ಸೋಮವಾರ, ಮೇ 17, 2021
21 °C

ಇನ್ನಷ್ಟು ರೈಲುಗಳ ಸಂಚಾರ: ಕಾದು ನೋಡಲು ರೈಲ್ವೆ ಮಂಡಳಿ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೊರೊನಾ ಸೋಂಕು ಪ್ರಕರಣ ಏರುತ್ತಲೇ ಇರುವುದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಪ್ಯಾಸೆಂಜರ್‌ ರೈಲುಗಳ ಸೇವೆ ಒದಗಿಸಲು ಸ್ವಲ್ಪ ಸಮಯ ಬೇಕಾಗುತ್ತದೆ’ ಎಂದು ಭಾರತೀಯ ರೈಲ್ವೆ ತಿಳಿಸಿದೆ.

ರೈಲ್ವೆ ಅಧಿಕಾರಿಗಳು ರಾಜ್ಯ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿದ್ದು, ‘ರಾಜ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ರೈಲು ಸೇವೆ ಒದಗಿಸುವಂತೆ ಕೇಳಿಕೊಂಡರೆ, ನಾವು ಅದನ್ನು ಕಾರ್ಯಗತಗೊಳಿಸಲು ಸಿದ್ಧರಿದ್ದೇವೆ’ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್ ಶನಿವಾರ ಆನ್‌ಲೈನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಸ್ತುತ 230 ವಿಶೇಷ ಪ್ರಯಾಣಿಕ ರೈಲುಗಳು ಕಾರ್ಯನಿರ್ವಹಿಸುತ್ತಿವೆ. ಬಹುತೇಕ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ತುಂಬಾ ಕಡಿಮೆ ಇದ್ದು, ಬೋಗಿಗಳು ಖಾಲಿ ಇವೆ. ಜನರ ಅಗತ್ಯಗಳಿಗೆ ತಕ್ಕಷ್ಟೇ ರೈಲುಗಳು ಸಂಚರಿಸುತ್ತಿವೆ. ‌ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. ಸರಕು ಸಾಗಣೆ ಪ್ರಮಾಣ ದುಪ್ಪಟ್ಟುಗೊಳಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದರು.   

‘ಮೇ 1 ರಿಂದ ಇಲ್ಲಿಯವರೆಗೆ 4,615 ಶ್ರಮಿಕ್‌ ವಿಶೇಷ ರೈಲುಗಳು ವಲಸೆ ಕಾರ್ಮಿಕರು ಮತ್ತು ಇತರೆ ರಾಜ್ಯಗಳಲ್ಲಿ ಸಿಲುಕಿದವರನ್ನು ಅವರವರ ಊರುಗಳಿಗೆ ತಲುಪಿಸುವ ಕಾರ್ಯ ಮಾಡಿದೆ. ಅಗತ್ಯವಿದ್ದರೆ, ಹೆಚ್ಚಿನ ಶ್ರಮಿಕ್‌ ವಿಶೇಷ ರೈಲುಗಳು ಕಾರ್ಯನಿರ್ವಹಿಸಲು ಸಿದ್ಧವಾಗಿವೆ’ ಎಂದು ಅವರು ಹೇಳಿದರು.

ವಿವಿಧ ರಾಜ್ಯ ಸರ್ಕಾರಗಳ ಮನವಿಯ ಮೇರೆಗೆ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ 813 ರೈಲ್ವೆ ಬೋಗಿಗಳಲ್ಲಿ 12,712 ಹಾಸಿಗೆಗಳ ಸೌಲಭ್ಯ ಕಲ್ಪಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು