ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಸುಲಿಗೆ ಮಾಡುತ್ತಿರುವ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ಸೂಚನೆ

ತೆಲಂಗಾಣ ಹೈಕೋರ್ಟ್‌
Last Updated 8 ಜುಲೈ 2020, 4:21 IST
ಅಕ್ಷರ ಗಾತ್ರ

ಹೈದರಾಬಾದ್: ಕೋವಿಡ್-19ರ ಚಿಕಿತ್ಸೆಗೆಂದು ರೋಗಿಗಳಿಂದ ಹಣ ಸುಲಿಯುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ತೆಲಂಗಾಣ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ ನೀಡಿದೆ.

'ರೋಗಿಗಳನ್ನು ಸುಲಿಗೆ ಮಾಡಲು ಖಾಸಗಿ ಆಸ್ಪತ್ರೆಗಳಿಗೆ ಏಕೆ ಅವಕಾಶ ಕೊಟ್ಟಿರಿ? ಸರ್ಕಾರ ಏಕೆ ಎಲ್ಲವನ್ನೂ ನೋಡಿಕೊಂಡು ಸುಮ್ಮನಿದೆ? ಚಿಕಿತ್ಸೆಗೆ ಶೀಘ್ರ ದರಮಿತಿ ವಿಧಿಸಬೇಕು' ಎಂದು ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ ಬಿ.ವಿಜಯಸೇನಾ ರೆಡ್ಡಿ ಅವರಿದ್ದ ನ್ಯಾಯಪೀಠವು ಸೂಚಿಸಿತು. ಕೇಂದ್ರ ಸರ್ಕಾರ ಮತ್ತು ಕ್ಲಿನಿಕಲ್ ಸೌಕರ್ಯಗಳ ರಾಷ್ಟ್ರೀಯ ಮಂಡಳಿ, ಖಾಸಗಿ ಆಸ್ಪತ್ರೆಗಳಾದ ಯಶೋಧಾ, ಕೇರ್, ಸನ್‌ಶೈನ್ ಮತ್ತು ಮೆಡಿಕವರ್‌ಗಳಿಗೂ ಹೈಕೋರ್ಟ್‌ ನೊಟೀಸ್ ಜಾರಿ ಮಾಡಿತು.

ಕೆಲ ಆಸ್ಪತ್ರೆಗಳು ಲಕ್ಷಾಂತರ ರೂಪಾಯಿಯಷ್ಟು ಬಿಲ್‌ ನೀಡಿವೆ. ರೋಗಿ ಸತ್ತ ನಂತರ, ಕುಟುಂಬದ ಸದಸ್ಯರು ಬಿಲ್ ಪಾವತಿಸುವವರೆಗೆ ಪಾರ್ಥಿವ ಶರೀರ ನೀಡದಿರುವ ಸಾಕಷ್ಟು ಉದಾಹರಣೆಗಳಿವೆ. ಸರ್ಕಾರ ನಿಗದಿಪಡಿಸಿರುವುದಕ್ಕಿಂತಲೂ ಹೆಚ್ಚು ಹಣ ಪಡೆದಿರುವ ಬಗ್ಗೆ ತನಿಖೆ ನಡೆಸಿ, ಜುಲೈ 14ರ ಒಳಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠವು ನಿರ್ದೇಶನ ನೀಡಿತು.

'ಸರ್ಕಾರದ ಸೂಚನೆಗಳನ್ನು ಖಾಸಗಿ ಆಸ್ಪತ್ರೆಗಳು ಲೆಕ್ಕಕ್ಕೆ ಇರಿಸಿಕೊಳ್ಳುತ್ತಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ಹೊಸದಾಗಿ ಮಾರ್ಗದರ್ಶಿ ಸೂತ್ರಗಳನ್ನುರಚಿಸಿಕೊಡಿ. ರೋಗಿಗಳ ಸುಲಿಗೆ ನಡೆಯುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಎಂದಾದರೆ ಏಕೆ ಎಂಬುದನ್ನು ನಮಗೆ ವಿವರಿಸಬೇಕು. ಓರ್ವ ವೈದ್ಯಕೀಯ ಅಧಿಕಾರಿಯನ್ನು ಸಕಾಲಕ್ಕೆ ಡಿಸ್‌ಚಾರ್ಜ್ ಮಾಡದ ಆಸ್ಪತ್ರೆಯ ವಿರುದ್ಧ ಏನು ಕ್ರಮ ಜರುಗಿಸಲಾಗಿದೆ ಎಂಬ ಬಗ್ಗೆಯೂ ಮಾಹಿತಿ ನೀಡಬೇಕು' ಎಂದು ಹೈಕೋರ್ಟ್‌ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT