ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವುಹಾನ್‌ ಲ್ಯಾಬ್‌ನಿಂದ ಕೊರೊನಾ ವೈರಾಣು ಹರಡಿತೆ? ಅಮೆರಿಕ ತನಿಖೆ: ಟ್ರಂಪ್ ಹೇಳಿಕೆ

Last Updated 16 ಏಪ್ರಿಲ್ 2020, 6:58 IST
ಅಕ್ಷರ ಗಾತ್ರ

ವಾಷಿಂಗ್‌ಟನ್: ಚೀನಾದ ವುಹಾನ್‌ನಲ್ಲಿರುವ ಪ್ರಯೋಗಾಲಯದಿಂದ ಕೊರೊನಾ ವೈರಸ್‌ ಹರಡಿತೆಎಂಬುದನ್ನು ಪತ್ತೆಹಚ್ಚಲು ತಮ್ಮ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ. ಈ ವಿಚಾರದಲ್ಲಿ ಚೀನಾ ಶುದ್ಧಹಸ್ತವನ್ನು ಸಾಬೀತುಪಡಿಸಬೇಕು ಎಂದುಅಮೆರಿಕದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಮೈಕ್ ಪಾಂಪಿಯೊ ಆಗ್ರಹಿಸಿದ್ದಾರೆ.

ಈ ವೈರಸ್‌ ಎಲ್ಲಿಂದ ಹೊರಹೊಮ್ಮಿತು ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದಿದೆ ಎಂದು ಅಮೆರಿಕದ ಸಶಸ್ತ್ರ ಪಡೆಗಳ ಮುಖ್ಯಸ್ಥರಾದ ಮಾರ್ಕ್ ಮಿಲೆ ಹೇಳಿದ್ದಾರೆ.

'ಕೊರೊನಾ ವೈರಸ್‌ ಚೀನಾದ ಪ್ರಯೋಗಾಲಯದಿಂದ ವೈರಸ್‌ ಹೊರಬಂದಿರಲಾರದು.ನೈಸರ್ಗಿಕವಾಗಿಯೇ ಹರಡಿರಬಹುದು ಎಂದು ಎಂದು ಗುಪ್ತಚರ ವರದಿಗಳು ಹೇಳಿವೆ. ಆದರೆ ಪುಷ್ಟೀಕರಿಸಲು ಸಾಕಷ್ಟು ಸಾಕ್ಷ್ಯಗಳಿಲ್ಲ ಎಂದು ಮಿಲೆ ವಿವರಿಸಿದ್ದಾರೆ.

'ಚೀನಾದ ವುಹಾನ್‌ ಪ್ರಯೋಗಾಲಯದಿಂದ ಕೊರೊನಾವೈರಸ್ ಹರಡಿದೆ. ಚೀನಾ ಇದನ್ನು ಜೈವಿಕ ಸಮರಕ್ಕಾಗಿ ಅಭಿವೃದ್ಧಿಪಡಿಸಿರಲಿಲ್ಲ. ತನಗೆ ವೈರಸ್‌ ವಿರುದ್ಧಹೋರಾಡುವ ಸಾಮರ್ಥ್ಯವು ಅಮೆರಿಕದ ಸರಿಸಮ ಅಥವಾ ಅದಕ್ಕಿಂತ ಹೆಚ್ಚಾಗಿದೆ ಎಂಬುದನ್ನು ಸಾಬೀತುಪಡಿಸಲು ಚೀನಾ ವೈರಾಣು ಅಭಿವೃದ್ಧಿಪಡಿಸಿರಬಹುದು' ಎಂದು ಫಾಕ್ಸ್ ನ್ಯೂಸ್ ಬುಧವಾರ ವರದಿ ಮಾಡಿತ್ತು.

ವುಹಾನ್‌ನಲ್ಲಿರುವ ವೈರಾಲಜಿ ಲ್ಯಾಬ್‌ನಲ್ಲಿ ಪ್ರಯೋಗಗಳು ನಡೆದಿವೆ. ಸಾಕಷ್ಟು ಸುರಕ್ಷಾ ಕ್ರಮಗಳನ್ನು ಅನುಸರಿಸದ ಕಾರಣ ವೈರಾಣುಗಳು ಪ್ರಯೋಗಾಲಯದಿಂದ ಸೋರಿ, ಸಮೀಪದ ವೆಟ್ ಮಾರ್ಕೆಟ್‌ಗೆ (ಪ್ರಾಣಿ ಮಾರುಕಟ್ಟೆ) ಹರಡಿವೆ. ಅಲ್ಲಿಂದ ಜನರಿಗೆ ವೈರಾಣುಗಳ ಸೋಂಕು ಹರಡಿದೆ ಎಂದು ವರದಿ ಹೇಳಿತ್ತು.

ವೈಟ್‌ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ವುಹಾನ್‌ ಲ್ಯಾಬ್‌ನಿಂದ ವೈರಾಣು ಸೋರಿಕೆಯಾಗಿರುವ ಬಗ್ಗೆ ಈ ಹಿಂದೆ ವರದಿಗಾರರು ಪ್ರಶ್ನಿಸಿದ್ದರು. ಈ ಪ್ರಶ್ನೆಗಳಿಗೆ ಟ್ರಂಪ್, ತಮಗೇನೂ ತಿಳಿದಿಲ್ಲ ಎಂದು ಹೇಳಿ ಜಾರಿಕೊಂಡಿದ್ದರು.

'ಇಂಥ ಭೀಕರ ಪರಿಸ್ಥಿತಿ ಏಕೆ ಸೃಷ್ಟಿಯಾಯಿತು ಎಂಬ ಬಗ್ಗೆ ಪರಿಶೀಲಿಸುತ್ತಿದ್ದೇವೆ' ಎಂದು ಟ್ರಂಪ್ ಹೇಳಿದ್ದರು.

ನೀವು ಈ ಕುರಿತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಮಾತನಾಡಿದ್ದೀರಾ ಎಂಬ ಪ್ರಶ್ನೆಗೆ ಟ್ರಂಪ್, ಪ್ರಯೋಗಾಲಯದ ಬಗ್ಗೆ ಪಿಂಗ್ ಅವರೊಂದಿಗೆ ಏನು ಮಾತನಾಡಿದೆ ಎಂಬುದನ್ನು ನಾನು ಚರ್ಚಿಸಲು ಬಯಸುವುದಿಲ್ಲ. ಈಗ ಆ ವಿಷಯ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದರು.

ಚೀನಾದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳುವುದು ಅಗತ್ಯ ಎಂಬುದು ಇದೀಗ ಟ್ರಂಪ್‌ ಅವರಿಗೆ ಮನವರಿಯಾಗಿದೆ. ಅಮೆರಿಕದ ವೈದ್ಯಕೀಯ ಸಿಬ್ಬಂದಿಗೆ ಅತ್ಯಗತ್ಯವಾಗಿ ಬೇಕಾಗಿರುವ ಪಿಪಿಇ (ಪರ್ಸನಲ್ ಪ್ರೊಟೆಕ್ಷನ್ ಎಕ್ಯುಪ್‌ಮೆಂಟ್) ಕಿಟ್‌ಗಳಿಗಾಗಿ ಚೀನಾದ ನೆರವು ಅಮೆರಿಕಕ್ಕೆ ಬೇಕಾಗಿದೆ.

ಪ್ರಯೋಗಾಲಯದಲ್ಲಿ ಇಂಥ ವೈರಾಣುಗಳನ್ನು ಅಭಿವೃದ್ಧಿಪಡಿಸಲಾಗಿತ್ತು ಅಥವಾ ಪ್ರಯೋಗಾಲಯದಿಂದ ವೈರಾಣುಗಳು ಹರಡಿರಬಹುದು ಎಂಬ ವರದಿಗಳನ್ನು ಕಳೆದಫೆಬ್ರುವರಿಯಲ್ಲಿ ಚೀನಾ ಸರ್ಕಾರದ ವುಹಾನ್ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ ಸಾರಾಸಗಟಾಗಿ ತಳ್ಳಿ ಹಾಕಿತ್ತು.

ಟ್ರಂಪ್ ಅವರ ಪತ್ರಿಕಾಗೋಷ್ಠಿಯ ನಂತರ ಫಾಕ್ಸ್‌ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ್ದ ಪಾಂಪಿಯೊ, 'ಈ ವೈರಸ್ ಚೀನಾದ ವುಹಾನ್‌ನಿಂದ ಹರಡಿದೆ ಎಂಬುದು ನಮಗೆ ಗೊತ್ತು. ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ ವೆಟ್ ಮಾರ್ಕೆಟ್‌ನಿಂದ ಕೆಲವೇ ಮೈಲುಗಳ ದೂರದಲ್ಲಿದೆ ಎಂದು ಹೇಳಿದ್ದಾರೆ.

'ಚೀನಾ ಸರ್ಕಾರವು ತಪಾಸಣೆಗೆ ಅವಕಾಶ ನೀಡಬೇಕು. ವೈರಸ್ ಎಲ್ಲಿಂದ ಹರಡಿತು ಎಂಬುದನ್ನು ವಿವರಿಸಬೇಕು. ಈ ವಿಚಾರದಲ್ಲಿ ನಾವು ಪರಿಶುದ್ಧರಾಗಿದ್ದೇವೆ ಎಂದು ಚೀನಾ ಸರ್ಕಾರ ನಿರೂಪಿಸಬೇಕಿದೆ' ಎಂದು ಪಾಂಪಿಯೊ ಆಗ್ರಹಿಸಿದರು.

ಕೊರೊನಾ ವೈರಸ್‌ ಎಂದು ಜನಜನಿತವಾಗಿರುವ ಸಾರ್ಸ್-ಕೋವ್-2 ವೈರಾಣುಗಳು ಬಾವಲಿಯಲ್ಲಿದ್ದವು. ಬಾವಲಿಗಳಿಂದಲೇ ಮನುಷ್ಯರಿಗೆ ಹರಡಿವೆ ಎಂಬ ವಿವರಣೆಯನ್ನು ಹೆಚ್ಚು ವಿಜ್ಞಾನಿಗಳು ನಂಬಿದ್ದಾರೆ.

ವೈರಾಣು ಸೋಕಿನಿಂದ ಚೀನಾದಲ್ಲಿ ಈವರೆಗೆ ಸುಮಾರು 3000 ಮಂದಿಯಷ್ಟೇ ಮೃತಪಟ್ಟಿದ್ದಾರೆ ಎಂಬ ಚೀನಾ ಸರ್ಕಾರದ ಹೇಳಿಕೆಯನ್ನು ಅಮೆರಿಕ ಸಂದೇಹಿಸಿದೆ. ಅಮೆರಿಕದಲ್ಲಿ ಸೋಂಕಿಗೆ ಈವರಗೆ 20,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗುತ್ತಲೇ ಇದೆ.

ಅಮೆರಿಕದಲ್ಲಿ ಈ ಸಂಖ್ಯೆ ಹೆಚ್ಚಾಗುತ್ತದೆ. ಏಕೆಂದರೆ ನಾವು ಸೋಂಕು ಮತ್ತು ಸಾವಿನ ಪ್ರಮಾಣವನ್ನು ನಿಖರವಾಗಿ ವರದಿ ಮಾಡುತ್ತಿದ್ದೇವೆ ಎಂದು ಪಾಂಪಿಯೊ ಹೇಳಿದ್ದರು.

ಚೀನಾದಂಥ ದೊಡ್ಡ ದೇಶದಲ್ಲಿ ಇಷ್ಟು ಕಡಿಮೆ ಸಾವುಗಳು ಸಂಭವಿಸಿವೆ ಎಂದರೆ ನೀವು ನಂಬುವಿರಾ? ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT