ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ಬಿಕ್ಕಟ್ಟು: ವೀಕ್ಷಕರಾಗಿ ಮಾಕೆನ್‌, ಸುರ್ಜೇವಾಲಾ ನೇಮಕ

ಶಾಸಕರ ಜತೆ ಮಾತುಕತೆ, ಸರ್ಕಾರ ಉಳಿಸುವ ಯತ್ನ
Last Updated 13 ಜುಲೈ 2020, 2:32 IST
ಅಕ್ಷರ ಗಾತ್ರ

ನವದೆಹಲಿ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ಮತ್ತು ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ನಡುವಣ ಭಿನ್ನಮತ ಶಮನಕ್ಕೆ ಮುಂದಾಗಿರುವ ಕಾಂಗ್ರೆಸ್‌ ಹೈಕಮಾಂಡ್, ಪಕ್ಷದ ಶಾಸಕರೊಂದಿಗೆ ಮಾತುಕತೆ ನಡೆಸಲು ಕೇಂದ್ರದ ವೀಕ್ಷಕರನ್ನಾಗಿ ಹಿರಿಯ ಮುಖಂಡರಾದ ಅಜಯ ಮಾಕೆನ್‌ ಹಾಗೂ ರಣದೀಪ್‌ ಸುರ್ಜೇವಾಲಾ ಅವರನ್ನು ಜೈಪುರಕ್ಕೆ ಭಾನುವಾರ ಕಳುಹಿಸಿದೆ.

ಇನ್ನೊಂದೆಡೆ,ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜಸ್ಥಾನ ಉಸ್ತುವಾರಿ ಅವಿನಾಶ್‌ ಪಾಂಡೆ ಅವರು, ‘ರಾಜ್ಯ ಸರ್ಕಾರ ಸ್ಥಿರವಾಗಿದ್ದು, ತನ್ನ ಅವಧಿಯನ್ನು ಪೂರ್ಣಗೊಳಿಸುವುದು’ ಎಂದು ಹೇಳಿದ್ದಾರೆ.

‘ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಅವರನ್ನು ಸಂಪರ್ಕಿಸಲು ಕಳೆದ ಎರಡು ದಿನಗಳಿಂದ ನಡೆಸಿದ ಪ್ರಯತ್ನ ಫಲ ನೀಡಿಲ್ಲ. ಅವರಿಗೆ ಸಂದೇಶ ರವಾನಿಸಿದ್ದು, ಉತ್ತರದ ನಿರೀಕ್ಷೆಯಲ್ಲಿದ್ದೇನೆ’ ಎಂದೂ ಪಾಂಡೆ ಹೇಳಿದ್ದಾರೆ.

ಈ ನಡುವೆ, ಪೈಲಟ್‌ ಅವರ ಬೆಂಬಲಿಗರು ಎಂದೇ ಪರಿಗಣಿಸಲಾಗಿದ್ದ ಮೂವರು ಶಾಸಕರು ಭಾನುವಾರ ದೆಹಲಿಯಿಂದ ಜೈಪುರಕ್ಕೆ ಮರಳಿದ್ದು, ತಮ್ಮ ಬೆಂಬಲ ಏನಿದ್ದರೂ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಎಂದು ಘೋಷಿಸಿದ್ದಾರೆ.

‘ನಾವು ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತರು’ ಎಂದು ಶಾಸಕರಾದ ಡ್ಯಾನಿಷ್‌ ಅಬ್ರಾರ್‌, ರೋಹಿತ್‌ ಬೋಹ್ರಾ ಹಾಗೂ ಚೇತನ್‌ ದೂಡಿ ಹೇಳಿದ್ದಾರೆ.

‘ಸಚಿನ್‌ ಪೈಲಟ್‌ ಅವರಿಗೆ ಅವಮಾನ ಮಾಡಬೇಕು ಎಂಬ ಉದ್ದೇಶದಿಂದಲೇ ಅವರಿಗೆ ಎಸ್‌ಒಜಿ ನೋಟಿಸ್‌ ನೀಡಿದೆ’ ಎನ್ನುವ ಪೈಲಟ್‌ ಬೆಂಬಲಿಗರು,‘ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಗೆಹ್ಲೋಟ್‌ ಅವರಿಗೆ ನೋಟಿಸ್‌ ನೀಡಿರುವುದು ಕಣ್ಣೊರೆಸುವ ತಂತ್ರವಷ್ಟೇ’ ಎಂದಿದ್ದಾರೆ.

ಇನ್ನೊಂದೆಡೆ, ‘ಪ್ರತಿಯೊಬ್ಬರೂ ಎಸ್‌ಒಜಿಯೊಂದಿಗೆ ಸಹಕರಿಸಬೇಕು. ತನಿಖೆಗೆ ಒಳಪಡುವುದರಿಂದ ಯಾವುದೇ ಹಾನಿ ಇಲ್ಲ’ ಎಂದು ಅವಿನಾಶ್‌ ಪಾಂಡೆ ಹೇಳಿದ್ದಾರೆ.

‘ಆಡಳಿತಾರೂಢ ಪಕ್ಷವೊಂದು ಈ ಮೊದಲು ಮಧ್ಯಪ್ರದೇಶದಲ್ಲಿ ಶಾಸಕರನ್ನು ಖರೀದಿ ಮಾಡಿತು. ಈಗ ರಾಜಸ್ಥಾನದಲ್ಲಿ ಇಂತಹ ಕೆಲಸದಲ್ಲಿ ತೊಡಗಿದೆ’ ಎಂದು ರಣದೀಪ್‌ ಸುರ್ಜೇವಾಲಾ ಟ್ವೀಟ್‌ ಮೂಲಕ ಪರೋಕ್ಷವಾಗಿ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT