೀ. ಪ್ರದೇಶದ ಮೇಲೆಯೂ ಚೀನಾದ ಹಕ್ಕು ಪ್ರತಿಪಾದನೆ ಇದೆ. ಭೂತಾನ್‌ನ ಪೂರ್ವದ ತುತ್ತ ತುದಿಯ ಪ್ರದೇಶದ ಮೇಲೆ ಚೀನಾ ಕಣ್ಣ ಹಾಕಿರುವುದರ ಜತೆ ಇದಕ್ಕೆ ಸಂಬಂಧ ಇದೆ. ಹಾಗಾಗಿ, ರಕ್ಷಣೆಯ ದೃಷ್ಟಿಯಿಂದ ಭಾರತ ಮತ್ತು ಭೂತಾನ್‌ಗೆ ಮಹತ್ವದ್ದಾದ ರಸ್ತೆ ಯೋಜನೆಗೆ ಭೂತಾನ್‌ ಒಪ್ಪಿಗೆ ನೀಡಬಹುದು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT